ಸಂಗೀತ ಸಂಯೋಜನೆಯಲ್ಲಿ ಹೊಸ ಅಬ್ಬರ ಸೃಷ್ಟಿಸಿದ ವಿ. ಹರಿಕೃಷ್ಣ, ನಿರ್ಮಾಪಕನಾಗಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳು ಇಂಗಿತ ಹೊಂದಿದ್ದಾರೆಯೆ? ರಾಗಗಳೊಂದಿಗೆ ಆಟವಾಡುತ್ತಲೇ ಒಂದರ ಹಿಂದೆ ಒಂದರಂತೆ ಚಿತ್ರಗಳಲ್ಲಿ ಹಣ ಹೂಡುತ್ತಿರುವುದನ್ನು ನೋಡಿದರೆ ಇಂಥ ಪ್ರಶ್ನೆ ಏಳದೇ ಇರದು. 'ಬುಲ್ಬುಲ್', 'ಜೈ ಭಜರಂಗ ಬಲಿ' ನಂತರ ಮತ್ತೊಂದು ಚಿತ್ರಕ್ಕೆ ಹರಿಕೃಷ್ಣ ಹಣ ಹೂಡುತ್ತಿದ್ದಾರೆ. ಅದೇ 'ರಾಟೆ'.
ನಿರ್ದೇಶಕ ಎ.ಪಿ. ಅರ್ಜುನ್ ಆ್ಯಕ್ಷನ್- ಕಟ್ ಹೇಳುತ್ತಿರುವ 'ರಾಟೆ' ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನಡೆಯಿತು. 'ರಾಜ-ರಾಣಿ ಕಥೆ' ಎಂಬುದು ಚಿತ್ರದ ಟ್ಯಾಗ್ಲೈನ್. 'ಅಂಬಾರಿ' ಹಾಗೂ 'ಅದ್ದೂರಿ' ಚಿತ್ರಗಳ ನಂತರ ಅರ್ಜುನ್ ಅಖಾಡಕ್ಕಿಳಿದಿದ್ದಾರೆ. ಚಿತ್ರದ ಪೋಸ್ಟರ್, ಶೀರ್ಷಿಕೆ ನೋಡಿದರೆ ಇದೊಂದು ಪಕ್ಕಾ ಲೋಕಲ್ ಮಣ್ಣಿನ ಲವ್ ಸ್ಟೋರಿ ಅನ್ನಿಸುತ್ತದೆ. ಧನಂಜಯ್ ನಾಯಕ, ಶೃತಿ ನಾಯಕಿ. ಇಬ್ಬರೂ ಹೊಸ ಮುಖಗಳೇ. ಸತ್ಯ ಹೆಗಡೆ ಛಾಯಾಗ್ರಹಣ ಚಿತ್ರಕ್ಕಿದೆ. ಮುಹೂರ್ತದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕ್ಲಾಪ್ ಮಾಡಿದರೆ, ನಟ ಸುದೀಪ್ ಕ್ಯಾಮೆರಾ ಚಾಲನೆ ಮಾಡಿದರು. ದಿನಕರ್ ತೂಗದೀಪ್ ಮೊದಲ ದೃಶ್ಯಕ್ಕೆ ನಿರ್ದೇಶನ ಹೇಳಿದರು. ಚಿತ್ರರಂಗದ ಒಂದಿಷ್ಟು ಹಿರಿ-ಕಿರಿ ನಟರು ಆಗಮಿಸಿ ಶುಭ ಕೋರಿದರು.
'ರಾಟೆ ಕಥೆ ತುಂಬಾ ಸಿಂಪಲ್. ಯಾರ ನಿಯಂತ್ರಣ ಮತ್ತು ಹಿಡಿತವಿಲ್ಲದ ಕಾಲವನ್ನೂ ನೆನಪಿಸುವ ಈ ಚಿತ್ರಕ್ಕೆ ಕಾಲವೇ ಸ್ಫೂರ್ತಿ ಮತ್ತು ನೆಲೆ. ಕಾಲ ಎನ್ನುವುದು ಭಗವಂತನ ಕೈಯಲ್ಲಿರುವ ಅಸ್ತ್ರ. ನಾವು ಅಂದುಕೊಂಡಂತೆ ಏನೂ ನಡೆಯಲ್ಲ. ಅವನು ಆಡಿಸಿದಂತೆ ನಾವು ಆಡಬೇಕು, ಕುಣಿಯಬೇಕು. ಕಾಲದ ಜತೆಗೆ ತಳುಕು ಹಾಕಿಕೊಂಡಿರುವ ಈ ಚಿತ್ರವನ್ನು ಕಾಲನ ರಾಟೆ ಅಂತ ಬೇಕಾದರೂ ಅಂದುಕೊಳ್ಳಿ' ಎಂದು ಚಿತ್ರದ ಎಳೆಯನ್ನು ಅರ್ಥ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಮಾಧ್ಯಮಗಳಿಗೇ ನೀಡಿದರು ಎ.ಪಿ.ಅರ್ಜುನ್.
