ಗಾಂಧಿ ನಗರಕ್ಕೆ ಬೆಂಕಿ ಬಿತ್ತು!
'ಚಪ್ಲಿ ಅಂಗಡೀಲಿ ಮಾತ್ರ ಚಪ್ಲಿ ಒಳಗಿರ್ತವೆ''ಬೊಗಳೋ ನಾಯಿ ಕಚ್ಚಿದ್ರೂ ಕಚ್ಚಬೋದು''ಸುಡುಗಾಡು ಸಂತೆಯಲಿ ಜೊತೆಯಾಗಿ'...
'ಚಪ್ಲಿ ಅಂಗಡೀಲಿ ಮಾತ್ರ ಚಪ್ಲಿ ಒಳಗಿರ್ತವೆ'
'ಬೊಗಳೋ ನಾಯಿ ಕಚ್ಚಿದ್ರೂ ಕಚ್ಚಬೋದು'
'ಸುಡುಗಾಡು ಸಂತೆಯಲಿ ಜೊತೆಯಾಗಿ'
'ಪಟಾಪಟಿ ಚಡ್ಡೀಲಿ ಗೆರೆ ಎಷ್ಟು ಇರ್ತವೆ'
'ಸೀದಾ ಆಗೋದಿಲ್ಲ ಕಣ್ರೀ ನಾಯಿ ಬಾಲ'
'ಒಲವೆ ನಿನ್ನ ಬಳಗದಲ್ಲಿ ನನ್ನನೂ ಸೇರಿಸೂ'
'ಬಡಪಾಯಿ ಬದುಕಲ್ಲಿ ಬಂದವನು'
'ಯಾರ್ ಯಾರು ಯಾತಕ್ಕಂತ ಹುಟ್ತಾರೋ ಯಾವೋನಿಗೂ ಗೊತ್ತಾಗಲ್ಲ'
ಬದುಕಿನ ವಾಸ್ತವ, ಒಂಚೂರು ಪ್ರೀತಿ, ಜೀವನ ಅನುಭವ, ಕೊಂಚ ಹ್ಯೂಮರಸ್, ಮನಸ್ಸಿಗೆ ನಾಟುವ ಹಾಡಿನ ಸಾಲು, ಭಗ್ನ ಪ್ರೇಮಿಯ ಕನವರಿಕೆ, ಸೆಂಟ್ ಹನ್ಮಂತ, ಪಾನಿ, ತಲಪುರಕಿ, ಲಿಂಬಾರಾಮ, ಕತ್ಲೆಶಿವ, ಬಾಬೂಲಿ- ಹೀಗೆ ವಿಚಿತ್ರ ಪಾತ್ರಗಳನ್ನು ಕಣ್ಣಿಗೆ ಕಟ್ಟುವ ಈ ಮೇಲಿನ ಸಾಲುಗಳನ್ನು ಓದಿದಾಗ 'ಇದು ಈ ನೆಲದ ಕಥೆ' ಅನ್ನದಿರಲು ಸಾಧ್ಯವೆ? ದೃಶ್ಯ ವೈಭವಕ್ಕೆ ಅಕ್ಷರ ಸಂಸ್ಕೃತಿ, ಅಕ್ಷರಕ್ಕೆ ನೆಲ ಮತ್ತು ಶ್ರಮದ ಘಾಟು ತಟ್ಟಿದರೆ ಮಾತ್ರ ಇಂಥ ಸಂಭಾಷಣೆಗಳನ್ನು ಒಳಗೊಂಡ ಕಥೆಯೋ, ಸಿನಿಮಾವೋ, ಚಿತ್ರಕಲೆಯೋ ಹುಟ್ಟಿಕೊಳ್ಳಲು ಸಾಧ್ಯ. ಅಂಥ ನೆಲದ ಘಮಲನ್ನು ತಣ್ಣಗೆ ತೆರದಿಡುವ ಚಿತ್ರ 'ಬೆಂಕಿಪಟ್ಣ'. ಕಥೆಗಾರ ಟೆ.ಕೆ. ದಯಾನಂದ್ ಮೊದಲ ಬಾರಿಗೆ ಈ ಚಿತ್ರದ ಮೂಲಕ ನಿರ್ದೇಶಕನಾಗುತ್ತಿದ್ದಾರೆ ಎನ್ನುವುದಕ್ಕಿಂತ ಈ ನೆಲದ ಪರಿಮಳವನ್ನೇ ಕಥೆಯಾಗಿಸಿ, ಪ್ರೇಕ್ಷಕನ ಮುಂದಿಡಲು ಕಾಯುತ್ತಿರುವ ಸಿನಿಮಾ ಸ್ಟೂಡೆಂಟು. ನಿರ್ದೇಶಕರು ಮಾತ್ರವಲ್ಲ, ಇಡೀ ತಂಡಕ್ಕೆ ಮೊದಲ ಅನುಭವ ಮತ್ತು ಹೊಸಬರ ಉತ್ಸಾಹ. ಹೀಗಾಗಿ 'ಬೆಂಕಿಪಟ್ಣ' ಚಿತ್ರ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟಿಸುತ್ತಿದೆ.
