ಸಿನಿಮಾ ಲೇಖನ

ಸುಳ್ಳುಗಳೂ ಮತ್ತು ಸತ್ಯಗಳೂ

ಪ್ರಯೋಗಾತ್ಮಕ ಚಿತ್ರಗಳನ್ನು ಮಾಡಿ ಗೆಳೆಯರಿಗೆ ತೋರಿಸಿ ಸಮಾಧಾನ ಪಟ್ಟುಕೊಳ್ಳುವುದು ಯಾವ ನಿರ್ದೇಶಕನ ಗುರಿಯೂ...

ಸಿನಿಮಾಗಳ ಬಗ್ಗೆ ಪ್ರಶ್ನೆ ಮಾಡುವವರಿಗೆ ಇಷ್ಟು ದಿನ ಇದ್ದ ಕ್ಲೀಷೆ ಎಂದರೆ 'ನಿಮ್ಮ ಸಿನಿಮಾದಲ್ಲಿ ಯಾವ ಸಂದೇಶ ಇದೆ?' ಎಂದು ಕೇಳುವುದು. ಆದರೆ, ಯಾವಾಗ ಸಿನಿಮಾ ಮಂದಿ ಕಡ್ಡಿ ತುಂಡು ಮಾಡಿದಂತೆ 'ನಮ್ ಸಿನಿಮಾದಲ್ಲಿ ಸಂದೇಶ, ಗಿಂದೇಶ ಏನೂ ಇಲ್ಲ, ನಾವು ಕೇವಲ ಮನರಂಜನೆಗಾಗಿ ಸಿನಿಮಾ ಮಾಡಿದ್ದೇವೆ' ಎಂದು ಹೇಳಲು ಶುರುಮಾಡಿದರೋ ಈಗ ವರಸೆಗಳು ಬದಲಾಗತೊಡಗಿವೆ. ಅದರಲ್ಲೂ ಕೆಲವು ವಿಶೇಷ ಸಿನಿ ಪ್ರಯತ್ನಗಳನ್ನು ಮಾಡಿದಾಗ, ವಿಶೇಷ ಸಿನಿಮಾ ನೋಡುತ್ತಿರುವ ನಾವು, ಆರ್ಡಿನರಿ ಅಲ್ಲ ಎಂಬುದನ್ನು ನಿರೂಪಿಸುವ ಆತುರದಲ್ಲಿ ವೆರೈಟಿ ಸಲಹೆಗಳನ್ನು ನೀಡುವವರು ಬಹಳ.

ಮೊನ್ನೆ ಆಕಾಶ್ ಶ್ರೀವತ್ಸ ನಿರ್ದೇಶನದ 'ಸುಳ್ಳೇ ಸತ್ಯ' ಎಂಬ 40 ನಿಮಿಷದ ಕಿರುಚಿತ್ರ ಪ್ರದರ್ಶನ ಕೆವಿ ಸುಬ್ಬಣ್ಣ ರಂಗಮಂದಿರದಲ್ಲಿ ಏರ್ಪಾಡಾಗಿತ್ತು. ಜನ ಕನ್ನಡ ಸಿನಿಮಾ ನೋಡೋಕೆ ಬರದಿದ್ದರೆ ನಾವೇ ನಮ್ಮ ಸಿನಿಮಾವನ್ನು ಅವರ ಬಳಿಗೆ ಕೊಂಡು ಹೋಗೋಣ ಎಂಬ ಕಾನ್ಸೆಪ್ಟ್ ಹೊಂದಿರುವ ಶ್ರೀವತ್ಸ ತಮ್ಮ ಚಿತ್ರದ ಟ್ರೈಲರ್‌ನಲ್ಲಿ ಎದ್ದೇಳು ಮಂಜುನಾಥ ಚಿತ್ರದ 'ಕುದುರೆ ನೀರತ್ರ ಬರ್‌ಲಿಲ್ಲ ಅದಕ್ಕೆ ನೀರನ್ನೇ ಕುದುರೆ ಹತ್ರ ತಗೊಂಡ್ ಬಂದಿದೀನಿ, ಒಪ್ಪಿಸ್ಕೊಬೇಕು' ಎನ್ನುವ ಡೈಲಾಗ್ ಉಪಯೋಗಿಸಿಕೊಳ್ಳುವಷ್ಟು ಸ್ಮಾರ್ಟ್‌ನೆಸ್ ತೋರಿಸಿದ್ದರು. ಅದರ ಜೊತೆಗೊಂದು ಸ್ಮಾರ್ಟ್ ಸಿನಿಮಾ ಕೂಡ ತೋರಿಸಿದರು.
ಗಂಡ ಹೆಂಡಿರ ನಡುವಿನ ಸಂಬಂಧದ ಎರಡು ಮುಖಗಳನ್ನು ತೆರೆದಿಡುವ ನಿರ್ದೇಶಕ ವತ್ಸ, ಬದುಕಿನಲ್ಲಿ ಭರವಸೆ ಕಳೆದುಕೊಂಡ ನಾಯಕನ ಚಿತ್ರವಾದರೂ ಒಂದು ಭರವಸೆಯ ಸಿನಿಮಾ ಕೊಟ್ಟಿದ್ದಾರೆ ಎನ್ನುವಷ್ಟರ ಮಟ್ಟಿಗೆ ಪ್ರೇಕ್ಷಕರನ್ನು ಖುಷಿಪಡಿಸಿದರು.

