‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)
ನವದೆಹಲಿ: ದೆಹಲಿಯಲ್ಲಿ ಪ್ರತಿಭಟನೆಗೆ ವಿಧಿಸಲಾದ ನಿರ್ಬಂಧಗಳು, ಭಾರೀ ಭದ್ರತಾ ವ್ಯವಸ್ಥೆ ಹಾಗೂ ನಾಯಕರ ಬಂಧನದ ನಡುವೆಯೂ ಕಾಕ್‌ರೋಚ್ ಜನತಾ ಪಾರ್ಟಿ (CJP) ತನ್ನ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಮುಖ್ಯ ಚುನಾವಣಾ ಆಯುಕ್ತರ (CEC) ರಾಜೀನಾಮೆಗೆ ಆಗ್ರಹಿಸುತ್ತಿರುವ ಪಕ್ಷ, ನಾಗರಿಕರ ಭಿನ್ನಮತ ವ್ಯಕ್ತಪಡಿಸುವ ಹಕ್ಕನ್ನು ರಕ್ಷಿಸುವ ಉದ್ದೇಶದಿಂದ ಚಳವಳಿಯನ್ನು ದೇಶಾದ್ಯಂತ ವಿಸ್ತರಿಸುವ ಸಂಕಲ್ಪ ವ್ಯಕ್ತಪಡಿಸಿದೆ.
ಪ್ರತಿಭಟನೆ ಆಯೋಜಿಸುವಲ್ಲಿನ ಸವಾಲುಗಳು, ಯುವಜನರ ಬೆಂಬಲ, ಪ್ರತಿಪಕ್ಷಗಳೊಂದಿಗಿನ ಸಮನ್ವಯ ಹಾಗೂ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಸಿಜೆಪಿಯ ಕಾನೂನು ಮುಖ್ಯಸ್ಥೆ ರತ್ನಾ ಸಿಂಗ್ ಮತ್ತು ಚಳವಳಿಯ ವಕ್ತಾರ ಮತ್ತು ನೀತಿ ನಾಯಕಿ ಮೆಹರ್ ಪಾಸ್ರಿಚಾ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಪ್ರತಿಪಕ್ಷಗಳೊಂದಿಗೆ ಸಮನ್ವಯದ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೂ ಅವರು ಉತ್ತರಿಸಿದ್ದಾರೆ. ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ.
ಪ್ರತಿಭಟನೆ ಆಯೋಜಿಸಲು ಮತ್ತು ಮುಂದಿನ ಕಾರ್ಯತಂತ್ರ ರೂಪಿಸಲು ಬೆಂಬಲಿಗರೊಂದಿಗೆ ಹಾಗೂ ನಿಮ್ಮೊಳಗೆ ಹೇಗೆ ಸಮನ್ವಯ ಸಾಧಿಸುತ್ತಿದ್ದೀರಿ?
ನಾವೆಲ್ಲರೂ ದೆಹಲಿಯಲ್ಲಿದ್ದು, ವಾಟ್ಸ್‌ಆ್ಯಪ್ ಗುಂಪುಗಳ ಮೂಲಕ ಪರಸ್ಪರ ಸಮನ್ವಯ ಸಾಧಿಸುತ್ತಿದ್ದೇವೆ. ನಮ್ಮ ಉದ್ದೇಶದ ಬಗ್ಗೆ ನಮಗೆ ಬದ್ಧತೆಯಿದೆ. ಮುಖ್ಯ ಚುನಾವಣಾ ಆಯುಕ್ತರು (CEC) ರಾಜೀನಾಮೆ ನೀಡುವವರೆಗೂ ನಮ್ಮ ಚಳವಳಿಯನ್ನು ಮುಂದುವರಿಸುತ್ತೇವೆ. ಕಳೆದ ಎರಡು ದಿನಗಳಿಂದ ನನಗೆ ಸರಿಯಾಗಿ ನಿದ್ರೆಯೇ ಆಗಿಲ್ಲ. ಅಶುತೋಷ್ ರಂಕಾ, ಸೌರವ್ ದಾಸ್ ಮತ್ತು ಅಭಿಜೀತ್ ದೀಪ್ಕೆ ಅವರು ಬಂಧನದಿಂದ ಬಿಡುಗಡೆಯಾಗಿದ್ದಾರೆ. ಈಗ ಮುಂದಿನ ನಡೆಗಳ ಬಗ್ಗೆ ಚರ್ಚಿಸುತ್ತಿದ್ದೇವೆ. ಆದರೆ, ಬಂಧನಗಳಿಂದ ನಮ್ಮ ಚಳವಳಿ ನಿಲ್ಲುವುದಿಲ್ಲ.
ಪ್ರತಿಭಟನಾ ಸ್ಥಳದ ಸುತ್ತ ಭಾರೀ ಭದ್ರತೆ ನಿಯೋಜನೆ ಮತ್ತು ಬ್ಯಾರಿಕೇಡ್‌ಗಳನ್ನು ಅಳವಡಿಸಿರುವುದನ್ನು ಹೇಗೆ ನೋಡುತ್ತೀರಿ?
