ಇತ್ತೀಚೆಗೆ ಕನ್ನಡಪ್ರಭ ಕಛೇರಿಗೆ ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿ ವಿಜೇತರ ಸನ್ಮಾನ ಕಾರ್ಯಕ್ರಮಕ್ಕೆ ಬಂದಿದ್ದ ನಟಿ ಭಾವನಾ, ಅಲ್ಲಿದ್ದ ಕೆಲವು ಪೋಸ್ಟರ್ಗಳನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದರು. 'ಅರೆರೇ, ಸಿನಿಮಾ ಪೋಸ್ಟರ್ಗಳಲ್ಲಿ ಬರೀ ನಮ್ಮ ದೊಡ್ಡ ದೊಡ್ಡ ಮುಖಗಳನ್ನೇ ನೋಡಿ ನೋಡಿ ಬೇಜಾರಾಗಿರುವ ಸಮಯದಲ್ಲಿ ಇದು ನಿಜಕ್ಕೂ ಹೊಸ ಅನುಭವ ಕೊಡುತ್ತಿದೆ, 'ಟೋಪಿವಾಲ'ನ ಉಲ್ಟಾ ಫೋಟೋ ಗಿಮಿಕ್ಗಳಿಗಿಂತ ಇಂಥ ಪ್ಲೆಸೆಂಟ್ ಎನಿಸುವ ಪೋಸ್ಟ್ರ್ಗಳನ್ನು ನೋಡುವುದೇ ಖುಷಿ ಎಂದು ಥ್ರಿಲ್ ಆದರು ಭಾವನಾ. ಅವು
ಬೆಂಗಳೂರಿನ ಪುನೀತ್ ಎಂಬ ಎಂಜಿನಿಯರಿಂಗ್ ವಿದ್ಯಾರ್ಥಿ ಸೃಷ್ಠಿಸಿದ್ದ ಸಿನಿಮಾ ಪೋಸ್ಟರ್ಗಳು.
ಈ ಸುಂದರವಾದ ಪೋಸ್ಟರ್ ಕಾನ್ಸೆಪ್ಟ್ನ ಹೆಸರು ಕೇಳಿದಾಗ ಪುನೀತ್ ಹೇಳಿದ ಹೆಸರು ಮಿನಿಮಲ್ ಪೋಸ್ಟರ್ಸ್ ಎಂದು. ಇದೇನೂ ಪುನೀತ್ ಕಂಡು ಹಿಡಿದ ಹೊಸ ಕಾನ್ಸೆಪ್ಟ್ ಅಲ್ಲ. ಆದರೆ ಈಗಾಗಲೇ ಬೇರೆ ಭಾಷೆಯಲ್ಲಿ ಪ್ರಚಲಿತದಲ್ಲಿರುವ ಈ ಕಲೆಗೆ ಕನ್ನಡದ ಸ್ಪರ್ಶ ಕೊಟ್ಟಿರುವವರು ಪುನೀತ್. ಓದುತ್ತಿರುವುದು ಎಂಜಿನಿಯರಿಂಗ್ ಆದರೂ ಕಲೆ ಮತ್ತು ಮೀಡಿಯಾ ಬಗ್ಗೆ ಒಲವು ಹೊಂದಿರುವ ಪುನೀತ್ ಇಂಟರ್ನೆಟ್ನಲ್ಲಿದ್ದ ಇತರ ಭಾಷೆಯ ಮಿನಿಮಲ್ ಪೋಸ್ಟರ್ಸ್ಗಳನ್ನು ನೋಡಿ ಮ್ಯಾಕ್ಸಿಮಮ್ ಎಕ್ಸೈಟ್ ಆಗಿ ನಾನೂ ಒಂದು ಕೈ ನೋಡೋಣ ಎಂದು ಶುರುಮಾಡಿಕೊಂಡರಂತೆ.
ಈ ಮಿನಿಮಲ್ ಪೋಸ್ಟರ್ಗಳ ವಿಶೇಷ ಎಂದರೆ ಇಲ್ಲಿ ಆ ಚಿತ್ರಕ್ಕೆ ಸಂಬಂಧಪಟ್ಟ ಯಾವ ನಟ, ನಟಿಯರ ಮುಖಗಳೂ ಇರುವುದಿಲ್ಲ. ಇವೊಂಥರಾ ವಿಷಯಾಧಾರಿತ ಪೋಸ್ಟರ್ಗಳು. ಅಂದರೆ ಆ ಸಿನಿಮಾ ಹೆಸರು ಹೇಳಿದ ಕೂಡಲೇ ನೆನಪಾಗುವ ಒಂದು ಯಾವುದೋ ಅಂಶವನ್ನಿಟ್ಟುಕೊಂಡು ಚಿತ್ರದ ಪೋಸ್ಟರ್ ತಯಾರಿಸುವುದು ಇದರ ಹಿಂದಿನ ಗುಟ್ಟು.
ಉದಾಹರಣೆಗೆ 'ಎರಡು ಕನಸು' ಚಿತ್ರದ ಹೆಸರು ಕೇಳಿದ ಕೂಡಲೆ ನೆನಪಾಗುವ ಅಣ್ಣಾವ್ರ ಸ್ಕೂಟರ್, 'ಅಮೃತವರ್ಷಿಣಿ'ಯ ರಮೇಶ್ ಅವರ ಸ್ವೆಟ್ಟರ್, 'ಸಿದ್ಲಿಂಗು'ವಿನ ಕಾರು, 'ಮುಂಗಾರುಮಳೆ'ಯ ಮೊಲ, 'ಅಂಬಾರಿ'ಯ ಸೈಕಲ್, 'ಸಿಂಹಾದ್ರಿ ಸಿಂಹ'ನ ಮೀಸೆ, 'ಕಸ್ತೂರಿ ನಿವಾಸ'ದ ಪಾರಿವಾಳ, 'ಡ್ರಾಮಾ'ದ ಯಾವನೋ ಬಿಟ್ಟು ಹೋದ ಹಳೇ ಚಪ್ಲಿಯ ಪರಿಮಳ, 'ಮಾನಸ ಸರೋವರ'ದ ಸಾಕಿದ ಗಿಣಿ, ಇವು ಪುನೀತ್ರ ಈ ಕಲೆಗೆ ಆಸ್ತಿ.
