ನಟ ದರ್ಶನ್‌ರ ಅಂಗಳದಿಂದ 'ಕ್ರಾಂತಿವೀರ ಸಂಗೊಳ್ಳಿರಾಯಣ್ಣ' ಚಿತ್ರದ ನಂತರ ಮತ್ತೊಂದು ಚಿತ್ರ ಸೆಟ್ಟೇರಿದೆ. ವಿಶೇಷ ಎಂದರೆ ಇದು ಕೌಟುಂಬಿಕ ಮನರಂಜನೆಯ ಆ್ಯಕ್ಷನ್ ಸಿನಿಮಾ. ಅಲ್ಲಿಗೆ ದರ್ಶನ್‌ರ ಕೈಯಲ್ಲಿ ಮೂರು ಫ್ಯಾಮಿಲಿ ಚಿತ್ರಗಳು ಇವೆ. ನೋಡಲು ಮನೆ ಮನೆಯಲ್ಲೂ ಸಿದ್ಧರಾಗಿ.
ನಟ ದರ್ಶನ್ ತಮ್ಮ ಅಭಿಮಾನಿಗಳಿಗೆ ಫ್ಯಾಮಿಲಿ ಪ್ಯಾಕೇಜ್ ಯೋಜನೆ ರೂಪಿಸಿದ್ದಾರೆಯೇ? ಹೀಗೊಂದು ಪ್ರಶ್ನೆ ಮೂಡಿ ಬರಲು ಸದ್ಯ ಅವರ ಮುಂದಿರುವ ಚಿತ್ರಗಳೇ ಕಾರಣ. ಈಗಾಗಲೇ 'ಬುಲ್ ಬುಲ್' ಚಿತ್ರೀಕರಣ ಮುಗಿಯುವ ಹಂತಕ್ಕೆ ಬಂದಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ. ಇದು ಕೌಟುಂಬಿಕ ಮನರಂಜನೆ ಚಿತ್ರ. ಚಿತ್ರೀಕರಣ ಮುಗಿದರೂ ಸದ್ದಿಲ್ಲದೇ ಮಲಗಿರುವ 'ವಿರಾಟ್' ಕೂಡ ಮನೆ ಮನೆಯ ಕಥೆ. ಇನ್ನೂ ಹೊಸದಾಗಿ ಶುರುವಾಗಿರುವ 'ಬೃಂದಾವನ' ಚಿತ್ರದ್ದು ಸಹ ಕೌಟುಂಬಿಕ ಕಥಾ ಹಂದರ. ಆದರೆ ಕುಟುಂಬದ ಜೊತೆಗೆ ಕೊಂಚ ಆ್ಯಕ್ಷನ್ ಕೂಡ ಇರುತ್ತದೆ. ಒಟ್ಟಿನಲ್ಲಿ ದರ್ಶನ್‌ರಿಂದ ಪ್ರೇಕ್ಷಕರಿಗೆ 'ಫ್ಯಾಮಿಲಿ ಪ್ಯಾಕೇಜ್ ಡೀಲ್' ನಡೆಯುತ್ತಿದೆ.
