ಗಿರಿನವಿಲು ಮತ್ತು ಜಟ್ಟ
ಈ ವರ್ಷ ಕನ್ನಡ ಚಿತ್ರರಂಗ ಕಂಡ ಅಪರೂಪದ ಪ್ರತಿಭೆಗಳಲ್ಲಿ ನಿರ್ದೇಶಕ ಗಿರಿರಾಜ್ ಕೂಡ ಒಬ್ಬರು. ಗಿರಿರಾಜ್ ಆರಂಭದಲ್ಲಿ ಎಲ್ಲರಿಗೂ ಪರಿಚಯವಾಗಿದ್ದು 'ನವಿಲಾದವರು' ಎಂಬ ಸಿನಿಮಾ ಅಲ್ಲದ ಸಿನಿಮಾ ಮೂಲಕ. ಕೇವಲ 35 ಸಾವಿರ ರುಪಾಯಿಗಳ ಬಜೆಟ್‌ನಲ್ಲಿ ಒಂದು ಸಿನಿಮಾ ಮಾಡಿ ಒಂದು ರೀತಿಯಲ್ಲಿ 'ಸಾಹಸ' ನಿರ್ದೇಶಕರು ಎನಿಸಿಕೊಂಡವರು ಗಿರಿರಾಜ್. ಆ ಚಿತ್ರ ಕಮರ್ಷಿಯಲ್ ಆಗಿ ಗಳಿಕೆ ಮಾಡಲಿ ಎಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಹಾಗಾಗಿ ಅದು ಬಿಡುಗಡೆ ಆಗಲಿಲ್ಲ. ಆದರೆ ಗಿರಿರಾಜ್ ಎಂಬ ಹೊಸ ಆಶಾದೀಪ ಎಲ್ಲರಿಗೂ ಗೋಚರವಾಗಿತ್ತು. ಅದಾದ ನಂತರ ಗಿರಿ 'ಅದ್ವೈತ' ಎಂಬ ಚಿತ್ರ ಶುರುಮಾಡಿದರು. ಅದು ಮುಗಿದರೂ ಅದ್ಯಾಕೋ ಬಿಡುಗಡೆಯ ಭಾಗ್ಯ ಕಾಣಲಿಲ್ಲ. ಅದಾದ ನಂತರ ಗಿರಿ ಶುರುಮಾಡಿದ ಚಿತ್ರ 'ಜಟ್ಟ'. ಇದರ ಬೆನ್ನಲ್ಲೇ ಮೋಹನ್‌ಲಾಲ್,ಪುನೀತ್ ರಾಜ್‌ಕುಮಾರ್ ಅಭಿನಯದ 'ಮೈತ್ರಿ' ಚಿತ್ರವನ್ನೂ ಆರಂಭಿಸಿದ್ದಾರೆ ಗಿರಿರಾಜ್. ಆದರೆ, ಇದರ ನಡುವೆ ಇತ್ತೀಚೆಗೆ ಅವರ ಜಟ್ಟ ಚಿತ್ರ ಬಿಡುಗಡೆಯಾದಾಗ ಗಿರಿರಾಜ್‌ರ ಬೆಟ್ಟದಂಥ ಪ್ರತಿಭೆಯ ದರ್ಶನ ಗಾಂಧಿನಗರಕ್ಕೆ ಆಯಿತು. ಒನ್ಸ್ ಅಗೇನ್, ಜಟ್ಟ ಕೂಡ 50 ದಿನ, 100 ದಿನ ಓಡಲಿಲ್ಲ. ಆದರೆ ಲೂಸಿಯಾ ಚಿತ್ರದ ನಂತರ ಹೊಸಬರ ಅಲೆಯಲ್ಲಿ ತೇಲುತ್ತಿದ್ದ ಕನ್ನಡದ ಸದಭಿರುಚಿಯ ಪ್ರೇಕ್ಷಕ ಜಟ್ಟನನ್ನು ಅಪ್ಪಿಕೊಂಡರು. ನನಗೆ ಹಣ ಸಿಗದಿದ್ದರೂ ಜಟ್ಟ ನನಗೆ ಮನ್ನಣೆ ತಂದುಕೊಟ್ಟ ಎಂಬುದು ಗಿರಿರಾಜ್ ಅವರ ಸದ್ಯದ ಖುಷಿ. ಆದರೆ ಜಟ್ಟ ನೋಡಿದ ಕನ್ನಡ ಪ್ರೇಕ್ಷಕರು ಅವರ ಅದ್ವೈತ, ಮೈತ್ರಿ ಚಿತ್ರಗಳ ಬಗ್ಗೆ ಸಾಕಷ್ಟು ಕುತೂಹಲದಿಂದಿದ್ದಾರೆ. ಅದರ ಜೊತೆಗೆ ಕನ್ನಡ ಚಿತ್ರರಂಗಕ್ಕೆ ಗಿರಿರಾಜ್‌ರಿಂದ ಇನ್ನಷ್ಟು ವಿಶಿಷ್ಟ ಚಿತ್ರಗಳು ಬರುತ್ತವೆ ಎಂಬ ನಂಬಿಕೆಯಲ್ಲಿದ್ದಾರೆ.
- ಹರಿ
- ಆರ್. ಕೇಶವಮೂರ್ತಿ