ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಲೇಖನ

ಅಪರೂಪದ ಅತಿಥಿ ಸುವರ್ಣ

ಸಂಗೀತ ನಿರ್ದೇಶಕ ವಿ. ಮನೋಹರ್ ಇತ್ತೀಚೆಗೆ ನಿಧನರಾದ ಛಾಯಾಗ್ರಾಹಕ ಸುಂದರ್‌ನಾಥ್ ಸುವರ್ಣ ಅವರ ನೆನಪಿನಲ್ಲಿ...

Lingaraj Badiger
Updated On : 3 Jan 2014, 12:54 pm

ಸಂಗೀತ ನಿರ್ದೇಶಕ ವಿ. ಮನೋಹರ್ ಇತ್ತೀಚೆಗೆ ನಿಧನರಾದ ಛಾಯಾಗ್ರಾಹಕ ಸುಂದರ್‌ನಾಥ್ ಸುವರ್ಣ ಅವರ ನೆನಪಿನಲ್ಲಿ ಬರೆದಿದ್ದು.

ಅಯ್ಯೋ, ಆ ಎಸಿ ಆಫ್ ಮಾಡ್ರಪ್ಪಾ, ನಂಗೆ ಅಲರ್ಜಿ ಎನ್ನುತ್ತಿದ್ದ ಸುಂದರನಾಥ ಸುವರ್ಣ ಅಂದು ಎಸಿ ಆ್ಯಂಬುಲೆನ್ಸ್‌ನಲ್ಲಿ ತಣ್ಣಗೆ ಮಲಗಿದ್ದರು. ಜಗತ್ತಿನ ಯಾವ ವಿಷಯಗಳೂ ಅವರಿಗೆ ಅಲರ್ಜಿ ಉಂಟು ಮಾಡುವ ಸಾಧ್ಯತೆಗಳು ಹೊರಟುಹೋಗಿದ್ದವು. ಸುವರ್ಣ ಕೂಡ.
ನಾನು, ಉಂಡ್ರೆ, ಊಟ ಮಾಡಿದ ಹಾಗೆ ಕಾಣಲ್ಲ, ಮಿಂದ್ರೆ ಸ್ನಾನ ಮಾಡಿದ ಹಾಗೆ ಕಾಣಲ್ಲ, ಏನ್ ಮಾಡ್ಲಯ್ಯ! ನಮ್ ಪರ್ಸನಾಲ್ಟೀನೇ ಹಾಗೆ!"

ಒಮ್ಮೆ ಶೂಟಿಂಗ್ ನೇಲೆ ಊಟ ಬಡಿಸುವ ಹುಡುಗರು ಊಟ ಮಾಡಿದ್ರಾ ಸಾರ್? ಅಂತ ಕೇಳಿದ್ದಕ್ಕೆ ಸುವರ್ಣರು ಕೊಟ್ಟ ಉತ್ತರವಿದು. ಸಾಮಾನ್ಯವಾಗಿ ಛಾಯಾಗ್ರಾಹಕರು ಜಾಸ್ತಿ ಮಾತಾಡೊಲ್ಲ ಎನ್ನುವುದು ಚಿತ್ರರಂಗದಲ್ಲಿ ಜನಜನಿತ ಮಾತು. ಸುವರ್ಣ ಕೂಡ ಬೇರೆಯವರ ಕಣ್ಣಿಗೆ ಹಾಗೆಯೇ. ಆದರೆ ಅವರನ್ನು ಹತ್ತಿರದಿಂದ ಬಲ್ಲವರಿಗೆ ಮಾತ್ರ ಅವರೆಷ್ಟು ಅದ್ಭುತವಾಗಿ ಮಾತನಾಡುತ್ತಿದ್ದರು ಎಂಬುದು ಗೊತ್ತು.