ಅಂದಹಾಗೆ ತುಂಬಾ ಹಿಂದೆಯೇ ಘೋಷಣೆ ಮಾಡಿದ 'ಬೃಂದಾವನ' ಚಿತ್ರದ ಶೀರ್ಷಿಕೆ ಲಾಂಚ್ ಕಾರ್ಯಕ್ರಮ ಮತ್ತು ಪತ್ರಿಕಾಗೋಷ್ಟಿ ನಡೆಯಿತು. ಡಿ. ಸುರೇಶ್ ಗೌಡ ಹಾಗೂ ಪಿ.ಎಸ್. ಶ್ರೀನಿವಾಸ್ ಮೂರ್ತಿ ಈ ಚಿತ್ರದ ನಿರ್ಮಾಪಕರು. ಕೆ. ಮಾದೇಶ್ ನಿರ್ದೇಶಕರು. ಇನ್ನೂ ನಾಯಕಿಯರಾಗಿ ಕೇರಳಾ ಕುಟ್ಟಿ ಕಾರ್ತೀಕಾ ನಾಯರ್, ತೆಲುಗಿನ ವೇದಿಕಾ ಇದ್ದಾರೆ. ಸಂಗೀತಕ್ಕೆ ವಿ. ಹರಿಕೃಷ್ಣ ಕೀ ಬೋರ್ಡ್ ಹಿಡಿದು ನಿಂತಿದ್ದಾರೆ. ಚಿತ್ರದ ಶೀರ್ಷಿಕೆ ಅದ್ಧೂರಿಯಾಗಿಯೇ ಅನಾವರಣಗೊಂಡಿತು. ಇದು ತೆಲುಗಿನಲ್ಲಿ ಜ್ಯೂ. ಎನ್‌ಟಿಆರ್ ಅಭಿನಯಿಸಿರುವ 'ಬೃಂದಾವನಂ' ಚಿತ್ರದ ರಿಮೇಕ್ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಹಾಡು, ಕುಣಿತ, ಕೃಷ್ಣ-ರುಕ್ಮಿಣಿ ವೇಷ ತೊಟ್ಟ ಪುಟ್ಟ ಮಕ್ಕಳ ರ್ಯಾಂಪ್ ಶೋ, ಶೀರ್ಷಿಕೆ ಸೂಚಿಸಿದವರಿಗೆ ಬಹುಮಾನ ವಿತರಣೆಯ ನಂತರ ಚಿತ್ರದ ಟೈಟಲ್ ಲಾಂಚ್ ಆಯಿತು. ನಿರ್ದೇಶಕ ಕೆ. ಮಾದೇಶ್ ಈ ಹಿಂದೆ ದರ್ಶನ್‌ರ ಅಭಿನಯದಲ್ಲಿ 'ಗಜ' ಚಿತ್ರವನ್ನು ನಿರ್ದೇಶಿಸಿದ್ದರು. ಈಗ ಮಾದೇಶ್ ದರ್ಶನ್ ಜೊತೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.
ನಾಯಕಿಗೆ ಬೇಡವಾದ ಮದುವೆಯನ್ನು ತಪ್ಪಿಸಲು ಹೋಗಿ ನಾಯಕನೇ ತೊಂದರೆಗೆ ಸಿಕ್ಕಿಕೊಳ್ಳುವುದು ಚಿತ್ರದ ಒಂದು ಸಾಲಿನ ಕಥೆ. ಎಲ್ಲ ವರ್ಗದ ಪ್ರೇಕ್ಷಕರಿಗೆ ಬೇಕಾದ ಅಂಶಗಳು ಈ ಚಿತ್ರದಲ್ಲಿರುವುದರಿಂದ ಕನ್ನಡಕ್ಕೆ ರಿಮೇಕ್ ಮಾಡುತ್ತಿರುವುದಾಗಿ ನಿರ್ಮಾಪಕರು ಘೋಷಿಸುತ್ತಾರೆ.
ಶ್ರೀನಿವಾಸ್‌ಮೂರ್ತಿ ಹಾಗೂ ಸುರೇಶ್ ಗೌಡ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ದರ್ಶನ್ ಅಭಿಮಾನಿಗಳಿಗೆ ಮೋಸ ಆಗದ ರೀತಿಯಲ್ಲಿ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುವುದು ಅವರ ಕನಸು. ಈಗಾಗಲೇ ಚಿತ್ರದ ಹಾಡುಗಳನ್ನು ವಿದೇಶದಲ್ಲಿ ಚಿತ್ರೀಕರಣ ಮಾಡಲು ನಿರ್ಮಾಪಕರು ಯೋಜನೆ ರೂಪಿಸಿದ್ದಾರೆ. ರಿಮೇಕ್ ಚಿತ್ರವಾದರೂ ಮಾದೇಶ್ ಕನ್ನಡ ಪ್ರೇಕ್ಷಕರಿಗೆ ರುಚಿಸುವ ರೀತಿಯಲ್ಲಿ ನಿರ್ದೇಶನ ಮಾಡುತ್ತಾರೆಂಬುದು ಗಾಂಧಿನಗರದ ಹಳೆ ಸುದ್ದಿ. 'ಹುಡುಗುರು', 'ಗಜ' ಹಾಗೂ 'ರಾಮ್' ಚಿತ್ರಗಳಲ್ಲಿ ತಮ್ಮ ರಿಮೇಕ್ ಪ್ರತಿಭೆಯನ್ನು ತೋರಿಸಿರುವುದೇ ಇದಕ್ಕೆ ಸಾಕ್ಷಿ. ಕಥೆ ತುಂಬಾ ಚೆನ್ನಾಗಿದೆ.
