ಪ್ರಿಯಾಂಕ ಉಪೇಂದ್ರರ ಪತ್ನಿಯಷ್ಟೇ ಅಲ್ಲ, ಜನಪ್ರಿಯ ತಾರೆಯೂ ಹೌದು. ತಮ್ಮದು ಪ್ರೇಮವಿವಾಹವೇ ಆದರೂ ಅದೊಂದು ಅವಸರದ ಮದುವೆಯೆಂದು ಅವರಿಗೆ ಹಲವಾರು ಬಾರಿ ಅನಿಸುವುದಿದೆಯಂತೆ. ನಟಿಯಾಗಿ ಇನ್ನಷ್ಟು ಚಿತ್ರಗಳಿಂದ ಗುರುತಿಸಿಕೊಳ್ಳಲಾಗದ ಅತೃಪ್ತಿ ಈಗಲೂ ಇದೆಯಂತೆ. ಅದನ್ನು ನಿವಾರಿಸುವ ಮಟ್ಟಿನಲ್ಲಿ ಸೂಪರ್ ರಿಎಂಟ್ರಿಗಾಗಿ ಒಳಗೊಳಗೇ ತಯಾರಾಗಿದ್ದಾರೆ ಈ ಚೆಲುವೆ. ಈಗ ಮಕ್ಕಳು ಬೆಳೆದು ನಿಂತಿದ್ದಾರೆ. ತಾಯ್ತನದಲ್ಲಿ ಬದಲಾಗಿದ್ದ ದೇಹಕ್ಕೆ ನಿತ್ಯವೂ ಜಿಮ್‌ಗೆ ಹೋಗಿ ಕಾಯಕಲ್ಪ ನೀಡಿದ್ದಾರೆ. ಸದ್ಯಕ್ಕೆ 'ಉಪ್ಪಿ- 2' ನಿರ್ಮಾಪಕಿ ಫಿಗರ್ ಮೇಂಟೇನ್ ಮಾಡೋದರಲ್ಲಿ ನಿಸ್ಸೀಮೆಯೆಂದು ತೋರಿಸಿಕೊಟ್ಟಿದ್ದಾರೆ. ಬಾಲಿವುಡ್‌ನಲ್ಲಿ ಹೃತಿಕ್ ರೋಶನ್ ಮತ್ತು ಕನ್ನಡದಲ್ಲಿ ಅಪ್ಪು ಫೇವರೇಟ್ ನಾಯಕರೆಂದು ಹೇಳುವ ಮೂಲಕ ತಮ್ಮ ಮನಸ್ಸು ತುಂಬ ಯಂಗ್ ಎಂಬುದನ್ನು ನಿರೂಪಿಸಿದ್ದಾರೆ. 'ಖುಷಿ'ಗಾಗಿ ಅವರು ಕೆಲವು ಖುಷಿಯ ಮಾತುಗಳನ್ನು ಹಂಚಿಕೊಂಡರು...
ಇಂಥದ್ದೊಂದು ಕೌಟುಂಬಿಕ ಜೀವನದ ನಿರೀಕ್ಷೆ ಉದ್ಯಮಕ್ಕೆ ಬರುವಾಗಲೇ ಇತ್ತಾ?
ಆಸೆಯಿತ್ತು, ಆದರೆ ಅದು ನೆರವೇರುವುದೆಂಬ ಭರವಸೆಯಿರಲಿಲ್ಲ. ನನ್ನ ಮದುವೆಗೆ ಮೊದಲೇ ನನ್ನ ತಂಗಿ ಪ್ರೇಮಿಸಿ ಮದುವೆಯಾಗಿ ಹೋಗಿದ್ದ ಕಾರಣ ನಮಗೆಲ್ಲ ಸ್ವಲ್ಪ ಆಘಾತವಾಗಿತ್ತು. ಹಾಗಾಗಿ ನಾನು ಚಿತ್ರೋದ್ಯಮದಲ್ಲಿದ್ದರೂ ಮದುವೆಯ ಬಳಿಕ ಒಳ್ಳೆಯ ಗೃಹಿಣಿಯಾಗಿ ಮನೆಯವರೊಂದಿಗೆ ಇರಬೇಕು ಎಂಬ ಆಗ್ರಹವಿತ್ತು. ಅದು ಈ ಮಟ್ಟದಲ್ಲಿ ಸಫಲವಾಗಿರುವ ಬಗ್ಗೆ ಸಂತೃಪ್ತಿಯಿದೆ.
ನಿಮ್ಮ ತಂಗಿ ಈಗ ಹೇಗಿದ್ದಾರೆ?
ನನ್ನ ತಂದೆ ತಾಯಿಯ ಮೂವರು ಮಕ್ಕಳಲ್ಲಿ ನಾನೇ ಹಿರಿಯವಳು. ಎರಡನೆಯವಳು ಅಕ್ಷರಾ. ಕಾಲೇಜಲ್ಲಿದ್ದಾಗಲೇ ಆಲ್ಬಂ ಹಾಡುಗಳಲ್ಲಿ ನಟಿಸುತ್ತಿದ್ದಳು. ಅದಕ್ಕೆ ಗೀತೆ ಹಾಡಿರುವ ಗಾಯಕ ಶೈಲೇಂದ್ರನನ್ನು ಪ್ರೇಮಿಸಿ ಮದುವೆಯಾದಳು. ಈಗ ಅವರು ಸಿಂಗಾಪುರದಲ್ಲಿ ನೆಲೆಸಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅವಳಿಗೆ ಸ್ವಂತ ಬೊಟಿಕ್ ಶಾಪ್ ಇದೆ. ಫ್ಯಾಶನ್ ಡಿಸೈನಿಂಗ್ ಕಲಿತಿದ್ದಾಳೆ. ವರ್ಲ್ಡ್ ಮ್ಯಾಗಜಿನ್‌ನಲ್ಲಿ ಸ್ಟೈಲಿಷ್ ಆಗಿ ಗುರುತಿಸಿಕೊಂಡಿದ್ದಾಳೆ. ಮನೆಯವರೆಲ್ಲ ಸೇರುವ ವಿಶೇಷ ಕಾರ್ಯಕ್ರಮಗಳಿದ್ದಾಗ ಅವಳೂ ಕುಟುಂಬ ಸಮೇತ ಬಂದು ಪಾಲ್ಗೊಳ್ಳುತ್ತಾಳೆ.
ಹಿಂದೆ ನಟಿಸಿದ ಯಾವುದಾದರೂ ಚಿತ್ರದ ಬಗ್ಗೆ ಈಗ ನೀವು ಪಶ್ಚಾತ್ತಾಪ ಪಡೋದುಂಟಾ?
ಇಲ್ಲ. ಯಾಕೆ ಪಶ್ಚಾತ್ತಾಪ ಪಡಲಿ? ಎಲ್ಲವೂ ಮೊದಲೇ ಗೊತ್ತಿದ್ದು ಆಯ್ಕೆ ಮಾಡಿಕೊಂಡ ಪಾತ್ರಗಳು. ಹಾಗಾಗಿ ಅಂಥಾ ಸಂದರ್ಭಗಳೇ ಬರುವುದಿಲ್ಲ. ಮೊದಲೇ ಇನ್ನಷ್ಟು ನಟಿಸಿರಬೇಕಿತ್ತು ಎಂಬ ಬಗ್ಗೆ ಪಶ್ಚಾತ್ತಾಪ ಪಟ್ಟಿದ್ದೇನೆ. ಇದುವರೆಗೆ ನಟಿಸಿರುವವುಗಳಲ್ಲಿ ಸಾಥಿ ಎಂಬ ಬಂಗಾಳಿ ಚಿತ್ರ ನನಗೆ ತುಂಬಾ ಖುಷಿ ಕೊಟ್ಟಿದೆ.
ಒಟ್ಟಿನಲ್ಲಿ ನಿಮ್ಮದು ಕಲಾವಿದರ ಖಾನ್ದಾನ್. 'ಉಪ್ಪಿ-2'ನಲ್ಲಿ ಉಪೇಂದ್ರರೊಂದಿಗೆ ಯಾರೆಲ್ಲ ಕಾಣಿಸಿಕೊಳ್ಳಲಿದ್ದೀರಿ?
ಅದು ಪೂರ್ತಿ ಅವರೊಬ್ಬರ ಕನಸು. ನಿರ್ಮಾಪಕಿಯಾದ ಮಾತ್ರಕ್ಕೆ ನಮ್ಮ ಮನೆಮಂದಿಗೆಲ್ಲ ಪಾತ್ರಗಳನ್ನು ಸೃಷ್ಟಿಸಲಾಗದು. ಸದ್ಯಕ್ಕೆ ನಾನು ನಿರ್ಮಾಪಕಿಯಾಗಿ ಮಾತ್ರ ಇರುತ್ತೇನೆ. ಅದರ ಬಳಿಕ ನಟನೆಗೆ ಪ್ರಾಧಾನ್ಯವುಳ್ಳ ಚಿತ್ರಗಳು ಸಿಕ್ಕರೆ ನಟಿಸಬೇಕೆಂಬ ಉದ್ದೇಶವಿದೆ. ನನ್ನನ್ನು ದೇವಿಯ ಪಾತ್ರಗಳಲ್ಲಿ ನಟಿಸುವಂತೆ ಹಲವರು ಕೋರಿದ್ದಾರೆ. ಅವಕಾಶ ಸಿಕ್ಕರೆ ಮುಂದೆ ಅಂಥದ್ದೊಂದು ಪಾತ್ರವನ್ನು ನಿರ್ವಹಿಸಲಿದ್ದೇನೆ.
ಉಪೇಂದ್ರರ ರಾಜಕೀಯ ಪ್ರವೇಶದ ಬಗ್ಗೆ...
ವೈಯಕ್ತಿವಾಗಿ ನನಗೆ ರಾಜಕೀಯದ ಬಗ್ಗೆ ಒಲವಿಲ್ಲ. ಉಪ್ಪಿಯ ಅಭಿರುಚಿ ಅವರಿಗೆ. ಆದರೆ ಸಕ್ರಿಯ ರಾಜಕಾರಣಕ್ಕೆ ಮುಂದಾಗುವುದು ಮಾತ್ರ ಇಷ್ಟು ಬೇಗ ಬೇಡ ಎಂಬುದು ನನ್ನ ಅಭಿಪ್ರಾಯ. ನನ್ನ ಪ್ರಕಾರ, ಅವರು ಇನ್ನಷ್ಟು ಚಿತ್ರಗಳನ್ನು ನಿರ್ದೇಶಿಸಬೇಕು.
= ಶಶಿಕರ ಪಾತೂರು
shashishashi82@gmail.com