ಕರಾವಳಿಯ ಈ ಕನ್ಯೆ ಕನ್ನಡ ಚಿತ್ರರಂಗಕ್ಕೆ ನಟಿಯಾಗಿ ಬಂದು ಗಾಂಧಿನಗರದ 'ಗಿರಿಕನ್ಯೆ'ಯಾಗಿ ಬೆಳೆದದ್ದು ಹಳೆಯ ಮಾತು. ಜಯಮಾಲ ಈಗ ದೊಡ್ಡ ಸ್ಟಾರ್. ನಿರ್ಮಾಪಕಿಯಾಗಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದವರು. 70 ಮತ್ತು 80ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ನಾಯಕಿ ನಟಿಯರಲ್ಲಿ ಪ್ರಮುಖವಾಗಿ ಕಾಣುವ ತಾರೆ ಜಯಮಾಲ. ಕನ್ನಡ, ತುಳು, ತೆಲುಗು, ತಮಿಳು ಕೊನೆಗೆ ಹಿಂದಿ ಚಿತ್ರಗಳಲ್ಲೂ ಅಭಿನಯಿಸಿರುವ ಇವರು, ಗೀತಪ್ರಿಯ ನಿರ್ದೇಶನದ 'ಕಾಸ್ ದಾಯೆ ಕಂಡನೆ' ಎನ್ನುವ ತುಳು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದವರು.
ನಿರ್ಮಾಪಕಿಯಾಗಿ 'ತಾಯಿ ಸಾಹೇಬ' ಹಾಗೂ 'ತುತ್ತೂರಿ'ಯಂಥ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿರುವ ಈ ಹಿರಿಯ ನಟಿ, ಹೊಸ ವರ್ಷದಲ್ಲೊಂದು ಹೊಸ ನಿರ್ಧಾರ ತೆಗೆದುಕೊಂಡಿದ್ದಾರೆ. ಇದು ಕೇವಲ ನಿರ್ಧಾರ ಮಾತ್ರವಲ್ಲ, ತಮ್ಮ ಕನಸು ಕೂಡ ಹೌದು ಎನ್ನುವ ಅವರು, ಈ ವರ್ಷದಲ್ಲಿ ಅತ್ಯುತ್ತಮ ಚಿತ್ರವೊಂದನ್ನು ನಿರ್ಮಾಣ ಮಾಡಲೇಬೇಕೆಂಬ ರೆಸಲ್ಯೂಷನ್ ಪಾಸ್ ಮಾಡಿಕೊಂಡಿದ್ದಾರೆ.
'ಕನ್ನಡವೂ ಸೇರಿದಂತೆ ಯಾವುದೇ ದೇಶದ, ಯಾವುದೇ ಭಾಷೆಯಲ್ಲಿ ಬಂದಿರುವ ಒಳ್ಳೆಯ ಚಿತ್ರಗಳನ್ನು ನೋಡಿದಾಗ ಅರೇ, ನಾನ್ಯಾಕೆ ಇಂಥ ಉತ್ತಮ ಸಿನಿಮಾ ನಿರ್ಮಾಣ ಮಾಡಬಾರದು? ಇಂಥ ಕಥೆಗಳು ನಮ್ಮ ನೆಲದಲ್ಲೂ ಇವೆಯಲ್ಲಾ? ಎನ್ನುವ ಪ್ರಶ್ನೆ ಕಾಡುತ್ತದೆ. ಪ್ರತಿ ಬಾರಿಯೂ ನಾನು ಯಾವುದಾದರೂ ಇಂಥ ಚಿತ್ರ ನೋಡಿದಾಗ ನಿರ್ಮಾಣದ ಕನಸು ಮನಸಿನಲ್ಲಿ ಮೂಡುತ್ತದೆ. 'ತುತ್ತೂರಿ' ನಂತರ ನಿರ್ಮಾಣದ ಕಡೆಗೆ ಗಮನ ಕೊಡದೆ ಬಹಳ ದಿನಗಳಾಗಿವೆ. ಹೀಗಾಗಿ ಈ ವರ್ಷದಲ್ಲಿ ಒಂದು ಸಿನಿಮಾ ನಿರ್ಮಿಸುವ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದೇನೆ' ಎನ್ನುತ್ತಾರೆ ಜಯಮಾಲ.
ಆದರೆ ಪುತ್ರಿ, ನಟಿ ಸೌಂದರ್ಯಗಾಗಿ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಲೊಕೇಷನ್‌ಗಳನ್ನು ನೋಡಿಕೊಂಡು ಬಂದಿದ್ದಾರಂತೆ ಎಂಬ ಸುದ್ದಿಗಳನ್ನು ಸಾರಾಸಗಟು ನಿರಾಕರಿಸುತ್ತಾರೆ. ಹಾಗಾದರೆ ಈ ವರ್ಷ ನಿರ್ಮಾಣ ಮಾಡಬೇಕು ಎಂದುಕೊಂಡಿರುವ ಚಿತ್ರದಲ್ಲಾದರೂ ನಿಮ್ಮ ಪುತ್ರಿ ನಟಿಸುತ್ತಾರೆಯೇ? ಮಾಮೂಲಿ ಕಮರ್ಷಿಯಲ್ ಸಿನಿಮಾ ಆದರೆ ನಿಮ್ಮ ಮಗಳೇ ನಾಯಕಿಯಾಗುತ್ತಾರೆಯೇ? ಎನ್ನುವ ಪ್ರಶ್ನೆಗೆ 'ನನ್ನ ಮಗಳಿಗಾಗಿಯೇ ಈ ವರ್ಷ ಸಿನಿಮಾ ಮಾಡುತ್ತಿದ್ದೇನೆ ಎಂದು ಹೇಳಲಾರೆ. ಅಲ್ಲದೆ ಯಾವ ರೀತಿಯ ಸಿನಿಮಾ ಎಂಬುದು ಕೂಡ ಇನ್ನೂ ನಿರ್ಧಾರವಾಗಿಲ್ಲ. ಒಳ್ಳೆಯ ಚಿತ್ರ ಮಾಡುತ್ತೇನೆ ಅಷ್ಟೆ. ಇದು ನನ್ನ ಹೊಸ ವರ್ಷದ ರೆಸಲ್ಯೂಷನ್' ಎಂದಷ್ಟೆ ಹೇಳುತ್ತಾರೆ. ಒಟ್ಟಿನಲ್ಲಿ ಜಯಮಾಲ ಅವರ ಬ್ಯಾನರ್‌ನಲ್ಲಿ ಈ ವರ್ಷ ನಿರ್ಮಾಣವಾಗಲಿರುವ ಚಿತ್ರ ಕಮರ್ಷಿಯಲ್ಲಾ? ಕಲಾತ್ಮಕ ಚಿತ್ರವಾ? ಅಥವಾ ಮಗಳಿಗಾಗಿ ಮಾಡುತ್ತಿರುವ ಸಿನಿಮಾನಾ? ಎಂಬುದು ಚಿತ್ರ ಶುರುವಾದ ಮೇಲೆಯಷ್ಟೆ ಗೊತ್ತಾಗಬೇಕಿದೆ.
-ಆರ್.ಕೇಶವಮೂರ್ತಿ