ಕಡ್ಡಿಪುಡಿ ಆಯ್ತು, ಆಮೇಲಿನ್ನೇನು?
ಕಳೆದೆರಡು ತಿಂಗಳುಗಳಿಂದ ಸದ್ದು ಮಾಡಿದ್ದ ದೊಡ್ಡ ಸ್ಟಾರ್‌ಗಳ ಚಿತ್ರಗಳೆಲ್ಲವೂ ಈಗ ಖಾಲಿ.
ಸರದಿಯ ವರದಿ
ಶಿವರಾಜ್‌ಕುಮಾರ್ ಅಭಿನಯದ 'ಕಡ್ಡಿಪುಡಿ' ಚಿತ್ರದ ಆಡಿಯೋ ರಿಲೀಸ್ ಆಗಿದೆ, ಚಿತ್ರ ಅತಿಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂಬುದು ಚಿತ್ರರಸಿಕರ ಪಾಲಿಗೆ ಸಿಹಿ ಸುದ್ದಿಯೇ. ಆದರೆ 'ಕಡ್ಡಿಪುಡಿ'ಯ ನಂತರ ಏನು ಎಂದು ಯೋಚನೆ ಮಾಡಿದರೆ ಕನ್ನಡ ಪ್ರೇಕ್ಷಕ, ಕಾದು ನೋಡುವ ಮಂತ್ರ ಜಪಿಸುವಂಥ ಒಂದಾದರೂ ದೊಡ್ಡ ಚಿತ್ರ ಸರದಿಯಲ್ಲಿ ಕಣ್ಣಿಗೆ ಬೀಳುವುದಿಲ್ಲ ಎಂಬುದು ಚಿತ್ರರಂಗದ ಪಾಲಿನ ನಿರಾಶಾದಾಯಕ ವರದಿ.
ಕಳೆದೆರಡು ತಿಂಗಳುಗಳಿಂದ ದೊಡ್ಡ ಸದ್ದು ಮಾಡಿದ್ದ ದೊಡ್ಡ ಸ್ಟಾರ್‌ಗಳ ಚಿತ್ರಗಳೆಲ್ಲವೂ ಈಗ ಖಾಲಿ. ಅಂಥ ಚಿತ್ರಗಳು ಬಿಡುಗಡೆಯಾಗಿದ್ದಷ್ಟೇ ಸುದ್ದಿ ಮಾಡಿತೇ ಹೊರತು ದೊಡ್ಡ ಗೆಲುವು ಮಾತ್ರ ಕಾಣಲಿಲ್ಲ. ಈಗ ನಿರೀಕ್ಷೆಯ ಚಿತ್ರಗಳ ಸಾಲಿನಲ್ಲಿ 'ಕಟ್ಟ ಕಡೆಯ ಆಟ' 'ಕಡ್ಡಿಪುಡಿ' ಚಿತ್ರದ್ದು. ಅದರ ನಂತರ ಆಮೇಲಿನ್ನೇನು ಎಂದು ಯೋಚನೆ ಮಾಡಿದರೆ ಕಾಣುವುದು ದರ್ಶನ್ ಒಬ್ಬರೇ. ಅದೂ ಬುಲ್‌ಬುಲ್, ಬೃಂದಾವನದಂಥ ರಿಮೇಕ್ ಚಿತ್ರಗಳ ಮೂಲಕ ಮಾತ್ರ. ಅದನ್ನು ಬಿಟ್ಟರೆ ಸದ್ಯಕ್ಕಂತೂ ಐಪಿಎಲ್, ಎಲೆಕ್ಷನ್‌ಗಳ ನಡುವೆ
ಚಿತ್ರರಂಗಕ್ಕೆ 'ಮೆಜಾರಿಟಿ' ತಂದುಕೊಡುವ ಚಿತ್ರಗಳು ಕಣ್ಣಿಗೆ ಬೀಳುತ್ತಿಲ್ಲ. ಪುನೀತ್ ರಾಜ್‌ಕುಮಾರ್ ಕೋಟ್ಯಾಧಿಪತಿಯಲ್ಲಿ ಬ್ಯುಸಿ ಆಗಿದ್ದುದರಿಂದ ಅವರ ಹೊಸ ಚಿತ್ರ ಇನ್ನೂ ಸೆಟ್ಟೇರಿಲ್ಲ. ಆರ್ಯನ್, ಭಜರಂಗಿ
ಇನ್ನೂ ಆರಂಭಿಕ ಹಂತದಲ್ಲಿವೆ. ಹಾಗಾಗಿ ಕಡ್ಡಿಪುಡಿಯ ನಂತರ ಶಿವರಾಜ್‌ಕುಮಾರ್‌ರ ಸಿನಿಮಾ ನೋಡಲು ಸ್ವಲ್ಪ ಸಮಯ ಕಾಯಬೇಕಾಗಬಹುದು. ಸದ್ಯಕ್ಕೆ ಸುದೀಪ್‌ರ ಯಾವ ಹೊಸ ಚಿತ್ರವೂ ಇಲ್ಲ. ಅವರೂ ಕೂಡ ಬಿಗ್ ಬಾಸ್‌ನಲ್ಲೇ ಬ್ಯುಸಿ. ಹಾಗಾಗಿ ಸದ್ಯಕ್ಕೆ ಗೆಲುವು ಕಂಡ ನಾನ್ ಸ್ಟಾರ್ ಚಿತ್ರಗಳ ನಾಯಕ, ನಿರ್ದೇಶಕರು ನಾನೇ ಸ್ಟಾರ್ ಎಂದು ಹೇಳಿಕೊಳ್ಳಬಹುದಾದ ಪರಿಸ್ಥಿತಿ.
ಗುರುಪ್ರಸಾದ್ ನಿರ್ದೇಶನದ 'ಡೈರೆಕ್ಟರ್ ಸ್ಪೆಷಲ್' ಯಾವಾಗ ಬಿಡುಗಡೆ ಆಗುತ್ತದೋ ಗೊತ್ತಿಲ್ಲ. ಈಗ ಬಂತು, ಆಗ ಬಂತು ಎಂಬುದಷ್ಟೇ ನಿರೀಕ್ಷಿತ ಉತ್ತರವಾಗಿದೆ ಸದ್ಯಕ್ಕೆ. ಅದನ್ನು ಬಿಟ್ಟರೆ ಇನ್ನೊಂದು ಡೈರೆಕ್ಟರ್ ಸ್ಪೆಷಲ್ ಎನಿಸುವಂಥ ಚಿತ್ರ 'ಚಂದ್ರ'. ಕನ್ನಡದಲ್ಲಿ ಶ್ರೇಯಾ ಮೊದಲ ಬಾರಿ ನಾಯಕಿಯಾಗಿದ್ದಾರೆ ಎಂಬ ಎಂಬ ಹೆಗ್ಗಳಿಕೆ ಹೊತ್ತ ಚಿತ್ರ ಇದು. 'ಮುಖಪುಟ' ಚಿತ್ರದ ರೂಪಾ ಅಯ್ಯರ್ ನಿರ್ದೇಶನದ ಈ ಚಿತ್ರ ಪ್ರಂಟ್ ಪೇಜ್ ಸುದ್ದಿ ಆಗಿ ಬಹಳ ದಿನವಾದರೂ ಬಿಡುಗಡೆಗಾಗಿ ಕಾಯುತ್ತಿದೆ. ಚಾರ್‌ಮಿನಾರ್ ಚಿತ್ರದ ವಿಷಯದಲ್ಲಿ ನಾಯಕ ಪ್ರೇಮ್ ಅವರ ಶೆಡ್ಯೂಲ್‌ನಲ್ಲಿ ಕಿರಿಕ್ ಮಾಡಿಕೊಂಡ ನಂತರ ಚಾರ್‌ಮಿನಾರ್ ಬಿಡುಗಡೆಯಾಗಿ 100ನೇ ದಿನದತ್ತ ಹೋಗುತ್ತಿದ್ದರೂ ಚಂದ್ರ ಬೆಳಗಲು ಕಾಯುತ್ತಿದ್ದಾನೆ. 'ನನ್ನ ಸಿನಿಮಾದಲ್ಲಿ ಅದ್ಭುತ ಕತೆಯೇನಿಲ್ಲ' ಎನ್ನುವ ರೂಪಾ ಅಯ್ಯರ್, ಚಿತ್ರದಲ್ಲಿ ಹುಡುಗ ಹುಡುಗಿ ನಡುವಿನ ರೊಮ್ಯಾನ್ಸ್‌ಗೇ ಹೆಚ್ಚು ಒತ್ತು ಕೊಟ್ಟಿದ್ದಾರಂತೆ. ನನ್ನ ಸಿನಿಮಾ ನೋಡಿ ಹುಡುಗರು, ಹೇಗೆ ಪ್ರೀತಿ ಮಾಡಬೇಕು ಎಂಬುದನ್ನು ಕಲಿತುಕೊಳ್ಳಬೇಕು ಎಂಬುದು ರೂಪಾ ಅಯ್ಯರ್ ಅವರ ಮಾತು. ಪ್ರೊಡಕ್ಷನ್‌ಗಿಂತ ಪೋಸ್ಟ್ ಪ್ರೊಡಕ್ಷನ್‌ನಲ್ಲೇ ಹೆಚ್ಚು ನಂಬಿಕೆ ಇಟ್ಟು ಬಿಡುಗಡೆ ತಡವಾಗುತ್ತಿದ್ದರೂ ಚಂದ್ರ ಚಿತ್ರ, ಈ ವಿಷಯದಲ್ಲಿ ಇನ್ನೊಂದು ಡೈರೆಕ್ಟರ್ ಸ್ಪೆಷಲ್ ಆಗಲಿಕ್ಕಿಲ್ಲ. ಜೊತೆಗೆ, ಇದು ಕನ್ನಡ ಸಿನಿಮಾ ಆದರೂ, ತಮಿಳು, ತೆಲುಗು ಭಾಷೆಯ ಮಾರ್ಕೆಟ್ ಕೂಡ ಬೆಂಬಲಕ್ಕಿದೆ ಎಂಬುದು ವಿಶೇಷ. ಶ್ರೇಯಾ ಹೆಸರಿನಲ್ಲಿ 'ಚಂದ್ರ' ಬಾಕ್ಸ್ ಆಫೀಸ್‌ನಲ್ಲಿ ಯಾವ ರೀತಿಯ 'ಬೆಂಕಿ ಬಿರುಗಾಳಿ' ಎಬ್ಬಿಸುತ್ತದೆ ಎಂಬುದನ್ನು ಕಾದು ನೋಡಬೇಕು.
