ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಲೇಖನ

ಲೌಡ್ ವಿಷಲ್ ಹೊಡೀರಿ ಸೀಟಿ

Mainashree
Updated On : 25 Jul 2013, 7:09 am

ನನ್ನ ಮೂರೂ ಚಿತ್ರಗಳಲ್ಲಿ ಕಮರ್ಷಿಯಲ್ ಆಗಿ ಅತಿ ಹೆಚ್ಚು ಹಣ ಗಳಿಸಿರುವ ಚಿತ್ರ 'ವಿಷಲ್‌' ಎನ್ನುತ್ತಾರೆ ನಿರ್ದೇಶಕ ಪ್ರಶಾಂತ್ ರಾಜ್. ಚಿತ್ರ ಬಿಡುಗಡೆಯಾದ ಒಂದು ವಾರಕ್ಕೇ ಸಂತೋಷ ಕೂಟ ಕರೆಯಲು ಇದೇ ಕಾರಣ ಎನ್ನುವ ಪ್ರಶಾಂತ್ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯ ಬಗ್ಗೆ ತಮಗೆ ತೃಪ್ತಿ ಇದೆ ಎನ್ನುತ್ತಾರೆ.
ಚಿತ್ರ ನೋಡಿದ ಕೆಲವು ಪ್ರೇಕ್ಷಕರು ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರಂತೆ. ಕೆಲವರು ಚೆನ್ನಾಗಿದೆ ಎಂದರೆ ಕೆಲವರು ಕ್ಲೈಮ್ಯಾಕ್ಸ್ ನಮಗೆ ಅರ್ಥವಾಗಲಿಲ್ಲ, ಅದು ವಿಷಲ್ ಪಾರ್ಟ್ 2 ಮಾಡುವ ಮುನ್ಸೂಚನೆಯೇ ಎಂದು ಪ್ರಶ್ನಿಸಿದರಂತೆ. ಕೆಲವರು ಸಿನಿಮಾ ಇದ್ದಕ್ಕಿದ್ದಂತೆ ಮುಗಿದು ಹೋಯಿತು ಎನ್ನಿಸಿತು, ನಾವು ಇನ್ನೂ ಏನೋ ಇದೆ ಎಂದು ನಿರೀಕ್ಷಿಸುತ್ತಿದ್ದೆವು ಎಂದಿದ್ದೂ ಹೌದಂತೆ. ಹಾಗಾಗಿ ಈ ಗೊಂದಲಗಳನ್ನು ನಿವಾರಿಸುವುದು ಒಳ್ಳೆಯದು ಎಂಬ ಕಾರಣಕ್ಕೆ ಪ್ರಶಾಂತ್ ತಮ್ಮ ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಬದಲಾಯಿಸಿದ್ದಾರೆ. ಹಾಗಾಗಿ ಈಗ ಪ್ರದರ್ಶನಗೊಳ್ಳುತ್ತಿರುವ ವಿಷಲ್ ಚಿತ್ರದಲ್ಲಿ ಹೊಸ ಕ್ಲೈಮ್ಯಾಕ್ಸ್ ಇರಲಿದೆ. ಇಂಥ ಪರಿಸ್ಥಿತಿ ಎದುರಾಗಬಹುದು ಎಂಬ ಕಾರಣಕ್ಕೆ ಮುಂಚೆಯೇ ಸಿದ್ಧತೆ ಮಾಡಿಕೊಂಡಿದ್ದರಿಂದ ಅದರಿಂದ ಯಾವ ತೊಂದರಯೂ ಆಗಲಿಲ್ಲವಂತೆ ಪ್ರಶಾಂತ್‌ಗೆ. ಕೇವಲ ಕೊನೆಯ ದೃಶ್ಯವನ್ನು ಕಟ್ ಮಾಡಿ ಮೊದಲೇ ಸಿದ್ದಪಡಿಸಿದ್ದ ಸುಖಾಂತ್ಯದ ಸೀನ್ ಹಾಕಿ ಸೀಟಿ ಹೊಡೆದಿದ್ದಾರೆ ಪ್ರಸಾಂತ್.
