ಸಿನಿಮಾ ಲೇಖನ

ಹರುಷದ ಕೂಳು

ಕನ್ನಡ ಚಿತ್ರರಂಗದಲ್ಲಿ ಪ್ರತಿವರ್ಷದ ಗೊಣಗಾಟ ಈ ವರ್ಷ ಇಲ್ಲ. ಅಷ್ಟೊಂದ್ ಸಿನಿಮಾ ಬಿಡುಗಡೆ ಆದರೂ ಸಕ್ಸಸ್ ಮಾತ್ರ ಇಷ್ಟೇ ಎನ್ನುವ ಕೊರಗಿಲ್ಲ. ನೆನಪಿಸಿಕೊಂಡರೆ ಈ ವರ್ಷ ಹಲವು ಗೆಲುವುಗಳು ಕಾಣಸಿಗುತ್ತವೆ. ಹಾಗಾಗಿ 13 ಯಾರ ಪಾಲಿಗೆ ಅನ್‌ಲಕ್ಕಿ ಎನಿಸಿದರೂ ಕನ್ನಡ ಚಿತ್ರರಂಗದ ಪಾಲಿಗೆ ಮಾತ್ರ 2013 ವೆರಿಲಕ್ಕಿ. ಹಲವು ಕಮರ್ಷಿಯಲ್ ಸಿನಿಮಾಗಳ ಆರ್ಥಿಕ ಸಕ್ಸಸ್‌ನಿಂದ ನಿರ್ಮಾಪಕರಿಗೆ ತೃಪ್ತಿ ಕೊಟ್ಟ ಚಿತ್ರಗಳಿಂದ ಹಿಡಿದು ವಿಭಿನ್ನ ಎನಿಸುವ ಮೂಲಕ ಪ್ರೇಕ್ಷಕರಿಗೆ ತೃಪ್ತಿ ಕೊಟ್ಟ ಚಿತ್ರಗಳೂ ಇವೆ. ಆರ್. ಚಂದ್ರು ನಿರ್ದೇಶನದ ಚಾರ್‌ಮಿನಾರ್‌ನಿಂದ ಹಿಡಿದು ವರ್ಷದ ಕೊನೆಗೆ ಹರ್ಷ ನಿರ್ದೇಶನದ ಭಜರಂಗಿವರೆಗೆ ಚಿತ್ರರಂಗ ಯಶಸ್ಸಿನ ಅಲೆಯ ಮೇಲೆ ತೇಲಿದೆ. ಈ ಚಿತ್ರಗಳ ಬಗ್ಗೆ ವರ್ಷವಿಡೀ ಹೇಳಿದ ಮೇಲೆ ಹೆಚ್ಚೇನೂ ಹೇಳುವುದು ಬಾಕಿ ಇಲ್ಲ. ಹಾಗಾಗಿ ಆಯಾ ಚಿತ್ರಗಳ ವಿಮರ್ಶೆಯ ಕೆಲವು ಸಾಲುಗಳನ್ನು ಉಲ್ಲೇಖಿಸಿ ಈ ಎಲ್ಲಾ ಚಿತ್ರಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವ ಪ್ರಯತ್ನ ಇಲ್ಲಿದೆ.

ಚಾರ್‌ಮಿನಾರ್

ಇದು ನಿಮ್ಮ ಕಥೆಯೇ ಆಗಿದ್ದರೆ ನನ್ನ ಮೇಲೆ ಇದು ಚೋರ್‌ಮಿನಾರ್ ಎಂದು ಕೇಸು ಹಾಕಬೇಡಿ ಎಂಬ ಎಚ್ಚರಿಕೆ ನೀಡಿದ್ದ ನಿರ್ದೇಶಕ ಚಂದ್ರು ಚಾರ್‌ಮಿನಾರ್ ಎಂಬ ತಾಜಾಮಹಲಿನೊಂದಿಗೆ ಬಂದಿದ್ದಾರೆ. ಇದು ಅಲ್ಲಿಂದ ಇಲ್ಲಿಂದ ಕದ್ದು  ತಂದ ಚೋರ್‌ಬಜಾರ್‌ನ ಚಿತ್ರ ಅಲ್ಲ. ನಿರ್ದೇಶಕ ಚಂದ್ರು ತಾವೇ ಮುಂದೆ ನಿಂತು ಕಟ್ಟಿಸಿದ ಚಾರ್‌ಮಿನಾರ್ ಇದು. ಚಿತ್ರಕಥೆಯಲ್ಲೂ ಕೂಡಾ, ಈ ನಾಲ್ಕು ಪಿಲ್ಲರ್‌ಗಳೇ ಜೀವಾಳ. ಅದು ಬಿಟ್ಟು ಬೇರೆ ಫಿಲ್ಲರ್‌ಗಳಿಲ್ಲ. ಹುಡುಗಾಟದ  ಹುಡುಗನಿಂದ ಹಿಡಿದು, ಜವಾಬ್ದಾರಿಯುತ ನಾಗರಿಕನಾಗುವವರೆಗ ಪ್ರೇಮ್ ಚಿತ್ರದ ನಾಲ್ಕೂ ಕಂಬಗಳಿಗೆ, ಆಸರೆಯಾಗಿದ್ದಾರೆ. ಈ ಚಿತ್ರದಿಂದ ಪ್ರೇಮ್‌ಗೆ ಅತಿ ಅಗತ್ಯವಾಗಿದ್ದ ಬ್ರೇಕ್ ಸಿಕ್ಕಿದೆ ಎನಿಸಿದರೆ ತಪ್ಪಿಲ್ಲ. ಇದು ಮುಗ್ಧ ಪ್ರೇಮಿಗಳ ಪಾಲಿನ ಪ್ರೀಮಿಯರ್ ಶೋ.