ನಮ್ಮ ಸಿನಿಮಾ ಪೋಸ್ಟರ್ಗಳೆಂದರೆ ದೊಡ್ಡ ದೊಡ್ಡ ಸ್ಟಾರ್ ನಾಯಕ ನಾಯಕಿಯರ ದೊಡ್ಡ ದೊಡ್ಡ
ಚಿತ್ರಗಳು, ಸೈಡ್ವಿಂಗ್ನಲ್ಲಿ ಪೋಷಕ ಮತ್ತು ಹಾಸ್ಯ ನಟರ ಸಣ್ಣ ಸಣ್ಣ ತಲೆಗಳು ಎಂಬ ತಲೆತಲಾಂತರದಿಂದ ಬಂದ ಪದ್ಧತಿಯನ್ನು ಮುರಿಯುವ ಪ್ರಯತ್ನ ಇದು. ಹಾಗಂತ ಇದು ನಮ್ಮ ರೆಗ್ಯುಲರ್ ಪೋಸ್ಟರ್ಗಳಿಗೆ ಸಂಪೂರ್ಣ ಪರ್ಯಾಯ ಆಗುವುದು, ನಮ್ಮ ಸಿನಿಮಾ ಪೋಸ್ಟರ್ಗಳಲ್ಲಿ ಈ ಕಾನ್ಸೆಪ್ಟ್ ಬಳಸಿಕೊಳ್ಳುವುದು ವಾಸ್ತವವಾಗಿ ಕಷ್ಟ. ನಿಜ.
ಹಾಗಾದರೆ ಈ ಕಾನ್ಸೆಪ್ಟ್ ನಮ್ಮ ಸಿನಿಮಾಗಳಲ್ಲಿ ಹೇಗೆ ಬಳಕೆಯಾಗಬಲ್ಲದು ಎಂಬ ಪ್ರಶ್ನೆ ಮೂಡಿದರೆ ಅದಕ್ಕೆ ಸಿಗಬಹುದಾದ ಸಂಭವನೀಯ ಉತ್ತರ ಇದು. ನಮ್ಮ ಚಿತ್ರಗಳ ಆರಂಭದ ದಿನಗಳ ಪೋಸ್ಟರ್ಗಳಲ್ಲಿ ಹೀರೋಗಳು ವಿಜೃಂಭಿಸಲೇಬೇಕು ನಿಜ. ಆದರೆ ಒಂದು ಚಿತ್ರ ಬಿಡುಗಡೆಯಾಗಿ, 2ನೇ ವಾರ, 3ನೇ ವಾರ, 25 ದಿನ, 50 ದಿನ, 100 ದಿನ ಹೀಗೆ ಎಲ್ಲ ಸಂದರ್ಭದಲ್ಲೂ ಅವವೇ ಪೋಸ್ಟರ್ಗಳನ್ನು ಬಳಸುವ ಬದಲು, ಬಿಡುಗಡೆಯ ನಂತರ ಒಮ್ಮೆ ಸಿನಿಮಾ ಹಿಟ್ ಆದಮೇಲೆ ನಂತರದ ದಿನಗಳಲ್ಲಿ, ಚಿತ್ರದ ಹಿಟ್ ಮತ್ತು ಹೈಲೈಟ್ ಆದ ಅಂಶಗಳನ್ನಿಟ್ಟುಕೊಂಡ ಈ ಮಿನಿಮಲ್ ಪೋಸ್ಟರ್ಗಳು ಖಂಡಿತ ಪ್ರೇಕ್ಷಕನ ಮೇಲೆ ಹೊಸ ಪರಿಣಾಮ ಬೀರಬಲ್ಲವು. ಹಾಗಾದರೆ ಈ ಮಿನಿಮಲ್ ಪೋಸ್ಟರ್ಗಳ ಕಾನ್ಸೆಪ್ಟ್ ಮತ್ತು ಪುನೀತ್ ಎಂಬ ಈ ಹುಡುಗನ ಪರಿಶ್ರಮ ಎರಡೂ ಕೇವಲ ಹವ್ಯಾಸದ ಮಟ್ಟದಲ್ಲೇ ಉಳಿಯದೆ, ವ್ಯಾವಹಾರಿಕವಾಗಿಯೂ
ಚಿತ್ರರಂಗಕ್ಕೆ ನೆರವಾಗಬಲ್ಲದೇನೋ.
ಸದ್ಯಕ್ಕೆ ಪುನೀತ್ ಸುಮಾರು ಮುನ್ನೂರಕ್ಕೂ ಹೆಚ್ಚು ಚಿತ್ರಗಳ ಪೋಸ್ಟರ್ ವಿನ್ಯಾಸ ಮಾಡಿದ್ದಾರೆ. ಇನ್ನೂ ಮಾಡುತ್ತಿದ್ದಾರೆ. ಈ ಪೋಸ್ಟರ್ಗಳ ಬಗ್ಗೆ ಆಸಕ್ತಿ ಇರುವವರು ಪುನೀತ್ ಅವರನ್ನು ಇಲ್ಲಿ ಸಂಪರ್ಕಿಸಬಹುದು. ba.puneeth@gmail.com. www.facebook.com/minimalposterskannada
-ಹರಿ