ನಟ ಯೋಗೀಶ್ ಸೋದರ ಮಹೇಶ್ ಅವರು ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಶುರುವಾದ 'ಭಾಗ್ಯರಾಜ' ಚಿತ್ರಕ್ಕೆ ಈತನೇ ನಾಯಕ. ಈ ಹಿಂದೆ 'ಪರಾರಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಜಾನ್ವಿ ಕಾಮತ್ ಈ ಚಿತ್ರದ ನಾಯಕಿ. ಅನೂಪ್ ಸಿಳೀನ್ ಸಂಗೀತ ಚಿತ್ರಕ್ಕಿದೆ. ದೀಪಕ್ ಮದ್ದುವನಹಳ್ಳಿ ಚಿತ್ರದ ನಿರ್ದೇಶಕ. ಮುಹೂರ್ತದಲ್ಲಿ ನಟ ಪುನೀತ್‌ರಾಜ್‌ಕುಮಾರ್ ಪಾಲ್ಗೊಂಡು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ರಿಯಲ್ ಸ್ಟಾರ್ ಉಪೇಂದ್ರ ಶುಭ ಕೋರಿದರು.
ನಿರ್ಮಾಪಕ ಸಿದ್ದರಾಜು ಅವರಿಗೆ ಇದು ನಾಲ್ಕನೇ ಸಿನಿಮಾ. ಚಿತ್ರಕ್ಕೆ 'ನಕಲು ಮಾಡಬೇಡಿ' ಎನ್ನುವ ಟ್ಯಾಗ್ ಲೈನ್ ಇದೆ. ಈಗಾಗಲೇ ಸಿದ್ದರಾಜು ಆಡಿಯೋ ಕಂಪನಿಯನ್ನೂ ಆರಂಭಿಸಿದ್ದು ಚಿತ್ರದ ಈ ಸಾಲು ಅವರಿಗೆ ಹೇಳಿ ಮಾಡಿಸಿದಂತಿದೆ. ಇದೊಂದು ಲವ್ ಮತ್ತು ಥ್ರಿಲ್ಲರ್ ಚಿತ್ರ. ಇಲ್ಲಿ ಕೇವಲ ನಾಲ್ಕು ಪಾತ್ರಗಳು ಮಾತ್ರ ಇವೆ. ಮಹೇಶ್ ಅವರದ್ದು ಬೇಜವಾಬ್ದಾರಿ ಯುವಕನ ಪಾತ್ರ. ಜಾನ್ವಿ ಕಾಮತ್ ಅವರದ್ದು ಕೇಬಲ್ ವಾಹಿನಿಯ ಅಕೌಟೆಂಟ್ ಪಾತ್ರ.
ಡಾ. ರಾಜ್‌ಕುಮಾರ್ ಅಪಹರಣವಾದ ಸಂದರ್ಭದಲ್ಲಿ ನಡೆಯುವ ಕಥೆಯನ್ನು ಚಿತ್ರದಲ್ಲಿ ತೋರಿಸಲಾಗುತ್ತಿದೆ. 13 ವರ್ಷಗಳ ಹಿಂದಿನ ವಾತಾವರಣದ ಹಿನ್ನೆಲೆಯನ್ನು ಕಟ್ಟಿ ಕೊಡುವುದು ನಿರ್ದೇಶಕರಿಗೆ ಇಲ್ಲಿ ಚಾಲೆಂಜ್ ಆಗಿ ಕಂಡಿದೆಯಂತೆ. ಚಿತ್ರಕ್ಕೆ ಮಂಜುನಾಥ ನಾಯಕ್ ಛಾಯಾಗ್ರಹಣ ಮಾಡಲಿದ್ದಾರೆ. ಈಗಾಗಲೇ ಗೆಲುವಿನ ಅಲೆಯಲ್ಲಿರುವ ಅನೂಪ್ ಸಿಳೀನ್ ಅವರು ಸಂಗೀತದ ಮೋಡಿ ಇಲ್ಲಿ ನಡೆಯಲಿದೆ. ವಿ. ಮನೋಹರ್ ಹಾಗೂ ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ ಚಿತ್ರಕ್ಕಿದೆ. 'ನನ್ನ ಎರಡನೇ ಮಗ ಚಿತ್ರರಂಗಕ್ಕೆ ಬರುತ್ತಿದ್ದಾನೆ. ಅವನಿಗೆ ನಿಮ್ಮ ಬೆಂಬಲ ಇರಲಿ' ಎಂಬುದು ಸಿದ್ದರಾಜು ಅವರ ಮನವಿ. 'ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ತುಂಬಾ ರಿಯಲಿಸ್ಟಿಕ್ ಆಗಿ ತೆಗೆದಿದ್ದಾರೆ' ಎಂದರು ಮಹೇಶ್. ನಟ ಯೋಗೀಶ್ ತಮ್ಮನ ಚಿತ್ರಕ್ಕೆ ಶುಭ ಕೋರಿದರು.