ಅಟ್ಟಹಾಸ
ಮುಂದೊಂದು ದಿನ, ವೀರಪ್ಪನ್ ಹೇಗಿದ್ದ? ಅವನ ಬಾಲ್ಯ ಹೇಗಿತ್ತು? ಅಂತ ನಮ್ಮ ಮಕ್ಕಳು ಕೇಳಿ ತಿಳಿದುಕೊಳ್ಳೋಕೆ, ವೀರಪ್ಪನ್ ಮಹಾತ್ಮನೇನೂ ಅಲ್ಲದಿದ್ದರೂ, ವೀರಪ್ಪನ್‌ನ ಕಥೆ ಹೇಳಲೇಬೇಕೆಂದು ನಿರ್ಧರಿಸಿ ಅವನ ಅಟ್ಟಹಾಸದ ಚರಿತ್ರೆ ಬಿಚ್ಚಿಟ್ಟಿದ್ದಾರೆ ನಿರ್ದೇಶಕ ಎ.ಎಂ.ಆರ್ ರಮೇಶ್. ಇದನ್ನು ವೀರಪ್ಪನ್‌ನ ಬಗೆಗಿನ ಡಾಕ್ಯುಮೆಂಟರಿ ಎನ್ನುವಂತಿಲ್ಲ ಎಂದರೆ ಅದಕ್ಕೆ ಕಾರಣ ರೋಚಕ ಎನಿಸುವಂಥ ಹಲವು  ಘಟನೆಗಳು, ವಿಜಯ್ ಅವರ ಛಾಯಾಗ್ರಹಣ ಮತ್ತು ಸಂದೀಪ್ ಚೌಟ ನೀಡಿರುವ ಹಿನ್ನೆಲೆ ಸಂಗೀತ. ಈ ಎಲ್ಲದರ ಸಹಾಯದಿಂದ, ವೀರಪ್ಪನ್ ಕತೆಯನ್ನೂ ಬ್ಯೂಟಿಪುಲ್ ಡಾಕ್ಯುಮೆಂಟರಿ ಆಗಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ರಮೇಶ್.

ಸಿಂಪಲ್ಲಾಗೊಂದ್ ಲವ್‌ಸ್ಟೋರಿ
ಗಾಂಧಿನಗರದಲ್ಲಿ ಬರ್ತಾ ಇರೋ ಸಿನಿಮಾಗಳ ನಡುವೆ ಗ್ಯಾಪಲ್ಲೊಂದ್ ನಮ್ಮದೂ ಇರ್ಲಿ ಎಂದುಕೊಂಡೇ ಸಿನಿಮಾ ಮಾಡುವವರ ಮಧ್ಯೆ ಸಿಂಪಲ್ಲಾಗೊಂದ್ ಲವ್‌ಸ್ಟೋರಿ ಮಾಡಿದ್ದಾರೆ ನಿರ್ದೇಶಕ ಸುನಿ. ಹಾಗಾಗಿ ಇದು ಗುಂಪಲ್ ಗೋವಿಂದ ಎನ್ನುವಂತ ಸಿನಿಮಾ ಅಲ್ಲ. ಹೆಸರಿಗೆ ತಕ್ಕಂತೆ ಸಿಂಪಲ್ ಆಗಿದ್ದರೂ ಬ್ಯೂಟಿಫುಲ್ಲಾಗೊಂದು ಲವ್‌ಸ್ಟೋರಿ ಎನ್ನಬಹುದು. ಈಗಿನ ಕಾಲೇಜು ಹುಡುಗ ಹುಡುಗಿಯರನ್ನು ಮೆಚ್ಚಿಸಬೇಕು ಎಂದರೆ ಹೆಚ್ಚು ಹೆಚ್ಚು ಮಾತಾಡಬೇಕು ಎನ್ನುವ ಸಿನಿಕತೆ ಯಲ್ಲಿ ನಂಬಿಕೆ ಇಟ್ಟಿರುವ 'ಸುನಿ'ಕತೆ ಇದು. ನಾಯಕ ನಾಯಕಿಯರ ಲೆಕ್ಕದಲ್ಲಿ ಮಾತಿನಲ್ಲಿ ಹೇಳಲಾರೆನು ಎನ್ನುವಂಥದ್ದು ಏನೂ ಇಲ್ಲ. ಹಾಗಾಗಿ, ಪ್ರೇಕ್ಷಕರಿಗೆ ಎರಡೂಕಾಲು  ಗಂಟೆ ಫ್ರೀ 'ಟಾಕ್‌ಟೈಮ್‌'. ತಮ್ಮ ಚಿತ್ರಗಳಿಗೆ ಮಾಧ್ಯಮಗಳಲ್ಲಿ ಏನೇ ಪ್ರಚಾರ ಸಿಕ್ಕರೂ ಪ್ರೇಕ್ಷಕರು ಕೊಡುವ 'ಮೌತ್ ಪಬ್ಲಿಸಿಟಿ' ನಿರ್ದೇಶಕರಿಗೆ ಮುಖ್ಯವಾಗುತ್ತದೆ. ಆದರೆ, ಸಂಭಾಷಣೆಯನ್ನೇ ನಂಬಿಕೊಂಡಿರುವ ಸಿಂಪಲ್ಲಾಗೊಂದ್ ಲವ್‌ಸ್ಟೋರಿ ಚಿತ್ರದ ಮಟ್ಟಿಗೆ ಅದರ 'ಮಾತ್‌' ಪಬ್ಲಿಸಿಟಿಯೇ ಅದನ್ನು ಕಾಪಾಡುವ ಸಾಧ್ಯತೆಗಳು ಹೆಚ್ಚು.

