ಕಳೆದವರು ಕಂಡಂತೆ ಇನ್ನೇನು ಉಳ್ದಿದೆ?
ಉಳಿದವರು ಕಂಡಂತೆ ಚಿತ್ರದ ಬಿಡುಗಡೆಯ ನಂತರ ಏನೆಲ್ಲ ಬದಲಾವಣೆಗಳಾಗಿವೆ? ಚಿತ್ರದ ನಿರ್ಮಾಪಕರ ವಲಯದಲ್ಲಿ ಮೌನ ಆವರಿಸಿದ್ದರೆ ನಿರ್ದೇಶಕ ರಕ್ಷಿತ್ ಶೆಟ್ಟಿ ಹೊಸ ಉತ್ಸಾಹದಲ್ಲಿದ್ದಾರೆ. ರಕ್ಷಿತ್ ಹೊಸ ಚಿತ್ರಗಳ ತರಾತುರಿಯಲ್ಲಿದ್ದರೆ ನಿರ್ಮಾಪಕರು ತಮ್ಮ ಹೊಸ ಯೋಜನೆಗಳಿಗೆ ಎಳ್ಳುನೀರು ಬಿಡುವ ಮೂಡಿನಲ್ಲಿದ್ದಾರೆ. ಸುವಿನ್ ಸಿನಿಮಾಸ್ನಿಂದ ಬರಬೇಕಿದ್ದ ಹರೀಶ್ ನಿರ್ದೇಶನದ ಬಜಾರ್ ಚಿತ್ರಕ್ಕೆ ನಿರ್ಮಾಪಕರು ಕೊಕ್ ಕೊಟ್ಟಿದ್ದಾರೆ. ಅತ್ತ ರಕ್ಷಿತ್ 'ವಾಸ್ತುಪ್ರಕಾರ' ಕೆಲಸ ಮಾಡುತ್ತಿದ್ದರೆ ಇತ್ತ ಸುನಿ ಕೂಡ ವಾಸ್ತು ಪ್ರಕಾರ ಯೋಚನೆ ಮಾಡುತ್ತಿದ್ದಾರೆ. ಅಂದರೆ ಸಿಂಪಲ್ಲಾಗೊಂದ್ ಲವ್ಸ್ಟೋರಿಯ ಯಶಸ್ಸಿನ ಬಳಿಕ ಉಳಿದವರು ಕಂಡಂತೆ ಚಿತ್ರಕ್ಕಾಗಿ ಹೊಸ ಆಫೀಸಿಗೆ ಬಂದಿದ್ದ ಸುನಿ, ಈಗ ಯಾಕೋ ಈ ಆಫೀಸಿನ ವಾಸ್ತು ಸರಿ ಇಲ್ಲ ಎಂದು ಅದನ್ನು ಬದಲಿಸುವ ನಿರ್ಧಾರ ಮಾಡಿದ್ದಾರೆ. ಚಿತ್ರದ ಲಾಭ, ನಷ್ಟದ ಕುರಿತು ನಿರ್ಮಾಪಕರಲ್ಲೊಬ್ಬರಾದ ಸುನಿ ಅವರನ್ನು ಕೇಳಿದರೆ ಅವರ ಮಾತಿನಲ್ಲಿ 'ಹೇಳುವುದು ಏನೋ ಉಳಿದುಹೋಗಿದೆ' ಎಂಬ ಭಾವವೇ ಕಂಡರೂ ಅವರು ಬಾಯಿ ಬಿಟ್ಟು ಏನೂ ಹೇಳುತ್ತಿಲ್ಲ. ಹಾಗಿದ್ದರೆ ಉಳಿದವರು ಕಂಡಂತೆ ಚಿತ್ರ ಹಿಟ್ ಆಯ್ತಾ ಫ್ಲಾಪ್ ಆಯ್ತಾ ಎಂಬ ಪ್ರಶ್ನೆಗೆ ಉತ್ತರ ಏನು? ಚಿತ್ರ ಫ್ಲಾಪ್ ಆಯ್ತು ಎಂದು ಹೇಳಿದರೆ ಅದಕ್ಕೆ ಸಂಬಂಧಪಟ್ಟಿರದ ಕೆಲವರೂ ವಿರೋಧ ವ್ಯಕ್ತಪಡಿಸುತ್ತಾರೆ. ಹಾಗಾಗಿ, ವಸ್ತುಸ್ಥಿತಿ ಏನು ಎಂಬುದನ್ನು ಸ್ವತಃ ನಿರ್ಮಾಪಕರೇ ಹೇಳಬೇಕು. ಹಾಗಿದ್ರೆ ಬನ್ನಿ, ಉಳಿದವರು ಕಂಡಂತೆ ಚಿತ್ರದ ಇನ್ನೊಬ್ಬ ನಿರ್ಮಾಪಕರಾದ ಹೇಮಂತ್ ಅವರು ನಮ್ ಜೊತೆ ಇದಾರೆ, ಈ ಬಗ್ಗೆ ಅವರನ್ನೇ ಕೇಳೋಣ.
ಹೇಮಂತ್ ಅವರೇ, ಉಳಿದವರು ಕಂಡಂತೆ ಸಿನಿಮಾ ನಿರ್ಮಾಣ ಮಾಡಿದ್ರಿ, ಈಗ ಹೇಗನ್ನಿಸ್ತಿದೆ ನಿಮ್ಗೆ?
ಅನ್ನಿಸೋದೇನು ಬಂತು. ಇನ್ನೂ ಉಳಿದುಕೊಂಡಿದೀವಲ್ಲ, ಅದೇ ಸಮಾಧಾನ.
ಹೀಗಂದ್ರೆ ಹೆಂಗೆ? ಸಿನಿಮಾ ಫ್ಲಾಪ್ ಆಗಿಲ್ಲ ಅಂತಿದಾರೆ ಕೆಲವ್ರು..ಅದೇನೋ ಕ್ಲಾಸ್ ಆಡಿಯೆನ್ಸ್ಗೆ ಸಿನಿಮಾ ಇಷ್ಟ ಆಗಿದೆಯಂತೆ? ಅರ್ಧ ದುಡ್ಡು ವಾಪಸ್ ಬಂದಿದೆ ಅಂತ ರಕ್ಷಿತ್ ಶೆಟ್ಟಿ ಕೂಡ ಹೇಳಿದ್ದಾರೆ.
ಅದು ಅವರವರು ಕಂಡಂತೆ. ಆದರೆ, ಒಂದು ಸಿನಿಮಾ ಹಿಟ್ ಅಥವಾ ಫ್ಲಾಪ್ ಅಂತ ಹೇಳಬೇಕಾದವರು ಸಿನಿಮಾ ನಿರ್ದೇಶಕರೂ ಅಲ್ಲ, ನೀವು ಪತ್ರಕರ್ತರೂ ಅಲ್ಲ, ಯಾವ ಕ್ಲಾಸ್ ಆಡಿಯೆನ್ಸೂ ಅಲ್ಲ. ನಾವು ನಿರ್ಮಾಪಕರು ಹೇಳಬೇಕು ಅದನ್ನ. ಈ ಸಿನಿಮಾದಿಂದ ನಾವು ಸರಿಯಾಗಿ ಹೊಡೆತ ತಿಂದಿದೀವಿ. ನನ್ನಂಥ ಹೊಸ ನಿರ್ಮಾಪಕರಿಗೊಂದು ಮಾತು ಹೇಳ್ತೀನಿ. ಹೊಸಬರನ್ನಿಟ್ಟುಕೊಂಡು ಸಿನಿಮಾಗೆ ಬೇಕಾಬಿಟ್ಟಿ ದುಡ್ಡು ಹಾಕುವ ಮುನ್ನ ಯೋಚನೆ ಮಾಡಿ. ಹೊಸಬರ ಸಿನಿಮಾಕ್ಕೆ ಹೆಚ್ಚೆಂದರೆ 1 ಕೋಟಿ ಬಜೆಟ್ ಮೀರಬಾರದು ಎಂಬ ಪಾಠ ನಾನಂತೂ ಕಲಿತುಕೊಂಡಿದ್ದೇನೆ. ಸುಮ್ನೆ ಫೇಸ್ಬುಕ್ನಲ್ಲಿ ನಾಲ್ಕು ಜನ ಸ್ನೇಹಿತರು, ಹಿತೈಷಿಗಳು ಸಿನಿಮಾ ಸೂಪರ್ ಅಂದ್ಬಿಟ್ರೆ ಆಗಲ್ಲ. ಜನ ಸಿನಿಮಾ ನೋಡಬೇಕು.