ವ್ಯಾಪಕ ಭದ್ರತಾ ನಿಯೋಜನೆಯು ಜನರನ್ನು ಒಗ್ಗೂಡಿಸುವ ನಮ್ಮ ಶಕ್ತಿಯ ಬಗ್ಗೆ ಅಧಿಕಾರಿಗಳಿಗಿರುವ ಆತಂಕವನ್ನು ಪ್ರತಿಬಿಂಬಿಸುತ್ತದೆ ಎಂದು ನಾವು ಭಾವಿಸುತ್ತೇವೆ. ನಾಗರಿಕರು ತಮ್ಮ ಕಳವಳಗಳನ್ನು ವ್ಯಕ್ತಪಡಿಸಲು ಒಗ್ಗೂಡಿದಾಗ, ಅವರ ಧ್ವನಿ ಗಮನಾರ್ಹ ಪರಿಣಾಮ ಬೀರಬಲ್ಲದು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆದ ಪ್ರತಿಭಟನೆಯಂತೆ ಈ ಹೋರಾಟವೂ ದೊಡ್ಡ ಮಟ್ಟದಲ್ಲಿ ಬೆಳೆಯಬಹುದು ಎಂಬ ಭಯ ಅಧಿಕಾರಿಗಳಿಗಿದೆ. ಪ್ರತಿಭಟನೆಯನ್ನು ನಿರ್ಬಂಧಿಸಲು ಕ್ರಮ ಕೈಗೊಳ್ಳುತ್ತಿರುವುದಕ್ಕೆ ಇದೂ ಒಂದು ಕಾರಣ ಎಂದು ನಾವು ಭಾವಿಸುತ್ತೇವೆ.
ಸಿಜೆಪಿ ಮತ್ತು ಪ್ರತಿಪಕ್ಷಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ವರದಿಗಳು ಬಂದಿವೆ. ನಿಮ್ಮ ನಡುವೆ ಭಿನ್ನಾಭಿಪ್ರಾಯವಿದೆಯೇ?
ನಾವೆಲ್ಲರೂ ಒಂದೇ ಕಾರಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ, ಭಾರೀ ಪ್ರಮಾಣದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿರುವುದರಿಂದ ಪ್ರತಿಭಟನಾಕಾರರು ಶಾಂತಿಯುತವಾಗಿ ಒಂದೆಡೆ ಸೇರಿ ತಮ್ಮ ಕಳವಳಗಳನ್ನು ವ್ಯಕ್ತಪಡಿಸುವುದು ಕಷ್ಟವಾಗಿದೆ. ಜನರು ನಿಗದಿತ ಪ್ರತಿಭಟನಾ ಸ್ಥಳಕ್ಕೆ ತಲುಪಲು ಸಾಧ್ಯವಾಗದಿದ್ದಾಗ ಅಥವಾ ಅವರ ಮನೆಗಳಿಂದಲೇ ಅವರನ್ನು ಬಂಧಿಸಿದಾಗ ಎಲ್ಲರೂ ಒಟ್ಟಾಗಿ ಸೇರುವುದು ಕಷ್ಟವಾಗುತ್ತದೆ. ದೀಪ್ಕೆ, ರಂಕಾ ಮತ್ತು ದಾಸ್ ಅವರನ್ನು ದೆಹಲಿಯಲ್ಲಿ ವಿಮಾನ ಇಳಿದ ಬಳಿಕ ವಿಮಾನದೊಳಗೇ ಬಂಧಿಸಲಾಯಿತು. ಇಂತಹ ಪರಿಸ್ಥಿತಿಗಳನ್ನು ಸಮನ್ವಯದ ಕೊರತೆ ಅಥವಾ ಹೋರಾಟದ ಉದ್ದೇಶದ ಬಗ್ಗೆ ಇರುವ ಭಿನ್ನಾಭಿಪ್ರಾಯ ಎಂದು ಭಾವಿಸಬಾರದು.
ಪ್ರತಿಭಟನೆ ನಡೆಸಲು ಸಿಜೆಪಿಗೆ ಅಗತ್ಯ ಅನುಮತಿ ದೊರೆತಿರಲಿಲ್ಲ ಎನ್ನಲಾಗಿದೆ. ಹಾಗಿದ್ದರೂ ಚಳವಳಿಯನ್ನು ಏಕೆ ಮುಂದುವರಿಸುತ್ತಿದ್ದೀರಿ?