ಮೈನಾ
ಒಂದು ಮನಸ್ಸುಮುಟ್ಟುವ ಪ್ರೇಮಕಥೆ, ಚೆಂದದ ನಾಯಕ, ನಾಯಕಿ, ಸತ್ಯ ಹೆಗಡೆ ಕ್ಯಾಮೆರಾ, ಕಣ್ಣಿಗೆ ತಂಪೆನಿಸುವ ಪರಿಸರ ಎಲ್ಲವೂ ಇದ್ದು ಮೈನಾ ನಿರೀಕ್ಷಿತ ಮಟ್ಟ ತಲುಪುವುದಿಲ್ಲ ಎಂದರೆ ಅದಕ್ಕೆ ಕಾರಣ  ನಿರೂಪಣಾ ಶೈಲಿ. ಒಂದು ಅಪ್ಪಟ ಪ್ರೇಮಕಥೆಯನ್ನು ಹೇಳುವ ಆಸಕ್ತಿ ಮತ್ತು ಮನಸ್ಥಿತಿ ಎರಡೂ ಇರುವ ನಿರ್ದೇಶಕ ನಾಗಶೇಖರ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯ ಕಷ್ಟದ ಪ್ರಶ್ನೆಗೆ ಒಂದು ಸಾಲಿನ ಉತ್ತರ ಬರೆದು, ಇದ್ಯಾಕೋ ಸರಿಹೋಗುತ್ತಿಲ್ಲ ಆಮೇಲೆ ನೋಡೋಣ ಎಂದುಕೊಂಡು ಮುಂದಿನ ಪ್ರಶ್ನೆಗೆ ಹೋಗುವ ವಿದ್ಯಾರ್ಥಿಯಂತೆ ಕಾಣುತ್ತಾರೆ. ದೂಧ್ ಸಾಗರ್ ಫಾಲ್ಸ್‌ನಷ್ಟೇ ಫ್ರೆಷ್ ಎನಿಸುವ ನಿತ್ಯಾ ಮೆನನ್ ಸೌಂದರ್ಯ, ಮತ್ತು ಪ್ರಕೃತಿಯನ್ನು ಸೃಷ್ಟಿಸಿದ ದೇವರೂ ನಾಚಬೇಕು ಎನಿಸುವ ಸತ್ಯ ಹೆಗಡೆಯವರ ಛಾಯಾಗ್ರಹಣದಲ್ಲಿ ಮೈನಾ 'ನಿತ್ಯ' 'ಸತ್ಯ'ದ ಮುದ ನೀಡುತ್ತದಾದರೂ, ಚಿತ್ರ ಹಲವಾರು ಸಮಯದಲ್ಲಿ, 'ಸ್ವರ್ಗ, ಒಂದ್ ಸೆಕೆಂಡ್ ರಪ್ಪಂತ ಪಾಸಾಯ್ತು' ಎಂಬ ಅನಿಸಿಕೆಗೆ ಮಾತ್ರ ಸೀಮಿತವಾಗಿದೆ. ಮನಸ್ಸಿಗೆ ತುಂಬ ಹತ್ತಿರ ಬಂದರೂ ಅದು ಎದೆಯಲ್ಲಿ ನಿಲ್ಲುವುದಿಲ್ಲವಾದರೂ, ನಾಗಶೇಖರ್ ತೀರಾ ಫೇಲ್ ಆಗುವ ವಿದ್ಯಾರ್ಥಿಯಂತೂ ಅಲ್ಲ.

ಬುಲ್‌ಬುಲ್
ಒಂದೋ, ಯಾವುದಾದರೂ ಕಂಡು ಕೇಳರಿಯದಂಥ ಸ್ಪೆಷಲ್ ಎನಿಸುವ ವಿಷಯವನ್ನಿಟ್ಟುಕೊಂಡು ಹೊಸರೀತಿಯ  ಸಿನಿಮಾ ಕೊಡಲು ಪ್ರಯತ್ನಿಸುವುದು, ಇಲ್ಲವೇ, ಈಗಾಗಲೇ ಪ್ರೂವ್ ಆಗಿರುವ ಜನಪ್ರಿಯ ಸೂತ್ರವನ್ನಿಟ್ಟುಕೊಂಡು  ಸಿನಿಮಾ ಮಾಡುವುದು. ಮೊದಲ ರೀತಿಯ ಪ್ರಯತ್ನದಲ್ಲಿ ಮುಂಗಾರು ಮಳೆ ಸುರಿದರೆ ಖುಷಿಯ ಆಲಿಕಲ್ಲು, ಹಳ್ಳಕ್ಕೆ  ಬಿದ್ದರೆ ಆಳಿಗೊಂದು ಕಲ್ಲು. ಎರಡನೇ ಪ್ರಯತ್ನದಲ್ಲಿ ಮಿನಿಮಂ ಗ್ಯಾರಂಟಿ ಫಲಿತಾಂಶ. ಇದು, ಇಂದು ಸಿನಿಮಾ  ಮಾಡುವವರು ಸಾಧಾರಣವಾಗಿ ಅನುಸರಿಸುವ ಸೂತ್ರ. ಹಾಗಾಗಿ ಗುಣಮಟ್ಟದಲ್ಲಿ ಸಿನಿಮಾ ಸಾಧಾರಣ  ಎನಿಸಿಕೊಂಡರೂ ಪರವಾಗಿಲ್ಲ ಎಂಬ ಲೆಕ್ಕದಲ್ಲಿ ತಯಾರಾಗುವಂಥ ಚಿತ್ರಗಳ ಸಾಲಿನಲ್ಲಿ ಬುಲ್ ಬುಲ್ ಕೂಡ ಒಂದು. ರಿಮೇಕ್ ಸ್ಪೆಷಲಿಸ್ಟ್ ಎಂ.ಡಿ.ಶ್ರೀಧರ್ ಅವರ ಚುರುಕಾದ ಚಿತ್ರಕತೆ, ಮುಂದೇನಾಗುತ್ತದೆ ಎಂಬ ಕುತೂಹಲವಿಲ್ಲದಿದ್ದರೂ ಕವಿರಾಜ್‌ರ ಕಚಗುಳಿ ಇಡುವ ಸಂಭಾಷಣೆ, ವೆರೈಟಿ ಇರುವ ಪಾತ್ರಗಳು ಮತ್ತು ಹರಿಕೃಷ್ಣರ ಹಾಡು ಮತ್ತು ಫೈಟ್‌ಗಳ ಮೂಲಕ ಬುಲ್‌ಬುಲ್ ನೋಡಿದಾಗ ಕಬೂಲ್ ಹೈ ಎನ್ನಲಡ್ಡಿಯಿಲ್ಲ.

