ಸಿನಿಮಾ ಲೇಖನ

ಮರಳಿ ಗೂಡಿಗೆ

ಹಿರಿಯ ಕಲಾವಿದರಾದ ಸುಂದರ್ ರಾಜ್- ಪ್ರಮೀಳಾ ಜೋಷಾಯ್ ದಂಪತಿ ಪುತ್ರಿ ಮೇಘನಾ ರಾಜ್ ಮಲಯಾಳದಿಂದ ಕನ್ನಡಕ್ಕೆ ಮರಳಿದ್ದಾರೆ. ಇವರು ಇಲ್ಲಿಂದಲೇ ಅಲ್ಲಿಗೆ ಹೋಗಿದ್ದವರು. 'ಸಿಲ್ವರ್ ಜ್ಯೂಬಿಲಿ' ಹುಡುಗಿಯೊಂದಿಗೆ ಮಾತನಾಡಿದಾಗ...

'2013ರಲ್ಲಾದರೂ ಕನ್ನಡದಲ್ಲಿ ನನಗೆ ಒಳ್ಳೆಯ ಸಿನಿಮಾ ಸಿಗಬಹುದೇ ಎನ್ನುವ ಕನಸು ಮತ್ತು ಕಾತರ ಕಾಡುತ್ತಿತ್ತು. ಅಬ್ಬಾ! ಅಂತೂ ನನ್ನ ನಾಡಿಗೆ ಬಂದೆ. ಒಳ್ಳೆಯ ಚಿತ್ರ ಸಿಕ್ಕಿತು' ಹೇಳಿಕೊಂಡು ಸಂಭ್ರಮಿಸಿದರು ನಟಿ ಮೇಘನಾ ರಾಜ್. ಅರೇ, ಈ ಮೇಘನಾ ಯಾರು? ಯಾವಾಗ ಯಾವ ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದು ಕೇಳಬೇಡಿ. ಲೂಸ್‌ಮಾದ ಯೋಗೀಶ್ ಜತೆ 'ಪುಂಡ' ಚಿತ್ರದಲ್ಲಿ ಕಾಣಿಸಿಕೊಂಡಾಕೆ ಈಕೆಯೇ.  
ಮೇಘನಾ ಎಂದೋ ಕನ್ನಡದಿಂದ ಪರಭಾಷೆಗೆ ಹೋದ ಹಳೆ ನಟಿಯಲ್ಲ. ಹೊಸ ತಲೆಮಾರಿನ ಕನಸು ಕಂಗಳ ಚೆಲುವೆ. ತಮ್ಮ ತಂದೆ, ತಾಯಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದರೂ ಅವರ ಐಡೆಂಟಿಟಿ ಮುಂದಿಟ್ಟುಕೊಂಡು ಚಿತ್ರರಂಗಕ್ಕೆ ಬಂದವಳಲ್ಲ. ಹಾಗೊಂದು ವೇಳೆ ಅಪ್ಪನದೋ, ಅಮ್ಮನದೋ ಗುರುತಿನ ಚೀಟಿ ಬಳಸಿದ್ದೇ ಆಗಿದ್ದರೆ ಈಗಾಗಲೇ ಕನ್ನಡದಲ್ಲೇ ಹತ್ತಾರು ಚಿತ್ರಗಳಲ್ಲಿ ಕಾಣಿಸಿಕೊಂಡಿರುತ್ತಿದ್ದಳು. ತನ್ನ ಪ್ರತಿಭೆ ನೋಡಿ ಅವಕಾಶ ಕೊಡುವ ನಿರ್ದೇಶಕ, ಸಿನಿಮಾಗಳಿಗಾಗಿ ಕಾದರು. ಆದರೆ ಕನ್ನಡದ ಪರದೆ ಯಾಕೋ ಮೇಘನಾರನ್ನು ಬರಸೆಳೆದುಕೊಳ್ಳಲಿಲ್ಲ. ದೂರದ ಮಲಯಾಳಂ ಚಿತ್ರರಂಗ ಈ ಕನ್ನಡತಿಯನ್ನು ಆಮದು ಮಾಡಿಕೊಂಡಿತು.
ಮಲಯಾಳಂಗೆ ಹೋದ ಮೇಘನಾ, ಅಲ್ಲಿ 15ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದಳು. ಈಗಾಗಲೇ 13 ಬಿಡುಗಡೆಯಾಗಿದ್ದು ಇನ್ನೆರಡು ರಿಲೀಸ್‌ಗೆ ಕಾದಿವೆ. ಮಮ್ಮೂಟಿ, ಮೋಹನ್‌ಲಾಲ್‌ರಂತ ಸ್ಟಾರ್ ನಟರ ಚಿತ್ರಗಲ್ಲೂ ಕಾಣಿಸಿಕೊಂಡಿರುವ ಮೇಘನಾ, ಕನ್ನಡದಲ್ಲೂ ತನಗೆ ದೊಡ್ಡ ಮಟ್ಟದಲ್ಲಿ ಬಾಗಿಲು ತೆರೆಯಬೇಕೆಂದು ಕನಸು ಕಾಣುತ್ತಿದ್ದಳು. ಆದರೆ ಒಂದು ಚಿತ್ರದ ನಂತರ ಇದ್ದಕ್ಕಿದ್ದ ಹಾಗೆ 'ಮೇಘಾ' ಮಲಯಾಳಿ 'ಮಾಲೆ'ಯಾಗಿಬಿಟ್ಟರು. ಮಲಯಾಳಿ ಮನೆಯಲ್ಲಿ ಓಡಾಡಿಕೊಂಡು ಆಗಾಗ ತೆಲುಗು, ತಮಿಳಿಗೂ ಬಂದು ಹೋಗುತ್ತಿದ್ದಳು.
