ನಟ ದರ್ಶನ್ರ ಅಭಿಮಾನಿಗಳಿಗೆ ಮಾತ್ರವಲ್ಲ, ಇಡೀ ಸಿನಿಮಾ ಪ್ರೇಕ್ಷಕ ವರ್ಗದ ಪಾಲಿಗೆ 'ಬೃಂದಾವನ' ಸೂಪರ್ ಹಿಟ್ ಚಿತ್ರ ಎಂಬುದು ಚಿತ್ರದ ನಿರ್ಮಾಪಕರಿಂದ ಹಿಡಿದು ಎಲ್ಲರ ಅಭಿಪ್ರಾಯ. ಚಿತ್ರ ತೆರೆಕಂಡ ಐದನೇ ದಿನಕ್ಕೆ ಅದರ ಗೆಲುವಿನ ಸಂಭ್ರಮವನ್ನು ಹೇಳಿಕೊಳ್ಳಲು ಚಿತ್ರತಂಡ ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾಯಿತು. ನಟ ದರ್ಶನ್, ನಟಿ ಮಿಲನ ನಾಗರಾಜ್, ನಿರ್ಮಾಪಕ ಶ್ರೀನಿವಾಸಮೂರ್ತಿ, ನಿರ್ದೇಶಕ ಕೆ. ಮಾದೇಶ್, ವಿತರಕ ಮಲ್ಲಿಕಾರ್ಜುನಾ ಅವರು ಚಿತ್ರದ ಗಳಿಕೆ ಮತ್ತು ಅದರ ಪ್ರದರ್ಶನದ ಕುರಿತು ಹೇಳಿಕೊಂಡರು.
'ನಿಜ ಹೇಳಬೇಕು ಅಂದರೆ ಈ ಹಿಂದೆ ಬಂದ 'ಬುಲ್ ಬುಲ್'ಗಿಂತಲೂ 'ಬೃಂದಾವನ' ತುಂಬಾ ಚೆನ್ನಾಗಿದೆ' ಎಂದಿದ್ದು ನಟ ದರ್ಶನ್. 'ಬುಲ್ ಬುಲ್' ನೋಡಿದ ಅವರ ಅಭಿಮಾನಿಗಳು ಕೊಂಚ ಸಪ್ಪೆಯಾಗಿದ್ದರಂತೆ. ಆದರೆ 'ಬೃಂದಾವನ' ಚಿತ್ರ ಬರುತ್ತದೆ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಇರುತ್ತದೆ ಎಂದು ದರ್ಶನ್ ಅಭಿಮಾನಿಗಳಿಗೆ ಭರವಸೆ ಕೊಟ್ಟಿದ್ದರಂತೆ. ಅದರಂತೆ ಚಿತ್ರ ಅದ್ಭುತವಾಗಿ ಮೂಡಿ ಬಂದಿದ್ದು, ರಿಮೇಕ್ ಆದರೂ ತೆಲುಗಿಗಿಂತ ಅದ್ದೂರಿಯಾಗಿದೆ ಎಂಬುದು ನಿರ್ಮಾಪಕರ ಮಾತು. 'ಈಗಾಗಲೇ ಚಿತ್ರ 196 ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದೆ. ಸರಾಸರಿ ಪ್ರತಿ ದಿನ ರು. 2 ಕೋಟಿ ಗಳಿಕೆ ಮಾಡುತ್ತಿದೆ. ಸಾಮಾನ್ಯವಾಗಿ ಚಿತ್ರ ಬಿಡುಗಡೆಯಾದ ಮೂರು ದಿನ ಹೀರೋ ಸಿನಿಮಾ. ಆದರೆ ಐದನೇ ದಿನಕ್ಕೂ ಅದೇ ಜನ ಸಂದಣಿ ಇದೆ ಎಂದ ಮೇಲೆ ಇದು ಪ್ರೇಕ್ಷಕರ ಸಿನಿಮಾ' ಎಂದರು ಶ್ರೀನಿವಾಸ ಮೂರ್ತಿ. ಮುಂದಿನ ವಾರ ಅಮೆರಿಕ, ದುಬೈ, ಆಸ್ಟ್ರೇಲಿಯಾದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಒಂದಿಬ್ಬರು ಮುಂದೆ ಬಂದಿದ್ದಾರಂತೆ. ಸಮಯ ಸಿಕ್ಕರೆ ಹೊರದೇಶದಲ್ಲೂ ವಿತರಣೆ ಮಾಡಲು ನಿರ್ಮಾಪಕರು ಸಿದ್ಧರಾಗಿದ್ದಾರಂತೆ.
ಆ್ಯಕ್ಷನ್, ಪಂಚಿಂಗ್ ಡೈಲಾಗ್ಸ್ ಚಿತ್ರದ ಹೈಲೈಟ್. ಇದು 'ಬುಲ್ ಬುಲ್' ಚಿತ್ರದಲ್ಲಿ ಕಡಿಮೆ ಇತ್ತು. ಆದರೆ 'ಬೃಂದಾವನ' ಆ ಕೊರತೆ ನೀಗಿಸಿದೆ. ಅಭಿಮಾನಿಗಳನ್ನು ತೃಪ್ತಿಪಡಿಸಿದ ಸಿನಿಮಾ ಇದು ಎಂಬುದು ದರ್ಶನ್ರ ಮಾತು. ಅವರ ಪ್ರಕಾರ ಸಿನಿಮಾ ಅವಧಿ ಜಾಸ್ತಿ ಎನಿಸುತ್ತಿಲ್ಲ. ಚಿತ್ರದ ನಡುವೆ ಬೇರೆ ಚಿತ್ರಗಳ ಪ್ರೋಮೋ ತೋರಿಸಿದ್ದಾರೆ. ಇದೇ 20 ನಿಮಿಷ ತಿಂದಿದೆ. 'ಸಾರಥಿ' ಹಾಗೂ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ'ಗಿಂತಲೂ ಕಡಿಮೆ ಅವಧಿ ಎನ್ನುತ್ತಾರೆ ದರ್ಶನ್. 'ಬೃಂದಾವನ' ಚಿತ್ರತಂಡಕ್ಕೆ ಪ್ರಕೃತಿ ತುಂಬಾ ಕಾಟ ಕೊಟ್ಟಿದೆಯಂತೆ. ಐಸ್ಲ್ಯಾಂಡ್ನಲ್ಲಿ ಶುರುವಾದ ಮಳೆ ಕುಶಾಲನಗರ, ಸಕಲೇಶ್ವರದ ವರೆಗೂ ಬಂತು. ಗದಗ್ ಜಿಲ್ಲೆಯ ಗಜೇಂದ್ರಗಢದಲ್ಲಿ ಮಳೆ ಬಂದು 4 ವರ್ಷವಾಗಿತ್ತು. ಆದರೆ ಚಿತ್ರತಂಡ ಅಲ್ಲಿಗೆ ಹೋದಾಕ್ಷಣ ಮಳೆ ಶುರುವಾಯಿತಂತೆ. ಯಾವ ಮಟ್ಟಕ್ಕೆ ಅಂದ್ರೆ ಯೂನಿಟ್ ಹುಡುಗನೊಬ್ಬ ಶಾಂಪ್ ಹಾಕಿಕೊಂಡು ಸ್ನಾನ ಮಾಡುವಷ್ಟರ ಮಟ್ಟಿಗೆ ಮಳೆ ಬಂದಿದ್ದನ್ನು ದರ್ಶನ್ ನೆನಪಿಸಿಕೊಳ್ಳುತ್ತಾರೆ.
ಸದ್ಯ ಗಾಂಧಿನಗರದಲ್ಲಿ ರಿಮೇಕ್ ಚಿತ್ರಗಳನ್ನು ಗೆಲ್ಲಿಸುವ ನಿರ್ದೇಶಕ ಎಂದರೆ ಅದು ಕೆ. ಮಾದೇಶ್ ಎನ್ನುವಂತಾಗಿದೆ. ಹೀಗಾಗಿ 'ಬೃಂದಾವನ' ಅವರ ನಿರ್ದೇಶನದಲ್ಲಿ ಅದ್ದೂರಿಯಾಗಿ ಮೂಡಿ ಬಂದಿದೆ. ಪ್ರತಿ ದಿನ 300 ಮಂದಿ ಕಲಾವಿದರು ಕೆಲಸ ಮಾಡುತ್ತಿದ್ದರು. 6 ರಿಂದ 8 ಕ್ಯಾಮೆರಾ ಬಳಸಿದ್ದಾರಂತೆ. ಒಳ್ಳೆಯ ಚಿತ್ರಕ್ಕೆ ಪ್ರೇಕ್ಷಕರ ಬೆಂಬಲ ಇರುತ್ತದೆಂಬುದು ಮಾದೇಶ್ರ ನಂಬಿಕೆ. ಇನ್ನು ಚಿತ್ರದಲ್ಲಿ ಬಳಕೆಯಾಗಿರುವ ಮನೆ ಸೆಟ್ ಅನ್ನು 90 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದರಂತೆ. ಚಿತ್ರದ ವಿತರಣೆ ಜವಾಬ್ದಾರಿ ನಟ ದರ್ಶನ್ ಆಪ್ತ ಮಲ್ಲಿಕಾರ್ಜುನ್ ಅವರದ್ದು. 'ಇದು ತೆಲುಗು ಚಿತ್ರವನ್ನು ಮೀರಿಸಿದೆ. ಫ್ಯಾಮಿಲಿ ಆಡಿಯನ್ಸ್ ಬರುತ್ತಿದ್ದಾರೆ. ಎಲ್ಲ ಕಲಾವಿದರು ಚೆನ್ನಾಗಿ ಅಭಿನಯಿಸಿದ್ದಾರೆ' ಎಂದರು ಮಲ್ಲಿ. 'ಒಳ್ಳೆಯ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಚಿತ್ರತಂಡದ ಸಹಕಾರ ಇತ್ತು' ಎಂದರು ನಟಿ ಮಿಲನ. 'ಒಳ್ಳೆಯ ಕಥೆ ಸಿಕ್ಕರೆ ನಾಳೆನೇ ದರ್ಶನ್ ಅವರೊಂದಿಗೆ ಮತ್ತೊಂದು ಚಿತ್ರ ಮಾಡುತ್ತೇನೆ' ಎಂದು ಶ್ರೀನಿವಾಸಮೂರ್ತಿ ಹೇಳಿಕೊಳ್ಳುವುದರೊಂದಿಗೆ 'ಬೃಂದಾವನ' ಮಾತು ಮುಕ್ತಾಯವಾಯಿತು.
- ಕೇಶು