ಸಿನಿಮಾ ಲೇಖನ

ಜೈ ಹೋ ವಿಜಯ

ಒಂದು ಸಿನಿಮಾದ ಆಡಿಯೋ ಬಿಡುಗಡೆ ಆದಮೇಲೆ ಆ ಹಾಡು ಚೆನ್ನಾಗಿದೆ, ಈ ಹಾಡು ಚೆನ್ನಾಗಿದೆ ಎನ್ನುವ ಮಾತುಗಳು ಕೇಳಿಬರುವುದು ಸಹಜ. ಆದರೆ ಶಿವರಾಜ್‌ಕುಮಾರ್ ಅಭಿನಯದ 'ಅಂದರ್‌ಬಾಹರ್‌' ಚಿತ್ರದ ಹಾಡುಗಳನ್ನು ಕೇಳಿದವರು ಹೋಲ್‌ಸೇಲ್ ಆಗಿ ಎಲ್ಲ ಹಾಡುಗಳಿಗೂ ಫಿದಾ ಆಗಿದ್ದರೆ ಅದಕ್ಕೆ ಕಾರಣ 'ಜೈ ಹೋ' ಖ್ಯಾತಿಯ ವಿಜಯ್‌ಪ್ರಕಾಶ್ ಅವರ ಸಂಗೀತ ನಿರ್ದೇಶನ. ರಾಜಾಶ್ರಯ ಪಡೆದಿದ್ದ ಅಜ್ಜ ಹರಿಕಥಾ ವಿದ್ವಾನ್ ಲಕ್ಷ್ಮೀಪತಿ ಭಾಗವತರ ಮೊಮ್ಮಗ ವಿಜಯ್‌ಪ್ರಕಾಶ್ ಈಗ ಶಿವರಾಜ್ ಆಶ್ರಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲೇ ಸುದ್ದಿ ಮಾಡುತ್ತಿದ್ದಾರೆ. ರೇಡಿಯೊದಲ್ಲಿ ಬೆಳಗ್ಗೆ ಏಳೂಮುಕ್ಕಾಲರ ಚಿತ್ರಗೀತೆಗಳನ್ನು ಕೇಳಿಕೊಂಡು ಬೆಳೆದೆ ಎನ್ನುವ ವಿಜಯ್‌ಪ್ರಕಾಶ್‌ರ ಹಾಡುಗಳು ಈಗ ಚಿತ್ರಗೀತೆಗಳಾಗಿವೆ. ಮೈಸೂರಿನಲ್ಲಿ ಹುಟ್ಟಿ, 20ನೇ ವಯಸ್ಸಿಗೆ ಬಾಂಬೆ ಲವ್ ಹತ್ತಿಸಿಕೊಂಡ ವಿಜಯ್ 'ಸ್ಲಂಡಾಗ್ ಮಿಲಿಯನೇರ್‌' ಚಿತ್ರದ 'ಜೈ ಹೋ' ಹಾಡಿನಿಂದ ಕನ್ನಡಿಗರಿಗೆ ಮತ್ತೆ ನೆನಪಾದವರು. ಈಗ ಅವರ ಮೊದಲ ಸಂಗೀತ ನಿರ್ದೇಶನದ ಹಾಡುಗಳು, ಬಾಹರ್ ಸುದ್ದಿ ಮಾಡುತ್ತಿರುವ ಸಮಯದಲ್ಲಿ ಅವರ ಅಂದರ್ ಕೀ ಬಾತ್ ಇಲ್ಲಿದೆ.

ಕೆರಿಯರ್ ಆರಂಭದಲ್ಲೇ ಆಸ್ಕರ್ ಬಂದರೆ ಮುಂದೆ ಕೆಲಸ ಮಾಡೋಕೆ ಆಸಕ್ತಿ ಇರುತ್ತಾ?
ಹಾಡುವುದು ನನಗೆ ಹೊಸದಲ್ಲ. ಸಿನಿಮಾಗೆ ಬರುವ ಮುಂಚೆಯೇ ಸಾವಿರಾರು ಜಿಂಗಲ್ಸ್‌ಗಳನ್ನು ಹಾಡಿದ್ದೆ. ಆದರೆ ಆಸ್ಕರ್ ಬಂದಮೇಲೆ ಸಿನಿಮಾದಲ್ಲಿ ಅವಕಾಶಗಳು ತೆರೆದುಕೊಂಡವು. ಆದರೆ ಒಬ್ಬ ಕಲಾವಿದನಿಗೆ ಎಷ್ಟೇ ಪ್ರಶಸ್ತಿಗಳು ಬರಲಿ, ಜೀವಂತವಿರುವವರೆಗೆ ಹೊಸದನ್ನು ಸಾಧಿಸಬೇಕು, ಇನ್ನಷ್ಟು ಪ್ರಶಸ್ತಿಗಳನ್ನು ಗಳಿಸಿಬೇಕು ಎಂಬ ಆಸಕ್ತಿ ಮಾತ್ರ ಸಾಯೋದಿಲ್ಲ.
ಕನ್ನಡದಲ್ಲಿ ತುಂಡ್ ಹೈಕ್ಳ ಸಾವಾಸ ಮಾಡಿದ್ಮೇಲೆ ಹೊಟ್ಟೆ ತುಂಬ್ಸೋ ಅವಕಾಶಗಳು ಜಾಸ್ತಿ ಆಗಿದೆಯಾ?
ಕರ್ನಾಟಕದ ಜನ ನನ್ನನ್ನ ಮೊದಲಿನಿಂದಲೂ ಗುರುತಿಸಿದರು. 'ಥರ ಥರಾ', 'ಕುರಿ ಕೋಳಿನಾ' ಹಾಡುಗಳೂ ನನಗೆ ಹೆಸರು ತಂದುಕೊಟ್ಟವು. 'ತುಂಡ್ ಹೈಕಳೂ' ಕೂಡ ಇನ್ನೊಂದು ಥರದ ಹೆಸರು ತಂದುಕೊಟ್ಟಿತು. ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ಸರಿಯಾಗಿ ಬಳಸಿಕೊಂಡು ನನಗೆ ಸಿಕ್ಕಿರುವ ಹೆಸರುಳಿಸಿಕೊಳ್ಳುತ್ತೇನೆ ಎಂಬ ನಂಬಿಕೆ ಇದೆ.

