'ಸಿಂಪಲ್ಲಾಗೊಂದ್ ಲವ್ಸ್ಟೋರಿ'ಯಿಂದ ನಾಯಕನಾಗಿ ಯಶಸ್ಸು ಕಂಡಿರುವ ರಕ್ಷಿತ್ ಶೆಟ್ಟಿಗೆ ಈಗ 'ತುಗ್ಲಕ್'
ಚಿತ್ರದ ನಾಯಕನಂತೆ ಕನ್ಫ್ಯೂಸ್ ಆಗಿರುವ ಅಗತ್ಯವಿಲ್ಲ. ಬದಲಾಗಿ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವ ದಾರಿಯಲ್ಲಿ ದೃಢವಾದ ಹೆಜ್ಜೆಗಳನ್ನಿಟ್ಟಿದ್ದಾರೆ ರಕ್ಷಿತ್. ಉಳಿದವರಿಗೆ ಕಂಡಂತೆ, ರಕ್ಷಿತ್ 'ಸಿಂಪಲ್ಲಾಗೊಂದ್ ಲವ್ಸ್ಟೋರಿ' ಚಿತ್ರದ ಯಶಸ್ಸಿನ ಅಲೆಯಲ್ಲಿ ಒಂದಷ್ಟು ಚಿತ್ರಗಳಿಗೆ ಸಹಿ ಹಾಕಿ ದುಡ್ಡು ಮಾಡಿಕೊಳ್ಳುತ್ತಾರೆ ಎನಿಸಿದರೂ, ಪೆನ್ನನ್ನು ಸಹಿ ಹಾಕಲು ಬಳಸದೆ ತಮ್ಮ ಹೊಸ ಚಿತ್ರದ ಕಥೆ ಬರೆಯಲು ಬಳಸಿ ನಿರ್ದೇಶಕರಾಗುತ್ತಿದ್ದಾರೆ ರಕ್ಷಿತ್. ಅವರ ನಿರ್ದೇಶನ ಮತ್ತು ನಟನೆಯ ಹೊಸ ಚಿತ್ರ 'ಉಳಿದವರು ಕಂಡಂತೆ'. ನಾವು ಒಂದು ಒಳ್ಳೆಯ ಸಿನಿಮಾ ಮಾಡುವುದರ ಮೂಲಕ ಒಳ್ಳೆಯ ಸಿನಿಮಾಗಳನ್ನು ರಕ್ಷಿಸಿದರೆ, ಅದು ನಮ್ಮನ್ನೂ ರಕ್ಷಿಸುತ್ತದೆ ಎನ್ನುವ ರಕ್ಷಿತ್ ಮಾತುಗಳು ಇಲ್ಲಿವೆ.
ನಾಯಕನಾಗಿ ಹೆಸರು ಬಂದಿದೆ, ಒಂದ್ ನಾಲ್ಕು ಸಿನಿಮಾಗಳಿಗೆ ಸೈನ್ ಮಾಡಿ ದುಡ್ ಮಾಡ್ಕೊಳೋದಲ್ವಾ?
ಲೆಕ್ಕಕ್ಕೆ ಅಂತ ನಾಲ್ಕು ಸಿನಿಮಾ ಮಾಡೋದು ದೊಡ್ಡದಲ್ಲ. ಆದರೆ ನಾಲಾಯಕ್ಕು ಸಿನಿಮಾ ಮಾಡಬಾರದು ಅನ್ನೋದು ನನ್ನ ಆಸೆ. ನಾನೀಗ ಮನಸ್ಸಿಗೆ ಅನ್ನಿಸಿದ್ದನ್ನು ಮಾಡ್ತಿದೀನಿ. ಒಂದು ಸಕ್ಸಸ್ನಿಂದ ನನ್ನೊಳಗೆ ಆದ ಬದಲಾವಣೆ ಇದು. 'ಉಳಿದವರು ಕಂಡಂತೆ' ನನ್ನ ಎರಡು ವರ್ಷದ ಕನಸು. ದುಡ್ಡು ಯಾವಾಗ ಬೇಕಾದರೂ ಮಾಡಬಹುದು. ಆದರೆ ಈ ಚಿತ್ರಕ್ಕೆ ಇದು ಸರಿಯಾದ ಸಮಯ ಅನ್ನಿಸಿತು. ಹಾಗಾಗಿ ಕೈಗೆತ್ತಿಕೊಂಡೆ.
ಶೀರ್ಷಿಕೆ ಒಂಥರಾ ಪುಸ್ತಕಗಳಿಗಿಡೋ ಥರಾ ಇದೆ ಅಂತಾರೆ ಜನ. ಹೆಸರು ಕೇಳಿ ಆರ್ಟ್ ಫಿಲ್ಮ್ ಅಂದ್ಕೊಂಡ್ರೆ?
