ಕುಪ್ರಸಿದ್ಧ ವೀರಪ್ಪನ್ ಕುರಿತಾದ ಇನ್ನೊಂದು ಚಿತ್ರ 'ಅಟ್ಟಹಾಸ' ತೆರೆಗೆ ಬರಲು ಸಿದ್ಧವಾಗಿದೆ. ಡೈನಮಿಕ್ ಸ್ಟಾರ್ ದೇವರಾಜ್ ಈ ಹಿಂದೆ ವೀರಪ್ಪನ್ ಆಗಿದ್ದರು. ಈಗ, ಈ ಹಿಂದೆ 'ಹುಲಿ' ಯಾಗಿ ಅನುಭವವಿದ್ದ ಶೇರ್, ಕಿಶೋರ್, ಗಜಹಂತಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರ ಇದೇ ತಿಂಗಳು 14ರಂದು ಮೂರು ಭಾಷೆಗಳಲ್ಲಿ ತೆರೆಕಾಣಲಿದ್ದು, ಇತ್ತೀಚೆಗೆ ಅದನ್ನು ಹೇಳಿಕೊಳ್ಳಲು ನಿರ್ದೇಶಕ ಎ.ಎಂ.ಆರ್. ರಮೇಶ್ ಪತ್ರಿಕಾಗೋಷ್ಠಿ ಕರೆದಿದ್ದರು.
'ಅಟ್ಟಹಾಸ' ಚಿತ್ರದಲ್ಲಿ ಎಲ್ಲ ನಿಜಜೀವನದ ಪಾತ್ರಗಳಿದ್ದು ಚಿತ್ರ ಘಟಾನುಘಟಿ ನಟ, ನಟಿಯರಿಂದ ತುಂಬಿದೆ. ಅಲ್ಲದೆ ಡಾ.ರಾಜ್ ಅಪಹರಣದ ಎಪಿಸೋಡ್ ಕೂಡ ಚಿತ್ರದಲ್ಲಿದ್ದು, ಅಣ್ಣಾವ್ರ ಪಾತ್ರದಲ್ಲಿ ಬಾಲಿವುಡ್‌ನ ಸುರೇಶ್ ಒಬೆರಾಯ್ ಅಭಿನಯಿಸಿದ್ದಾರೆ. ಎ.ಎಂ.ಆರ್. ರಮೇಶ್ ನಿರ್ದೇಶನದ ಈ ಚಿತ್ರದಲ್ಲಿ ವೀರಪ್ಪನ್ ಚಿತ್ರಣ ಹೇಗಿರುತ್ತದೋ ಏನೋ, ಆದರೆ ಚಿತ್ರದ ಪ್ರಮುಖ ಆಕರ್ಷಣೆ ಮಾತ್ರ ಕಿಶೋರ್ ಎಂದರೆ ತಪ್ಪಿಲ್ಲ. ಅಂದಿನ ಮಾತುಕತೆಯ ನಡುವೆ ನಟ ಸುಚೇಂದ್ರ ಪ್ರಸಾದ್ ಹೇಳಿದ್ದು ಕೂಡ ಅದನ್ನೇ. ಕಿಶೋರ್‌ರ ಅಭಿನಯವನ್ನು ಮನಸಾರೆ ಕೊಂಡಾಡಿದ ಸುಚೇಂದ್ರಪ್ರಸಾದ್ ಅದರ ಜೊತೆಗೆ ಇನ್ನೊಂದು ಮಾತನ್ನೂ ಹೇಳಿದರು. 'ಅಟ್ಟಹಾಸ' ಚಿತ್ರದಲ್ಲಿ ವಿಕಾಸ ಮತ್ತು ವಿಕಾರ ಎರಡೂ ಇದೆ. ವಿಕಾರವನ್ನು ಕಡೆಗಣಿಸಿ ವಿಕಾಸವನ್ನು ಮಾತ್ರ ಪ್ರೇಕ್ಷಕ ನೋಡುವಂತಾಗಲಿ ಎಂಬುದು ಅವರ ಆಶಯ. ಆದರೆ ತಮ್ಮ ಹೊಸ ಚಿತ್ರದ ಬಿಡುಗಡೆಯ ಸಂಭ್ರಮ ಮತ್ತು ಆತಂಕದಲ್ಲಿರುವ 'ಸೈನೈಡ್' ನಿರ್ದೇಶಕ ಎ.ಎಂ.ಆರ್.ರಮೇಶ್ ಈ ಚಿತ್ರದ ಬಗ್ಗೆ ಏನು ಹೇಳುತ್ತಾರೆ?