'ಅಂದರ್‌ಬಾಹರ್‌'ದಿಂದ ಸಂಗೀತ ನಿರ್ದೇಶಕರೂ ಆಗಿದ್ದೀರಿ, ಚಿತ್ರದ ಹಾಡುಗಳ ವಿಶೇಷತೆ ಬಗ್ಗೆ ಹೇಳಿ?
ನಿರ್ದೇಶಕ ಫಣೀಶ್ ಅವರ 'ಅಂದರ್ ಬಾಹರ್‌' ನಿಜಕ್ಕೂ ತುಂಬ ವಿಶೇಷವಾದ ಕಥೆ ಇರುವ ಸಿನಿಮಾ. ಅಲ್ಲದೆ ಕಥೆ ಮುಂದುವರಿಯುವಾಗ ಇಲ್ಲೊಂದು ಹಾಡಿರಬೇಕು ಎಂದು ಪ್ರೇಕ್ಷಕನಿಗೂ ಅನಿಸುವಂಥ ಸಮಯದಲ್ಲಿ ಮಾತ್ರ ಹಾಡು ಬರುತ್ತದೆಯೇ ಹೊರತು, ಇವು, ಸಿನಿಮಾಕ್ಕೆ ಮುಂಚೆ, ಒಂದು ಅಂಥ ಹಾಡು, ಒಂದು ಇಂಥ ಹಾಡು ಎಂದು ಡಿಸೈಡ್ ಮಾಡಿ, ಕಂಪೋಸ್ ಮಾಡಿದ ಹಾಡುಗಳಲ್ಲ.
ಹಾಡುಗಳಿಗೆ ಪ್ರತಿಕ್ರಿಯೆ ಹೇಗಿದೆ?
ಎಲ್ಲಾ 5 ಹಾಡುಗಳೂ ಬ್ಯೂಟಿಫುಲ್ ಎನ್ನುತ್ತಿದ್ದಾರೆ ಕೇಳಿದವರು. ಅಲ್ಲದೆ ಹಾಡುಗಳಲ್ಲಿ ಹೊಸ ಸೌಂಡಿಂಗ್ ಇದೆ ಎಂದು ಖುಷಿಪಡುತ್ತಿದ್ದಾರೆ. ಅಂದರೆ ಹೊಸ ಸಂಗೀತ ನಿರ್ದೇಶಕನ ಹಾಡುಗಳಿವು ಎಂಬುದನ್ನು ಜನ ಗುರುತಿಸಿದ್ದಾರೆ. ಅಲ್ಲಿಗೆ ನನ್ನ ಶ್ರಮ ಸಾರ್ಥಕ. ನಾನು, ಶ್ರೇಯಾ ಹಾಡಿರುವ 'ಮಳೆಯಲಿ ನೆಂದ ಹೂವಿನ ಹಾಗೆ' ಈಗಾಗಲೇ ಎಲ್ಲರ ಗಮನಸೆಳೆದಿದೆ. ಜಯಂತ್ ಕಾಯ್ಕಿಣಿ ಈ ಹಾಡು ಬರೆದಿದ್ದಾರೆ. ಇದಲ್ಲದೆ ಚಿತ್ರದ ಟೈಟಲ್ ಸಾಂಗ್, ಚೇತನ್ ಶಮಿತಾ ಹಾಡಿರುವ 'ನೀನು ನನ್ನ  ಓನ್ಲೀ ವೈಫ್‌' ಎನ್ನುವ ಫನ್ನಿ ಗೀತೆಗಳಲ್ಲೂ ಹೊಸತನವಿದೆ. ಶಂಕರ್ ಮಹಾದೇವನ್, ಕಾರ್ತಿಕ್, ಅನುರಾಧಾ ಭಟ್ ಕೂಡಾ ಹಾಡಿದ್ದಾರೆ.
'ಅಂದರ್‌ಬಾಹರ್‌'ನಲ್ಲಿ ಶಿವಣ್ಣರ ಸಿನಿಮಾದಲ್ಲಿ ಕಾಯಂ ಆಗಿರುವ ಡ್ಯಾನ್ಸ್ ನಂಬರ್ ಇದೆಯಾ?
ಈ ಚಿತ್ರದಲ್ಲಿ ನಾನು ಟ್ರೆಂಡ್ ಅನ್ನು ಫಾಲೋ ಮಾಡಿಲ್ಲ. ಅಲ್ಲದೆ ಶಿವಣ್ಣ ಅವರದ್ದು ಎಲ್ಲ ಸಿನಿಮಾದಲ್ಲೂ ಪವರ್ ಅಭಿನಯ ನಿಜ. ಆದರೆ ಇಲ್ಲಿ ನಿಜಕ್ಕೂ ಅವರ ಕ್ಯಾರೆಕ್ಟರ್ ವೈಯಕ್ತಿಕವಾಗಿ ತುಂಬಾ ಇಷ್ಟ ಆಯ್ತು. ಅದಕ್ಕೆ ತಕ್ಕಂತೆ ಹಾಡುಗಳನ್ನು ಮಾಡಿದ್ದೇನೆ. ಹಾಡುಗಳನ್ನು ಕೇಳಿ ಶಿವಣ್ಣ ಕೂಡಾ ಹೊಗಳಿದ್ದು ನನಗೆ ಸಿಕ್ಕ ದೊಡ್ಡ ಪ್ರಶಂಸೆ.

-ಹ್ಯಾರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