ಪರಾರಿ
ಹದಿಹರೆಯದ ಗೊಂದ ಲಗಳಲ್ಲಿ 'ಗೆಳತಿಯಾ ಸೇರಲು ವಯಸಿನಾ ಭಯವಿದೆ' ಎನ್ನುವ ಮೂವರು ಗೆಳೆಯರ ಕಥೆಯಿದು. ಹಾಗಾಗಿ ಇಲ್ಲಿ ರಸಿಕತೆ ಹೆಚ್ಚು. ಆದರೆ, 'ಆ ವಿಷಯ'ದಲ್ಲಿ ಹಾಲಿವುಡ್‌ನ ಇಂಥ ಚಿತ್ರಗಳ ಮಟ್ಟಕ್ಕೆ ಏರಲು ಸೆನ್ಸಾರ್‌ನ ಭಯವಿದೆ ಎಂಬುದನ್ನು ಅರಿತು ನಮ್ಮ ಇತಿ ಮಿತಿಯಲ್ಲೇ ಒಂದಿಷ್ಟು 'ರತಿಕತೆ' ತೋರಿಸಿದ್ದಾರೆ ನಿರ್ದೇಶಕ ಚೈತನ್ಯ. ಇಂಥ ಚಿತ್ರಗಳು ಯಾರನ್ನು ತಲುಪುತ್ತವೆ ಎಂಬುದು ಕುತೂಹಲದ ವಿಷಯವೇನಲ್ಲ. ಆದರೆ, ಇಲ್ಲಿ ತಮ್ಮದೇ  ಆದ ವಿಶೇಷ ಸೆಲ್ಲಿಂಗ್ ಸ್ಕಿಲ್ಸ್ ಮೂಲಕ ಪ್ರೇಕ್ಷಕರಿಗೆ 'ಚೈತನ್ಯ ಹ್ಯಾಸ್ ಸೋಲ್ಡ್ ಹಿಸ್ ಪರಾರಿ' ಎನ್ನಬಹುದು. ಮೋಹನ್ ಅವರ ಚಿತ್ರಕಥೆ ಮತ್ತು ಸಂಭಾಷಣೆ ಪರಾರಿಯ ಹೈಲೈಟ್. ಎಲ್ಲೂ ಅಡೆತಡೆಯಿಲ್ಲದೆ ಸಾಗುವ  ಚಿತ್ರಕಥೆ ಮತ್ತು ಸಂಭಾಷಣೆಯಿಂದ ಮೋಹನ್ ಪರಾರಿಯನ್ನು ಗೆಲ್ಲಿಸಿದ್ದಾರೆ. ತಮ್ಮ ಹಿಂದಿನ ಕೆಲವು ಹಾಸ್ಯ ಚಿತ್ರಗಳು  ಮತ್ತು ರವಿಚಂದ್ರನ್‌ರ ಸಿನಿಮಾಗಳಿಗಿಂತ ಮೋಹನ್ ಬೇರೆಯದ್ದೇ ಫ್ರೆಷ್ ಎನಿಸುವ ಬೆಳವಣಿಗೆ ತೋರಿಸಿದ್ದಾರೆ.

ಅಂದರ್‌ಬಾಹರ್
ಈ ಚಿತ್ರದ ನಾಯಕ ಶಿವರಾಜ್‌ಕುಮಾರ್ ಅಲ್ಲದೆ ಹೋಗಿದ್ದಿದ್ದರೆ, ಈ ಚಿತ್ರದ ಬಗ್ಗೆ ಯಾರೂ ಯಾವ ನಿರೀಕ್ಷೆಯೂ ಇಟ್ಟು ಕೊಳ್ಳದೆ ಹೋಗುವಂತಾಗಿದ್ದಿದ್ದರೆ ನಿಜಕ್ಕೂ ಅಂದರ್‌ಬಾಹರ್ ಒಂದು ಸುಂದರ ಅನುಭವ ಕೊಡುವ ಚಿತ್ರ ಎನಿಸಿಕೊಳ್ಳುತ್ತಿತ್ತು. ಅದರಲ್ಲೂ ನಿರ್ದೇಶಕನೊಬ್ಬನ ಮೊದಲ ಚಿತ್ರ ಎಂಬ ಕಾರಣಕ್ಕೆ ಇನ್ನೂ ಹೆಚ್ಚಿನ ಕ್ರೆಡಿಟ್ ಸಿಗುತ್ತಿತ್ತು. ಎಂದೆಲ್ಲ ಅನಿಸಿದರೆ ಎಲ್ಲದಕು ಕಾರಣ ಶಿವರಾಜ್‌ಕುಮಾರ್ ಅವರ ಇಮೇಜು ಮತ್ತು ಚಿತ್ರದ ಶೀರ್ಷಿಕೆ ಪರಮಾತ್ಮ. ಅಭಿಮಾನಿ ದೇವರೇ ಕಾಪಾಡಬೇಕು ಎನ್ನುವ ಸಿನಿಮಾ ಇದಲ್ಲ.  'ಅಂದರ್ ಬ ಾಹರ್‌' ಚಿತ್ರದ ನಾಯಕ ಅಂಡರ್‌ವರ್ಲ್ಡ್ ಗ್ಯಾಂಬ್ಲರ್ ಎಂದುಕೊಳ್ಳದೆ, ಚಿತ್ರದ ನಾಯಕ ನಾಯಕಿ ಇಬ್ಬರೂ ನಿಮ್ಮ ಫ್ಯಾಮಿಲಿ ಮೆಂಬರ್‌ಗಳು ಎಂದುಕೊಂಡು ಸಿನಿಮಾಕ್ಕೆ ಹೋದರೆ ಚೆನ್ನ. ಅಲ್ಲಿಗೂ, ಅಂದರ್ ಬಾಹರ್ ಒಂದು ಕೆಟ್ಟ  ಸಿನಿಮಾ ಅನಿಸಿದರೆ, ಅದಕ್ಕೆ, ಅದು ತುಂಬಾ ಒಳ್ಳೆಯ ಸಿನಿಮಾ ಆಗಿರುವುದೂ ಒಂದು ಕಾರಣ ಇರಬಹುದು.

ಗೂಗ್ಲಿ
ಚಿತ್ರಕಥೆಯನ್ನೇ ನಂಬಿಕೊಂಡ ಚಿತ್ರಗಳ ಸಾಲಿನಲ್ಲಿ ಇನ್ನೊಂದು ಹೊಸ ಸೇರ್ಪಡೆ ಗೂಗ್ಲಿ. ಒಂದು ಹುಡುಗ ಹುಡುಗಿ ಲವ್ ಮಾಡ್ತಿರ್ತಾರೆ, ಮಿಸ್ ಅಂಡರ್‌ಸ್ಟ್ಯಾಂಡಿಂಗ್‌ನಿಂದ ದೂರ ಆಗ್ತಾರೆ. ಕೊನೆಗೆ ಮತ್ತೆ ಒಂದಾಗ್ತಾರೆ ಎಂದರೆ ಅದು ತೀರಾ ಸರಳ ಕಥೆ ಆಗುತ್ತದೆ. ಹಾಗಾಗಿ, ಒಂದು ಫ್ಲ್ಯಾಶ್‌ಬ್ಯಾಕ್ ಬಳಸೋಣ. ನಾಯಕ ಒಬ್ಬನೇ ಕಥೆ ಹೇಳಿದರೆ ಅದೂ ಕೂಡ ಬೋರ್ ಆಗಬಹುದು. ಹಾಗಾಗಿ ಅರ್ಧ ಕತೆ ನಾಯಕನ ಫ್ಲ್ಯಾಷ್‌ಬ್ಯಾಕ್, ಇನ್ನರ್ಧ ನಾಯಕಿಯದ್ದು ಅಂತ  ಡಿವೈಡ್ ಮಾಡಿಕೊಂಡ ಚಿತ್ರಕಥೆ ಇದು. ಇಂಥ ಸಿಂಪಲ್ ಕಥೆ ಇಟ್ಟುಕೊಂಡ ನಿರ್ದೇಶಕ ಪವನ್ ಒಡೆಯರ್ ಚಿತ್ರದಲ್ಲಿ ಮನರಂಜನೆಗೆ ಮೋಸವಿಲ್ಲ. ಕೊಟ್ಟ ದುಡ್ಡಿಗಿಂಥ ಹೆಚ್ಚನ್ನೇ  ವಾಪಸ್ಸು ಕೊಡುತ್ತದೆ ಗೂಗ್ಲಿ. ಹಂಗೇ ಒಂದ್ ಗೂಗ್ಲಿ ಬಿಡಿ, ಉಳಿದಿದ್ದೆಲ್ಲಾ ಹೋಗ್ಲಿ ಬಿಡಿ ಎಂಬ ಸೂತ್ರ ನಿರ್ದೇಶಕರದು.  ಅದು, ಕೆಲವು ಕಡೆ ಕ್ಲೀನ್ ಬೋಲ್ಡ್ ಆಗಿದ್ದರೆ, ಇನ್ನು ಕೆಲವು ಕಡೆ ಇನ್‌ಸೈಡ್ ಎಡ್ಜ್.

ಪ್ರಯೋಗಶಾಲೆಯಲ್ಲಿ...
ಸಿನಿಮಾ ಸ್ಕೂಲ್‌ನಲ್ಲಿ ಈ ವರ್ಷ ಆದ ಪ್ರಯೋಗಗಳಿಗೆ ನಾಂದಿ ಹಾಡಿದ್ದು ಗೊಂಬೆಗಳ ಲವ್ ಚಿತ್ರ. ಹೊಸಬರ ಈ ತ ಂಡ ಚಾರ್‌ಮಿನಾರ್‌ನಂಥ ಕಮರ್ಷಿಯಲ್ ಚಿತ್ರದ ಜೊತೆಗೆ ತೆರೆಕಂಡು ಹಲವು ಪ್ರೇಕ್ಷಕರನ್ನು ಆಕರ್ಷಿಸಿತು. ಅದಾದ  ನಂತರದ ಸರದಿ ಪವನ್ ಕುಮಾರ್ ಅವರ ಲೂಸಿಯಾ ಚಿತ್ರದ್ದು. ಕನ್ನಡ ಪ್ರೇಕ್ಷಕರಿಗೆ ಹೊಸತನದ ಚಿತ್ರಕಥೆಯನ್ನು  ಪರಿಚಯಿಸಿದ ಈ ಚಿತ್ರ ಸಾಕಷ್ಟು ಸುದ್ದಿ ಮಾಡಿತು. ಕಮರ್ಷಿಯಲ್ ಆಗಿಯೂ ಸಮಾಧಾನಕರವಾದ ಹಣ ಗಳಿಸಿತು. ಆಡಿಯೆನ್ಸ್ ಫಂಡ್‌ನಿಂದ ಚಿತ್ರಿತವಾದ ಲೂಸಿಯಾದ ನಂತರ ಗಿರಿರಾಜ್ ರ ಜಟ್ಟ ಚಿತ್ರದ ಮೂಲಕ ಆಡಿಯೆನ್ಸ್ ತೃಪ್ತಿಪಟ್ಟರು. ನಿರ್ಮಾಪಕರೂ ಕೂಡ ನನಗೆ ಈ ಚಿತ್ರದಿಂದ ನಷ್ಟ ಆಗಿಲ್ಲ ಎಂದು ಹೇಳಿದ್ದು ಜಟ್ಟನ ಹೆಗ್ಗಳಿಕೆ.  ಇದರ ಜೊತೆಗೆ ಚಲಂ ನಿರ್ದೇಶನದ ಚಿತ್ರಮಂದಿರದಲ್ಲಿ ಚಿತ್ರವೂ ಕೂಡ ಹೊಸತನದ ಪ್ರಯತ್ನ ಮಾಡಿತ್ತು. ಹಲವು  ವರ್ಷಗಳ ಹಿಂದೆಯೇ ಶುರುವಾಗಿದ್ದ ಈ ಚಿತ್ರದಲ್ಲೂ ಲೂಸಿಯಾದಂಥ ವಿಭಿನ್ನ ತಂತ್ರವಿತ್ತು. ವರ್ಷಾಂತ್ಯದಲ್ಲಿ ಪ್ರಚಾರದ  ಹಂಗೇ ಇಲ್ಲದೆ ಗಿಮಿಕ್‌ನಿಂದಲೇ ಯಶಸ್ಸು ಕಾಣುತ್ತಿರುವ ಸಿನಿಮಾ ಎಂದರೆ 6-52. ಎಲ್ಲೋ ಸಿಕ್ಕಿದ ವಿಡಿಯೋ ಟೇಪು  ಎಂದು ಗಿಮಿಕ್ ಮಾಡಿದ ಈ ತಂಡಕ್ಕೆ ಆರ್ಥಿಕವಾದ ಯಶಸ್ಸಂತೂ ಸಿಕ್ಕಿತು.

ಜಯಮ್ಮನ ಮಗ
ದೆವ್ವ ಹಿಡಿದು ಅತಂತ್ರರಾದವರಿಗೆ ದುಷ್ಟಶಕ್ತಿಗಳಿಂದ ಸ್ವಾತಂತ್ರ್ಯ ಕೊಡಿಸುವ ಕಥೆ ಇರುವ ಚಿತ್ರವಾದ್ದರಿಂದಲೋ ಏನೋ ಸ್ವಾತಂತ್ರ್ಯ ದಿನಾಚರಣೆಯ ದಿನವೇ ತಮ್ಮ ಜಯಮ್ಮನ ಮಗ ಚಿತ್ರವನ್ನು ಬಿಡುಗಡೆ ಮಾಡಿರುವ ವಿಜಯ್ ದೆವ್ವಗಳ ದುನಿಯಾ ತೋರಿಸಿದ್ದಾರೆ. ಅದರಲ್ಲಿ ಗೆಲುವು ಕಾಣುವ ಮೂಲಕ 'ಜಯ'ಂನ ಮಗ ಎನಿಸಿಕೊಂಡಿದ್ದಾರೆ. ವಿಜಯ್‌ರ ದುನಿಯಾ ಚಿತ್ರ ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳಿಗೆ ಸಂಬಂಧಪಟ್ಟಿದ್ದಾಗಿತ್ತು. ಆದರೆ, ಜಯಮ್ಮನ ಮಗ ಮನುಷ್ಯ ಮತ್ತು ದೆವ್ವಗಳ ನಡುವಿನ ಕಥೆ. ದುನಿಯಾ ದಲ್ಲಿ ಮನಸ್ಸಾಕ್ಷಿ ಕಂಡರೆ, ಇಲ್ಲಿ ಕಾಣುವುದು ಆತ್ಮ ಸಾಕ್ಷಿ, ಹಾಗಾಗಿ ದೆವ್ವಗಳ ದುನಿಯಾ ತೋರಿಸುವ ಮೂಲಕವಾದರೂ ವಿಜಯ್ ಈ ಚಿತ್ರದಲ್ಲಿ ಬೇರೊಂದು ಲೋಕವನ್ನೇ ತೋರಿಸಿದ್ದಾರೆ ಎನಿಸಿದರೆ ತಪ್ಪಿಲ್ಲ. ಚಿತ್ರದ ಕಥೆ ಹೊಸದಲ್ಲದಿರಬಹುದು. ಆದರೆ ಅದೇ ಉಡಾಫೆಯ, ಕಾಲೇಜು ಹುಡುಗರ ಅಥವಾ ಕಾಲೇಜು ಮುಗಿಸಿದ ಹುಡುಗರ ಪ್ರೇಮಕಥೆಗಳನ್ನು ನೋಡಿ ಬೋರಾದ ಪ್ರೇಕ್ಷಕರಿಗೆ  ಒಂದು ಸರ್‌ಪ್ರೈಸ್ ಅಂತೂ ವಿಕಾಸ್ ನಿರ್ದೇಶನದ ಮೊದಲ ಚಿತ್ರದಲ್ಲಿದೆ.

ಕಡ್ಡಿಪುಡಿ
ಅದು ಚಿತ್ರದ ಟೈಟಲ್ ಕಾರ್ಡ್. ಮಳೆಯಲ್ಲಿ ನೆಂದ ಕಾರಿನ ಗ್ಲಾಸ್ ಅನ್ನು ವೈಪರ್ ಒರೆಸುತ್ತಿರುತ್ತದೆ. ಅದು ತನ್ನ ಕೈಗಂಟಿದ ರಕ್ತವನ್ನು ಒರೆಸಿಕೊಳ್ಳಲು ಯತ್ನಿಸುವ ರೌಡಿಯ ಕಥೆ ಎಂಬುದರ ಸಂಕೇತವೇ?
ಕಡ್ಡಿಪುಡಿಯ ಫಸ್ಟ್‌ನೈಟ್‌ಗೆ ಬೆಡ್‌ರೂಮ್ ಸಿಂಗರಿಸುತ್ತಿರುವ ಗೆಳೆಯರ ಮಾತುಕತೆ.
ಕಡ್ಡಿಪುಡಿಗೆ ಇದು ನಿಜವಾಗ್ಲೂ ಫಸ್ಟ್‌ನೈಟಾ?
ಹೂ ಕಣೋ.
ಮತ್ತೆ, ಅವತ್ತು 'ಅಲ್ಲೆಲ್‌ಗೋ' ಹೋಗ್‌ಬಂದಿದ್ದ.
ಹೋಗಿದ್ದ ನಿಜ, ಆದ್ರೆ ಏನೂ ಮಾಡಿರಲ್ಲ.
ನಂಗೇನೋ ಡೌಟಪ್ಪ...
 ರೌಡಿಯೊಬ್ಬ ನಾನು ರೌಡಿಸಂ ಬಿಟ್ಟಿದ್ದೇನೆ ಎಂದರೂ ಈ ಸಮಾಜ ನಂಬುವುದಿಲ್ಲ ಎಂಬುದನ್ನು ಈ ದೃಶ್ಯ ಕೂಡ  ಸೂಚ್ಯವಾಗಿ ಹೇಳುತ್ತಿದೆಯೇ?
 ಕನ್ನಡಚಿತ್ರರಂಗದಲ್ಲಿ ದಿ ಬೆಸ್ಟ್ ರೌಡಿಸಂ ಚಿತ್ರ ಎನಿಸಿಕೊಂಡಿರುವ ಓಂ ಗಿಂತಲೂ ಬಹಳಷ್ಟು ಹೆಜ್ಜೆ ಮುಂದಿದೆ 'ಕಡ್ಡಿಪುಡಿ'. ಬಹುಶಃ ಕನ್ನಡದ 'ದಿ ಬೆಸ್ಟ್ ರೌಡಿಸಂ ಚಿತ್ರ' ಎಂದರೆ ಅತಿಶಯೋಕ್ತಿ ಅಲ್ಲ. ಹಾಗೆ ಮಾಡಿದ್ದಿದ್ದರೆ, ಹೀಗೆ ಮಾಡಿದ್ದಿದ್ದರೆ ಕಡ್ಡಿಪುಡಿ ಒಳ್ಳೆಯ ಸಿನಿಮಾ ಆಗುತ್ತಿತ್ತೇನೋ ಎಂಬುದೆಲ್ಲಾ ಸಿನಿಮೀಯ. ಹೀಗಿದ್ದೇ ಅದು ಅದ್ಭುತ ಸಿನಿಮಾ ಆಗಿದೆ ಎನ್ನುವುದು ವಾಸ್ತವ. ಕೈಯಲ್ಲಿ ಲಾಂಗ್ ಇರಲಿ, ಇಲ್ಲದಿರಲಿ, ಪ್ರತಿ ಫ್ರೇಮ್‌ನಲ್ಲೂ ಸ್ಪೆಷಲ್ ಎನಿಸುವ ಶಿವರಾಜ್‌ಕುಮಾರ್ ಅಭಿನಯದಲ್ಲಿ 'ಅಷ್ಟಿಲ್ಲದೆ ನೂರು ಸಿನಿಮಾ ಮಾಡೋಕಾಗ್ತಿತ್ತಾ' ಎಂಬ ಖದರ್ ಕಾಣುತ್ತದೆ. ಈಕೆ ಅದೆಲ್ಲಿಂದ ಅಭಿನಯ ಕಲಿತು ಬಂದಳೋ ಎಂಬ  ಅಚ್ಚರಿ ಹುಟ್ಟಿಸುವುದು ರಾಧಿಕಾ ಪಂಡಿತ್.

