ಸಿನಿಮಾ ಲೇಖನ

ಪ್ರೇಮ್ ದಿನ!

ಲವ್ಲಿ ಸ್ಟಾರ್, ಸ್ಟೈಲಿಷ್ ಸ್ಟಾರ್ ಹೀಗೆ ಚಿತ್ರಕ್ಕೊಂದರಂತೆ ಸ್ಟಾರ್‌ಗಿರಿ ಮುಡಿಗೇರುತ್ತಿದ್ದರೂ ಯಶಸ್ಸು ಮತ್ತು ಕೀರ್ತಿಯನ್ನು ಯಾವತ್ತೂ ...

ಲವ್ಲಿ ಸ್ಟಾರ್, ಸ್ಟೈಲಿಷ್ ಸ್ಟಾರ್ ಹೀಗೆ ಚಿತ್ರಕ್ಕೊಂದರಂತೆ ಸ್ಟಾರ್‌ಗಿರಿ ಮುಡಿಗೇರುತ್ತಿದ್ದರೂ ಯಶಸ್ಸು ಮತ್ತು ಕೀರ್ತಿಯನ್ನು ಯಾವತ್ತೂ ನೆತ್ತಿಗೇರಿಸಿಕೊಳ್ಳದೆ ತಾನು ಸಾಗಿ ಬಂದ ಹಾದಿಯನ್ನು ಮರೆಯದೆ 'ನೆನಪಿರಲಿ' ಎಂದು ಅದೇ ವಿನಮ್ರತೆ ಸ್ನೇಹಪರತೆಯನ್ನು ಉಳಿಸಿಕೊಂಡು ಬಂದಿರುವ ಕನ್ನಡದ ಸ್ಫುರದ್ರೂಪಿ ನಟ ಪ್ರೇಮ್‌ಗೆ ಇಂದು ಜನುಮದಿನದ ಸಂಭ್ರಮ. ಅವರಿಗೀಗ ಮೂವತ್ತೆಂಟು ವರ್ಷ ಅಂದರೆ ಅದು ಅವರ ದೈಹಿಕ ಕ್ಷಮತೆ ಮತ್ತು ಗ್ಲಾಮರಸ್ ಲುಕ್ಕನ್ನು ಅವಮಾನಿಸಿದಂತೆ. ಇದು ಅವರ ಇಪ್ಪತ್ತನೇ ಹುಟ್ಟುಹಬ್ಬದ ಹದಿನೆಂಟನೆಯ ವಾರ್ಷಿಕೋತ್ಸವ ಅನ್ನೋದು ಸೂಕ್ತ. ಅಲ್ಲಿಗೆ ಅವರು ಮತ್ತೆ ಯೌವ್ವನಿಗರು. ಸಿನಿಮಾ ಎಂದರೆ ಪ್ರಾಣ ಎನ್ನುವ ಪ್ರೇಮ್ ಚಿತ್ರರಂಗ ಪ್ರವೇಶ ಮಾಡಿದ್ದೇ 'ಪ್ರಾಣ' ಚಿತ್ರದ ಮೂಲಕ. ಅಂದು ಇಪ್ಪತ್ತೇಳರ ಹುಡುಗ ಈಗ ಇಪ್ಪತ್ತರ ತರುಣನಂತೆ ಕಾಣುತ್ತಿದ್ದರೆ, ಅದಕ್ಕೆ ಅವರ ಸಿನಿಮಾಪ್ರೀತಿ, ಶ್ರದ್ಧೆ, ಕ್ಷಮತೆ ಕಾರಣ. ಬರ್ತ್‌ಡೇ ಬಾಯ್‌ಗೆ ಶುಭಕೋರಿ ಮಾತಿಗೆಳೆದಾಗ ಅವರ ಸ್ನೇಹಮಯಿ ವ್ಯಕ್ತಿತ್ವ ಇನ್ನಷ್ಟು ಅನಾವರಣಗೊಂಡಿತು.

ಇದು ನಿಮ್ಮ ಎಷ್ಟನೇ ಬರ್ತ್‌ಡೇ?
ಈಗ ನಂಗೆ ಮೂವತ್ತೆಂಟು ತುಂಬಿ ಬಹುಶಃ ಮೂವತ್ತಕ್ಕೆ ಬಿತ್ತು ಅನ್ಸುತ್ತೆ!

ಇಲ್ಲ ಬಿಡಿ. ನೀವು ಸುಳ್ಳು ಹೇಳ್ತಿದೀರ. ನಿಮ್ಮ ಯೌವ್ವನ ಮುಗಿಯೋದೇ ಇಲ್ಲ ಅನಿಸ್ತಿದೆ. ದಿನೇದಿನೆ ಯಂಗ್ ಆಗ್ತಿದೀರಿ. ಏನಿದರ ರಹಸ್ಯ?

