ಸಿನಿಮಾ ಲೇಖನ

ಉಸಿರುವಾಸಿ

ಅವರ ಮಾತೆಂದರೆ ಮಾಧುರ್ಯ. ಅವರಾಡುವ ಒಂದೊಂದು ಶಬ್ದದಲ್ಲೂ ಮನಸ್ಸಿಗೆ ತಾಗುವ ಆಪ್ತತೆ.

ಅವರ ಮಾತೆಂದರೆ ಮಾಧುರ್ಯ. ಅವರಾಡುವ ಒಂದೊಂದು ಶಬ್ದದಲ್ಲೂ ಮನಸ್ಸಿಗೆ ತಾಗುವ ಆಪ್ತತೆ.
ಎಸ್‌ಪಿಬಿ ಎಂದರೇನೆ ಒಂದು ಮುತ್ತು. ಅವರ ವ್ಯಕ್ತಿತ್ವವೂ ಅದರಂತೆ ಫಳಫಳ. ಹತ್ತಿಯಂತೆ ಮೃದು, ಸ್ಫಟಿಕದಂತೆ ಶುಭ್ರ. ಮನಸ್ಸು ಮಗುವಿನಂತೆ ಮುಗ್ಧ.
ಎಸ್.ಪಿ. ಬಾಲಸುಬ್ರಮಣ್ಯ ದೇಶವೇ ಮೆಚ್ಚುವ ಗಾಯಕ. ಅವರಿಗೆ ಭಾಷೆಗಳ ಹಂಗಿಲ್ಲ. 'ಇಂಥ ಗೀತೆಗಳನ್ನಷ್ಟೇ ಹಾಡುವೆ' ಎನ್ನುವ ಚೌಕಟ್ಟಿಲ್ಲ. ಅವರ ಕಂಠದಿಂದ ಹೊಮ್ಮಿದ ಹಾಡುಗಳು 40 ಸಾವಿರಕ್ಕೂ ಅಧಿಕ. ಅದರಲ್ಲಿ ಕನ್ನಡದದ್ದೇ ಸಿಂಹಪಾಲು. 'ಬೇರಾವ ಭಾಷೆಗಳ ಜನರೂ ತೋರದ ಪ್ರೀತಿ, ಆದರ, ವಿಶ್ವಾಸಗಳನ್ನು ಕನ್ನಡಿಗರು ತೋರುತ್ತಿದ್ದಾರೆ. ಪ್ರತಿ ಕನ್ನಡಿಗನ ಮನ, ಮನೆಯಲ್ಲಿ ನಾನಿದ್ದೇನೆ ಎನ್ನುವುದಕ್ಕಿಂತ ಖುಷಿ ಇನ್ನೇನಿದೆ. ನಾನೊಬ್ಬ ಕನ್ನಡದ ಸೇವಕ' ಎನ್ನುವ ಎಸ್‌ಪಿಬಿ ಅವರದ್ದು ಏಕಲವ್ಯ ವಿದ್ಯೆ!
ಆಂಧ್ರಪ್ರದೇಶ ಚಿತ್ತೂರಿನ ಕೊನೇಟಮ್ಮಪೇಟಾದಲ್ಲಿ ಜನನ. ಸಂಪ್ರದಾಯಸ್ಥ ಕುಟುಂಬ. ಅಪ್ಪನನ್ನು ಅನುಕರಿಸುತ್ತಲೇ ತಬಲಾ, ಕೊಳಲು ವಾದನದಲ್ಲಿ ಪರಿಣತಿ ಪಡೆದ ಹುಡುಗ. ಹರಿಕಥಾ ವಿದ್ವಾಂಸರಾಗಿದ್ದ ತಂದೆಗೆ ಮಗ ಸಂಗೀತ ಕ್ಷೇತ್ರಕ್ಕೆ ಕಾಲಿಡುವುದು ಬೇಕಿರಲಿಲ್ಲ. ಅನಂತಪುರಕ್ಕೆ ಕರೆದೊಯ್ದು ಎಂಜಿನಿಯರಿಂಗ್ ಕಾಲೇಜಿಗೆ ಸೇರಿಸಿದರು. ಟೈಫಾಯ್ಡ್ ಕಾಣಿಸಿಕೊಂಡಿದ್ದರಿಂದ ಓದಿಗೆ ತಿಲಾಂಜಲಿ. ಅಪ್ಪನ ಹಠ ಕರಗಲಿಲ್ಲ. ಚೆನ್ನೈಗೆ ಕರೆದೊಯ್ದು ಇನ್‌ಸ್ಟಿಟ್ಯೂಶನ್ ಆಫ್ ಎಂಜಿನಿಯರ್ಸ್‌ಗೆ ದಾಖಲಿಸಿದರು. ಸಂಗೀತದ ನಂಟಿನೊಂದಿಗೇ ಓದು ಮುಗಿಯಿತು. ಯುವಕನ ಗುರಿ ಸ್ಪಷ್ಟವಿತ್ತು.
1966. ಎಸ್‌ಪಿಬಿ ಎನ್ನುವ ಹಿನ್ನೆಲೆ ಗಾಯಕ ಉದಿಸಿದ ವರ್ಷ. ಘಂಟಸಾಲಾ ಮತ್ತು ಎಸ್.ಪಿ. ಕೋದಂಡಪಾಣಿ ತೀರ್ಪುಗಾರರಾಗಿದ್ದ ಸಂಗೀತ ಸ್ಪರ್ಧೆಯಲ್ಲಿ ಎಸ್‌ಪಿಬಿ ವಿಜೇತರಾದರು. ಇಬ್ಬರಿಂದಲೂ ಮೆಚ್ಚುಗೆಯ ಸುರಿಮಳೆ. ಕೋದಂಡಪಾಣಿ ತಮ್ಮ ತೆಲುಗು ಚಿತ್ರ 'ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ'ದಲ್ಲಿ ಹಾಡಲು ಅವಕಾಶ ನೀಡಿದರು. ಲಘು ಸಂಗೀತದಷ್ಟೇ ಪ್ರಬುದ್ಧವಾಗಿ ಶಾಸ್ತ್ರೀಯ ಸಂಗೀತವನ್ನೂ ದುಡಿಸಿಕೊಳ್ಳುವ ತಾಕತ್ತು ಎಸ್‌ಪಿಬಿ ಅವರದ್ದು. ಶಾಸ್ತ್ರೀಯ ಸಂಗೀತದ ಎಳೆಎಳೆಯನ್ನೂ ತಿಳಿದುಕೊಂಡಿರುವ ಅವರು ಶಾಸ್ತ್ರೀಯವಾಗಿ ಸಂಗೀತ ಕಲಿತಿಲ್ಲ!  ಸ್ವತಃ ಎಸ್‌ಪಿಬಿ ಹೇಳಿಕೊಂಡಿರುವಂತೆ, 'ನಾನು ಘಂಟಸಾಲಾರ ಏಕಲವ್ಯ ಶಿಷ್ಯ'.
ಮರ್ಯಾದಾ ರಾಮಣ್ಣನಿಂದ ಶುರುವಾದ ಹಿನ್ನೆಲೆ ಗಾಯಕನ ಪಯಣ ನಿರಂತರ. ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ... ಸೀಮೋಲ್ಲಂಘನ ಮಾಡುತ್ತಲೇ ದೈತ್ಯ ಪ್ರತಿಭೆಯಾಗಿ ಬೆಳೆದರು. ಅವರ ಕಂಠಕ್ಕೆ ದಣಿವೆಂಬುದೇ ಇಲ್ಲ. ಎಷ್ಟು ಹಾಡಿದರೂ ಅವರ ಸ್ವರದಲ್ಲಿನ ಮಾಧುರ್ಯ ಇನಿತೂ ಕಡಿಮೆಯಾಗಿಲ್ಲ. 'ಹಾಡುವಾಗ ಶೇ.100ರಷ್ಟು ನನ್ನನ್ನು ನಾನು ತೊಡಗಿಸಿಕೊಳ್ಳುತ್ತೇನೆ. ಮುಂದಿನದರ ಬಗ್ಗೆ ನಾನೆಂದೂ ಯೋಚಿಸುವುದೇ ಇಲ್ಲ' ಎಂದು ಮಂದಹಾಸ ಬೀರುತ್ತ ತಮ್ಮ ಯಶಸ್ಸಿನ ಗುಟ್ಟು ಬಿಚ್ಚಿಡುತ್ತಾರೆ ಎಸ್.ಪಿ. ಬಾಲಸುಬ್ರಮಣ್ಯ.
1980ರಲ್ಲಿ ತೆಲುಗು ಚಿತ್ರ 'ಶಂಕರಾಭರಣಂ'ಗಾಗಿ ಒಂದೇ ದಿನದಲ್ಲಿ ಪಿ. ಸುಶೀಲಾ ಜತೆಗಿನ ಡ್ಯುಯೆಟ್ ಹಾಡುಗಳು ಸೇರಿದಂತೆ 23 ಹಾಡುಗಳ ರೆಕಾರ್ಡಿಂಗ್ ನಡೆಸಿದ್ದು ಸಾಮಾನ್ಯವೇನಲ್ಲ. ಕನ್ನಡದಲ್ಲಿ ಉಪೇಂದ್ರಕುಮಾರ್ ಅವರಿಗಾಗಿ 6 ಗಂಟೆಯಲ್ಲಿ 16 ಹಾಡುಗಳನ್ನು ಹಾಡಿದ್ದರಂತೆ!