ಈಗಾಗಲೇ ಚಿತ್ರದ ಡಬ್ಬಿಂಗ್ ಮುಗಿಸಿರುವ 'ಬೆಂಕಿಪಟ್ಣ' ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿದೆ. ಚಿತ್ರದ ಪ್ರಚಾರವಿನ್ಯಾಸದಲ್ಲೂ ಹೊಸತನವನ್ನು ನೋಡಿದವರು 'ಮಾಮೂಲಿ ರನ್ ಔಟ್ ಆಫ್ ದಿ ಮಿಲ್ ಬಗೆಯ ರೆಗ್ಯುಲರ್ ಚಿತ್ರದಂತಿರದೆ ಬೇರೆ ಬಗೆಯ ಪ್ರಯತ್ನ' ಎನ್ನುತ್ತಿದ್ದಾರೆ.
'ಈ ಚಿತ್ರ ಸಂಪೂರ್ಣವಾಗಿ ಹೊಸಬಗೆಯಲ್ಲಿ ರೂಪುಗೊಂಡಿದೆ. ಇದುವರೆಗೂ ಕನ್ನಡದ ಚಿತ್ರಜಗತ್ತಿಗೆ ಪರಿಚಯವೇ ಆಗದ ಹೊಸಬಗೆಯ ಪಾತ್ರಗಳು ಮತ್ತು ಕಥಾವಸ್ತುವನ್ನು ಒಳಗೊಂಡ ಈ ಚಿತ್ರಕ್ಕೆ ಪ್ರೇಕ್ಷಕರೇ ದಾಖಲೆ ಬರೆಯುತ್ತಾರೆ' ಎಂಬುದು ಚಿತ್ರದ ಡಬ್ಬಿಂಗ್ ಮಾಡಿದವರ ರಿಪೋರ್ಟ್. ನಿರ್ದೇಶಕ ಟಿ.ಕೆ. ದಯಾನಂದರ ಕಥಾಹೆಣಿಗೆಯ ರುಚಿಕಟ್ಟು ಶೈಲಿ ಬಲ್ಲವರಿಗೆ ಇದು ಹೊಸದೇನಲ್ಲ. ಸಾಮಾನ್ಯ ಜನರ ಕತೆಯನ್ನು ಎಲ್ಲೂ ಬೋರು ಹೊಡೆಸದೆ, ಮನರಂಜನಾತ್ಮಕವಾಗಿ ದಯಾನಂದ್ ಹೇಳಿದ್ದಾರಂತೆ.
'ಚಪ್ಲಿ ಅಂಗಡೀಲಿ ಮಾತ್ರ ಚಪ್ಲಿ ಒಳಗಿರ್ತವೆ' ಎಂಬ ವಿಕ್ಷಿಪ್ತ ಉಪ ಶೀರ್ಷಿಕೆಯೇ ಇಡೀ ಚಿತ್ರದ ಕಥೆಯನ್ನು ಒಂದು ಸಾಲಿನಲ್ಲಿ ಹಿಡಿದಿಟ್ಟಿರುವ ಕೋಡ್. ಚಿತ್ರ ನೋಡಿದ ಮೇಲೆಯೇ ಅದು ಡಿಕೋಡ್ ಆಗುತ್ತದೆ. ತಿಗಣೆ ಔಷಧಿ, ಇಲಿಪಾಷಾಣ ಮಾರುವ ತಿರುಗುವ್ಯಾಪಾರಿಗಳ ಜಗತ್ತಿನೊಳಗೆ ಹೊಕ್ಕು ಬರೆದ ಈ ಚಿತ್ರದ ಕ್ಯಾಚಿ ಸಂಭಾಷಣೆಗಳು ಮೇಲ್ನೊಟಕ್ಕೆ ತಿಳಿಹಾಸ್ಯವೆನಿಸಿದರೂ ಒಳಗೆ ಆ ಜೀವಗಳ ಗಾಢ ಫಿಲಾಸಫಿಯನ್ನು ಬಿಚ್ಚಿಡುತ್ತವೆ' ಎನ್ನುತ್ತಾರೆ ದಯಾನಂದ್. ಪತ್ರಕರ್ತ ಎಸ್.ಸಿ. ದಿನೇಶ್‌ಕುಮಾರ್ ಕಾರ್ಯಕಾರಿ ನಿರ್ಮಾಪಕರಾಗುವ ಮೂಲಕ ಈ ಚಿತ್ರದ ಬೆನ್ನೆಲುಬಾಗಿ ನಿಂತಿದ್ದಾರೆ. 'ಇಂಥ ಕಥೆಗಳೂ ಕಮರ್ಷಿಯಲ್ ಆಗಿಯೂ ಗೆಲ್ಲಬೇಕಿದೆ. ಅದೇ ನಿಟ್ಟಿನಲ್ಲಿ ಚಿತ್ರವನ್ನು ಒಂದು ವರ್ಗಕ್ಕೆ ಸೀಮಿತವಾಗದಂತೆ ಎಚ್ಚರಿಕೆ ವಹಿಸಿ ಚಿತ್ರವನ್ನು ಮಾಡಿದ್ದೇವೆ. ನೆಲದ ಕಥೆ ನೆಲಕ್ಕೆ ಮಾತ್ರವಲ್ಲ, ಆ ಜನಕ್ಕೂ ತಲುಪಬೇಕು' ಎನ್ನುವ ವಿಶ್ವಾಸ ದಿನೇಶ್ ಕುಮಾರ್‌ರದ್ದು.
ಪ್ರತಾಪ್ ನಾರಾಯಣ ಹಾಗೂ ಅನುಶ್ರೀ ಚಿತ್ರದ ಜೋಡಿ. ಈ ಜೋಡಿ ನಡುವೆ ಅರುಣ್ ಸಾಗರ್ ತಮ್ಮ ಪ್ರತಿಭೆಗೆ ತಕ್ಕುನಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ನಿರ್ದೇಶಕ, ನಿರ್ಮಾಪಕ ಬಿ. ಸುರೇಶ್ ಹಾಗೂ ಪ್ರಕಾಶ್ ಬೆಳವಾಡಿ ಅವರು 'ಬೆಂಕಿಪಟ್ಣ'ದಲ್ಲಿ ಬಣ್ಣ ಹಚ್ಚುವ ಮೂಲಕ ಕಥೆಗೆ ಹೆಚ್ಚು ಕಾವು ಕೊಟ್ಟಿದ್ದಾರೆ. ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಅವರ ಧ್ವನಿ, ಜಯಂತ್ ಕಾಯ್ಕಿಣಿ ಅವರ ಸಾಹಿತ್ಯದಿಂದಲೂ ಸದ್ದು ಮಾಡಲಿರುವ ಈ ಚಿತ್ರದ ಆಡಿಯೋ ಬಿಡುಗಡೆ ಈ ತಿಂಗಳ ಕೊನೆಯಲ್ಲಿ ನೆರವೇರಲಿದೆ. ಜೂನ್ ಹೊತ್ತಿಗೆ ಚಿತ್ರ ತೆರೆಗೆ ಬರಲಿದೆ. ಅಂದಹಾಗೆ, ಇಂಥ ಅಪ್ಪಟ ಮಣ್ಣಿನ ಕಥೆಯನ್ನು ಸಿನಿಮಾ ಮಾಡುವ ಧೈರ್ಯ ಮಾಡಿದ್ದು ನಿರ್ಮಾಪಕ ಜಾಕೀರ್ ಖಾನ್. ಅವರು ಮಾಸ್ತಿ ಮೂವೀಸ್ ಬ್ಯಾನರ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
- ಆರ್. ಕೇಶವಮೂರ್ತಿ