ಉಳಿದವರು ಕಂಡಂತೆ ಗಳಿಸಿದ್ದೆಷ್ಟು?
ಎಲ್ಲಿ ಗಳಿಕೆ ಸ್ವಾಮಿ? ಚಿತ್ರದ ಮೊದಲ ವಾರದ ಶೇರು 80 ಲಕ್ಷ. ಅದನ್ನು ಬಿಡುಗಡೆಗೆ ಖರ್ಚು ಮಾಡಿದ ವಿತರಕರಿಗೆ ಕೊಟ್ಟಿದ್ದೇನೆ. ಇದರ ಜೊತೆ ಅವರಿಗೆ ಇನ್ನೂ 20 ಲಕ್ಷ ಬಾಕಿ ಕೊಡಬೇಕಿದೆ. ಎರಡನೇ ವಾರದಿಂದ ನಷ್ಟವೇ ಆಗುತ್ತಿದೆ. ಇನ್ನು ಟಿವಿ ರೈಟ್ಸ್ ತಗೊಳ್ಳಿ ಅಂತ ಛಾನೆಲ್ಗಳ ಬಾಗಿಲಿಗೆ ಹೋಗಿ ಮುಖದ ಮೇಲೆ ಹೊಡೆದಂತೆ 'ಬೇಡ' ಎನ್ನಿಸಿಕೊಂಡು ಬಂದಿದ್ದೇವೆ. ಯಾವ ಚಾನೆಲ್ನವರು ಕೇಳಿದರೂ ವರ್ಕ್ ಔಟ್ ಆಗಲ್ಲ ಅಂತನೇ ಹೇಳ್ತಿದಾರೆ. ಚಿತ್ರಕ್ಕೆ ಹಾಕಿದ 3 ಕೋಟಿ 75 ಲಕ್ಷ ಬಜೆಟ್ನಲ್ಲಿ ಕನಿಷ್ಟ ಅಂದ್ರೂ 3 ಕೋಟಿ ನಮ್ಮ ಕೈ ಬಿಡುತ್ತಿದೆ. ಇದು, ಸಾಲ ತಂದ ದುಡ್ಡಿಗೆ ಕಟ್ಟಬೇಕಾದ ಬಡ್ಡಿಯನ್ನು ಬಿಟ್ಟು ಹೇಳ್ತಾ ಇರೋ ಅಮೌಂಟ್. ಇಷ್ಟೇ ನೋಡಿ, ಉಳಿದವರು ಕಂಡಂತೆ ಚಿತ್ರಕ್ಕೆ ಸಿಕ್ಕ 'ಕ್ರೆಡಿಟ್'.
ಯಾವ ಧೈರ್ಯದ ಮೇಲೆ ಈ ಸಿನಿಮಾಕ್ಕೆ ಅಷ್ಟೊಂದು ಬಜೆಟ್ ಹಾಕಿದ್ರಿ?
ರಕ್ಷಿತ್ ಅವರನ್ನ ಸಂಪೂರ್ಣ ನಂಬಿಬಿಟ್ಟೆವು. ಕೆಲವು ಕಡೆ ಇದೆಲ್ಲ ಅನವಶ್ಯಕ ಖರ್ಚು ಅನಿಸಿದರೂ ಸಿನಿಮಾ ಬಗ್ಗೆ ಇರುವ ಅಭಿರುಚಿಯಿಂದಾಗಿ ಸಿನಿಮಾ ಚೆನ್ನಾಗಿ ಬರಲಿ ಅಂತ ಹಣ ಹಾಕಿದೆವು. ಸಿನಿಮಾ ಮಾಡುವಾಗ ರಕ್ಷಿತ್ ಇದೊಂದು ಅದ್ಭುತ ಚಿತ್ರ ಆಗುತ್ತದೆ ಎಂದು ನಮ್ಮನ್ನು ನಂಬಿಸಿದರು. ಹಾಗಾಗಿ ಹಣ ಹಾಕಿದೆವು.
ಉದಾಹರಣೆಗೆ ಹೇಳಬೇಕೆಂದರೆ, ಬರೀ ಸೌಂಡ್ಗಾಗಿಯೇ ಅನವಶ್ಯಕ ಖರ್ಚಾಯ್ತು. ಆದರೆ ಬಿಡುಗಡೆಯಾದ ಮೇಲೆ ಸಿನಿಮಾ ಸೌಂಡ್ ಮಾಡುತ್ತೆ ಅನ್ನೋ ನಂಬಿಕೆಯಿಂದ ಸುಮ್ಮನಿದ್ವಿ.
ಅದಕ್ಕೆ ಸಿಕ್ಕ ಪ್ರತಿಫಲ?
ಸರಿಯಾಗೇ ಸಿಕ್ತು ಬಿಡಿ. ಈ ಕಡೆ ಜನಕ್ಕೂ ಇಷ್ಟ ಆಗಲಿಲ್ಲ. ಆ ಕಡೆ, ಫಸ್ಟ್ ಕಾಪಿ ನೋಡಿದಾಗಲೇ ನಮ್ಮ ತಂಡದ ಯಾರಿಗೂ ಸಿನಿಮಾ ಇಷ್ಟ ಆಗಿರಲಿಲ್ಲ. ಅವತ್ತೇ ನಮಗೆ ಮೊದಲು ಭಯ ಆಗಿದ್ದು. ಅವತ್ತು 2 ಗಂಟೆ 55 ನಿಮಿಷ ಇದ್ದ ಸಿನಿಮಾ ನೋಡಿ 'ಸಿನಿಮಾ ಚೆನ್ನಾಗಿಲ್ಲ ಸರ್' ಅಂದಿದ್ದಕ್ಕೆ 'ನಾನು ನಿಮ್ಮಂಥವರಿಗಲ್ಲ ಈ ಸಿನಿಮಾ ಮಾಡಿರೋದು' ಎಂದುಬಿಟ್ಟರು ರಕ್ಷಿತ್. ನಿರ್ಮಾಪಕನಿಗೆ ಅದಕ್ಕಿಂತ ಬಹುಮಾನ ಬೇಕೆ? ಒಂದು ಮಾತು ಹೇಳ್ತೀನಿ. ನಾನು ಕಮರ್ಷಿಯಲ್ ಆಗಿ ಯೋಚನೆ ಮಾಡುವವನು. ನಾನು ಅಪ್ಪು ಅಭಿಮಾನಿ. ಒಂದು ದಿನ ಅಪ್ಪು ಅವರ ಚಿತ್ರ ನಿರ್ಮಾಣ ಮಾಡುವ ಕನಸು ಹೊತ್ತಿದ್ದೇನೆ. ಆದರೆ ನನಗೆ ಅಭಿರುಚಿ ಇಲ್ಲದೇ ಇದ್ದಿದ್ದರೆ ಉಳಿದವರು ಕಂಡಂತೆ ರೀತಿಯ ಪ್ರಯೋಗಾತ್ಮಕ ಚಿತ್ರಕ್ಕೆ ಹಣ ಹಾಕುತ್ತಿದ್ದೆನೇ? ಅವರ ಮೊದಲ ನಿರ್ದೇಶನದ ಚಿತ್ರಕ್ಕೆ ಬಂಡವಾಳ ಹಾಕಿದ ನಿರ್ಮಾಪಕರಿಗೆ ರಕ್ಷಿತ್ ಕೊಟ್ಟ ಬಹುಮಾನ ಇದು. ಅದನ್ನು ನಾನು ಎಂದಿಗೂ ಮರೆಯುವುದಿಲ್ಲ. ಅದು ಸಾಲದು ಎಂಬಂತೆ ಸಿನಿಮಾ ಬಿಡುಗಡೆ ಆದಮೇಲೆ ಆ ಮನುಷ್ಯ ನಮ್ಮ ಕಡೆ ತಿರುಗಿ ನೋಡಿಲ್ಲ. ನಮ್ಮನ್ನು ಒಮ್ಮೆಯೂ ಭೇಟಿ ಮಾಡಿಲ್ಲ. ಸುಖಾಸುಮ್ನೆ ಅಲ್ಲಿ, ಇಲ್ಲಿ ನಮ್ಮ ಸಿನಿಮಾ ಸೂಪರ್ ಅಂತ ಅವರವರೇ ಬಹುಪರಾಕ್ ಹಾಕಿಕೊಳ್ಳುತ್ತಿದ್ದಾರೆ.
ಹಾಗಾದ್ರೆ ಮುಂದೆ ಸಿನಿಮಾ ಮಾಡಲ್ವಾ?
ಖಂಡಿತಾ ಮಾಡ್ತೀವಿ. ಯಾಕಂದ್ರೆ, ನನಗೆ ವ್ಯವಹಾರದಲ್ಲಿ ನಿಯತ್ತಿದೆ. ಬಿಡುಗಡೆಗೆ ಮುನ್ನ ಉಳಿದವರು ಕಂಡಂತೆ ಸಿನಿಮಾದ ಫಸ್ಟ್ ಕಾಪಿ ನೋಡಿದ ಮೇಲೆ ಈ ಚಿತ್ರದ ಹಣೆಬರಹ ಇಷ್ಟೇ ಅಂತ ಗೊತ್ತಾಯ್ತು. ಆದರೂ ಎಷ್ಟೋ ಜನ ವಿತರಕರು, ಚಿತ್ರಮಂದಿರಗಳ ಮಾಲೀಕರು ಕೈಯಲ್ಲಿ ಕ್ಯಾಷ್ ಹಿಡಕೊಂಡು ಸಿನಿಮಾ ತಗೊಳ್ಳೋಕೆ ಬಂದಿದ್ರು. ಮನಸ್ಸು ಮಾಡಿದ್ದರೆ ಅವರಿಗೆ ನಮ್ಮ ಸಿನಿಮಾ ಕೊಟ್ಟು ನಾವು ಸೇಫ್ ಆಗಬಹುದಿತ್ತು. ಆದರೆ ನಮ್ಮ ಸಿನಿಮಾ ಚೆನ್ನಾಗಿಲ್ಲ ಅಂತ ನಮಗೆ ಗೊತ್ತಿತ್ತಲ್ಲ. ನಾವು ಕಷ್ಟ ಅನುಭವಿಸೋಣ ಆದರೆ ಗೊತ್ತಿದ್ದೂ ಗೊತ್ತಿದ್ದು ನಮ್ಮಿಂದ ಇನ್ನೊಬ್ಬರು ಕಷ್ಟಪಡೋದು ಬೇಡ ಅಂತ ಯಾರಿಗೂ ಕೊಡಲಿಲ್ಲ. ಹಾಗಾಗಿ, ನಮ್ಮ ನಿಯತ್ತಿಗೆ ಬೆಲೆ ಸಿಗುತ್ತೆ ಅಂತ ನಂಬಿದ್ದೇನೆ.
ಮತ್ತೆ ರಕ್ಷಿತ್ ಶೆಟ್ಟಿ ಜೊತೆ ಸಿನಿಮಾ ಮಾಡೋ ಯೋಚನೆ ಇದೆಯಾ?
ಯಾವ ಕಾರಣಕ್ಕೂ ಇಲ್ಲ.
ಈ ಚಿತ್ರದ ಸೋಲಿನಿಂದ ನಿಮಗೆಷ್ಟು ತೊಂದರೆಯಾಗಿದೆ?
ಆರ್ಥಿಕವಾಗಿ ಅಷ್ಟೇ ಅಲ್ಲದೆ, ಮಾನಸಿಕವಾಗಿ ಕೊಂಚ ಕುಗ್ಗಿದ್ದೇವೆ. ನಮ್ಮದೇ ತಂಡದ ಹೊಸ ಹುಡುಗ ಹರೀಶ್ ಅವರ ನಿರ್ದೇಶನದಲ್ಲಿ 'ಬಜಾರ್' ಚಿತ್ರ ಮಾಡುತ್ತೇನೆ ಎಂದು ಪ್ರಾಮಿಸ್ ಮಾಡಿದ್ದೆ. ಈಗ ಆ ಪ್ರಾಜೆಕ್ಟ್ ಕೈಬಿಟ್ಟಿದ್ದೇವೆ. ಮುಂದೆ ಮಾಡುವ ಸಿನಿಮಾಗಳ ಬಗ್ಗೆಗೂ ಆತಂಕ ಇದೆ. ಸಿಂಪಲ್ಲಾಗೊಂದ್ ಲವ್ಸ್ಟೋರಿ ನಮಗೆ ಎಷ್ಟು ಚೈತನ್ಯ ಕೊಟ್ಟಿತ್ತೋ, ಅದನ್ನೆಲ್ಲಾ ಉಳಿದವರು ಕಂಡಂತೆ ಕಿತ್ತುಕೊಂಡಿದೆ.
-ಹರಿ