ಕೌಟುಂಬಿಕತೆಯ ಜತೆಗೆ ಆ್ಯಕ್ಷನ್ ಕೂಡ ಇರುವುದು ಚಿತ್ರದ ಹೈಲೈಟ್. ಹೀಗಾಗಿ ಕನ್ನಡಿಗರಿಗೆ ಮೆಚ್ಚುಗೆಯಾಗುವಂತೆ ಚಿತ್ರ ಮಾಡುವುದಾಗಿ ಮಾದೇಶ್ ಭರವಸೆ ಕೊಡುತ್ತಾರೆ. ಸಂಗೀತ ನಿರ್ದೇಶಕ ಹರಿಕೃಷ್ಣ ಮಾತಿಗಿಂತ ಹಾಡೊಂದನ್ನು ಹಾಡಿದ್ದು ವಿಶೇಷವಾಗಿತ್ತು.
'ಬೃಂದಾವನ' ಚಿತ್ರದ ನಂತರ ದರ್ಶನ್‌ರ ಮಾತು 'ಬುಲ್ ಬುಲ್', 'ವಿರಾಟ್' ಚಿತ್ರೀಕರಣ ಹಾಗೂ 'ಕ್ರಾಂತಿವೀರ ಸಂಗೊಳ್ಳಿರಾಯಣ್ಣ' ಚಿತ್ರದ ಗಳಿಕೆ ಕಡೆ ಹೊರಳಿತು. 'ವಿರಾಟ್' ಬಗ್ಗೆ ಹೆಚ್ಚು ಮಾತನಾಡದೇ 'ವಿರಾಟ್‌ಗಿಂತ ಮುಂದೆ ಬುಲ್ ಬುಲ್ ಚಿತ್ರ ಮೊದಲು ಬರಲಿದೆ' ಎಂದರು. 'ಸಂಗೊಳ್ಳಿ ರಾಯಣ್ಣ' ಚಿತ್ರದ ಕಲೆಕ್ಷನ್ ಬಗ್ಗೆ ಹೇಳಲು ಸದ್ಯದಲ್ಲೇ ಪತ್ರಿಕಾಗೋಷ್ಠಿ ಕರೆಯುವುದಾಗಿ ಹೇಳಿದರು.
ದರ್ಶನ್: 'ಪಕ್ಕಾ ಕೌಟುಂಬಿಕ ಮನರಂಜನೆಯ ಚಿತ್ರ. ಗಜ ಚಿತ್ರದ ನಂತರ ಮತ್ತೆ ಅದೇ ರೀತಿಯ ಶೇಡ್ ಇಲ್ಲಿದೆ. ನನ್ನ ಮಟ್ಟಿಗೆ ಈ 'ಬೃಂದಾವನ' ಚಿತ್ರದಲ್ಲಿ ಪಾತ್ರ ಹೊಸದು, ನಾನು ಮಾತ್ರ ಹಳಬ. ಎಂದಿನಂತೆ ನನ್ನ ಚಿತ್ರಗಳನ್ನು ನೀವು ನೋಡಿ ಗೆಲ್ಲಿಸುತ್ತೀರಿ ಎನ್ನುವ ನಂಬಿಕೆ ನನ್ನದು. ನಿರ್ದೇಶಕ ಮಾದೇಶ್ ಏನೇ ಮಾಡಿದರೂ ಕಮರ್ಷಿಲ್ ಆಗಿ ಮಾಡುತ್ತಾರೆ'. <
ಆರ್. ಕೇಶವಮೂರ್ತಿ