ಸಿನಿಮಾ ಲೇಖನ

ಖುಷಿ ಖುಷಿಯಲಿ ಕನ್ನಡ ಕಲಿತ ನಾರಿ

'ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ' ಎಂಬ ಹಾಡನ್ನು ಈಕೆಯನ್ನು ನೋಡಿಯೇ ಬರೆದಿದ್ದೇನೋ ಎಂಬ ಅನುಮಾನ...

'ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ' ಎಂಬ ಹಾಡನ್ನು ಈಕೆಯನ್ನು ನೋಡಿಯೇ ಬರೆದಿದ್ದೇನೋ ಎಂಬ ಅನುಮಾನ ಮೂಡಿಸುವ ಹುಡುಗಿ ಇವಳು. ಕನ್ನಡ ಚಿತ್ರರಂಗದ ಕ್ಲಾಸಿಗೆ ಹೊಸದಾಗಿ ಬಂದಿರುವ ಬೆಡಗಿ. ಹಾಗಂತ, ನೀನಾ ಶಕುಂತಲಾ ಎಂದರೆ ಅಲ್ಲ ಎನ್ನುತ್ತಾಳೆ. ಹೆಸರು ಖುಷಿ. ಮೂಲ ಹೆಸರು ಅಲ್ತಮಶ್. ಈಕೆ 'ರಿಂಗ್‌ರೋಡ್ ಶುಭಾ' ಚಿತ್ರದ ಸುವರ್ಣ ಸುಂದರಿ.

ಸುವರ್ಣ ನ್ಯೂಸ್ ವಾಹಿನಿಯ ರಿಯಾಲಿಟಿ ಚೆಕ್‌ನಲ್ಲಿ ಪ್ರಿಯಾ ಬೆಳ್ಳಿಯಪ್ಪ ನಿರ್ದೇಶನದ ರಿಂಗ್‌ರೋಡ್ ಶುಭಾ ಚಿತ್ರಕ್ಕೆ ಆಯ್ಕೆಯಾದ ಖುಷಿಯಾದ ಅಲ್ತಮಶ್ ಈಗ ಒಂದು ಹಾಡನ್ನು ಹೊರತು ಪಡಿಸಿ ಚಿತ್ರದ ಬಹುತೇಕ ಶೂಟಿಂಗ್ ಮುಗಿಸಿದ್ದಾಳೆ. ಅಷ್ಟೆ ಅಲ್ಲ, ಕನ್ನಡ ಕಲಿಕೆಯನ್ನೂ ಆಶ್ಚರ್ಯ ಎನ್ನುವ ಮಟ್ಟಕ್ಕೆ ಮುಗಿಸಿದ್ದಾಳೆ. ಪರಭಾಷೆಯ ನಟಿಯರು ಕನ್ನಡಕ್ಕೆ ಬಂದಾಗ ಅಷ್ಟಿಷ್ಟು ಕನ್ನಡ ಕಲಿಯುವುದು ಮಾಮೂಲಿ. ಹೆಚ್ಚೆಂದರೆ 'ಎಲ್ಲರಿಗೂ ನಮಸ್ಕಾರ, ನನ್ಗೆ ಕನ್ನಡ ಸ್ವಲ್ಪ ಸ್ವಲ್ಪ ಬರುತ್ತೆ' ಎನ್ನುವ ಮಟ್ಟಕ್ಕೆ. ಆದರೆ ಈ ಹುಡುಗಿ ಬಾಯಲ್ಲಿ 'ಕರೆಯದೇ ಬಂದವನ ಕರೆದು ಕೆರದಲ್ಲಿ ಹೊಡೆ ಎಂದ ಸರ್ವಜ್ಞ' ಎಂಬಂಥ ವಚನಗಳೂ ಬರುತ್ತವೆ ಎಂದರೆ ಯಾರಿಗೆ ತಾನೇ ಗಾಬರಿಯಾಗುವುದಿಲ್ಲ. ಅದಷ್ಟೇ ಅಲ್ಲದೆ ಚಿತ್ರದ ಅಷ್ಟೂ ಡೈಲಾಗ್‌ಗಳೂ ಈಕೆಗೆ ಬಾಯಿಪಾಠವಾದಂತಿವೆ. ಈಕೆ ಈ ಆರು ತಿಂಗಳು ಹಗಲಿರುಳೂ ರಿಂಗ್‌ರೋಡ್ ಶುಭಾ ಚಿತ್ರವನ್ನೇ ಜಪಿಸಿದ್ದಾಳೆ ಎನ್ನುವುದನ್ನು ಪ್ರೂವ್ ಮಾಡುವಂತೆ, ಸಾಯಿಕುಮಾರ್‌ರನ್ನೂ ಮೀರಿಸುವಂತೆ ರಿಂಗ್‌ರೋಡ್ ಶುಭಾ ಸಿನಿಮಾದ ಉದ್ದುದ್ದ ಡೈಲಾಗ್‌ಗಳನ್ನು ಒಂದೇ ಸಮನೆ ಉಚ್ಚರಿಸಿ ಅಚ್ಚರಿ ಮೂಡಿಸುತ್ತಾಳೆ ಖುಷಿ.
ಅದೂ ಕೂಡ ಅರ್ಥವಾಗದೆ ಆಡುವ ಮಾತಲ್ಲ. ಪ್ರತಿಯೊಂದು ಸಂಭಾಷಣೆಗೂ ಅರ್ಥ ಗೊತ್ತು ಈಕೆಗೆ.