ಆದರೆ ಅವುಗಳ ನಿಜವಾದ ಬಾಕ್ಸ್ ಆಫೀಸ್ ರಿಪೋರ್ಟ್ ಹೇಳಿಕೊಳ್ಳುವಂತಿಲ್ಲ ಎಂಬುದು ಸತ್ಯ. ಚೈತನ್ಯ ನಿರ್ದೇಶನದ 'ಪರಾರಿ' ಇದೇ ದಾರಿಯಲ್ಲಿದೆ. ನಮ್ಮ ಸಿನಿಮಾ ಸಕ್ಸಸ್‌ಪುಲ್ ಎಂದು ಚಿತ್ರತಂಡ ಹೇಳಿಕೊಳ್ಳುತ್ತಿದ್ದರೂ ಕಲೆಕ್ಷನ್‌ನಲ್ಲಿ ವೀಕ್ ಆಗಿದೆ ಪರಾರಿ. ತಮ್ಮ ಕೆಲವು ಫೇವರಿಟ್ ಪತ್ರಿಕೆಗಳಲ್ಲಿ ಬಂದ ವಿಮರ್ಶೆಗಳನ್ನೇ ಬಂಡವಾಳ ಮಾಡಿಕೊಂಡು 'ಪತ್ರಿಕೆಗಳಿಂದ ಪ್ರಶಂಸಿಸಲ್ಪಟ್ಟ ಚಿತ್ರ' ಎಂದು ಚಿತ್ರತಂಡ ತಮ್ಮ ಚಿತ್ರಕ್ಕೆ ಪ್ರಚಾರ ಕೊಟ್ಟುಕೊಳ್ಳುತ್ತಿದ್ದರೂ ಜನ ಮಾತ್ರ ಪರಾರಿಗೆ ಜೈ ಎಂದಿಲ್ಲ. ಕನ್ನಡ ಸಿನಿಮಾದ ಸೆಂಟರ್ ಆದ ಬೆಂಗಳೂರಿನಿಂದ ಮಂಗಳೂರಿನ ಸೆಂಟ್ರಲ್ ಚಿತ್ರಮಂದಿರದವರೆಗೆ ಸಿನಿಮಾಗೆ ಪ್ರೇಕ್ಷಕರ ಕೊರತೆ ಕಾಣುತ್ತಿದೆ. ಡಬಲ್ ಮೀನಿಂಗ್ ಸಂಭಾಷಣೆ ಇದ್ದರೆ ಓಕೆ, ಆದರೆ ತೀರಾ ಅದನ್ನು ನೇರವಾಗಿಯೇ ಹೇಳಿಬಿಟ್ಟರೆ ಹೇಗೆ? ಎಂಬುದು ಸಿನಿಮಾ ನೋಡಿದ ಕೆಲವು ಪ್ರೇಕ್ಷಕರ ಪ್ರಶ್ನೆ. ಚಿತ್ರದ ನಿರ್ಮಾಪಕರು ತಮ್ಮ ಚಿತ್ರಕ್ಕೆ ಯಾರನ್ನು ಟಾರ್ಗೆಟ್ ಆಡಿಯೆನ್ಸ್ ಎಂದುಕೊಂಡಿದ್ದರೋ ಅವರೇ ಕೈ ಕೊಟ್ಟಿರುವುದು ಪರಾರಿಗೆ ನೆಗೆಟಿವ್ ಅಂಶವಾಗಿದೆ. 'ಬೀಜ ಬೀಜ' ಹಾಡನ್ನು ಸಮರ್ಥಿಸಿಕೊಳ್ಳುತ್ತ ಮಣಿರತ್ನಂ ಕೂಡ ತಮ್ಮ ಚಿತ್ರದಲ್ಲಿ ಐಟಂ ಸಾಂಗ್ ಇಟ್ಟಿರುತ್ತಾರೆ ಎಂದಿದ್ದ ನಿರ್ದೇಶಕ ಚೈತನ್ಯ, ಇಡೀ ಚಿತ್ರದಲ್ಲಿ ಐಟಂ ಸಾಂಗ್‌ನ ಪ್ಲೇವರ್ ತುಂಬಿರುವುದು ಮಾತ್ರ ಯಾಕೋ ಜನಕ್ಕೆ ಇಷ್ಟವಾಗಿಲ್ಲ.