ವಿಷ್ಣು ನಂಟು
ಎಸ್‌ಪಿಬಿಗೂ ವಿಷ್ಣುವರ್ಧನ್‌ರದು ಆತ್ಮೀಯ ಅನುಬಂಧ. ವಿಷ್ಣು ಮೊದಲ ಚಿತ್ರ 'ನಾಗರಹಾವು'ದಿಂದ (ಹಾವಿನ ದ್ವೇಷ) ಆರಂಭವಾಗಿ ಕೊನೆ ಸಿನಿಮಾ 'ಆಪ್ತರಕ್ಷಕ'ದವರೆಗೆ ಅವರ ಎಲ್ಲ ಸಿನಿಮಾಗಳಲ್ಲೂ ಹಾಡಿದ್ದಾರೆ. ತಮ್ಮ ಚಿತ್ರದಲ್ಲಿ ಎಸ್‌ಪಿಬಿಗೊಂದು ಹಾಡು ನೀಡುವಂತೆ ವಿಷ್ಣು ನಿರ್ಮಾಪಕರು, ಸಂಗೀತ ನಿರ್ದೇಶಕರನ್ನು ಒತ್ತಾಯಿಸುತ್ತಿದ್ದರು ಕೂಡ. 'ಆಪ್ತರಕ್ಷಕ'ದ 'ಘರನೆ ಘರ ಘರನೆ' ಹಾಡಿಗೆ ಫಿಲಂಫೇರ್ ಪ್ರಶಸ್ತಿ ಬಂದಾಗ 'ಇದು ವಿಷ್ಣುವಿಗೆ ಸಲ್ಲಬೇಕಾದ ಪ್ರಶಸ್ತಿ' ಎಂದು ಭಾವುಕರಾಗಿದ್ದರು ಎಸ್‌ಪಿಬಿ. ಎಸ್‌ಪಿಬಿ ಕನ್ನಡದಲ್ಲಿ ಸಂಗೀತ ನಿರ್ದೇಶನ ಆರಂಭಿಸಿದ್ದು ಕೂಡ ವಿಷ್ಣುವರ್ಧನ್ ಅಭಿನಯದ 'ಸೌಭಾಗ್ಯಲಕ್ಷ್ಮಿ' ಚಿತ್ರದ ಮೂಲಕವೇ. ಅಂದಹಾಗೆ, ಎಸ್‌ಪಿಬಿ ಕನ್ನಡಕ್ಕೆ ಕಾಲಿಟ್ಟಿದ್ದು 1969ರಲ್ಲಿ, ಎಂ. ರಂಗರಾವ್ ಸಂಗೀತ ನಿರ್ದೇಶನದ 'ನಕ್ಕರೆ ಅದೇ ಸ್ವರ್ಗ' ಚಿತ್ರದ ಮೂಲಕ.