ಹಾಗಾಗಿ, ಬೆಳ್ಳಿ ಬೆಳದಿಂಗಳಿನಾ ನಗೆಯವಳು, ಇಂದ್ರನ ಕುಲದಾ ದೊರೆ ಮಗಳು ಎನ್ನುವಂಥ ಈಕೆಯ ಸೌಂದರ್ಯ ನೋಡಿ ರಿಂಗ್‌ರೋಡ್ ಶುಭಾ ಚಿತ್ರದಲ್ಲಿ ಈಕೆ ಬರೀ ಗ್ಲಾಮರ್‌ಗೆ ಸೀಮಿತ ಎಂದುಕೊಂಡವರಿಗೆ ತನ್ನ ಗ್ರಾಮರ್ ಪರಿಚಯವನ್ನೂ ಮಾಡಿಸುವ ಪ್ರಯತ್ನ ಮಾಡಿದ್ದಾಳೆ ಈ ದಿಲ್ಲಿ ಹುಡುಗಿ.

ಅದಕ್ಕಾಗಿ ಈಕೆ ಪಟ್ಟ ಪರಿಶ್ರಮ ದೊಡ್ಡದೇ. ನಾನು ಬಂದು ಎಷ್ಟು ದಿನ ಆಯ್ತು, ನಂಗೆ ಊರಿಗೆ ಹೋಗೋಕೆ ಬಿಡ್ತಾ ಇಲ್ಲ ಇವ್ರು ಎಂದು ಹುಸಿಮುನಿಸಿನಿಂದಲೇ ದೂರುವ ಖುಷಿ, ಇಲ್ಲಿದ್ದು ಕಡಿದು ಕಟ್ಟಿ ಹಾಕಿದ್ದೇನು ಅಂತ ಯಾರಾದ್ರೂ ಕೇಳಿದರೆ ಅದಕ್ಕೆ ತಕ್ಷಣವೇ ಪುರಾವೆ ಒದಗಿಸುತ್ತಾಳೆ. ಸಿನಿಮಾ ಶುರುವಾಗುವ ಮುಂಚೆ ನಡೆಸಿದ ಸೀರಿಯಸ್ ರಿಹರ್ಸಲ್ ಈ ಬದಲಾವಣೆಗೆ ಕಾರಣ. ಹಾಗಾಗಿ, ರಿಂಗ್‌ರೋಡ್ ಶುಭಾ ಚಿತ್ರಕ್ಕೆ ಆಯ್ಕೆಯಾದಾಗ ಮೈತುಂಬಿಕೊಂಡು ತುಸು ದಪ್ಪ ಎನ್ನುವಂತಿದ್ದ ಈ ದಿಲ್ಲಿ ಹುಡುಗಿ ತನ್ನ ಬೆಲ್ಲಿ ಕರಗಿಸಿಕೊಂಡು ಈಗ ಎಲ್ಲರ ಮನಸ್ಸು ತುಂಬುವ ಕೆಲಸದಲ್ಲಿ ಬ್ಯುಸಿ.

ಮೊದಲ ಸಿನಿಮಾ ಅಂದರೆ ನರ್ವಸ್ ಆಗುವುದು ಮಾಮೂಲಿ ಆದರೆ ಇದು ಸಂಪೂರ್ಣ ಹುಡುಗಿಯರ ಟೀಮ್ ಆದ್ದರಿಂದ ನನಗೆ ಚಿತ್ರೀಕರಣ ಸಲೀಸಾಗಿದೆ ಎನ್ನುವ ಈ ಕನ್ನಡ ಕಲಿತ ನಾರಿ ಅತಿ ಶೀಘ್ರದಲ್ಲಿ ಸ್ಯಾಂಡಲ್‌ವುಡ್ ತೆರೆಯ ಮೇಲೆ ಕಾಣಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾಳೆ.

ಸೆಟಲೈಟ್ ಶುಭಾ
ಹುಡುಗಿಯರ ಕಾಲ್ಗುಣ ಚೆನ್ನಾಗಿರಬೇಕು ಅಂತಾರೆ ದೊಡ್ಡವರು. ಅಂಥಾದ್ರಲ್ಲಿ ಈ ಚಿತ್ರ ಪೂರ್ತಿ ಹುಡುಗಿಯರಿಂದಲೇ ತುಂಬಿ ತುಳುಕುತ್ತಿದೆ. ಅದ್ಯಾರ ಕಾಲ್ಗುಣವೋ ಏನೋ ಅಂತೂ ರಿಂಗ್‌ರೋಡ್ ಶುಭಾ ಸದ್ದಿಲ್ಲದೆ ಶೂಟಿಂಗ್ ಮುಗಿಸಿದರೂ ಸ್ಯಾಟಲೈಟ್ ರೈಟ್ಸ್ ವಿಷಯದಲ್ಲಿ ಸದ್ದು ಮಾಡುತ್ತಿದೆ. ಹೇಳಿ ಕೇಳಿ ಟಿವಿಯಲ್ಲಿ ಹೆಣ್ಣುಮಕ್ಕಳು ನೋಡುವಂಥ ಕಾರ್ಯಕ್ರಮಗಳಿಗೆ ಮಾರ್ಕೆಟ್ ಹೆಚ್ಚು. ಚಿತ್ರರಂಗದಲ್ಲೂ ಮಹಿಳಾ ಅಭಿಮಾನಿಗಳಿರುವ ನಾಯಕ ನಟ ಎಂದರೆ ಅವನ ಚಿತ್ರ ಫ್ಲಾಪ್ ಆದರೂ ಚಿತ್ರದ ಟಿವಿ ರೈಟ್ಸ್‌ಗಳಿಗೆ ಮಾತ್ರ ಹೆಚ್ಚಿನ ಬೇಡಿಕೆ ಇರುತ್ತದೆ. ಇದು ಸಂಪೂರ್ಣ ಹುಡುಗಿಯರ ಸಿನಿಮಾ ಎಂಬ ಕಾರಣಕ್ಕೋ ಏನೋ ಚಿತ್ರದ ನಿರ್ಮಾಪಕಿಗೆ ಈಗಾಗಲೇ ಎರಡೂ ಚಿಲ್ಲರೆ ಕೋಟಿಯ ಆಫರ್ ಬಂದಿದೆ. ಆದರೆ ಟಿವಿ ರೈಟ್ಸ್ ಮಾರಲು ಆತುರ ತೋರದ ನಿರ್ಮಾಪಕಿ ರಂಜಿನಿ ಇನ್ನಷ್ಟು ಬೆಲೆ ಏರಿಕೆ ಆಗುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ. ಖುಷಿ, ದುನಿಯಾ ವಿಜಿ, ನಿಖಿತಾ ಮತ್ತು ಇಡೀ ಮಹಿಳಾ ತಂತ್ರಜ್ಞರ ತಂಡದಲ್ಲಿ ಯಾರ ಕಾಲ್ಗುಣ ಕೆಲಸ ಮಾಡುತ್ತದೋ ಗೊತ್ತಿಲ್ಲ.

- ಹರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!