ಅನುಮತಿಯ ಪ್ರಶ್ನೆ ಏನೇ ಇರಲಿ, ನಮ್ಮನ್ನು ಬಂಧಿಸುವಾಗ ಅಧಿಕಾರಿಗಳು ಯಾವುದೇ ಅಧಿಕೃತ ಆದೇಶವನ್ನು ತೋರಿಸಲಿಲ್ಲ. ಸಂಬಂಧಿತ ಆದೇಶಗಳನ್ನು ತೋರಿಸುವಂತೆ ನಾನು ಪದೇಪದೆ ಕೇಳಿಕೊಂಡರೂ, ಯಾವುದನ್ನೂ ತೋರಿಸಲಿಲ್ಲ. ನಾಗರಿಕರಿಗೆ ತಮ್ಮ ಅಹವಾಲುಗಳನ್ನು ಶಾಂತಿಯುತವಾಗಿ ವ್ಯಕ್ತಪಡಿಸುವ ಸಾಂವಿಧಾನಿಕ ಹಕ್ಕಿದೆ. ಆ ಹಕ್ಕನ್ನು ಅನಗತ್ಯವಾಗಿ ನಿರ್ಬಂಧಿಸದೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಅಧಿಕಾರಿಗಳ ಜವಾಬ್ದಾರಿ.
ನಾವು ಸಾಕಷ್ಟು ಮುಂಚಿತವಾಗಿಯೇ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದೆವು. ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದು ನಮ್ಮ ಉದ್ದೇಶವಾಗಿತ್ತು. ಶಾಂತಿಯುತ ಪ್ರತಿಭಟನೆಯ ಮೂಲಕ ನಮ್ಮ ಕಳವಳಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರುವುದು ನಮ್ಮ ಆಶಯವಾಗಿತ್ತು.
6 ತಿಂಗಳೂ ಪೂರೈಸದ ಚಳವಳಿಯ ಹಿಂದೆ, ವಿಶೇಷವಾಗಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಒಗ್ಗೂಡಲು ಕಾರಣವೇನು?
ಈ ಜನಸಮೂಹದ ಒಗ್ಗೂಡುವಿಕೆಗೆ ಹಲವು ಕಾರಣಗಳಿವೆ. ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಜನರಲ್ಲಿ ಹೆಚ್ಚುತ್ತಿರುವ ಆಕ್ರೋಶ, ದೆಹಲಿಯಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದರ ಬಗ್ಗೆ ಇರುವ ಆತಂಕ ಹಾಗೂ ಸಾರ್ವಜನಿಕ ವಿಶ್ವಾಸ ಕುಸಿಯುತ್ತಿರುವುದು ಇವುಗಳಲ್ಲಿ ಸೇರಿವೆ. ಹಿಂದಿನ ಪ್ರತಿಭಟನೆಯಿಂದ ಸೃಷ್ಟಿಯಾದ ವೇಗವೂ ಈ ಬಾರಿ ಹೆಚ್ಚಿನ ಜನರು ಸೇರುವ ನಿರೀಕ್ಷೆಗೆ ಕಾರಣವಾಗಿದೆ.
ಆದರೆ, ಪೊಲೀಸರು ಪ್ರತಿಭಟನಾಕಾರರೊಂದಿಗೆ ಸಹಕರಿಸುತ್ತಿಲ್ಲ. ನಾಗರಿಕರು ತಮ್ಮ ಅಹವಾಲುಗಳನ್ನು ವ್ಯಕ್ತಪಡಿಸಲು ಸರ್ಕಾರ ಅವಕಾಶ ಕಲ್ಪಿಸಬೇಕು, ಅವರ ಕಳವಳಗಳನ್ನು ಗುರುತಿಸಬೇಕು ಮತ್ತು ಶಾಂತಿಯುತ ಪ್ರತಿಭಟನೆ ನಡೆಸುವ ಹಕ್ಕನ್ನು ಗೌರವಿಸಬೇಕು.
ಮುಂದಿನ ದಿನಗಳಲ್ಲಿ ಚಳವಳಿಯನ್ನು ಮುಂದುವರಿಸಲು ಸಿಜೆಪಿ ಯಾವ ಯೋಜನೆ ರೂಪಿಸಿದೆ?
ಪದೇಪದೆ ನಡೆಯುತ್ತಿರುವ ಬಂಧನಗಳು ಹಾಗೂ ದೀಪ್ಕೆ ಅವರ ವೈಯಕ್ತಿಕ ನಷ್ಟದ ಹಿನ್ನೆಲೆಯಲ್ಲಿ ಮುಂದಿನ ಹೆಜ್ಜೆಗಳ ಬಗ್ಗೆ ಇನ್ನೂ ಚರ್ಚಿಸುತ್ತಿದ್ದೇವೆ. ಈ ಸವಾಲುಗಳ ನಡುವೆಯೂ ಚಳವಳಿ ಮುಂದುವರಿದಿದೆ. ದೇಶಾದ್ಯಂತ ಹೋರಾಟವನ್ನು ವಿಸ್ತರಿಸುವ ಉದ್ದೇಶ ನಮ್ಮದಾಗಿದೆ.
ನಮ್ಮ ಸಂಕಲ್ಪ ದೃಢವಾಗಿದೆ. ನಾಗರಿಕರು ನಮ್ಮ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸವನ್ನು ಗೌರವಿಸುತ್ತಲೇ ಚಳವಳಿಯ ವೇಗವನ್ನು ಉಳಿಸಿಕೊಳ್ಳುವ ಭರವಸೆ ನಮಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates

