ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಲೇಖನ

ಯೇ ನೀರ್‌ದೋಸೆ ಹಮ್ ನಹೀ ಛೋಡೇಂಗೆ...

Lingaraj Badiger
Updated On : 29 Nov 2013, 12:10 pm

ನೀರ್‌ದೋಸೆಯಲ್ಲಿನ ತೂತು ಸದ್ಯಕ್ಕೆ ಮುಚ್ಚಿಕೊಂಡಿದೆ. ಆದರೆ, ನಟಿ ರಮ್ಯಾ ಈಗ 'ಆರ್ಯನ್‌' ಶೂಟಿಂಗ್‌ನಲ್ಲಿ ಬ್ಯುಸಿ. ಆದರೆ, ಅಲ್ಲಿಯೂ ಚಿತ್ರದ ನಿರ್ಮಾಪಕರಿಗೆ ಚಿತ್ರೀಕರಣದ ಜಾಗಕ್ಕೆ ಮೀಡಿಯಾ ಬಂದ್ರೆ ನಾನು ಆ್ಯಕ್ಟ್ ಮಾಡಲ್ಲ ಎಂಬ ಕಂಡೀಷನ್‌ನೊಂದಿಗೇ ಚಿತ್ರೀಕರಣ ನಡೆಯುತ್ತಿದೆ. ಅದಕ್ಕೆ ಕಾರಣ ರಮ್ಯಾ ಅವರು ಇತ್ತೀಚಿಗೆ ಫೋಟೋಗ್ರಾಫರ್ ಜೊತೆ ಮಾಡಿಕೊಂಡ ಜಗಳ. ಹೋಗ್ಲಿ ಬಿಡಿ. ಅದು ಅವರಿಷ್ಟ.

ಆದರೆ, 'ನೀರ್‌ದೋಸೆ' ಚಿತ್ರ ಮುಗಿಸಿ ಕೊಡ್ತೀನಿ ಅಂತ ಒಪ್ಕೊಂಡಿರುವ ಅವರು, ಶೂಟಿಂಗ್ ಯಾವಾಗ ಅಂದ್ರೆ ಜನವರಿಯಲ್ಲಿ ಎಂದಿದ್ದಾರಂತೆ. ಅದು ಹೆಚ್ಚು ಕಮ್ಮಿ ಎಲೆಕ್ಷನ್ ಟೈಮು. ಆಗ ರಮ್ಯಾ ಅವರಿಗೆ ಆ್ಯಕ್ಟ್ ಮಾಡುವಷ್ಟು ಸಮಯ ಇರುತ್ತಾ? ಗೊತ್ತಿಲ್ಲ. ಹಾಗಾಗಿ, ಮತ್ತೆ ಶೂಟಿಂಗ್ ಮುಂದೆ ಹಾಕೋ ಸಾಧ್ಯತೆ ಬಹಳ. ಅದಲ್ಲದೆ ಆ ಟೈಮಲ್ಲಿ ಚಿತ್ರದ ನಾಯಕ ಜಗ್ಗೇಶ್, ಈಗಾಗಲೇ ನೀರ್‌ದೋಸೆ ಜಾಸ್ತಿ ಹೊತ್ತು ಬಿಟ್ರೆ ಸೀದು ಹೋಗುತ್ತೆ ಅಂತ 'ಪೆಟ್ರೋಮ್ಯಾಕ್ಸ್‌' ಹಚ್ಚಿರುವ ನಿರ್ದೇಶಕ ವಿಜಯ್‌ಪ್ರಸಾದ್ ಮತ್ತು ಉಳಿದವರು ಫ್ರೀ ಇದ್ದಾರಾ ಅಂತ ಯಾರೂ ವಿಚಾರಿಸುವ ಗೋಜಿಗೇ ಹೋಗಿಲ್ಲ. ರಮ್ಯಾ ಡೇಟ್ ಕೊಟ್ರೆ ಸಾಕು ಎಲ್ಲರೂ ಆ ಟೈಮಿಗೆ ಹಾಜರಾಗಬೇಕು ಅನ್ನೋ ವಿಧೇಯತೆ ಎಲ್ಲರದ್ದು.

ಈ ಬಗ್ಗೆ ಜಗ್ಗೇಶ್ ಅವರನ್ನು ಮಾತನಾಡಿಸಿ 'ಅವರು ಹೇಳಿದ ಡೇಟ್‌ಗೆ ನೀವು ಹೋಗಬೇಕಾ, ನಿಮ್ಮ ಡೇಟ್ಸ್ ಕೂಡ ನೋಡಿಕೊಂಡು ಅವರ ಡೇಟ್ಸ್ ಹೊಂದಿಸಬೇಕಲ್ಲವೇ, ನನ್ನತ್ರ ಜನವರಿಯಲ್ಲಿ ಡೇಟ್ಸ್ ಇಲ್ಲ ಅಂತ ನೀವೂ ಅನ್ನಬಹುದಲ್ಲ' ಎಂದು ಕೇಳಿದರೆ 'ಹೋಗ್ಲಿ ಬಿಡಿ, ನಾನು ನಿರ್ಮಾಪಕ ಸ್ನೇಹಿ ನಟ. ಯಾರೋ ಮಾಡ್ತಾರೆ ಅಂತ ನಾನು ಹಾಗೇ ಮಾಡೋಕಾಗುತ್ತ. ನಿರ್ಮಾಪಕರಿಗಾಗಿ ನಾನು ಎಲ್ಲ ತ್ಯಾಗಕ್ಕೂ ಸಿದ್ಧ. ಇದು ನನ್ನ ಇವತ್ತಿನ ಪಾಲಿಸಿ ಅಲ್ಲ. ಹಾಗಾಗಿಯೇ ಒಂದು ಕಾಲದಲ್ಲಿ ನನಗಾಗಿಯೇ ಸಿನಿಮಾ ಮಾಡುವಂಥ ಎಷ್ಟೋ ಜನ ರೆಗ್ಯುಲರ್ ನಿರ್ಮಾಪಕರಿದ್ದರು' ಎನ್ನುತ್ತಾರೆ ಜಗ್ಗೇಶ್. ಆದರೆ ರಮ್ಯಾ ವರಸೆಯೇ ಬೇರೆ ಬಿಡಿ. ಹತ್ತು ವರ್ಷ ನಾನು ಉದ್ಯಮಕ್ಕೆ ಸಪೋರ್ಟ್ ಮಾಡಿದ್ದೇನೆ. ಈಗ ನನಗೆ ಸಪೋರ್ಟ್ ಮಾಡೋದು ಉದ್ಯಮದ ಕರ್ತವ್ಯ ಅಂತ ರಮ್ಯಾ ಹೇಳಿರುವುದನ್ನು ಕೇಳಿದರೆ ಯಾರಿಗಾದರೂ ಅದಕ್ಕೆ ಪ್ರತಿಕ್ರಿಯೆ ನೀಡಬೇಕು ಅನಿಸೋದೇ ಕಷ್ಟ.

