ವಿಜಯ ವಿಶ್ವನಾಥ
ವಿಜಯ್ 'ದುನಿಯಾ' ಬಿಟ್ಟು ಈಗ 'ವಿಶ್ವ'ದ ಗುಂಗಿನಲ್ಲಿದ್ದಾರೆ. ಹಾಗಂತ ವಿಜಿ ವೈರಾಗ್ಯದ ಹಾದಿ ತುಳಿದಿಲ್ಲ. ಅವರು ಹೋಗಿದ್ದು ಕಾಶಿ ವಿಶ್ವನಾಥನ ದರ್ಶನಕ್ಕೆ.
ಅಲ್ಲಿಂದ ಬಂದ ಮೇಲೆ, ಇನ್ನೇನು ಸತ್ಯ ದರ್ಶನ ಆಗುವ ಕಾಲ ಹತ್ತಿರ ಬಂದಿದೆ ಎಂದು ಒಗಟಾಗಿ ಮಾತನಾಡುತ್ತಿದ್ದಾರೆ ವಿಜಯ್. ಇದು ಅವರ ಕಾಶಿಯಾತ್ರೆಯ ಫಲ ಇರಬಹುದು. ಮೊನ್ನೆ ಮೊನ್ನೆ ವಿಶ್ವನಾಥನ ದರ್ಶನ ಮಾಡಿಕೊಂಡು ಬಂದ ವಿಜಿ ಅವರಲ್ಲಿ ಒಂದಿಷ್ಟು ಹೊಸ ಕಳೆ ಮನೆ ಮಾಡಿದೆ. ಅದು ರಿಲ್ಯಾಕ್ಸ್ ಆದ ಅನುಭವ ಅಷ್ಟೇ ಅಲ್ಲ, ರಿಲೀವ್ ಆಗುತ್ತಾ ಮತ್ತೆ ಮತ್ತೆ ಹೊಸದಾಗಿ ಬದುಕುವ ಕನಸುಗಳು ಅವರಲ್ಲಿ ಚಿಗುರೊಡೆದಿವೆ.
ತಮ್ಮ ಆತ್ಮೀಯ ಸ್ನೇಹಿತನೊಬ್ಬರ ಜೊತೆ ಕಳೆದ ವಾರ ವಿಜಯ್ ವಿಶ್ವನಾಥನ ಸನ್ನಿಧಿಯಲ್ಲಿ ಕಾಲ ಕಳೆದಿದ್ದಾರೆ. ಕಳೆದೆರಡು ತಿಂಗಳಿಂದ ತಮ್ಮ ಪತ್ನಿಗೆ ವಿಚ್ಛೇದನ ನೀಡುವ ವಿಷಯದಲ್ಲಿ ಕಂಗಾಲಾಗಿದ್ದ ವಿಜಯ್ ಈಗ ಸ್ವಲ್ಪ ಕೂಲ್ ಆದಂತಿದ್ದಾರೆ.
ಅಲ್ಲದೆ, ಈಗ ದುನಿಯಾ ವಿಜಯ್ ಅವರ ವೈಯಕ್ತಿಕ ಜೀವನದಲ್ಲಿ ಒಂದಿಷ್ಟು ಬದಲಾವಣೆಗಳಾಗಿವೆ. ವಿಚ್ಛೇದನದ ಎಪಿಸೋಡ್‌ನ ನಂತರ, ಪತ್ನಿ ನಾಗರತ್ನ ಆಶ್ರಯದಲ್ಲೇ ಇದ್ದ ಮಕ್ಕಳು ಈಗ ಅಪ್ಪನ ಮನೆಗೆ ಬಂದು ಮನಸ್ಸು ಬಿಚ್ಚಿ ಮಾತನಾಡುತ್ತಿದ್ದಾರೆ. ಅದು ವಿಜಿಗೆ ನೆಮ್ಮದಿ ತಂದಿದೆ. ಆದರೆ, ಮತ್ತೆ ಮತ್ತೆ 'ಸತ್ಯ ಹೊರಬರಲಿದೆ' ಎನ್ನುವ ದುನಿಯಾ ವಿಜಿ ಅಂಥ ಯಾವ ದೊಡ್ಡ ಸತ್ಯವನ್ನು ಹೇಳಲಿದ್ದಾರೆ ಎಂಬುದು ಸದ್ಯದ ಕುತೂಹಲ.