ಆದರೆ ಕಳೆದ ವರ್ಷ ಕೊನೆಯಲ್ಲಿ '2013ರಲ್ಲಾದರೂ ಕನ್ನಡದಲ್ಲಿ ನನಗೊಂದು ಒಳ್ಳೆಯ ಚಿತ್ರ ಸಿಗಬಹುದಾ' ಎಂಬ ನಿರೀಕ್ಷೆಯಲ್ಲಿದ್ದಾಕೆಗೆ ಅಂದುಕೊಂಡಂತೆ ಮರಳಿ ಗೂಡಿಗೆ ಬರುವ ಅವಕಾಶ ಸಿಕ್ಕಿದೆ. ಗುರು ದೇಶ ಪಾಂಡೆ ನಿರ್ದೇಶನದ 'ರಾಜಾಹುಲಿ' ಚಿತ್ರದಲ್ಲಿ ಮೇಘನಾ ನಾಯಕಿ.
'ರಾಜಾಹುಲಿ ಚಿತ್ರದಲ್ಲಿ ತುಂಬಾ ಟಿಪಿಕಲ್ ಹಾಗೂ ಶ್ರೀಮಂತ ಹುಡುಗಿ ಪಾತ್ರ. ಕೊಂಚ ಕೊಬ್ಬು ಎನ್ನಿಸಿದರೂ ಮುದ್ದಾಗಿ ಕಾಣುವ, ಎಲ್ಲವನ್ನೂ ಪ್ರಾಕ್ಟಿಕಲ್ ನೆಲೆಗಟ್ಟಿನಲ್ಲಿಯೇ ನೋಡಿ ಮಾತನಾಡುವ ಹುಡುಗಿ. ನಡವಳಿಕೆ, ಡೈಲಾಗ್ ಡೆಲಿವರಿ ಹೊಸದಾಗಿದೆ' ಎನ್ನುತ್ತಾರೆ ಮೇಘನಾ.
  ಅಂದಹಾಗೆ ಮೇಘನಾಗೆ 'ರಾಜಾಹುಲಿ' 25ನೇ ಚಿತ್ರ. ಸಿಲ್ವರ್ ಜ್ಯೂಬಿಲಿ ಗರ್ಲ್ ನಾನು ಎನ್ನುವ ಈಕೆ, ಅಬ್ಬಾ ಕನ್ನಡಕ್ಕೆ ಮತ್ತೆ ವಾಪಸ್ಸು ಬಂದೆ ಎಂದು ನಿಟ್ಟುಸಿರು ಬಿಡುತ್ತಾರೆ. 'ನಾನು ಮೊದಲು ಮಲಯಾಳಂನಲ್ಲಿ ಅಭಿನಯಿಸಿದ ಚಿತ್ರ 'ಯಕ್ಷಯಂ ನಜನಂ'. ಇದು ಹಾರರ್ ಸಿನಿಮಾ. ಇಲ್ಲಿ ನನ್ನದು ಮೋಹಿನಿ ಪಾತ್ರ. ಮೊದಲ ಚಿತ್ರವೇ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿತು. ಹೀಗಾಗಿ ಅಲ್ಲಿನ ಚಿತ್ರರಂಗ ನನಗೆ ಮತ್ತಷ್ಟು ಬೆಂಬಲ ಕೊಟ್ಟಿತು. ಸರದಿಯಂತೆ ಅವಕಾಶಗಳು ಬರತೊಡಗಿದವು. ಕನ್ನಡದಲ್ಲೂ ವಿಭಿನ್ನ ಪಾತ್ರಗಳನ್ನು ನಿರೀಕ್ಷೆ ಮಾಡಿದ್ದೆ. ಆದರೆ 'ಪುಂಡ' ಚಿತ್ರದ ನಂತರ ಸಾಕಷ್ಟು ಅವಕಾಶಗಳು ಬಂದವು. ಎಲ್ಲವೂ ಒಂದೇ ರೀತಿಯ ಪಾತ್ರಗಳು. ಸಾಕಷ್ಟು ಬಾರಿ ಚಿತ್ರಗಳಿಗೆ ಒಪ್ಪಿಕೊಂಡು ರಿಜೆಕ್ಟ್ ಮಾಡಿದ್ದ ಉದಾಹರಣೆಗಳಿವೆ. ಎಷ್ಟು ಸಿನಿಮಾ ಮಾಡುತ್ತೇವೆ ಎಂಬುದು ಮುಖ್ಯವಲ್ಲ. ಎಷ್ಟು ಒಳ್ಳೆಯ ಚಿತ್ರಗಳಲ್ಲಿ ಅಭಿನಯಿಸಿದ್ದೇವೆ ಎಂಬುದು ಮುಖ್ಯ' ಎಂಬುದು ಮೇಘನಾರ ಅಭಿಪ್ರಾಯ.
 'ಕನ್ನಡ, ತೆಲುಗು, ಮಲಯಾಳಂ, ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡಿದ್ದೇನೆ. ಒಬ್ಬ ಕಲಾವಿದೆಯಾಗಿ ನನಗೆ  ಭಾಷೆಯ ಹೊರತಾಗಿ ಬೇರೆ ಭಿನ್ನತೆ ಇಲ್ಲ' ಎಂಬುದು ಮೇಘನಾರ ಪರಭಾಷೆಯ ಚಿತ್ರಗಳ ಅನುಭವ.