ಸದ್ಯಕ್ಕೆ ಗೆದ್ದವರ ಹೊಸ ಚಿತ್ರಗಳು ಮಾತ್ರ ಸುದ್ದಿ ಮಾಡುತ್ತಿವೆ. ಗೆದ್ದವರ ಪಟ್ಟಿಯಲ್ಲಿರುವ ಚಾರ್‌ಮಿನಾರ್ ಚಂದ್ರು ಈಗಾಗಲೇ ಉಪೇಂದ್ರರ ಜೊತೆ 'ಬ್ರಹ್ಮ' ಚಿತ್ರವನ್ನು ಘೋಷಣೆ ಮಾಡಿದ್ದಾರೆ. ಚಾರ್‌ಮಿನಾರ್ 100 ದಿನಗಳನ್ನು ಪೂರೈಸಿದ ಕೂಡಲೇ ಬ್ರಹ್ಮ ಸೆಟ್ಟೇರುವುದು ಕಾಯಂ ಆಗಿದೆ. ಮೇ 15ಕ್ಕೆ ಚಾರ್‌ಮಿನಾರ್ ಶತದಿನೋತ್ಸವ ಆಚರಿಸಿದರೆ, 17ರಂದು ಬ್ರಹ್ಮನ ಸೃಷ್ಠಿ ಶುರುವಾಗಲಿದೆ. ಸಿಂಪಲ್ಲಾಗೊಂದ್ ಲವ್‌ಸ್ಟೋರಿ ಚಿತ್ರದ ನಿರ್ದೇಶಕ ಸುನಿ ಈಗಾಗಲೇ ನಾಲ್ಕು ಚಿತ್ರಗಳಿಗೆ ತಮ್ಮ ಹೆಸರಿನ ಬಲ ತುಂಬಿದ್ದಾರೆ. ಅದರಲ್ಲಿ ಅವರು ಎರಡರಲ್ಲಿ ನಿರ್ದೇಶಕರ ಸ್ಥಾನ ತುಂಬಲಿದ್ದಾರಂತೆ.
ಇನ್ನು ಸದ್ಯಕ್ಕೆ ಓಡುತ್ತಿರುವ ಸಿನಿಮಾಗಳ ಲೆಕ್ಕ ತೆಗೆದುಕೊಂಡರೆ, 'ಸಂಗೊಳ್ಳಿರಾಯಣ್ಣ' ಚಿತ್ರದ್ದು, ಕಷ್ಟಪಟ್ಟು 25 ವಾರ ಪೂರೈಸಿದ ಹೆಗ್ಗಳಿಕೆ. ಅದೇ ಹಾದಿಯಲ್ಲಿ ಚಾರ್‌ಮಿನಾರ್, ಮೈನಾ, ನೂರು ದಿನ ಕಾಣೋ ಆತುರದಲ್ಲಿವೆ. ಸಿಂಪಲ್ಲಾಗೊಂದ್ ಲವ್‌ಸ್ಟೋರಿ ನಿಜವಾದ ಸಕ್ಸಸ್ ಕಂಡಿದೆ. ಕೆಜಿ ರೋಡ್‌ನಿಂದ ಎತ್ತಂಗಡಿ ಆದ್ರೂ ಚಿತ್ರಕ್ಕೆ ಮಲ್ಟಿಪ್ಲೆಕ್ಸ್‌ಗಳಲ್ಲಿ ನ್ಯಾಯ ಸಿಗುತಿ ್ತದೆ. ಇದರ ಜೊತೆ ಇನ್ನೊಂದು ವಿಶೇಷ ಎಂದರೆ ಕೆಲವರು ಇದರ ಜೊತೆಯಲ್ಲಿ ನಮ್ದೂ ಒಂದ್ ಇರ್ಲಿ ಎಂದು ಯಶಸ್ಸಿನ ಅಲೆಯಲ್ಲಿ ತೂರಿಕೊಳ್ಳುತ್ತಿದ್ದಾರೆ.
- ಹರಿ