1978ರಲ್ಲಿ ನಾನು ಜನವಾಣಿ ಪತ್ರಿಕೆಯಲ್ಲಿದ್ದಾಗ ಈ ಸುಂದರನಾಥ ಸುವರ್ಣ ಎಂಬ ಹೆಸರನ್ನ ಕೇಳಿದ್ದೆ. 'ಫೀನಿಕ್ಸ್‌' ಎಂಬ ಪ್ರಯೋಗಾತ್ಮಕ ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದ ಇವರ್ಯಾರೋ ಜ್ಞಾನವೃದ್ಧರೂ, ವಯೋವೃದ್ಧರೊ ಇರಬೇಕು ಎಂದುಕೊಂಡಿದ್ದೆ. ಒಂದು ದಿನ ನನ್ನ ಗೆಳೆಯ ಯತೀಶ್ ಆಳ್ವಾ "ಇವರೇ ಸುಂದರ್‌ನಾಥ್ ಸುವರ್ಣ" ಎಂದು ಪರಿಚಯಿಸಿದಾಗ ಯತೀಶ್ ಕಿವಿಯಲ್ಲಿ ಮೆಲ್ಲನೆ ಹೇಳಿದೆ "ಈ ಹುಡುಗ ಅವರ ಹೆಸರು ಹೇಳಿಕೊಂಡು ನಿಮಗೆ ಮೋಸ ಮಾಡ್ತಿದಾನೆ ಅನ್ಸುತ್ತೆ!" ಯತೀಶ್ ಜೋರಾಗಿ ನಕ್ಕು ಸುವರ್ಣರಿಗೂ ಅವರನ್ನು ಹೇಳಿದಾಗ ನನಗೆ ಸಿಟ್ಟು, ನಾಚಿಕೆ ಉಂಟಾಯ್ತು. ನಿಧಾನವಾಗಿ ತಿಳಿದಿದ್ದು ನಾನಂದುಕೊಂಡ ಹಾಗೆ ಸುಂದರನಾಥ ಸುವರ್ಣ ಎಂದರೆ ವೃದ್ಧರಲ್ಲ, ನಮ್ಮ ಹಾಗೇ ತರುಣ ಅಂತ! ಅಲ್ಲಿಂದ ಮುಂದೆ ಸುವರ್ಣ ನನ್ನ ಆತ್ಮೀಯ 'ಅಣ್ಣ'ನಾದರು. ಪ್ರತಿದಿನವೂ ಅವರ ರೂಮಿಗೆ ಹೋಗುತ್ತಿದ್ದೆ. ಒಂದು ದಿನ ಒಂದು ಚಮಚೆಯಲ್ಲಿ ಸಕ್ಕರೆ ಹಿಡಿದು ಕುಳಿತಿದ್ದರು "ಏನಿದು ಚಮಚೆಯಲ್ಲಿ ?" ಅಂದೆ. 'ನೋಡಿ ಈ ಜೇನು ನೊಣದ ಕಾಲು ಕಟ್ ಆಗಿದೆ - ಹಾರೋಕೆ ಆಗ್ತಿಲ್ಲ, ಸಕ್ಕರೆ ತಿನ್ತದಾ ಅಂತ ನೋಡ್ತಾ ಇದ್ದೀನಿ" ಎಂದರು. ಅದು ಸುವರ್ಣರ ಜೇನಿನಂಥ ಮನಸ್ಸು.
ಸುಮಾರು 1968 ರ ಸಮಯದಲ್ಲಿ ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ಸುವರ್ಣ ಗಾಂಧಿ ಬಡಾರಲ್ಲಿ ಒಂದು ಸಣ್ಣ ಕೊಠಡಿಯಲ್ಲಿ ವಾಸವಿದ್ದರು.

ಬೆಳಿಗ್ಗೆ ಐದು ಐದೂವರೆಗೆ ಎದ್ದು ಗಾಂಧಿ ಬಜಾರ್ ಮುಖ್ಯರಸ್ತೆಯಲ್ಲೇ ಇದ್ದ ಕೊಳಾಯಿಯಲ್ಲಿ ಸ್ನಾನ, ಗಡಗಡ ನಡುಗುತ್ತಾ ! ಯಾವುದೋ ಒಂದು ಸ್ಟುಡಿಯೋದಲ್ಲಿ ಕೆಮರಾಮನ್ ಸಹಾಯಕನಾಗಿ ಜೀವನ ನಿರ್ವಹಣೆ.

