ಸುಹಾಸಿನಿ ಎಸ್ ಅಂದ್ರು, ವೆಂಕಿಯೂ ಬಂದ್ರು
ನಿರ್ದೇಶಕ ಮೋಹನ್ ಸದ್ದಿಲ್ಲದೆ ಒಂದು ಚಿತ್ರ ಮಾಡಿ ಮುಕ್ಕಾಲು ಭಾಗ ಚಿತ್ರೀಕರಣ ಮುಗಿಸಿದ್ದಾರೆ ಎನ್ನುವುದು ಮಾತ್ರ ವಿಶೇಷವಲ್ಲ. ಈ ಚಿತ್ರದಲ್ಲಿ ಬಹುಭಾಷಾ ನಟಿ ಸುಹಾಸಿನಿ ಹಾಗೂ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಮುಖ್ಯ ಪಾತ್ರಧಾರಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಧಾರಾಣಿ ಪ್ರಿನ್ಸಿಪಾಲ್ ಪಾತ್ರ ಮಾಡುತ್ತಿದ್ದಾರೆ. ಚಿತ್ರದ ಹೆಸರು 'ಸಚಿನ್'. 'ತೆಂಡುಲ್ಕರ್ ಅಲ್ಲ' ಎನ್ನುವುದು ಉಪ ಶೀರ್ಷಿಕೆ. 9 ವರ್ಷಗಳ ನಂತರ ಈ ಚಿತ್ರದ ಮೂಲಕ ಬಿ.ಎನ್. ಗಂಗಾಧರ್ ನಿರ್ಮಾಣಕ್ಕೆ ಬಂದಿದ್ದಾರೆ. ಇಲ್ಲಿ ಅಬ್ನಾರ್ಮಲ್ ಹುಡುಗನಾಗಿ, ಸಚಿನ್ ಥರಾ ದೊಡ್ಡ ಕ್ರಿಕೆಟಿಗನಾಗಬೇಕೆಂದು ಕನಸು ಕಾಣುವ ಪಾತ್ರದಲ್ಲಿ ಸೌಂದರ್ಯ ಜಗದೀಶ್ ಮಗ ಮಾ. ಸ್ನೇಹಿತ್ ಅಭಿನಯಿಸುತ್ತಿದ್ದಾರೆ. ಇದು ಮಕ್ಕಳ ಚಿತ್ರ ಎನಿಸಿದರೂ ಎಲ್ಲ ವರ್ಗದ ಪ್ರೇಕ್ಷಕರೂ ನೋಡಬಹುದು ಎನ್ನುವುದು ಮೋಹನ್ ಅಭಿಪ್ರಾಯ. ವೆಂಕಟೇಶ್ ಪ್ರಸಾದ್ ಅವರಿಗೆ ಕಥೆ ಹೇಳಿದ ಮೇಲೆ, 'ಈ ಚಿತ್ರದಲ್ಲಿ ಸುಹಾಸಿನಿ ಅವರನ್ನು ಆ್ಯಕ್ಟ್ ಮಾಡಕ್ಕೆ ಹೇಳಿ. ತುಂಬಾ ಚೆನ್ನಾಗಿರುತ್ತದೆ' ಎಂದು ಸ್ವತಃ ವೆಂಕಟೇಶ್ ಪ್ರಸಾದ್ ಅವರೇ ಸುಹಾಸಿನಿ ಅವರನ್ನು ಈ ಚಿತ್ರಕ್ಕೆ ಒಪ್ಪಿಸಿದರಂತೆ. ಸುಹಾಸಿನಿ 'ಆಯಿತು ಬರುತ್ತೇನೆ' ಎಂದಾಗ ವೆಂಕಿ ಕೂಡ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರಂತೆ. ಚಿತ್ರದ ಕ್ಲೈಮ್ಯಾಕ್ಸ್ ನೋಡಿದಾಗ 'ಲಗಾನ್' ಚಿತ್ರವನ್ನು ನೋಡಿದ ಅನುಭವ ಆಗುತ್ತದೆ ಎನ್ನುವುದು ಮೋಹನ್ ಅಭಿಪ್ರಾಯ.