ದೈತ್ಯ ಪ್ರತಿಭೆ
ಎಸ್‌ಪಿಬಿ ನಿಜಕ್ಕೂ ದೈತ್ಯ ಪ್ರತಿಭೆ. ಗಾಯನವಷ್ಟೇ ಅಲ್ಲ; ಸಂಗೀತ ನಿರ್ದೇಶನ, ನಟನೆ, ಕಂಠದಾನ ಕಲಾವಿದರಾಗಿಯೂ ಹೆಸರು ಮಾಡಿದ್ದಾರೆ. ತಮಿಳು, ತೆಲುಗು, ಕನ್ನಡ (ಬಾಳೊಂದು ಚದುರಂಗ, ಭಾರತ್ 2000, ತಿರುಗುಬಾಣ, ಮುದ್ದಿನ ಮಾವ, ಸಂದರ್ಭ, ಮಾಂಗಲ್ಯಂ ತಂತುನಾನೇನ, ಮಹಾ ಎಡಬಿಡಂಗಿ), ಮಲೆಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು, ತೆಲುಗಿನಲ್ಲಿ ಸಂಗೀತಕ್ಕೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಕನ್ನಡದಲ್ಲಿ 'ಎದೆತುಂಬಿ ಹಾಡುವೆನು' ಹತ್ತು ವರ್ಷಕ್ಕೂ ಹೆಚ್ಚು ಕಾಲ ನಿರಂತರವಾಗಿ ಪ್ರಸಾರವಾದದ್ದು ದಾಖಲೆ. ಕಮಲ್‌ಹಾಸನ್, ರಜನಿಕಾಂತ್, ಗಿರೀಶ್ ಕಾರ್ನಾಡ್, ಅನಿಲ್ ಕಪೂರ್, ಸಲ್ಮಾನ್ ಖಾನ್, ಮೋಹನ್, ಅರ್ಜುನ್ ಸರ್ಜಾ ಮೊದಲಾದ ಖ್ಯಾತ ನಟರಿಗೆ ಒಂದಿಲ್ಲೊಂದು ಧ್ವನಿ ನೀಡಿದ್ದಾರೆ. ನಿರ್ಮಾಪಕರಾಗಿಯೂ ಒಂದು ಕೈ ನೋಡಿದ್ದಾರೆ.

  • 40000 ಕ್ಕೂ ಅಧಿಕ ಹಾಡು
  • 25 ಬಾರಿ ಆಂಧ್ರಪ್ರದೇಶ ಸರ್ಕಾರದ 'ನಂದಿ' ಪ್ರಶಸ್ತಿ.
  • 6 ಬಾರಿ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ.
  • 4 ಭಾಷೆಗಳಿಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿ.
  • 2 ಬಾರಿ ಪದ್ಮ ಪ್ರಶಸ್ತಿ
- ರಾಜೇಶ್ ಮುಂಡಿಗೇಸರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!

'ಥಳಿತದಿಂದ ವಿದ್ಯಾರ್ಥಿನಿಗೆ ಕಿವುಡು': ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಕೇಂದ್ರ, ದೆಹಲಿ ಪೊಲೀಸ್ ವಿರುದ್ಧ ರಾಹುಲ್ ಗಾಂಧಿ ಆರೋಪ

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್