ಈ ಶೀರ್ಷಿಕೆಗೆ ಎರಡು ಥರದ ಪ್ರತಿಕ್ರಿಯೆ ಬರ್ತಿದೆ. ಕೆಲವರು ಬೇಡ ಅಂತಾರೆ. ಆದರೆ ಇಷ್ಟಪಟ್ಟವರು ತುಂಬಾನೇ ಇಷ್ಟಪಡ್ತಿದ್ದಾರೆ. ಆದರೆ ಕಥೆ ಕೇಳಿದ ಮೇಲೆ ಯಾರೂ ಶೀರ್ಷಿಕೆ ಬೇಡ ಅಂತ ಹೇಳಿಲ್ಲ. ಇದೇ ಶೀರ್ಷಿಕೆ 20 ವರ್ಷ ಮುಂಚೆ ಬಂದಿದ್ರೆ ಯಾರೂ ಏನೂ ಹೇಳ್ತಿರಲಿಲ್ಲ. ಈಗೆಲ್ಲಾ ಪಂಚಿಂಗ್, ಮಾಸ್ ಶೀರ್ಷಿಕೆಗಳು ಬೇಕು ಅಂತಾರೆ. ಆದರೆ ಒಂದು ಶೀರ್ಷಿಕೆಯಿಂದ ಜನ ಥಿಯೇಟರ್ಗೆ ಬರ್ತಾರೆ, ಸಿನಿಮಾ ಹಿಟ್ ಆಗುತ್ತೆ ಅಂತ ನನಗನಿಸೊಲ್ಲ. ಈ ಸ್ಕ್ರಿಪ್ಟ್ಗೆ ಇದು ಸೂಕ್ತ ಎನಿಸಿದ್ದರಿಂದ ಇದನ್ನು ಆಯ್ಕೆ ಮಾಡಿದ್ದೇನೆ. ಇನ್ನು ಮುಂದೆಯಾದರೂ ಇಂಥ ಶೀರ್ಷಿಕೆಗಳ ಕಾಲ ಮತ್ತೆ ಶುರುವಾಗುತ್ತದೆ ಎಂಬ ನಂಬಿಕೆ ನನ್ನದು.
'ಉಳಿದವರು ಕಂಡಂತೆ' ಯಾವ ಥರಾ ಸಿನಿಮಾ? ಏನು ಕಥೆ?
ಒಂದು ಘಟನೆಯನ್ನು, ಆ ಘಟನೆಯಲ್ಲಿ ಉಳಿದುಕೊಂಡವರು ಮತ್ತು ಅದರಿಂದ ಹೊರಗೆ ಉಳಿದವರು ಕಂಡಂತೆ ಚಿತ್ರಿಸುವುದು ನನ್ನ ಉದ್ದೇಶ. ಪತ್ರಕರ್ತೆಯೊಬ್ಬಳು ನೈಜ ಘಟನೆಯೊಂದರ ಆಧಾರದ ಮೇಲೆ ಕಥೆ ಬರೆಯಲು ಹೊರಡುತ್ತಾಳೆ. 5 ಪಾತ್ರಗಳು ಈ ಘಟನೆಯಲ್ಲಿವೆ. ಆದರೆ ವಿಷಯ ಸಂಗ್ರಹಿಸಲು ಅವಳು ಮಾತನಾಡಿಸುವ ಅಷ್ಟೂ ಜನ ಈ 5 ಪಾತ್ರಗಳ ಬಗ್ಗೆ ಬೇರೆ ಬೇರೆ ರೀತಿಯ ಚಿತ್ರಣ ಕೊಡುತ್ತಾರೆ. ಅದನ್ನು ಆಧಾರವಾಗಿಟ್ಟುಕೊಂಡು ಕಥೆ ಮಾಡಿದ್ದೇನೆ. ಆದರೆ ಕಥೆಗೆ ಯಾವುದೇ ನಿಖರವಾದ ಅಂತ್ಯ ಕೊಡಲು ಹೋಗಿಲ್ಲ.
ನೀವು ಚಿತ್ರರಂಗಕ್ಕೆ ಹೀರೋ ಆಗೋಕೆ ಬಂದವ್ರಾ, ನಿರ್ದೇಶಕರಾಗೋಕೆ ಬಂದವ್ರಾ?
ಮೊದಲು ಹೀರೋ ಆಗೋಕೆ ಬಂದೆ. ರಂಗಭೂಮಿಯ ಪ್ರಭಾವದಿಂದ ಹೀರೋ ಅಲ್ಲ ನಟನಾಗಬೇಕು ಎನ್ನಿಸಿತು. ನಂತರ ಅನೇಕ ಕಿರು ಚಿತ್ರಗಳನ್ನು ನಿರ್ದೇಶಿಸಿದೆ. ಆ ನಂತರ ನಿರ್ದೇಶಕನಾಗುವ ಹಂಬಲ ಹೆಚ್ಚಾಗಿದೆ.
'ಸಿಂಪಲ್ಲಾಗೊಂದ್ ಲವ್ಸ್ಟೋರಿ'ಯ ಯಶಸ್ಸಿನಿಂದ ನಿಮಗೆ ಸಿಕ್ಕಿದ್ದೇನು?
ಈಗ ಜನ ನನ್ನ ಗುರುತು ಹಿಡೀತಿದಾರೆ ಎನ್ನುವುದು ನಿಜ. ಆದರೆ ಅದಕ್ಕಿಂತ ಹೆಚ್ಚಾಗಿ, ಈ ಯಶಸ್ಸಿನಿಂದ 'ಉಳಿದವರು ಕಂಡಂತೆ'ಯಂಥ ಹೊಸ ರೀತಿಯ ಪ್ರಯತ್ನ ಮಾಡೋಕೆ ಅವಕಾಶ ಸಿಕ್ತು ಅನ್ಸತ್ತೆ.
'ಸಿಂಪಲ್' ಸಿನಿಮಾ ಹಿಟ್ ಆದ್ಮೇಲೆ ಎಷ್ಟು, ಯಾವ್ಯಾವ ಥರದ ಸಿನಿಮಾಗಳ ಆಫರ್ ಬಂತು?
ತುಂಬಾ ಆಫರ್ಸ್ ಬಂತು. ಯಾರದ್ದೂ ಹೆಸರು ಬೇಡ. ಆದರೆ ಗಾಂಧಿನಗರದ ದೊಡ್ಡ ನಿರ್ದೇಶಕರುಗಳಿಂದಲೇ ಬಂತು. ಆದರೆ ಬರೋರೆಲ್ಲಾ ಮುಂದಿನ ತಿಂಗಳಿನಿಂದಲೇ ಶೂಟಿಂಗ್ ಶುರು ಅಂತಿದ್ರು. ನಾನು ಡಿಸೆಂಬರ್ವರೆಗೂ 'ಉಳಿದವರು ಕಂಡಂತೆ' ಚಿತ್ರದಲ್ಲಿ ಬ್ಯುಸಿ. ಅಲ್ಲದೆ, ಬಂದ ಆಫರ್ಗಳ ಕಥೆಯೆಲ್ಲಾ 'ಸಿಂಪಲ್ಲಾಗೊಂದ್ ಲವ್ಸ್ಟೋರಿ'ಯ ಶೇಡ್ನಲ್ಲೇ ಇದ್ದವು. ಬಿಡೋಕಾಗಲ್ಲ ಎನ್ನುವಂಥ ಯಾವ ಸ್ಕ್ರಿಪ್ಟೂ ಬರಲಿಲ್ಲ.
ನಿಮ್ಮ ಹಿಂದಿನ ಸಿನಿಮಾಗಳಲ್ಲಿ ಸಕ್ಸಸ್ ಸಿಗದೇ ಇದ್ದಾಗ ಏನನ್ನಿಸಿತ್ತು?
ತುಂಬಾ ಭಯ ಆಗೋಕೆ ಶುರು ಆಗಿತ್ತು. ಯಾವ ಥರದ ಸಿನಿಮಾ ಮಾಡಬೇಕು ಅಂತ ಗೊಂದಲ ಇತ್ತು. ಒಂದು ಹಿಟ್ ಕೊಟ್ರೆ ಮಾತ್ರ ಆ ಮೇಲೆ ಒಳ್ಳೆಯ ಸಿನಿಮಾ ಕೊಡೋಕೆ ಸಾಧ್ಯ ಅಂತ ಯೋಚಿಸ್ತಿದ್ದೆ.
ಮುಂದೆ ಫುಲ್ ಟೈಮ್ ನಿರ್ದೇಶಕರೇ ಆಗಬೇಕಂತಿದೀರಾ?
'ಉಳಿದವರು ಕಂಡಂತೆ' ಆದಮೇಲೆ ಎರಡು ಮೂರು ವರ್ಷ ನಿರ್ದೇಶನ ಮಾಡೊಲ್ಲ. ಒಂದು ಚಿತ್ರದ ನಿರ್ದೇಶನಕ್ಕೆ ನನಗೆ ಅಷ್ಟು ಸಮಯ ಬೇಕೇ ಬೇಕು. ಹಾಗಾಗಿ ಅದರ ನಂತರ ನಟನೆಗೇ ಒತ್ತು ಕೊಡುತ್ತೇನೆ.
- ಹ್ಯಾರಿ