ಸಿಂಗಲ್ ಶಾಟ್ನಲ್ಲೇ ಒಂದು ಸಿನಿಮಾ ತೆಗೆಯಲು ಹೊರಟಿದ್ದಾರೆ ನಿರ್ದೇಶಕ ಗುಣವಂತ ಮಂಜು. ಕರ್ಣ ಶ್ರೀಎಂಟರ್ಪ್ರೈಸಸ್ ಮೂಲಕ ಇಂಥದೊಂದು ಸಾಧನೆ ಮಾಡಿ ಗಿನ್ನಿಸ್ ಮತ್ತು ಲಿಮ್ಕಾ ರೆಕಾರ್ಡ್ಗಳಲ್ಲಿ ತಮ್ಮ ಹೆಸರು ಸೇರಿಸುವ ಹಂಬಲ ಅವರದ್ದು.
ಜಾಗತಿಕ ಸಿನಿಮಾ ಇತಿಹಾಸದಲ್ಲೇ ಇದು ಮೊದಲ ಬಾರಿಗೆ ಆಗುತ್ತಿರುವ ಪ್ರಯತ್ನ ಎನ್ನುವ ಮಂಜು ತಮ್ಮ ಈ ಚಿತ್ರಕ್ಕೆ ನಮಸ್ತೆ ಇಂಡಿಯಾ ಎಂದು ಹೆಸರಿಟ್ಟಿದ್ದಾರೆ. ಈ ಚಿತ್ರವನ್ನು ಸಂಪೂರ್ಣವಾಗಿ ಹಂಪಿಯಲ್ಲಿ ಚಿತ್ರೀಕರಿಸಲಿದ್ದಾರೆ ಎಂಬುದು ಸದ್ಯದ ಸುದ್ದಿ.
ಈಗಾಗಲೇ ಕೆ.ವಿ.ರಾಜು, ಆರ್. ಚಂದ್ರು, ಎ.ಆರ್.ಬಾಬು ನಿರ್ದೇಶನದ ಅನೇಕ ಚಿತ್ರಗಳಿಗೆ ಸಹ ನಿರ್ದೇಶಕರು, ಬರಹಗಾರರು ಆಗಿ ಕೆಲಸ ಮಾಡಿ, ಅನೇಕ ಕಿರುಚಿತ್ರಗಳನ್ನು ಮಾಡಿರುವ ಮಂಜು, ನಮಸ್ತೆ ಇಂಡಿಯಾ ಚಿತ್ರಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶನ ಮಾಡಲಿದ್ದಾರೆ.
ಚಿತ್ರಕ್ಕೆ ನಂದಕುಮಾರ್ ಛಾಯಾಗ್ರಹಣ, ಕೆ.ಎಂ. ಇಂದ್ರ ಅವರ ಸಂಗೀತ, ಸಾಹಿತ್ಯ ಇದೆ. ಸೈಕೋ ಚಿತ್ರದಲ್ಲಿ ಅಭಿನಯಿಸಿದ್ದ ಧನುಷ್, ಮೈತ್ರೇಯಾ ಚಿತ್ರದ ನಾಯಕ ನಾಯಕಿರಾಗಿ ಕಾಣಿಸಿಕೊಳ್ಳಲಿದ್ದರೆ, ತನುಷಾ ಎರಡನೇ ನಾಯಕಿಯಾಗಲಿದ್ದಾರೆ.
ಮಾಲಿನಿ, ಶಿವಕುಮಾರ್, ನಕ್ಷತಾ, ಸಂತೋಷ್ ನಮಸ್ತೆ ಇಂಡಿಯಾ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು ತಮ್ಮ ನಿರ್ದೇಶನದ ಮೊದಲ ಚಿತ್ರದ ಮೂಲಕವೇ ಚಿತ್ರರಂಗದಲ್ಲೊಂದು ಹೊಸ ದಾಖಲೆ ಮಾಡುವ ಉತ್ಸಾಹದಲ್ಲಿದ್ದಾರೆ ಗುಣವಂತ ಮಂಜು.
- ಹರಿ