ಅದನ್ನು ಬಿಟ್ಟರೆ, ಕತ್ತಲಲ್ಲಿ ನಡೆಯುವ 40 ನಿಮಿಷಗಳ ಸಿನಿಮಾ ಕಥೆ, ಇಡೀ ಚಿತ್ರದ ಹೈಲೈಟ್ ಎಂಬುದು ಚಿತ್ರ ನೋಡಿದ ಎಲ್ಲ ಪ್ರೇಕ್ಷಕರದ್ದು ಎಂದ ಪ್ರಶಾಂತ್ ವಿಷಲ್‌ನ ಈ ಸಕ್ಸಸ್ ಸಮಯದಲ್ಲಿ ತಾವು ರಿಮೇಕ್ ಮಾಡಬೇಕಾಗಿ ಬಂದುದರ ಕಥೆಯನ್ನು ಹೇಳಿಕೊಂಡರು. ನಿಜಕ್ಕೂ ನಾನು ರಿಮೇಕ್ ಮಾಡುವ ನಿರ್ದೇಶಕನಾಗಿರಲಿಲ್ಲ. ವಿಷಲ್ ಚಿತ್ರದ ಹಕ್ಕುಗಳನ್ನು ನಮ್ಮ ಸಂಸ್ಥೆಯಿಂದ ಖರೀದಿಸಿದ್ದೆವು. ಆದರೆ, ಅದನ್ನು ನಿರ್ದೇಶಿಸುವ ಇರಾದೆ ನನಗಿರಲಿಲ್ಲ. ಆದರೆ ಕೆಲವು ಅನಿವಾರ್ಯ ಕಾರಣಗಳಿಂದಾಗಿ, ನಾನೇ ನಿರ್ದೇಶನ ಮಾಡಬೇಕಾಯ್ತು ಎನ್ನುತ್ತಾ ಮತ್ತೊಮ್ಮೆ ಇದೇ ನನ್ನ ಮೊಟ್ಟ ಮೊದಲ ಮತ್ತು ಕಟ್ಟ ಕಡೆಯ ರಿಮೇಕ್ ಎಂಬುದನ್ನು ಒತ್ತಿ ಹೇಳಿದರು.
ಈ ಚಿತ್ರದ ವಿಷಯದಲ್ಲಿ ನಾನು ಬಹಳಷ್ಟು ಕಷ್ಟಗಳನ್ನು ಎದುರಿಸಬೇಕಾಯ್ತು. ಈ ಮುಂಚೆ ಎರಡು ಚಿತ್ರಗಳನ್ನು ಮಾಡಿದ ಅನುಭವ, ನಾಮಬಲ ಇದ್ದರೂ ನಮ್ಮನ್ನು ಮೊದಲ ಸಿನಿಮಾ ಮಾಡುತ್ತಿರುವವರಂತೆ ನೋಡಲಾಯ್ತು. ಹಾಗಾಗಿ ನಾವೇ ಚಿತ್ರವನ್ನು ವಿತರಿಸುವ ನಿರ್ಧಾರ ಕೈಗೊಂಡೆವು. ಅದರಿಂದ ಒಳ್ಳೆಯದೇ ಆಗಿದೆ. ಇನ್ನುಮುಂದಿನ ಚಿತ್ರಗಳಿಗೂ ಇದೇ ಪದ್ಧತಿ ಅನುಸರಿಸುತ್ತೇವೆ ಎಂಬುದು ಪ್ರಶಾಂತ್ ಮತ್ತು ಚಿತ್ರದ ನಿರ್ಮಾಪಕ ನವೀನ್ ಅವರ ನಿಲುವು. ಇನ್ನು ಚಿತ್ರದ ನಾಯಕ, ಚಿರಂಜೀವಿ ಸರ್ಜಾ ಇಲ್ಲಿಯವರೆಗೆ ನಾನು ಬಹುತೇಕ ಆ್ಯಕ್ಷನ್ ಪಾತ್ರಗಲಲ್ಲೇ ಕಾಣಿಸಿಕೊಂಡಿದ್ದೆ. ಆದರೆ ಈ ಬಾರಿಯ ನನ್ನ ವಿಭಿನ್ನ ಪ್ರಯತ್ನಕ್ಕೆ ಜನ ಭೇಷ್ ಎಂದಿದ್ದಾರೆ ಎಂದು ತಮಗೆ ಪ್ರೇಕ್ಷಕರಿಂದ ಸಿಕ್ಕ ಪ್ರಶಂಸೆಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡರು.

- ಹ್ಯಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement