ಮೊದಲ ವಿಕ್ಟರಿ ಕಂಡ ಪ್ರಶಾಂತ್
ಹೊಸ ನಟ ನಟಿಯರು ಬಂದಂತೆ ಹೊಸ ಬರಹಗಾರರೂ ಬರುತ್ತಿರುವುದು ಚಿತ್ರರಂಗಕ್ಕೆ ಹೊಸ ಉತ್ಸಾಹ ತುಂಬಿದೆ. ಅಂಥ ಭರವಸೆಯ ಬರಹಗಾರರಲ್ಲಿ ಪ್ರಶಾಂತ್ ಕೂಡ ಒಬ್ಬರು. ಪ್ರಶಾಂತ್ರ ಪರಿಚಯ ಆಗಬೇಕು ಎಂದರೆ ಇವರು ವಿಕ್ಟರಿ ಚಿತ್ರದ ಸಂಭಾಷಣೆಕಾರ ಎಂದರೆ ಸಾಕು. ಶರಣ್ ಅಭಿನಯದ ಈ ಚಿತ್ರ ಸೂಪರ್ಹಿಟ್ ಆಗಲು ಇದ್ದ ಪ್ರಮುಖ ಕಾರಣಗಳಲ್ಲಿ ಪ್ರಶಾಂತ್ ಅವರ ಸಂಭಾಷಣೆ ಕೂಡ ಬಹು ಮುಖ್ಯವಾದದ್ದು.
ಸಂಭಾಷಣಾಕಾರರಾಗಿ ಪ್ರಶಾಂತ್ ಕೆಲಸ ಮಾಡಿರುವುದು ಇನ್ನೂ ಒಂದೇ ಚಿತ್ರಕ್ಕೆ. ಆದರೆ ಮೊದಲ ಚಿತ್ರದ ಮೊದಲನೇ ಶೋ ಮುಗಿದು ಹೊರಬಂದ ಪ್ರೇಕ್ಷಕರು ಚಿತ್ರದ ನಾಯಕನಷ್ಟೇ ಪ್ರಮಾಣದಲ್ಲಿ ಸಂಭಾಷಣಾಕಾರನ ಬಗ್ಗೆಯೂ ಮಾತನಾಡುವಂತೆ ಮಾಡಿದ್ದು ಪ್ರಶಾಂತ್ ಬರವಣಿಗೆಯ ಹೆಗ್ಗಳಿಕೆ. ಮೂಲತಃ ಬೆಂಗಳೂರಿನವರೇ ಆದ ಪ್ರಶಾಂತ್ಗೆ ಗಾಂಧಿನಗರ ದೂರದ್ದೇನಾಗಿರಲಿಲ್ಲ. ಎಂಜಿನಿಯರಿಂಗ್ ಮಾಡುತ್ತಿದ್ದ ಪ್ರಶಾಂತ್ ಅದನ್ನು ಅರ್ಧಕ್ಕೆ ಬಿಟ್ಟು ತಮ್ಮ ಪ್ರೀತಿಯ ಸಿನಿಮಾರಂಗ ಪ್ರವೇಶಿಸಿದವರು. ಮಠ ಗುರುಪ್ರಸಾದ್ ಅವರೊಂದಿಗೆ 'ಎದ್ದೇಳು ಮಂಜುನಾಥ' ಚಿತ್ರಕ್ಕೆ ಕೆಲಸ ಮಾಡಿದ್ದ ಪ್ರಶಾಂತ್ 'ಮತ್ತೆ ಬನ್ನಿ ಪ್ರೀತ್ಸೋಣ' ಚಿತ್ರದಲ್ಲಿ ರವೀಂದ್ರ ದಾಸ್ ಅವರೊಂದಿಗೂ ಕೆಲಸ ಮಾಡಿದ ಅನುಭವ ಇರುವವರು. ಇದಲ್ಲದೆ 'ನಾಯಕ' ಚಿತ್ರದ ನಿರ್ದೇಶಕ ಶೇಖರ್ ಅವರೊಂದಿಗೆ ಮೂರು ಸಿನಿಮಾಗಳ ಒಡನಾಟ.
ವಿಕ್ಟರಿ ಚಿತ್ರದ ಸಂಭಾಷಣೆ ಕೇಳಿದ ತಮಿಳು ನಿರ್ದೇಶಕ ಭಾಗ್ಯರಾಜ್ ಅವರ ಸಹವರ್ತಿಗಳ ಕಾರಣದಿಂದಾಗಿ ಸ್ವತಃ ಭಾಗ್ಯರಾಜ್ ಅವರೇ ಪ್ರಶಾಂತ್ಗೆ ಕರೆ ಮಾಡಿ ಮಾತನಾಡಿಸಿದರಂತೆ. ಈ ಬಗ್ಗೆ ಥ್ರಿಲ್ ಆಗಿರುವ ಪ್ರಶಾಂತ್ ಅತಿ ಶೀಘ್ರದಲ್ಲೇ ಅವರನ್ನು ಭೇಟಿ ಮಾಡಲು ಹೋಗುತ್ತಿದ್ದೇನೆ ಎನ್ನುತ್ತಾರೆ. ವಿಕ್ಟರಿ ಚಿತ್ರಕ್ಕೆ ನಾನು ಬರೆದ ಸಂಭಾಷಣೆಗೆ ಸಾಮಾನ್ಯ ಪ್ರೇಕ್ಷಕರಿಂದ ಪ್ರತಿಕ್ರಿಯೆ ಬರುತ್ತಿರುವುದು ಖುಷಿಯಾಗಿದೆ. ಅದರ ಜೊತೆಗೆ ಇದುವರೆಗೂ ನಾನು ಕೆಲಸ ಮಾಡಿದ ನನ್ನ ಎಲ್ಲ ನಿರ್ದೇಶಕ ಗುರುಗಳೂ ನನಗೆ ಕರೆ ಮಾಡಿ ಅಭಿನಂದಿಸಿದರು ಎನ್ನುವ ಪ್ರಶಾಂತ್ ಸದ್ಯಕ್ಕೆ ಗಣೇಶ್ ಅಭಿನಯದ 'ದಿಲ್ ರಂಗೀಲಾ' ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಅದಲ್ಲದೆ ಶರಣ್ ಅಭಿನಯದ 'ಶ್ರೀಮತಿ ಜಯಲಲಿತಾ' ಚಿತ್ರಕ್ಕೂ ಅವರ ಸಂಭಾಷಣೆ ಇದೆ.
- ಹರಿ
- ಆರ್. ಕೇಶವಮೂರ್ತಿ