ಶ್ರೀವತ್ಸ ಅವರು ಆರಂಭಿಸಿರುವ ಟೂರಿಂಗ್ ಟಾಕೀಸ್ ಎಂಬ ಯೋಜನೆಯಲ್ಲಿ ನಡೆದ ಸಿನಿಮಾ ಪ್ರದರ್ಶನ ಅದು. ಇಂಥದೊಂದು ಸಿನಿಮಾ ತೋರಿಸಿದ ಅವರಿಗೆ ನಂತರ ನಡೆದ ಸಂವಾದದಲ್ಲಿ ಸವಾಲು ಹಾಕುವಂಥ ಸವಾಲುಗಳೂ ಇದ್ದವು. 'ಎಲ್ಲವನ್ನು ಹೇಳುವಾಸೆ ಆದರೆ, ಅಂತ ಕೆಲವನ್ನು ಪ್ರೇಕ್ಷಕರಿಗೇ ಬಿಟ್ಟರೆ ಒಳ್ಳೆಯದು', 'ನಾವು ಹೇಳಬೇಕಾದ್ದನ್ನು ಸಿಂಬಾಲಿಕ್ ಆಗಿ ಹೇಳಬೇಕು', 'ನಿಮ್ ಸಿನಿಮಾದಲ್ಲಿ ನೀವು ಸೈಲೆನ್ಸ್ ಯೂಸ್ ಮಾಡಬೇಕಿತ್ತು,' ಇಂಥ ಹಲವು ಸಲಹೆಗಳು ಅಲ್ಲಿಯೂ ಹರಿದಾಡಿದವು.  ಸೈಲೆನ್ಸ್ ಇದ್ದರೆ ಮಾತ್ರ ಅದು ಸ್ಪೆಷಲ್ ಸಿನಿಮಾ ಎನ್ನುವವರಿಗೆ ಉಪೇಂದ್ರ ಚಿತ್ರಗಳಲ್ಲಿ ಸೈಲೆನ್ಸ್‌ನ ಮಾತೇ ಇಲ್ಲ ಎನ್ನುವುದು ಲೆಕ್ಕಕ್ಕೇ ಬರಲಿಲ್ಲ. ಆದರೆ, ಸಿನಿಮಾ ಮಾಡೋ ಸ್ಟೈಲ್ ಎನ್ನುವುದು ಮಣಿರತ್ನಂಗೊಂದು,  ರಾಮ್‌ಗೋಪಾಲ್ ವರ್ಮಾ ಅವರಿಗೊಂದು. ಅದನ್ನು ಇನ್ಯಾರನ್ನೋ ಕೇಳಿ ಅಳವಡಿಸಿಕೊಳ್ಳಬೇಕೇ ಎಂಬ ಕನ್‌ಫ್ಯೂಶನ್ ಅಲ್ಲಿದ್ದ ಕೆಲವರಿಗಿತ್ತು. ಕಥೆಯ ವಿಷಯದಲ್ಲಿ ಅವರ ಸಿನಿಮಾ, ಅರ್ಧಕ್ಕೆ ಮುಗಿದಂತೆ ಅನ್ನಿಸಿದ್ದೇನೋ ನಿಜ. ಆದರೆ, ಊಟದಲ್ಲಿ ತಟ್ಟೆಯಲ್ಲಿ ಏನೂ ಬಿಡಬಾರದು ಎಂಬ ನಂಬಿಕೆಗೆ ವಿರುದ್ಧವಾಗಿ, ಎಲ್ಲವನ್ನೂ ಹೇಳದೇ ಪ್ರೇಕ್ಷಕನಿಗೆ ಏನಾದರೂ ಬಿಟ್ಟರೆ ಅದು ಶ್ರೇಷ್ಠ ಚಿತ್ರದ ಲಕ್ಷಣ ಎಂಬ ಅನಿಸಿಕೆ ಅಲ್ಲಿನ ಕೆಲವರಿಗೆ ಖುಷಿ ಕೊಟ್ಟಿತ್ತು. ಹಾಗಂತೆ ಎಲ್ಲವನ್ನೂ ಪ್ರೇಕ್ಷಕನಿಗೇ ಬಿಟ್ಟರೆ ನಿರ್ದೇಶಕನಿಗೇನು ಕೆಲಸ ಎಂದು ಇನ್ಯಾರೂ ಕೇಳಲಿಲ್ಲ.  ಸುಳ್ಳೇ ಸತ್ಯ ಚಿತ್ರದ ನಾಯಕ ಆತ್ಮಹತ್ಯೆ ಮಾಡಿಕೊಳ್ಳಲು ನಿಂತಿದ್ದಾಗ ಫ್ಲ್ಯಾಷ್‌ಬ್ಯಾಕ್ ಶುರುವಾಗುತ್ತದೆ. ಅವನ ಆತ್ಮಹತ್ಯೆಯ ನಿರ್ಧಾರಕ್ಕೆ ಇಬ್ಬರು ಹೆಣ್ಣುಗಳು ಕಾರಣ. ಈ ಮೂವರಲ್ಲಿ ಯಾರು ಸರಿ ಎಂಬ ಜಿಜ್ಞಾಸೆ. ಸರಿ, ಮೂವರಲ್ಲಿ ಯಾರು ಸರಿ, ಅದು ಸುಳ್ಳಾ ಇದು ಸತ್ಯವಾ ಎಂಬುದನ್ನು ಪ್ರೇಕ್ಷಕನಿಗೆ ಬಿಡಲಿ. ಆದರೆ ನಾಯಕ ಆತ್ಮಹತ್ಯೆ ಮಾಡಿಕೊಂಡು ಸತ್ತನಾ ಇಲ್ಲವಾ ಎಂಬುದನ್ನೂ ಪ್ರೇಕ್ಷಕನಿಗೇ ಬಿಟ್ಟರೆ? ಪ್ರೇಕ್ಷಕನ ಗತಿ ಏನು, ಎಂದೆಲ್ಲ ತಲೆಕೆಡಿಸಿಕೊಂಡು ಯೋಚನೆ ಮಾಡುವಂತೆ ಮಾಡಿದ್ದು ಅಂದಿನ ಸಿನಿಮಾ ಪ್ರದರ್ಶನದ ಹೆಗ್ಗಳಿಕೆ. ಹೊಸ ಹುಡುಗರ ಇಂಥ ಹುರುಪಿನ ಪ್ರಯತ್ನಗಳನ್ನು ನೋಡಲು ಬರುವವರೂ ಅಂಥದೇ ಉತ್ಸಾಹ  ಹೊಂದಿದವರು. ಆದರೆ ಕೇವಲ ಪ್ರಯೋಗಾತ್ಮಕ ಚಿತ್ರಗಳನ್ನು ಮಾಡಿ ಗೆಳೆಯರಿಗೆ ತೋರಿಸಿ ಸಮಾಧಾನ ಪಟ್ಟುಕೊಳ್ಳುವುದು ಯಾವ ನಿರ್ದೇಶಕನ ಗುರಿಯೂ ಆಗಿರುವುದಿಲ್ಲ. ಅವನು ಮುಂದೊಂದು ದಿನ ಪುನೀತ್, ಸುದೀಪ್, ಶಿವಣ್ಣ, ದರ್ಶನ್‌ರ ಸಿನಿಮಾ ಮಾಡುವ ಕನಸು ಹೊಂದಿರುತ್ತಾನೆ. ಅಂಥ ಹಂತಕ್ಕೇರಬೇಕೆಂದರೆ ಸಿನಿಮಾಕ್ಕೆ ಕಮರ್ಷಿಯಲ್ ವ್ಯಾಲ್ಯೂ ಮುಖ್ಯ ಎಂಬುದು ಶ್ರೀವತ್ಸರಂಥ ಹೊಸ ಪೀಳಿಗೆಯ ನಿರ್ದೇಶಕರಿಗೆ ತಿಳಿಯದ ಮಾತೇನಲ್ಲ.

ಎದ್ದೇಳು ಮಂಜುನಾಥನ ಸಂಭಾಷಣೆಯನ್ನು ತಮ್ಮ ಟ್ರೈಲರ್‌ನಲ್ಲಿ ಬಳಸಿಕೊಂಡ ಶ್ರೀವತ್ಸ, 'ನಾವು ಕಮರ್ಷಿಯಲ್ಲು' ಎನ್ನುವ ಅದೇ ಮಂಜುನಾಥನಂತೆ ಜನ ನೋಡುವಂಥ ಸಿನಿಮಾ ಮಾಡುವುದರತ್ತ ಗಮನ ಕೊಟ್ಟರೆ ಅವರ ಮೊದಲ ಪ್ರಯತ್ನ ಸಾರ್ಥಕ ಎನಿಸಬಹುದು.

- ಹರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿ.ಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ; ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!