ರಹಸ್ಯ ಏನಿಲ್ಲ. ಬದುಕಿರೋ ತನಕ ಆರೋಗ್ಯವಾಗಿರಬೇಕು ಅನ್ನೋದು ನನ್ನ ಪಾಲಿಸಿ. ಅದರಲ್ಲೂ ನಟ ಅಂದಮೇಲೆ ದೇಹ ಆತನ ಆಸ್ತಿ. ಅದನ್ನು ಪ್ರೇಕ್ಷಕಪ್ರಭು ಮೆಚ್ಚೋ ಹಾಗೆ, ಪಾತ್ರ ಬಯಸೋ ಹಾಗೆ ರೆಡಿ ಮಾಡಿಟ್ಕೊಬೇಕು. ಅದಕ್ಕೇ ಇಷ್ಟೆಲ್ಲಾ ಸಾಹಸ.

ಪಾತ್ರಕ್ಕಾಗಿ, ಸಿನಿಮಾಗಾಗಿ  ಇಷ್ಟೆಲ್ಲಾ ಕಷ್ಟಪಡ್ತೀರ. ಆದರೂ ಹನ್ನೆರಡು ವರ್ಷಗಳಿಂದ ಒಂಥರಾ ಹೋರಾಟದ ಬದುಕಲ್ಲೇ ಇದೀರಿ ಅನಿಸ್ತಾ ಇಲ್ವಾ?
ಪ್ರತಿ ದಿನ, ಪ್ರತಿ ಸಿನಿಮಾ ಕೂಡ ಹೋರಾಟ ಎಂಬಂತೆಯೇ ಇರಬೇಕು ಎಂದು ನಂಬೋವ್ನು ನಾನು. ನನ್ನ ಕಷ್ಟಕ್ಕೆ ಖಂಡಿತ ಫಲ ಸಿಕ್ಕಿದೆ. ಅಸಂಖ್ಯ ಅಭಿಮಾನಿಗಳು ಸಿಕ್ಕಿದ್ದಾರೆ. ಚಿತ್ರೋದ್ಯಮದಲ್ಲಿ ಅತ್ಯುತ್ತಮ ಗೆಳೆಯರು ಸಿಕ್ಕಿದ್ದಾರೆ. ನಿರ್ಮಾಪಕರು ನನ್ನೊಂದಿಗೆ ಸಿನಿಮಾ ಮಾಡಲು ಉತ್ಸುಕರಿದ್ದಾರೆ. ಮಾಡಿರೋ ಇಪ್ಪತ್ತು ಚಿತ್ರಗಳಲ್ಲಿ ಆತ್ಮತೃಪ್ತಿ ಸಿಕ್ಕಿದೆ. ಯಶಸ್ಸೂ ಸಿಕ್ಕಿದೆ. ಅದರಲ್ಲೂ ಈ ವರ್ಷ ನನ್ನ ಪಾಲಿನ ಬೆಸ್ಟ್ ಇಯರ್. ವರ್ಷಪೂರ್ತಿ ಬ್ಯುಸಿ ಇದ್ದೇನೆ. ಇನ್ನೇನು ಬೇಕು ಅಲ್ವೇ?


ಬರೀ ಇಪ್ಪತ್ತೇ ಸಿನಿಮಾ ಆಗಿರೋದಾ? ರೀಮೇಕ್ ಮಾಡಿದ್ರೆ ಇಷ್ಟೊತ್ತಿಗೆ ಐವತ್ತು ಸಿನಿಮಾ ಆಗಿರ್ತಿತ್ತಲ್ಲ?

ನಿಜ. ತುಂಬಾ ರಿಮೇಕ್ ಕಥೆ ತಿರಸ್ಕರಿಸಿದ್ದೇನೆ. ಈಗಲೂ ನನ್ನ ಆದ್ಯತೆ ಸ್ವಮೇಕ್ ಚಿತ್ರಗಳಿಗೇನೆ. ಹಿಂದೊಮ್ಮೆ ಶಿವಣ್ಣನ ಹಾದಿಯಲ್ಲಿ ರಿಮೇಕ್ ಮಾಡೋದಿಲ್ಲ ಎಂದು ಘೋಷಿಸಿದ್ದೆ. ಅದಕ್ಕೆ ಬದ್ಧನಾಗಿಯೂ ನಡಕೊಂಡೆ. ಆದರೆ ನನಗೆ ಸಿನಿಮಾ ಬಿಟ್ರೆ ಬೇರೆ ಗೊತ್ತಿಲ್ಲ. ಅತ್ತ ಸ್ವಮೇಕೂ ಇಲ್ಲ, ಇತ್ತ ರಿಮೇಕೂ ಇಲ್ಲ ಎಂಬಂತಾದರೆ ಬದುಕು ನಡೆಯೋದು ಹೇಗೆ? ನಟನಾಗಿ ನನ್ನ ಹಸಿವು ತೀರೋದು ಹೇಗೆ? ಹಾಗಾಗಿ ಅನಿವಾರ್ಯವಾಗಿ ಮಾತು ಮುರಿದು, ಈಗ ಸಬ್ಜೆಕ್ಟ್‌ಚೆನ್ನಾಗಿದ್ರೆ ಯಾವುದಾದರೂ ಓಕೆ ಎಂದು ನಿರ್ಧರಿಸಿದ್ದೇನೆ.

ನಟ ಪ್ರೇಮ್, ನಿರ್ದೇಶಕ-ನಿರ್ಮಾಪಕ ಪ್ರೇಮ್ ಆಗುವ ಸುದ್ದಿಯೇನಾದರೂ ಇದೆಯೇ?
ಖಂಡಿತ ನಿರ್ಮಾಣದ ಯೋಜನೆ ಇದೆ. ಈ ವರ್ಷ ನಟನೆಯಲ್ಲಿ ಬ್ಯುಸಿ ಇರೋದ್ರಿಂದ ಮುಂದಿನ ವರ್ಷಕ್ಕೆ ಮುಂದೂಡಿದ್ದೇನೆ.

ಅಂದರೆ ಆರ್ಥಿಕವಾಗಿ ಅಷ್ಟು ಬಲವಾಗಿದ್ದೀರಿ ಅಂತಾಯ್ತು?
ನಿಜಕ್ಕೂ ಸುಖವಾಗಿದ್ದೇನೆ. ನಿರ್ಮಾಪಕ ಆಗೋಷ್ಟು ಹಣ ಕೈಲಿ ಇಲ್ಲದೆ ಇರಬಹುದು. ಆದರೆ ಒಂದು ಅದ್ಭುತ ಕ್ರಿಯಾಶೀಲ ಗೆಳೆಯರ ತಂಡವಿದೆ. ಚಿತ್ರರಂಗದಲ್ಲಿ ಹಿರಿಯರ ಸಹಕಾರವಿದೆ. ಇಷ್ಟಿದ್ದ ಮೇಲೆ ರಿಸ್ಕ್ ತಗೊಂಡು ನಿರ್ಮಾಪಕ ಆಗೋದು ಕಷ್ಟ ಏನಲ್ಲ. ಸಮಯ ಬಂದಾಗ ಆ ಸಂತೋಷದ ಸುದ್ದಿ ಹಂಚಿಕೊಳ್ತೀನಿ.

ದರ್ಶನ್ ವಿವಾದದ ಹೊತ್ತಲ್ಲಿ ಅವರ ಬೆಂಬಲಕ್ಕೆ ನಿಂತ್ರಿ. ದುನಿಯಾ ವಿಜಿ ಸಂಕಷ್ಟದಲ್ಲಿದ್ದಾಗ ಮಾನಸಿಕ ಬೆಂಗಾವಲಾದ್ರಿ. ಡಬ್ಬಿಂಗ್ ವಿರೋಧಿ ಚಳುವಳಿಯಲ್ಲಿ ಶಿವಣ್ಣನಿಗೆ ಸಾಥಿಯಾದಿರಿ. ಚಿತ್ರರಂಗ ಒಡೆದಿದೆ, ಸುದೀಪ್ ದರ್ಶನ್ ಒಂದು ಬಣ, ಶಿವಣ್ಣ ಒಂದು ಬಣ... ಹೀಗೆಲ್ಲ ಮಾತು ಕೇಳಿ ಬರುತ್ತಿದೆ. ನೀವು ಯಾವ ಬಣದಲ್ಲಿದ್ದೀರಿ?

ಚಿತ್ರರಂಗದಲ್ಲಿ ಒಡಕಿದೆ...ಗುಂಪುಗಾರಿಕೆ ಇದೆ ಅನ್ನೋದು ನನ್ನ ತಿಳುವಳಿಕೆ ಮಟ್ಟಿಗೆ ಶುದ್ಧಸುಳ್ಳು. ಇಲ್ಲೆಲ್ಲಾ ಜೊತೆಯಾಗಿದ್ದೇವೆ. ಯಾರೇ ತೊಂದರೆಯಲ್ಲಿದ್ದರೂ ಅವರಿಗೆ ಕೈಲಾದಷ್ಟು ಸಹಾಯ ಮಾಡುವುದು, ಮಾನಸಿಕ ಸ್ಥೈರ್ಯ ನೀಡುವುದು ನನ್ನ ಸ್ವಭಾವ. ದರ್ಶನ್ ಕುಟುಂಬ ನನ್ನನ್ನು ಮನೆಮಗನಂತೆ ನೋಡಿಕೊಂಡಿದೆ. ಅವರ ಬ್ಯಾನರ್‌ನ ಮೊದಲ ಚಿತ್ರದಲ್ಲಿ ನನಗೆ ನಾಯಕನ ಪಟ್ಟ ನೀಡಿ ಹಿಟ್ ಕೊಟ್ಟಿದೆ. ಅವರಿಗೆ ನಾನು ಸದಾ ಋಣಿ. ಅಂತೆಯೇ ಶಿವಣ್ಣ ನನ್ನನ್ನು ಸ್ವಂತ ತಮ್ಮನಂತೆ ಪ್ರೀತಿಯಿಂದ ಕಾಣುತ್ತಾರೆ. ನನಗೆ ಚಿತ್ರರಂಗ ಕುಟುಂಬದಂತೆ ಕಾಣುತ್ತದೆಯೇ ಹೊರತು ಇಲ್ಲಿ ಯಾವ ಒಡಕೂ ಕಾಣಿಸಿಲ್ಲ.

ಬರ್ತ್‌ಡೇ ದಿನ ಶೂಟಿಂಗ್ ರಜೆಯೋ? ಈ ವರ್ಷದ ಯೋಜನೆಗಳೇನು?

ಶೂಟಿಂಗ್ ಇಲ್ಲ. ಆದರೂ ಅವತ್ತು ಫ್ರೀ ಅಂತೇನಿಲ್ಲ. ಮಳೆ ಶುರುವಾಗ್ತಾ ಇದೆ ನಾಳೆಯಿಂದ. ಅತ್ತ ಮಸ್ತ್‌ಮೊಹಬ್ಬತ್ ಶೂಟಿಂಗ್ ಪ್ರಗತಿಯಲ್ಲಿದೆ. ಫೇರ್ ಅಂಡ್ ಲವ್ಲಿ ತೆರೆಗೆ ಬರೋಕೆ ಅಣಿಯಾಗಿದೆ. ಎಸ್.ವಿ.ಬಾಬು ಅವರ ಜೊತೆ ಒಂದು ಸಿನಿಮಾ ಫೈನಲ್ ಆಗ್ತಾ ಇದೆ.

ಇಷ್ಟು ಬ್ಯುಸಿ ಆದ್ರೆ ಫ್ಯಾಮಿಲಿ ಕತೆ ಏನು? ನೀವು ಚಿಕ್ಕವ್ರಾಗ್ತಾ ಇದ್ದೀರಿ. ನಿಮ್ಮ ಮಗ ದೊಡ್ದವನಾಗ್ತಾ ಇದಾನೆ. ನೆನಪಿರಲಿ!

ಹಹಹ. ಇಲ್ಲ ಅವರಿಗೆ ನನ್ನ ಟೈಮ್ ಮೀಸಲಿದ್ದೇ ಇದೆ. ಅವ್ರು ಕೂಡ ತುಂಬಾ ಡಿಮ್ಯಾಂಡಿಂಗ್ ಅಲ್ಲ. ನಾ ಸಿಕ್ಕಷ್ಟು ಹೊತ್ತು ಪೂರ್ತಿ ಖುಷಿ ಅನುಭವಿಸುತ್ತಾರೆ.

ಫಿಲ್ಮ್ ಅಲ್ದೆ ಬೇರೆ ಏನು ಮಾಡ್ತೀರಿ?
ಬೇರೆ ಏನೂ ಗೊತ್ತಿಲ್ಲ. ಪುಸ್ತಕ ಓದ್ತೀನಿ. ಅದು ಕೂಡ ಫಿಲ್ಮ್ ಥರಾನೇ ಕಣ್ಮುಂದೆ ದೃಶ್ಯ ತೆರೆದುಕೊಳ್ಳುತ್ತೆ. ಸಿನಿಮಾ ನೋಡ್ತೀನಿ. ಜಿಮ್, ಸಿನಿಮಾ ಡಿಸ್ಕಶನ್ ಅಂತ ಸಮಯ ಹೋಗೋದೇ ಗೊತ್ತಾಗೊಲ್ಲ.

ಸ್ಟಾರ್ ಆದಮೇಲೆ ಮಿಡ್ಲ್‌ಕ್ಲಾಸ್ ಲೈಫ್‌ನ ಪ್ರೇಮ್‌ರಲ್ಲಿ ಏನು ಬದಲಾವಣೆಯಾಗಿದೆ?
ನಯಾಪೈಸ ಬದಲಾವಣೆ ಇಲ್ಲ. ನಾನಿನ್ನೂ ಅದೇ ಪ್ರೇಮ್. ಅದೇ ಗೆಳೆಯರು, ಗೆಳೆಯರ ಸಂಖ್ಯೆ ಹೆಚ್ಚಾಗಿದೆಯೇ ವಿನಃ ಕಮ್ಮಿಯಂತೂ ಆಗಿಲ್ಲ. ರಸ್ತೆ ಬದಿ ತಿಂಡಿ ಇಷ್ಟ, ಸಡನ್ನಾಗಿ ಕಾಣಿಸೋ ರೋಡ್ ಸೈಡ್ ಶಾಪ್ ಶರ್ಟಿಷ್ಟ. ಮೆಜೆಸ್ಟಿಕ್ ಟಾಕೀಸ್‌ಗಳಲ್ಲಿ ಸಿನಿಮಾ ನೋಡೋದ್ ಇಷ್ಟ. ನಾನು ಬದಲಾಗೊಲ್ಲ ಬಿಡಿ. ಸ್ಟಾರ್‌ಗಿರಿ  ಎಲ್ಲ ಅಭಿಮಾನಿಗಳ ಕಣ್ಣಲ್ಲಿ ಮಾತ್ರ.

ನಿಮ್ಮ  ಸ್ಟ್ರೆಂತ್ ಏನು.. ವೀಕ್‌ನೆಸ್ ಏನು?
ತಾಳ್ಮೆ , ಸ್ನೇಹಪರತೆ, ಪಾಸಿಟಿವ್ ಥಿಂಕಿಂಗ್ ನನ್ನ ಸ್ಟ್ರೆಂತ್. ಅದನ್ನ ದುರುಪಯೋಗ ಪಡಿಸಿಕೊಳ್ಳೋಕೆ ಬಂದಾಗ ಅದೇ ನನ್ನ ವೀಕ್‌ನೆಸ್ಸಾ ಅನಿಸಿದ್ದೂ ಇದೆ.

ಪ್ರೇಮ್ ಮಳೆ ಚಿತ್ರದ ಶೂಟಿಂಗ್‌ಗೆ ಬಟ್ಟೆ ಖರೀದಿಯ ಬ್ಯುಸಿಯಲ್ಲಿದ್ದರು. ಎಂದಿನಂತೆ ಅವರ ಚಿತ್ರಗಳ ಮತ್ತು ಪಾತ್ರಗಳ ಬಗ್ಗೆ ತೋರುವ ಶ್ರದ್ಧೆ ಇದು. ಮಳೆ ಚಿತ್ರಕ್ಕಾಗಿ ಪ್ರೇಮ್ ಹೊಸ ಲುಕ್ ತಯಾರಿ ಮಾಡಿಕೊಂಡಿದ್ದಾರೆ. ತಾವೇ ಏಕಾಂಗಿಯಾಗಿ ಪಾತ್ರಕ್ಕೆ ಹೊಂದುವ ಬಟ್ಟೆಯ ತಲಾಶಿ ಮಾಡುತ್ತಿದ್ದಾರೆ. ಅದು ಪ್ರೇಮ್‌ರ ಡೆಡಿಕೇಶನ್.

-ನವೀನ್ ಸಾಗರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

Batman masks, offline maps: ನಟಿ ರಿಚಾ ಚಡ್ಡಾ ಐಡಿಯಾ ಫಾಲೋ ಮಾಡ್ತಿರುವ ಯುವಕರು; Facial recognition camera ಫುಲ್ ಕನ್‌ಫ್ಯೂಸ್, ದೆಹಲಿ ಪೊಲೀಸರು ತಬ್ಬಿಬ್ಬು..!

ಪಂಜಾಬ್: ಫೇಸ್‌ಬುಕ್ ಲೈವ್‌ನಲ್ಲಿರುವಾಗಲೇ ಮಾದಕವಸ್ತು ವಿರೋಧಿ ಹೋರಾಟಗಾರ ಪರ್ವಿಂದರ್ ಸಿಂಗ್ ಜೋತಾ ಗುಂಡೇಟಿಗೆ ಬಲಿ!

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)