ಮಲಯಾಳಂ ಸಿನಿಮಾ ಮಾಡುವುದೆಂದರೆ ಸ್ಕೂಲ್‌ಗೆ ಹೋಗಿ ಬಂದ ಹಾಗೆ. ಪಾತ್ರಗಳು ಕೂಡ ಒಂದಕ್ಕಿಂತ ಒಂದು ಭಿನ್ನವಾಗಿಯೇ ಸಿಕ್ಕವು. 'ಬ್ಯೂಟಿಫುಲ್‌'ನಲ್ಲಿ ಪ್ರತಿ ನಾಯಕಿ. 'ಬ್ಯಾಕಿಂಗ್ ಅವರ್ಸ್ 10 ಟು 4'ನಲ್ಲಿ ಪೊಲೀಸ್, 'ರೆಡ್‌ವೈನ್‌'ನಲ್ಲಿ ಕಾರ್ಪೋರೆಟ್ ಲುಕ್ ಹುಡುಗಿ ಹಾಗೂ ಬೇರೆಬೇರೆ ಚಿತ್ರಗಳಲ್ಲಿ ಮಾನಸಿಕ ಅಸ್ವಸ್ಥೆ, ಎರಡು ಮಕ್ಕಳ ತಾಯಿ, ಮೋಹಿನಿ ಮುಂತಾದ ಪಾತ್ರಗಳನ್ನು ಮಾಡಿದ್ದೇನೆ. ಕನ್ನಡದಲ್ಲಿಯೂ ಇದೇ ರೀತಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಆಸೆ ನನ್ನದು ಎನ್ನುತ್ತಾಳೆ ಮೇಘನಾ.


- ಆರ್.ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ನೈಜಿರಿಯನ್ ಪ್ರಜೆಗಳ ಕಾಟ! ಕೋರ್ಟ್ ಗರಂ

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

ವೃತ್ತಿ ಜೀವನದ ಬಹು ದೊಡ್ಡ ಕನಸನ್ನು ರಿವೀಲ್ ಮಾಡಿದ ವೈಭವ್ ಸೂರ್ಯವಂಶಿ! Video

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!