ಇದಲ್ಲದೆ, ರಮ್ಯಾ ಈಗ ಒಂದು ಬ್ರೇಕ್‌ನ ನಂತರ ಮೊದಲು 'ಆರ್ಯನ್‌' ಚಿತ್ರಕ್ಕೆ ಡೇಟ್ಸ್ ಕೊಟ್ಟಿದ್ದಾರೆ. ಆದರೆ, ಅವರು ಮೊದಲು ಶುರು ಮಾಡಿದ್ದು ಯಾವ ಚಿತ್ರ? ಹಾಗೆ ನೋಡಿದರೆ 'ಆರ್ಯನ್‌' ಕೊನೆಯದ್ದು. ಇದಕ್ಕೂ ಮುಂಚೆ ಶುರುವಾದ 'ದಿಲ್ ಕಾ ರಾಜಾ' ಚಿತ್ರದ ನಿರ್ಮಾಪಕರು ಎದೆ ಹಿಡಿದುಕೊಂಡು ಕೂತಿದ್ದಾರೆ, 'ನೀರ್‌ದೋಸೆ' ವಿಷಯ ಎಲ್ಲರಿಗೂ ಗೊತ್ತೇ ಇದೆ. ಆದರೂ ರಮ್ಯಾ ಮೊದಲು ಮುಗಿಸಲು ಹೊರಟಿರುವ ಚಿತ್ರ ಆರ್ಯನ್. ಬಹುಷಃ 'ನೀರ್‌ದೋಸೆ'ಯಂಥ ವೇಶ್ಯೆಯ ಪಾತ್ರ ಇರುವ ಚಿತ್ರ ಎಲೆಕ್ಷನ್ ಟೈಮಲ್ಲಿ ಬಿಡುಗಡೆ ಆದ್ರೆ ಅವರ ಇಮೇಜಿಗೆ ನಷ್ಟ ಎಂಬ ಕಾರಣ ಇರಬಹುದೇನೋ.

ಅಂದಹಾಗೆ, 'ನೀರ್‌ದೋಸೆ'ಯ ಬಗ್ಗೆ, ಮೊದಲು ವಾಣಿಜ್ಯ ಮಂಡಳಿಯಲ್ಲಿ ಮಾತುಕತೆ ಏರ್ಪಾಡಾದಾಗ ರಮ್ಯಾ 'ನಾನು ಬ್ಯುಸಿ, ಆಮೇಲೆ ಇಟ್ಕೊಳ್ಳಿ' ಅಂದ್ರು. ಆದ್ರೆ ಆಮೇಲ್ ಇಟ್ಕೊಂಡ್ ಮೇಲೂ ಮಾತುಕತೆಗೆ ಬಂದಿದ್ದು ರಮ್ಯಾರ ಮ್ಯಾನೇಜರ್ ಕನ್ನಿಕಾ ಅವರೇ ಹೊರತು ರಮ್ಯಾ ಅಲ್ಲ. ಈಗ ಶೂಟಿಂಗ್ ವಿಷಯದಲ್ಲಿ ಮಾತು ಕೊಟ್ಟಿರುವುದು, ಡೇಟ್ಸ್ ಕೊಟ್ಟಿರುವುದೂ ಅವರೇ. ರಮ್ಯಾ ನೇರವಾಗಿ ಕಾಣಿಸಿಕೊಂಡಿಲ್ಲ. ಎಲ್ಲವನ್ನೂ ಮ್ಯಾನೇಜರ್ ಮೂಲಕವೇ ಮಾಡಿಸುತ್ತಿರುವುದನ್ನು ನೋಡಿ 'ನೀರ್‌ದೋಸೆ' ನಿರ್ಮಾಪಕರು ನಾಳೆ ಶೂಟಿಂಗಿಗೂ ಮ್ಯಾನೇಜರ್ ಕನ್ನಿಕಾ ಅವರನ್ನೇ ಕಳಿಸಿಬಿಟ್ಟರೆ ಹೇಗೆ ಎಂದು ಗಾಬರಿಯಾದ ಸುದ್ದಿ ಮಾತ್ರ ಇನ್ನೂ ಬಹಿರಂಗವಾಗಿಲ್ಲ.

- ಹ್ಯಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement