ತಮ್ಮ ಚಿತ್ರಗಳಿಗೆ ಶೀರ್ಷಿಕೆಗಳನ್ನು ಭಿನ್ನವಾಗಿಟ್ಟುಕೊಂಡು ಗಾಂಧಿನಗರಕ್ಕೆ ಬಂದು ಗಮನ ಸೆಳೆಯುವ ನಿರ್ದೇಶಕರು ಸಾಕಷ್ಟು ಮಂದಿ ಇದ್ದಾರೆ. ಇಲ್ಲೊಬ್ಬ ಯುವ ನಿರ್ದೇಶಕ ಶೀರ್ಷಿಕೆ ಮಾತ್ರವಲ್ಲ, ಅದರ ಅರ್ಥವನ್ನೂ ಮಾತ್ರ ಹೊಸ ರೀತಿಯಲ್ಲಿ ಹೇಳುವುದಕ್ಕೆ ಹೊರಟಿದ್ದಾನೆ. ಅಂದಹಾಗೆ ಚಿತ್ರದ ಹೆಸರು '143'. ಕನ್ನಡದ ಅಂಕಿಗಳನ್ನೇ ಬಳಸಿಕೊಂಡ ಚಿತ್ರದ ನಿರ್ದೇಶಕ ಚಂದ್ರಕಾಂತ್. ಚಿತ್ರಕ್ಕೆ ನಿರ್ದೇಶನ, ನಿರ್ಮಾಣ, ನಾಯಕ ಈತನೇ. 'ಕಥನ, ಚಿತ್ರಕಥನ, ದಿಗ್ದರ್ಶನ, ಕವನ, ಸಂಭಾಷಣೆ, ನಿರ್ಮಾಣ' ಹೀಗೆ ಉದ್ದದ ಡೆಸಿಗ್ನೇಷನ್ ತಮ್ಮ ಹೆಸರಿಗೆ ಇಟ್ಟುಕೊಂಡಿರುವ ಚಂದ್ರಕಾಂತ್ರಿಗೆ ಇದು ಮೊದಲ ಸಿನಿಮಾ. ಸಾಮಾನ್ಯವಾಗಿ '143' ಎನ್ನುವುದು ಹುಡುಗ, ಹುಡುಗಿಯರ ಲವ್ ಕೋಡ್. ಆದರೆ, ಚಿತ್ರದಲ್ಲಿ ಈ 143ಗೆ ಬೇರೆಯದ್ದೇ ಅರ್ಥವಿದೆ ಎನ್ನುತ್ತಾರೆ ಚಿತ್ರದುರ್ಗದ ಚಂದ್ರಕಾಂತ್. ಇದರ ಮತ್ತೊಂದು ವಿಶೇಷ ಅಂದರೆ, ಚಿತ್ರದಲ್ಲಿರುವುದು ಎರಡೇ ಪಾತ್ರಗಳು. ನಾಯಕ ಮತ್ತು ನಾಯಕಿ.
ಇತ್ತೀಚೆಗೆ ಈ ಚಿತ್ರದ ಆಡಿಯೋ ಬಿಡುಗಡೆ ನಡೆಯಿತು. ನಿರ್ದೇಶಕ ಟಿ.ಎಸ್.ನಾಗಾಭರಣ, ಸಂಗೀತ ನಿರ್ದೇಶಕ ವಿ. ಮನೋಹರ್ ಚಿತ್ರತಂಡಕ್ಕೆ ಶುಭ ಕೋರಲು ಆಗಮಿಸಿದ್ದರು. 'ಕನ್ನಡದಲ್ಲೇ ಅಂಕಿಗಳನ್ನು ಬಳಸಿಕೊಂಡು ಮೊದಲ ಬಾರಿಗೆ ಶೀರ್ಷಿಕೆ ಮಾಡಿರುವುದು ನಮ್ಮ ಚಿತ್ರದ ಹೆಗ್ಗಳಿಕೆ. ಒಬ್ಬ ಒಳ್ಳೆಯ ಪ್ರೇಕ್ಷಕ ಒಳ್ಳೆಯ ನಿರ್ದೇಶಕನಾಗುತ್ತಾನೆ. ಒಳ್ಳೆಯ ಸಿನಿಮಾ ಮಾಡಿದ್ದೇನೆಂಬ ನಂಬಿಕೆ ಇದೆ' ಎನ್ನುವ ಚಂದ್ರಕಾಂತ್, ಒಂದೇ ಗೋಡೌನ್ನಲ್ಲಿ ಹತ್ತಾರು ಸೆಟ್ಗಳನ್ನು ಹಾಕಿ ಚಿತ್ರೀಕರಣ ಮಾಡಿದ್ದಾರೆ. ಇಡೀ ಚಿತ್ರವನ್ನು ಒಂದೇ ಜಾಗದಲ್ಲಿ ಚಿತ್ರೀಕರಿಸುವುದು '143' ಚಿತ್ರದ ಮತ್ತೊಂದು ಭಿನ್ನತೆ. ಪಾತ್ರಗಳು ತುಂಬಾ ಸೀರಿಯಸ್ ಆಗಿರುತ್ತವೆ. ಆದರೆ, ನೋಡುವ ಪ್ರೇಕ್ಷಕನಿಗೆ ಅದು ಹ್ಯೂಮರಸ್ ಆಗಿ ಕಾಣುತ್ತದಂತೆ. ಕವಿತಾ ಚಿತ್ರದ ನಾಯಕಿ. ರಾಜಶೇಖರ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. 'ಇದು ನನಗೆ ಸವಾಲಿನ ಚಿತ್ರವಾಗಿತ್ತು. ಮೊದಲ ಚಿತ್ರವೇ ದೊಡ್ಡ ಮಟ್ಟದಲ್ಲಿ ಸವಾಲು ಒಡ್ಡಿದೆ. ಒಂದು ಸೈಟಿನಷ್ಟು ಜಾಗದಲ್ಲಿ ಸೆಟ್ ಹಾಕಿ, ಒಂದೇ ರೀತಿಯ ಜಾಗ ಅನಿಸದಂತೆ ಶೂಟಿಂಗ್ ಮಾಡುವುದು ಸುಲಭದ ಕೆಲಸವಾಗಿರಲಿಲ್ಲ. ಅದನ್ನು ಸಾಧಿಸಿದ್ದೇವೆ' ಎನ್ನುತ್ತಾರೆ ರಾಜಶೇಖರ್.
ಹೊನ್ನರಾಜ್ ಚಿತ್ರಕ್ಕೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. 144 ಸೆಕ್ಷನ್ ಜಾರಿಯಾಗಿದ್ದಾಗ ಸಿಗುವ ಹುಡುಗಿ. ಮುಂದೆ ಏನಾಗುತ್ತದೆ ಎನ್ನುವುದು ಚಿತ್ರಕಥೆ. ಇಲ್ಲಿ 143 ಎನ್ನುವುದು ಒಂಥರಾ ಲವ್ ಸೆಕ್ಷನ್ ಇದಂತೆ ಎಂಬುದು ಹೊನ್ನರಾಜ್ರ ಮಾತು. 'ಹೊಸ ರೀತಿಯ ಸಿನಿಮಾಗಳು ಎಂದಾಗ ನಾನು ಅಂಥ ಚಿತ್ರಗಳನ್ನು ಬೆಂಬಲಿಸುತ್ತೇನೆ. ಹೀಗಾಗಿ ಹೊಸ ಹುಡುಗರ ಸಿನಿಮಾ, ಏನಾದರೂ ಹೊಸತನ ಮಾಡಿರುತ್ತಾರೆಂಬ ನಂಬಿಕೆಯಲ್ಲಿ ಚಿತ್ರದ ಆಡಿಯೋ ಬಿಡುಗಡೆಗೆ ಬಂದಿದ್ದೇನೆ. ಚಿತ್ರ ಗೆಲ್ಲಲಿ' ಎಂದರು ಟಿ.ಎಸ್. ನಾಗಾಭರಣ. 'ನಿರ್ದೇಶಕರ ಮಾತು ಕೇಳುತ್ತಿದ್ದರೆ ನಿಜಕ್ಕೂ ಇದು ವಿಭಿನ್ನ ಸಿನಿಮಾ ಎನಿಸದಿರದು. ಒಂದು ಕಮರ್ಷಿಯಲ್ ಚಿತ್ರದಲ್ಲಿ ಎರಡೇ ಪಾತ್ರ ಎಂದರೆ ಒಂಚೂರು ಗಮನ ಸೆಳೆಯುತ್ತದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ' ಎಂದು ಶುಭ ಹಾರೈಸಿದರು ವಿ. ಮನೋಹರ್. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆ. ನಾದಬ್ರಹ್ಮ ಹಂಸಲೇಖ ಅವರ ಶಿಷ್ಯ ವಿನು ಮನಸು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಲಹರಿ ಆಡಿಯೋ ಕಂಪನಿ ವೇಲು ಚಿತ್ರದ ಹಾಡುಗಳನ್ನು ಮಾರುಕಟ್ಟೆ ಮಾಡಲಿದ್ದಾರೆ.
-ಕೇಶವ