ಕೇಸ್ ನಂಬರ್ 18/9
ಕ್ಲೈಮ್ಯಾಕ್ಸ್ ಎಂಬ ಪದಕ್ಕೆ ನಿಜವಾದ ಅರ್ಥ ಕೊಡುವ ದೃಶ್ಯ ಅದು. ಕಥೆಯ ವಿಷಯದಲ್ಲಿ ಪ್ರೇಕ್ಷಕರಿಗೆ ಅಲ್ಲಿ ಯಾವ  ಹೊಸ ಅಚ್ಚರಿಯೂ ಇಲ್ಲ. ಆದರೂ, ಅಲ್ಲಿಯವರೆಗೂ 'ಮುಚ್ಚಿಟ್ಟ' ವಿಷಯವೊಂದನ್ನು 'ಬಿಚ್ಚಿ' ತೋರಿಸಲಾಗುತ್ತದೆ.  ಅದನ್ನು ನೋಡುವ ಎಂಥ ಗಂಡೆದೆಯ ಪ್ರೇಕ್ಷಕರಿಗೂ ಕಣ್ಣೀರನ್ನು ಕಣ್ಣಲ್ಲೇ ಮುಚ್ಚಿಟ್ಟುಕೊಳ್ಳುವುದು ಕಷ್ಟವಾಗುತ್ತದೆ. ಕೇಸ್ ಹಿಸ್ಟರಿ ತೆಗೆದು ನೋಡಿದರೆ ಇದು ತಮಿಳು ಚಿತ್ರದ ರಿಮೇಕ್ ಇರಬಹುದು. ಆದರೆ ಒಟ್ಟಾರೆ ಚಿತ್ರವನ್ನು ಸದಭಿರುಚಿಯ ಸಿನಿಮಾಗಳ ಶೋಕೇಸ್‌ನಲ್ಲಿಡಬಹುದು ಎನಿಸಿದರೆ ಅದಕ್ಕೆ ಕಾರಣ ಚಿತ್ರದ ನಿರ್ದೇಶಕ ಮಹೇಶ್ ರಾವ್.

ವಿಕ್ಟರಿ
ಪ್ರೇಕ್ಷಕ ಮುಖ ಗಂಟು ಹಾಕಿಕೊಳ್ಳಲು ಮಾತ್ರ ಅವಕಾಶವೇ ಇಲ್ಲ ಎನ್ನುವ ವಿಕ್ಟರಿ ಚಿತ್ರಕ್ಕೆ, ಕ್ವಾಟ್ರು ಖಾಲಿ ಆದ್ರೂ ಥೇಟ್ರು ಫುಲ್ ಆಗಿಸುವಂಥ ಲಕ್ಷಣಗಳಿವೆ. ಹಾಗಾಗಿ ತಮ್ಮ ಮೊದಲ ಪ್ರಯತ್ನದಲ್ಲಿ ನಿರ್ದೇಶಕ ನಂದಕಿಶೋರ್ ಅವರಿಗೆ ವಿಕ್ಟರಿ  ಸಿಕ್ಕಿದೆ ಎಂದು ಹೇಳಲು ಅಡ್ಡಿಯಿಲ್ಲ. ಕಥೆಯಲ್ಲಿ ಡಬಲ್ ಶರಣ್ ಎಂಟ್ರಿ ಆದಮೇಲೆ ಸಿನಿಮಾ ಕೊಂಚ ವೀಕ್ ಎನಿಸಿದರೂ ಪ್ರಶಾಂತ್‌ರ ಸಂಭಾಷಣೆ ಎಲ್ಲೂ ಚಿತ್ರವನ್ನು ಕೈ ಬಿಟ್ಟಿಲ್ಲ. ಕೆಲವೊಮ್ಮೆ ಅವರು ಬರೆದ ಇಂಟರೆಸ್ಟಿಂಗ್ ಸಂಭಾಷಣೆಗಾಗಿಯೇ ದೃಶ್ಯ ಸೃಷ್ಟಿಯಾಗಿದೆ ಎಂದು ಅನುಮಾನ ಹುಟ್ಟಿಸುವಷ್ಟರ ಮಟ್ಟಿಗೆ ಪ್ರಶಾಂತ್ ತಮ್ಮ ಪ್ರತಿಭೆ ಮೆರೆದಿದ್ದಾರೆ.

ದ್ಯಾವ್ರೇ
ದ್ಯಾವ್ರೇ ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರಿಗೆ 'ಇದೂ ಒಂದ್ ಸಿನಿಮಾನಾ?' ಎನ್ನಿಸಬಹುದು!. ಅದಕ್ಕೆ ಕಾರಣ  ಗಡ್ಡ ವಿಜಿ ನಿರ್ದೇಶನದ ದ್ಯಾವ್ರೇ ಚಿತ್ರ 'ಇದು ಸಿನಿಮಾ ಅಲ್ಲ, ಲೈಫು' ಎನಿಸುವಷ್ಟು ಸಹಜ ಮತ್ತು ಆಪ್ತವಾಗಿರುವುದು. ಚಿತ್ರದ ಮೊದಲರ್ಧದ ನಿರೂಪಣೆ ಜೈಲಿಗೆ ಬಂದ ಖೈದಿಗಳನ್ನೆಲ್ಲಾ ಪರಿಚಯಿಸುವ ಸ್ವಾಗತ ಭಾಷಣದಂತೆ. ಅದರ ಮಧ್ಯೆ ಆಯಾ ಖೈದಿಗಳ ಸ್ವಗತ. ದ್ವಿತೀಯಾರ್ಧದಲ್ಲಿ ಅವರೆಲ್ಲರಿಗೂ ಬೀಳ್ಕೊಡುಗೆ ಸಮಾರಂಭ. ಆದರೆ ಇಂಥಹ  ನಿರೂಪಣೆಯಲ್ಲಿ ನಿರ್ದೇಶಕ ಗಡ್ಡ ವಿಜಿ ಉಣಬಡಿಸಿರುವ ಅಡುಗೆ ಮಾತ್ರ ಬಾಯಲ್ಲಿ ಅಲ್ಲ, ಕಣ್ಣಲ್ಲಿ ನೀರೂರಿಸುತ್ತದೆ. ನಾಲ್ಕು ಗೋಡೆಗಳ ಮಧ್ಯೆ ಇರುವ ವಿಷಯವನ್ನು ಹೇಳುವಾಗ ಸಮಾಜ, ವ್ಯವಸ್ಥೆಗಳನ್ನು ಮಿತಿಯಲ್ಲಿರಿಸಿ ಮನುಷ್ಯತ್ವದ ಬಗ್ಗೆ ಹೆಚ್ಚು ಗಮನ ಕೊಟ್ಟಿದ್ದಾರೆ ವಿಜಿ. ಗೋಡೆಗಳಿಗೆ ಕಿವಿಗಳಿವೆ ಎನ್ನುವುದನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಗೋಡೆಗಳಿಗೆ  ಹೃದಯವೂ ಇರುತ್ತದೆ ಎನ್ನುತ್ತದೆ ದ್ಯಾವ್ರೇ ಚಿತ್ರ.