ಕಾಲದ ಜತೆಜತೆಯಲ್ಲಿ ಸಾಗುವ ಸರಳ ಪ್ರೇಮಿಗಳ ಶ್ರೀಮಂತ ಪ್ರೇಮ ಕಥೆ ಇಲ್ಲಿದೆ. ಹೀಗಾಗಿ ಚಿತ್ರಕ್ಕೆ 'ರಾಜ, ರಾಣಿ ಕಥೆ' ಎನ್ನುವ ಉಪ ಶೀರ್ಷಿಕೆಯನ್ನು ಕೊಡಲಾಗಿದೆಯಂತೆ. ಎಪ್ಪತ್ತಕ್ಕೂ ಹೆಚ್ಚು ದಿನ ಬೆಂಗಳೂರು, ಗೋಕರ್ಣ ಹಾಗೂ ದಾಂಡೇಲಿಯಲ್ಲಿ ಚಿತ್ರೀಕರಣ ಮಾಡುವ ಯೋಚನೆ ನಿರ್ದೇಶಕರದ್ದು. ದಾಂಡೇಲಿಯ ಅತ್ಯಂತ ಕ್ಲಿಷ್ಟಕರವಾದ ಸ್ಥಳಗಳಲ್ಲಿ ಚಿತ್ರೀಕರಣದ ಯೋಜನೆ ರೂಪಿಸಿರುವುದನ್ನು ಕಂಡು ನಿರ್ಮಾಪಕ ಕಂ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಶಾಕ್ ಆಗಿದ್ದಾರಂತೆ. ಹೀಗಾಗಿ ಅವರು ಚಿತ್ರದ ಎಲ್ಲ ಜವಾಬ್ದಾರಿಯನ್ನು ಛಾಯಾಗ್ರಹಕ ಸತ್ಯ ಹೆಗಡೆ ಮತ್ತು ಅರ್ಜುನ್ ಹೆಗಲ ಮೇಲೆ ಹಾಕಿದ್ದಾರೆ. 'ನಾನು ಇಲ್ಲಿ ನಿರ್ಮಾಪಕನಾದರೂ ಪೂರ್ತಿ ಜವಾಬ್ದಾರಿ ಸತ್ಯ ಮತ್ತು ಅರ್ಜುನ್ ಅವರದ್ದೇ. ಒಳ್ಳೆಯ ಸಂಗೀತ, ಹಾಡು ಕೊಡಲಿಕ್ಕೆ ನಾನು ಸೀಮಿತ' ಎನ್ನುತ್ತಾರೆ ಹರಿಕೃಷ್ಣ. ಐದು ಹಾಡು, ಎರಡು ಬಿಟ್ ಸಾಂಗ್ ಚಿತ್ರದಲ್ಲಿದ್ದು, ಶಿವಾಜಿನಗರ, ಕೆ. ಆರ್. ಮಾರ್ಕೆಟ್ ಮುಂತಾದ ಏರಿಯಾಗಳ ಸಂದುಗೊಂದಿಗಳಲ್ಲಿ ಕ್ಯಾಮೆರಾ ಇಡುವ ಯೋಚನೆ ಸತ್ಯ ಹೆಗಡೆ ಅವರದ್ದು.
ಈಗಾಗಲೇ 'ಮಠ' ಗುರುಪ್ರಸಾದ್ರ 'ಡೈರೆಕ್ಟರ್ ಸ್ಪೆಷಲ್' ಚಿತ್ರದಲ್ಲಿ ನಟಿಸಿರುವ ಧನಂಜಯ್ಗೆ ಇದು ಎರಡನೇ ಚಿತ್ರ. ಓಂಪ್ರಕಾಶ್ ರಾವ್ ನಿರ್ದೇಶದ 'ಹುಚ್ಚ'ಕ್ಕೂ ಇವರೇ ನಾಯಕ. ಯಾವ ಚಿತ್ರವೂ ಬಿಡುಗಡೆಯಾಗದಿದ್ದರೂ ಧನಂಜಯ್ ಮೂರು ಚಿತ್ರಗಳ ನಾಯಕ. ನಟಿ ಶೃತಿಯದ್ದೂ ಇದೇ ಕಥೆ. ಈಕೆ 'ಲೂಸಿಯಾ' ಹಾಗೂ 'ಪಾಪಸ್ ಕಳ್ಳಿ' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮಲೆಯಾಳಂನ 2 ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾಳೆ. 'ರಾಟೆ' ಈಕೆಗೆ ಐದನೇ ಪಂದ್ಯ. ಬುಲೆಟ್ ಪ್ರಕಾಶ್, ಸ್ವಯಂವರ ಚಂದ್ರು, ರವಿಶಂಕರ್ ಮತ್ತಿತರರು ಚಿತ್ರದಲ್ಲಿ ಅಭಿನಯಿಸಲಿದ್ದಾರೆ.
-ಕೇಶವ