'ಅಟ್ಟಹಾಸ' ಸಿನಿಮಾದಲ್ಲಿ ವೀರಪ್ಪನ್ ಹೀರೋನಾ, ಅಥವಾ ಕಿಶೋರ್ ಹೀರೋನಾ?
ಇಲ್ಲಿ ನಾನು ಯಾರನ್ನೂ ಹೀರೋ ಎಂದು ತೋರಿಸಲು ಪ್ರಯತ್ನಿಸಿಲ್ಲ. ಇಲ್ಲಿರುವುದು ಕೇವಲ ನೈಜ ಕಥೆ, ನೈಜ ಪಾತ್ರಗಳು ಅಷ್ಟೇ. ಇದು ನೈಜ ಘಟನೆಗಳುಳ್ಳ ಚಿತ್ರವಾದ್ದರಿಂದ ಇಲ್ಲಿ, ಎಲ್ಲರಿಗೂ ಅವರವರ ಪಾತ್ರಕ್ಕೆ ತಕ್ಕಂತೆ ಪ್ರಾಧಾನ್ಯತೆ ಇದೆ.
ಡಾ.ರಾಜ್‌ಕುಮಾರ್ ಪಾತ್ರಕ್ಕೆ ಸುರೇಶ್ ಓಬಿರಾಯ್ ಹೊಂದುತ್ತಾರೆ ಅಂತ ಬಹುಶಃ ಯಾರೂ ಯೋಚನೆ ಮಾಡಿರಲಿಕ್ಕಿಲ್ಲ, ನಿಮಗೆ ಹೇಗೆ ಹೊಳೀತು?
ಹಾಗೆ ನೋಡಿದರೆ ಅಣ್ಣಾವ್ರ ಪಾತ್ರಕ್ಕೆ ನಾನು ನಾಗೇಶ್ವರರಾವ್ ಅವರನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೆ. ಬಹಳ ಹಿಂದೆಯೇ ಅವರಿಗೆ ಹೇಳಿಯೂ ಇದ್ದೆ. ಆದರೆ ಶೂಟಿಂಗ್‌ಗೆ ಕೆಲವು ದಿನಗಳ ಮುಂಚೆ ನಾಗೇಶ್ವರರಾವ್ ಅವರನ್ನು ನೋಡಿದಾಗ ಅವರ ದೇಹದ ತೂಕ ಇಳಿದಿತ್ತು. ಅದ್ಯಾಕೋ ಬೇಡ ಅನ್ನಿಸಿ, ಆ ಜಾಗಕ್ಕೆ ಬೇರೆಯವರನ್ನು ಹುಡುಕುತ್ತಿದ್ದಾಗ ಬಹಳಷ್ಟು ನಟರ ಬಗ್ಗೆ ಯೋಚನೆ ಬಂತು. ಸುರೇಶ್ ಒಬೆರಾಯ್‌ರ ಫೋಟೋ ನೋಡಿದಾಗ ಅವರಿಗೆ ಅಣ್ಣಾವ್ರ ಹೋಲಿಕೆ ಇದೆ ಎನಿಸಿತು. ಅವರ ಪೋಟೋಗಳನ್ನು ಅಣ್ಣಾವ್ರಿಗೆ ಹೊಂದುವಂತೆ ಬದಲಾಯಿಸಿ ನೋಡಿದಾಗ ಅವರೇ ಸೂಕ್ತ ಎನಿಸಿತು. ಅವರ ಮುಖ, ದೇಹ, ಸ್ಕಿನ್‌ಟೋನ್ ಎಲ್ಲವೂ ಕೂಡ ಹೊಂದಿಕೆಯಾಯಿತು. ಆದರೆ ಸುರೇಶ್ ಅವರನ್ನು ನಾವು ಸಂಪರ್ಕಿಸಿದಾಗ 'ಅಣ್ಣಾವ್ರ ಪಾತ್ರ ನಾನು ಮಾಡುವುದಾ?' ಎಂದು ಗಾಬರಿಯಾದರು.