ಭಜರಂಗಿ
ಇತ್ತೀಚಿನ ಕೆಲವು ಚಿತ್ರಗಳ ಸೋಲಿನಿಂದ ನಿರಾಸೆಗೊಳಗಾಗಿದ್ದ ಶಿವರಾಜ್‌ಕುಮಾರ್ ಅಭಿಮಾನಿ ದೇವರುಗಳಿಗೆ  ದೈವಾಂಶಭೂತನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶಿವಣ್ಣರ ಭಜರಂಗಿ ಹೇಳಿ ಮಾಡಿಸಿದಂಥ ಚಿತ್ರ. ಒಂದು ದೊಡ್ಡ ಗೆಲುವು ಎಂಬ ಕನಸು ಬಹಳ ದಿನಗಳಿಂದ ಫ್ಯಾಂಟಸಿಯಾಗಿಯೇ ಉಳಿದಿದ್ದಕ್ಕೋ ಏನೋ ಹೆಚ್ಚು ಕಡಿಮೆ ಫ್ಯಾಂಟಸಿ ಚಿತ್ರವಾದ ಭಜರಂಗಿಯನ್ನು ಕೊಟ್ಟು ಅವರನ್ನು ತೃಪ್ತಿ ಪಡಿಸುವಲ್ಲಿ ನಿರ್ದೇಶಕ ಹರ್ಷ ಯಶಸ್ವಿಯಾಗಿದ್ದಾರೆ. ಇಡೀ ಚಿತ್ರಕ್ಕೆ ನಿರ್ದೇಶಕ ಹರ್ಷ ಮಾಡಿರುವ ಓಪನ್ ಆರ್ಟ್ ಸರ್ಜರಿ ಭರ್ಜರಿಯಾಗಿದೆ. ಕೈಯಲ್ಲಿ ಮಚ್ಚು ಹಿಡಿಯೋ 'ಠೀವಿ ರೈಟ್ಸ್‌' ಕೇವಲ ಶಿವರಾಜ್‌ಕುಮಾರ್ ಅವರ ಬಳಿಯಲ್ಲೇ ಇದೆ  ಎಂಬುದು ಮತ್ತೊಮ್ಮೆ ಪ್ರೂವ್ ಆಗಿದೆ. ಎಲ್ಲರೂ ಸೋಲಿಲ್ಲದ ಸರದಾರ ಎನಿಸಿಕೊಳ್ಳಲು ಹಾತೊರೆಯುವಾಗ ಶಿವಣ್ಣ,  ಬ್ಯಾಡ್‌ಲಕ್ ಬಾದ್‌ಶಾ ಎಂದು ಕರೆಸಿಕೊಳ್ಳುವ ಪಾತ್ರದಲ್ಲಿ ನಟಿಸುವ ಮೀಟರ್ ತೋರಿಸಿರುವುದು ಸ್ಪೆಷಲ್.

ಉಳಿದಿದ್ದು ಕಂಡಂತೆ...
ಗುರುಪ್ರಸಾದ್ ಅವರ ಡೈರೆಕ್ಟರ್ ಸ್ಪೆಷಲ್ ಕೂಡ ಒಂಥರಾ ಪ್ರಯೋಗಾತ್ಮಕ ಎನಿಸಿದರೂ ನಾವು ಕಮರ್ಷಿಯಲ್ಲು ಎನ್ನುವ ಗುರು ಚಿತ್ರ ಅದು. ಎದ್ದೇಳು ಮಂಜುನಾಥನ ಹ್ಯಾಂಗೋವರಿನಲ್ಲೇ ಇದ್ದಸಾಕಷ್ಟು ಜನ ಪ್ರೇಕ್ಷಕರು ನಿರೀಕ್ಷೆ ಇರಿಸಿಕೊಂಡಿದ್ದ ಸಿನಿಮಾ ಇದು. ಆದರೆ ಇನ್ನೊಂದು ಹ್ಯಾಂಗೋವರ್ ಸೃಷ್ಠಿಸುವಂತ ಕೆಲಸ ಡೈರೆಕ್ಟರ್ ಸ್ಪೆಷಲ್‌ನಿಂದ ಆಗಲಿಲ್ಲ. ಇನ್ನು ಕನ್ನಡ ಚಿತ್ರವೊಂದಕ್ಕೆ ಶ್ರೇಯಾ ಅವರನ್ನು ನಾಯಕಿಯಾಗಿಸಿದ ಹೆಗ್ಗಳಿಕೆ ರೂಪಾ ಅಯ್ಯರ್ ನಿರ್ದೇಶನದ  ಪ್ರೇಮ್, ಶ್ರೇಯಾರ ರಾಯಲ್ ಜೋಡಿ ಇದ್ದ ಚಂದ್ರ ಚಿತ್ರದ್ದು. ಇನ್ನು ಶ್ರೀಕಾಂತ್ ನಿರ್ದೇಶನದ ಟೀನೇಜ್ ಹಲವು ದಾಖಲೆಗಳ ಚಿತ್ರ. ಆದರೆ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯಲಿಲ್ಲ ಎಂಬುದು ನಿರಾಸೆ. ಇದನ್ನು ಹೊರತು ಪಡಿಸಿದಂತೆ ಅವಾರ್ಡು, ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಮಿಂಚಿದ ಸಿನಿಮಾಗಳ ಪಟ್ಟಿಯಲ್ಲಿ ಕೂರ್ಮಾವತಾರ, ಭಾರತ್ ಸ್ಟೋರ್ಸ್, ತಲ್ಲಣ, ಕಳವು ಮುಂತಾದ ಚಿತ್ರಗಳಿವೆ.

- ಹ್ಯಾರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video

ಒಂದು ಕಾಣದ ಕಣದ ಹುಡುಕಾಟ (ವಿಜ್ಞಾನ ವಿಶೇಷ)

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