ಆದರೆ ಸುರೇಶ್ ಒಬೆರಾಯ್ ಅವರಿಗೆ ಅಣ್ಣಾವ್ರ ಬಗ್ಗೆ ಒಂದಿಷ್ಟು ವಿಷಯಗಳನ್ನು ಹೇಳಿ, ಅವರ ಕೆಲವು ಸಿನಿಮಾಗಳನ್ನು ತೋರಿಸಿ ತಯಾರಿ ಕೊಟ್ಟೆವು. ಆದರೆ ವಿಚಿತ್ರ ಎಂದರೆ, ಚಿತ್ರೀಕರಣದ ಸಮಯದಲ್ಲಿ ಸುರೇಶ್, ಥೇಟ್ ಅಣ್ಣಾವ್ರಂತೆಯೇ ವರ್ತಿಸಲು ಶುರುಮಾಡಿದರು, ಶೂಟಿಂಗ್ ಸಮಯದಲ್ಲಿ ಅವರನ್ನು ನೋಡಿದವರೆಲ್ಲರೂ 'ಅಣ್ಣಾವ್ರನ್ನು ನೋಡಿದಂತೇ ಆಗುತ್ತದೆ' ಎನ್ನುವ ಮಟ್ಟಕ್ಕೆ.
ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಅರ್ಜುನ್ ಸರ್ಜಾರಂಥ ಸ್ಟಾರ್ ನಟರೇ ಬೇಕು ಅಂತ ಯಾಕನ್ನಿಸಿತು?
ನನಗೆ ಪೊಲೀಸ್ ಅಧಿಕಾರಿ ವಿಜಯ್‌ಕುಮಾರ್ ಅವರ ಪರಿಚಯ ಹಳೆಯದು. ಅವರನ್ನು ಹತ್ತಿರದಿಂದ ಬಲ್ಲೆ. ಹಾಗಾಗಿ ಅವರ ಪಾತ್ರ ಯಾರಿಂದ ಮಾಡಿಸಬಹುದು ಎಂದು ಯೋಚಿಸಿದಾಗ ನನಗೆ ಹೊಳೆದಿದ್ದು ಅರ್ಜುನ್ ಸರ್ಜಾ. ಇಬ್ಬರ ಬಾಡಿ ಲ್ಯಾಂಗ್ವೇಜ್ ಕೂಡ ಹೊಂದುತ್ತದೆ ಎನಿಸಿತು. ಹಾಗಾಗಿ ಅರ್ಜುನ್ ಅವರನ್ನು ಆರಿಸಿಕೊಂಡೆ.
ಇದು ವೀರಪ್ಪನ್ ಕತೆ ಎನ್ನುವ ದೃಷ್ಠಿಯಿಂದ ಮತ್ತು ಒಂದು ಸಿನಿಮಾ ಅನ್ನೋ ದೃಷ್ಟಿಯಿಂದ ನೋಡಿದಾಗ ಪ್ರೇಕ್ಷಕರ ಮನಸ್ಸಿನಲ್ಲಿ ಏನಾದರೂ ವ್ಯತ್ಯಾಸ ಆಗುತ್ತಾ?
ಇಲ್ಲ. ಎರಡೂ ರೀತಿಯಲ್ಲಿ ಈ ಚಿತ್ರ ಒಂದೇ ಅನುಭವ ಕೊಡುತ್ತದೆ. ಸತ್ಯ ಘಟನೆಗಳನ್ನು ಆಧರಿಸಿ, ಆಯಾ ಘಟನೆಗಳು ನಡೆದ ಜಾಗದಲ್ಲೇ ಅನೇಕ ದೃಶ್ಯಗಳನ್ನು ಚಿತ್ರೀಕರಿಸಿದ್ದೇವೆ. ಅಲ್ಲದೆ ವೀರಪ್ಪನ್‌ನ ಕೆಲವು ಸಹಚರರು, ಅಣ್ಣಾವ್ರ ಅಪಹರಣದ ಸಮಯದಲ್ಲಿ ಅವರ ಜೊತೆಗಿದ್ದ ನಾಗಪ್ಪ ಅವರಂಥ ನೈಜ ಪಾತ್ರಗಳನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಎಲ್ಲ ಪಾತ್ರಗಳಿಗೂ ಒರಿಜಿನಲ್ ಹೆಸರುಗಳೇ. ನನ್ನ 'ಸೈನೈಡ್' ಚಿತ್ರದಲ್ಲೂ ಹೀಗೇ ಮಾಡಿದ್ದೆ. ವೀರಪ್ಪನ್ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಈ ಸಿನಿಮಾ ನೋಡಬಹುದು ಎಂಬಷ್ಟರ ಮಟ್ಟಕ್ಕೆ ಪರಿಪೂರ್ಣ ಚಿತ್ರ ಇದು. ಇದು ಕಾಡುಗಳ್ಳನ ಆದಿ ಮತ್ತು ಅಂತ್ಯ ಎರಡರ ಚಿತ್ರಣ.
ರಾಜ್ ಅಪಹರಣದ ಎಪಿಸೋಡ್‌ನಿಂದ ವಿವಾದ ಆಗುವ ಸಾಧ್ಯತೆಗಳಿವೆಯಾ?
ಖಂಡಿತಾ ಇಲ್ಲ. ನಾನು ರಾಜ್ ಅಪಹರಣದ ಕಾಲದಲ್ಲಿ ನೆಡುಮಾರನ್, ಕೊಳತ್ತೂರು ಮಣಿ ಅವರನ್ನು ಭೇಟಿಯಾಗಿದ್ದೆ. ಸಾ.ರಾ.ಗೋವಿಂದು ಮತ್ತು ಫಿಲ್ಮ್ ಚೇಂಬರ್‌ನ ಆಗಿನ ಅಧ್ಯಕ್ಷರಾದ ಕೆಸಿಎನ್ ಚಂದ್ರು ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದು ನಾನೇ. ಹಾಗಾಗಿ ಕೇವಲ ಸತ್ಯವನ್ನಷ್ಟೇ ಹೇಳಿದ್ದೇನೆ. ಅಲ್ಲದೆ, ಇಲ್ಲಿ ಯಾರ ಮನಸ್ಸನ್ನು ನೋಯಿಸುವ ಉದ್ದೇಶ ಅಥವಾ ಪ್ರಯತ್ನ ಇಲ್ಲ.
ನಿಮ್ಮ 'ಅಟ್ಟಹಾಸ' ಚಿತ್ರದಲ್ಲಿ ವೀರಪ್ಪನ್‌ನನ್ನು ಯಾರ ದೃಷ್ಠಿಕೋನದಿಂದ ನೋಡಿದ್ದೀರಿ?
ಒಬ್ಬ ನಿರ್ದೇಶಕ ಒಂದು ಸಿನಿಮಾವನ್ನು ನೋಡುವಂತೆ ನೋಡಿದ್ದೇನೆ ಅಷ್ಟೆ. ಇದು ಕೇವಲ ಸತ್ಯಘಟನೆಗಳ ಸಚಿತ್ರ ವರದಿ. ಇಲ್ಲಿ ಯಾವ ವೈಯಕ್ತಿಕ ಅಭಿಪ್ರಾಯಗಳೂ ಇಲ್ಲ.
ಈ ಹಿಂದಿನ 'ವೀರಪ್ಪನ್' ಸಿನಿಮಾಗೂ 'ಅಟ್ಟಹಾಸ'ಕ್ಕೂ ಏನು ವ್ಯತ್ಯಾಸ ಇರುತ್ತೆ. ಇಲ್ಲಿ ವೀರಪ್ಪನ್ ಸಾಯ್ತ್ತಾನೆ ಅನ್ನೋದನ್ನು ಬಿಟ್ಟು?
ಅದು 17 ವರ್ಷಗಳ ಹಿಂದೆ ಬಂದ ಚಿತ್ರ. ವೀರಪ್ಪನ್ ವಿಷಯದಲ್ಲಿ ಅದರ ನಂತರ ಸಾಕಷ್ಟು ಘಟನೆಗಳು ನಡೆದಿವೆ. ಅವೆಲ್ಲವನ್ನೂ ಈ ಚಿತ್ರದಲ್ಲಿ ಸೇರಿಸಿದ್ದೇನೆ. ಅಲ್ಲದೆ ವೀರಪ್ಪನ್‌ನ ಹಿನ್ನೆಲೆ ಮತ್ತು ಆರಂಭದ ದಿನಗಳ ಕಥಾನಕದಲ್ಲೂ ಸಾಕಷ್ಟು ವಿವರಗಳನ್ನು ಹುಡುಕಿ ಸಮಗ್ರವಾದ ಮತ್ತು ಸರಿಯಾದ ಮಾಹಿತಿ ಕೊಟ್ಟಿದ್ದೇನೆ.
-ಹರಿ