ಬೆಂಗಳೂರಿಗೆ ಬರುವ ಮುನ್ನ ಮಂಗಳೂರಲ್ಲೇ ಕಲಾಮಂದಿರ ಎಂಬ ಸ್ಟುಡಿಯೋದಲ್ಲಿ ಸೀನಣ್ಣ ಎಂಬವರಿಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು, ಸೀನಣ್ಣ ಇಲ್ಲದಾಗ ಅವರ ಕೆಮರಾದಲ್ಲಿ ಹಾರಾಡುವ ಹಕ್ಕಿಗಳ, ಹಸುಗಳ, ಪುಟಾಣಿಗಳ ಫೋಟೋವನ್ನು ಅವರಿಗೆ ಗೊತ್ತಿಲ್ಲದಂತೆ ತೆಗೆಯಲು ಹೋಗಿ ಬೈಸಿಕೊಂಡಿದ್ದರಂತೆ. ಆದರೆ ಆ ಹದಿನಾಲ್ಕು ವರ್ಷದ ಬಾಲಕ ಸುವರ್ಣ ತೆಗೆದ ಫೋಟೋ ನೋಡಿ ಸೀನಣ್ಣ ಸಂತುಷ್ಟರಾಗಿ ಈ ಬಾಲಕನನ್ನು ಇನ್ನೂ ಚೆನ್ನಾಗಿ ಹೇಳಿಕೊಟ್ಟು ತಯಾರು ಮಾಡಿದರಂತೆ.

ಸುವರ್ಣರು ತೆಗೆದ ಕೆಲವು ಸುಂದರ ಫೋಟೊಗಳನ್ನು ನೋಡಿ ಖ್ಯಾತ ಛಾಯಾಗ್ರಾಹಕರಾದ ಶ್ರೀಕಾಂತ್‌ರವರು ತನ್ನ ಸಹಾಯಕನಾಗಿ ಸುವರ್ಣರನ್ನು ಸೇರಿಸಿಕೊಂಡರು. ಅಲ್ಲಿಂದ ಮುಂದೆ ಕನ್ನಡ ಚಿತ್ರಗಳ ಅವಿಭಾಜ್ಯ ಅಂಗವಾಗಿ ಹೋದ ಸುವರ್ಣ, ಬಿಡುವಿನ ವೇಳೆಯಲ್ಲಿ ಕಾಟನ್ ಪೇಟೆಯಲ್ಲಿದ್ದ ಚಿತ್ರ ಸ್ಟುಡಿಯೊದಲ್ಲಿ ಸ್ಥಿರ ಛಾಯಾಗ್ರಾಹಕನಾಗಿಯೂ ದುಡಿಯುತ್ತಿದ್ದರು.
ಇಂಥಾ ಸಮಯದಲ್ಲಿ ಈಗ ಖ್ಯಾತ ನಿರ್ದೇಶಕರಾಗಿರುವ ರಾಮ್‌ದಾಸ್ ನಾಯ್ಡು ಅವರ ಮೂಲಕ ನಿರ್ದೇಶಕ ಕಾಶಿನಾಥ್‌ರ ಪರಿಚವಾಯ್ತು. ಈ ಹುಡುಗರೇ ಸೇರಿಕೊಂಡು ಮಾಡಿದಂಥ ಚಿತ್ರ "ಅಪರೂಪದ ಅತಿಥಿಗಳು". ನಂತರ ಮೈದಾನ, ನಮ್ಮೂರ ಬಸವಿ, ಫೀನಿಕ್ಸ್ ಹೀಗೆ ಸಾಲು ಸಾಲಾಗಿ ಸಿನಿಮಾಗಳು ಸುವರ್ಣರ ಪಾಲಿಗೆ ಬಂದವು. ಆ ಕಾಲದಲ್ಲಿ ಕಲಾತ್ಮಕ ಚಿತ್ರಗಳೆಂದರೆ ಎಸ್. ರಾಮಚಂದ್ರರ ಛಾಯಾಗ್ರಹಣ, ನಂತರದ ಹೆಸರೇ ಸುಂದರನಾಥ ಸುವರ್ಣ! ಮೂರನೇ ಹೆಸರು ಬಿಸಿ. ಗೌರಿಶಂಕರ್... ಈ ಮೂವರ ನಡುವೆಯೇ ಪೈಪೋಟಿ ಇದ್ದದ್ದು.

ಮುಂದೆ ಡಾ. ಚಂದ್ರಶೇಖರ ಕಂಬಾರ್‌ರ ಕರಿಮಾಯಿ ಚಿತ್ರಕ್ಕೆ ಸುವರ್ಣ ಛಾಯಾಗ್ರಾಹಕರಾದರು. ಅಲ್ಲಿಂದ ನಂತರ ಕವಿಗಳ ಒಡನಾಟ, ಸಾಹಿತ್ಯ ಪ್ರೇಮ ಶುರವಾಯ್ತು. ಕಂಬಾರರು, ಬರಗೂರು ರಾಮಚಂದ್ರಪ್ಪ, ಯು.ಆರ್. ಅನಂತಮೂರ್ತಿ, ಎಸ್.ಎಲ್. ಭೈರಪ್ಪ, ಕೆ.ಎಸ್. ನರಸಿಂಹಸ್ವಾಮಿ, ಸಿದ್ಧಲಿಂಗಯ್ಯ- ಹೀಗೆ ಎಲ್ಲಾ ಸಾಹಿತಿಗಳ ಕೃತಿ ಓದುವ ಹವ್ಯಾವೇ ಅಲ್ಲದೇ ಆ ಕೃತಿಗಳಷ್ಟೂ ಅವರ ನೆನಪಲ್ಲೂ ಉಳಿದಿದ್ದವು! ಗೆಳೆಯರ ಜತೆ ಇವನ್ನೆಲ್ಲ ಹಂಚಿಕೊಳ್ಳದೆ ಹೋದರೆ ಸುವರ್ಣರಿಗೆ ನಿದ್ರೆ ಬರುತ್ತಿರಲಿಲ್ಲ. ಮುಂದೆ ಪೂರ್ಣಚಂದ್ರ ತೇಜಸ್ವಿಯವರ ಪ್ರಾಣಿ ಪಕ್ಷಿಗಳ ಲೇಖನ ಓದುತ್ತಾ ಅವರ ಅಭಿಮಾನಿಯೂ ಆದರು.

ತನ್ನ ಸಣ್ಣ, ಸಪೂರ, ಹಗುರ ದೇಹದಿಂದಾಗಿ ಸುವರ್ಣ ಸದಾ ಚುರುಕಾಗಿದ್ದರು. ಮುಂಗಾರುಮಳೆ ಚಿತ್ರದಲ್ಲಿ ಜಿಮ್ಮಿ ಜಿಬ್ ಕೆಮರಾ ಉಪಯೋಗಿಸಿ ಜೋಗ ಜಲಪಾತದ ಬುಡದವರೆಗೂ ಆ ಚಿತ್ರದ ಛಾಯಾಗ್ರಾಹಕ ಕೃಷ್ಣ ತೋರಿಸಿದ್ದನ್ನು ನಾವೆಲ್ಲ ವಿಸ್ಮಯದಿಂದ ನೋಡಿದ್ದೇವೆ. ಆದರೆ ಸುವರ್ಣರವರು 1983ರಲ್ಲೇ "ಸಿಕ್ಕು" ಎಂಬ ಚಿತ್ರಕ್ಕಾಗಿ ಜೋಗದ ಆಳಕ್ಕೆ ತನ್ನ ಸೊಂಟಕ್ಕೆ ಹಗ್ಗ ಕಟ್ಟಿಸಿಕೊಂಡು ಇಳಿದು ಸುಂದರವಾಗಿ ಸೆರೆ ಹಿಡಿದಿದ್ದರು. ಅವರಿಗೆ ತಮ್ಮ ದೇಹವೇ ಜಿಮ್ಮಿ ಜಿಬ್. ಟೈಗರ್ ಪ್ರಭಾಕರ್ ಚಿತ್ರಗಳಲ್ಲಿ ಕಾರ್ ಚೇಸಿಂಗ್ ದೃಶ್ಯವಿದ್ದರಂತೂ ಸುವರ್ಣರ ಎಡಗಾಲು ಮಾತ್ರ ಸೀಟಲ್ಲಿ-ದೇಹದ ಮುಕ್ಕಾಲು ಭಾಗ ಜೀಪಿನ ಹೊರಗೆ ತೂಗಾಡುತ್ತಿತ್ತು. ಕೈಯಲ್ಲಿ ಕೆಮರಾ ಇಟ್ಕೊಂಡು, ಜೀಪಿನ ಟೈರ್ ರಸ್ತೆಯಲ್ಲಿ ಉರುಳುವ ದೃಶ್ಯವನ್ನು ಏಕಾಗ್ರತೆಯಿಂದ ಪ್ರಾಣ ಒತ್ತೆ ಇಟ್ಟು ಚಿತ್ರೀಕರಿಸಿ ಕೊಡುತ್ತಿದ್ದ ಸುವರ್ಣ ಸಂಭಾವನೆಗಾಗಿ ಎಂದೂ ಹಾತೊರೆದವರಲ್ಲ. ಆರಂಭ, ಅಗ್ನಿಪರ್ವ, ನೀ ನನ್ನ ದೈವ, ಕಿಲಾಡಿ ತಾತ, ಟೈಗರ್ ಗಂಗು ಚಿತ್ರಗಳನ್ನು ನಿರ್ದೇಶಿಸಿದ ಸುವರ್ಣ ಎಂದಿಗೂ ನಿರ್ಮಾಪಕರಿಗೆ ನೋವುಂಟು ಮಾಡಿದವರಲ್ಲ. ಅನೇಕ ನಿರ್ದೇಶಕರಿಗೆ ಮಾರ್ಗದರ್ಶನ ನೀಡಿ ತಪ್ಪುಗಳನ್ನು ತಿದ್ದಿ ಸರಿಪಡಿಸುತ್ತಿದ್ದರು. ಆ ಕಾಲದಲ್ಲಿ ಮೂರುಲಕ್ಷ ಸಂಭಾವನೆ ಮಾತಾಡಿ ನಿರ್ಮಾಪಕ ಕೈ ಮುಗಿದು ಕೇವಲ 30 ಸಾವಿರ ಇಟ್ಟಾಗ ಸುವರ್ಣ 'ಓ ನೀವು ಬರುವಾಗ ಒಂದು ಸೊನ್ನೆ ಎಲ್ಲೋ ಬಿದ್ದೋಗಿರಬೇಕು' ಎಂದು ಹೇಳುತ್ತಿದ್ದರಷ್ಟೇ ವಿನಹ ಜಗಳಾಡುತ್ತಿರಲಿಲ್ಲ. ನಂತರ ಒಬ್ಬರೇ ಇದ್ದಾಗ ಸಿಗರೇಟಲ್ಲಿ ಒಂದು ವಿಷಾದದ ಹೊಗೆ ಬಿಟ್ಟು ತಕ್ಷಣ ಮರೆತು ಚುರುಕಾಗುತ್ತಿದ್ದರು.

ಮತ್ತೆ ತಾನೊಂದು ಒಳ್ಳೆಯ ಚಿತ್ರ ನಿರ್ದೇಶಿಸಬೇಕು ಎಂಬ ಕನಸು ಅವರ ಎದೆಯಲ್ಲಿ ಕಾಡುತ್ತಿತ್ತು. ತೇಜಸ್ವಿಯವರ ಕೃಷ್ಣೆಗೌಡರ ಆನೆ ಕಥೆಯನ್ನು ಸಿನಿಮಾ ಮಾಡೋದು ಅವರ ಆಕಾಂಕ್ಷೆಯಾಗಿತ್ತು. ಆದರೆ  ಛಾಯಾಗ್ರಾಹಕರ ವಲಯದಲ್ಲಿ ಹುಲಿ ಎನಿಸಿಕೊಂಡಿದ್ದ ಸುವರ್ಣರಿಗೆ ತೇಜಸ್ವಿ ಒಪ್ಪಿಗೆ ಕೊಟ್ಟರೂ ಅದು ಸಾಧ್ಯವಾಗಲಿಲ್ಲ.  ಶೂಟಿಂಗ್ ಶುರುವಾಯ್ತೆಂದರೆ ಸುವರ್ಣ ಹದಿನಾರರ ತರುಣನಾಗುತ್ತಿದ್ದರು. ಇಡೀ ಸೆಟ್ಟನ್ನು ಹುರಿದುಂಬಿಸಿ ನಗಿಸಿ ಜೀವ ತುಂಬುತ್ತಿದ್ದರು. ಇಂಥ ಸುವರ್ಣರ ಜೀವ ತೆಗೆಯಲು ಆದಾವ ದಿಕ್ಕಿಂದ ಬಂತೋ ಕ್ಯಾನ್ಸರ್! ಕೊನೆಯುಸಿರಲ್ಲೂ ಅವರಿಗೆ ಗೊತ್ತಿಲ್ಲ. ತಾನು ಕ್ಯಾನ್ಸರ್ ಪೇಷೆಂಟ್ ಆಗಿ ಬಿಟ್ಟೆ ಎಂದು. ನಮ್ಮಲ್ಲಿ ಲಂಗ್ಸ್ ಇನ್‌ಫೆಕ್ಷನ್ ಆಗಿದೆ ಎಂದು ಅವರು ಹೇಳಿದಾಗ ನಿಜ ವಿಷಯ ತಿಳಿದಿದ್ದ ನಮಗೆ ಕರುಳು ಚುರುಕ್ ಎನ್ನುತ್ತಿತ್ತು.
ಎರಡು ಸಿನಿಮಾ ತಯಾರಿಸೋಕೆ ಕತೆ ರೆಡಿ ಮಾಡಿದ್ದೀನಿ. ಒಮ್ಮೆ ಈ ಆರೋಗ್ಯ ಸರಿಯಾದ್ರೆ ಸಾಕಪ್ಪ ಎಂದು ಕ್ಯಾನ್ಸರ್ ಆಸ್ಪತ್ರೆಯ ಹಾಸಿಗೆಯಲ್ಲೇ ಅವರು ಹೇಳುತ್ತಿದ್ದರೆ ನನ್ನೊಳಗೆ ಆದ ನೋವು, ವಿಷಾದ ನನಗೆ ಗೊತ್ತಷ್ಟೇ.

ಇದೇ ಅವಧಿಯಲ್ಲಿ ಡಿಸ್‌ಚಾರ್ಜ್ ಆಗಿ ಮನೆಗೆ ಬಂದ ದಿನ ಪೂರ್ತಿ ಲವಲವಿಕೆಯಿಂದ ಯಕ್ಷಗಾನದ ಭಸ್ಮಾಸುರ ಮೋಹಿನಿ ಕಥಾ ಪ್ರಸಂಗದ ದೃಶ್ಯ ನನಗೆ ತೋರಿಸಿ ಸ್ತ್ರೀವೇಷದ ನಾಟ್ಯವನ್ನು ಅನುಕರಣೆ ಮಾಡಿದರು. ನನಗೆ ಆಶ್ಚರ್ಯವಾಯ್ತು. ಮನೆಗೆ ಬಂದ ಮೇಲೆ ಅವರ ಸೋದರ ವಿಶ್ವನಾಥ್ ಸುವರ್ಣರಲ್ಲಿ ಕೇಳಿದೆ. "ಅಣ್ಣ ಚೆನ್ನಾಗೇ ಇದ್ದಾರಲ್ಲ, ಡಾಕ್ಟರ್ ಏನಾದ್ರು ತಪ್ಪಾಗಿ ಡಯಗ್ನೈಸ್ ಮಾಡಿದಾರಾ? ಎಂದು 'ಇಲ್ಲ ಮನೋಹರ್, ಗ್ಲುಕೋಸ್ ಇಂಜೆಕ್ಷನ್ ಪ್ರಭಾವದಿಂದ ಅಷ್ಟು ಲವಲವಿಕೆಯಿಂದ ಇದ್ದಾರೆ ಅದರ ಪವರ್ 2 ದಿನ ಇರುತ್ತೆ- ನಾಳೆ ಸಂಜೆ ಅಡ್ಮಿಟ್ ಮಾಡ್ಲೇ ಬೇಕು, ಡಾಕ್ಟರ್ ಆಸೆ ಬಿಟ್ಟಿದ್ದಾರೆ' ಎಂದು ಆತ ಹೇಳಿದಾಗ ಮುಂದೊಂದು ದಿನ ನಮ್ಮ ಮುಂದೆಯೇ ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ಈ ಅಣ್ಣ ನಮ್ಮನ್ನೆಲ್ಲ ಬಿಟ್ಟು  ಹೋಗುತ್ತಾರೆಂಬುದನ್ನು ಜೀರ್ಣಿಸಿಕೊಳ್ಳಲು ಆಗಲಿಲ್ಲ. ಒಂದು ಪವಾಡ ನಡೆದು ಸುವರ್ಣರು ಗುಣಮುಖರಾಗಲಪ್ಪಾ ಎನ್ನುತ್ತಿತ್ತು ಮನಸ್ಸು.' ಆದರೆ ಆ ದಿನ ಬಂದೇ ಬಿಟ್ಟಿತು, ನನ್ನನ್ನು ಪ್ರೀತಿಯಿಂದ ಮಂಕೂ ಎಂದು ಕರೆಯುತ್ತಿದ್ದ ಸುವರ್ಣ ತಮಗೇ ಅರಿವಿಲ್ಲದೆ ಹೋಗಿಯೇ ಬಿಟ್ಟರು. ಹಲವಾರು ಕನಸುಗಳನ್ನು ಅರ್ಧದಲ್ಲಿಯೇ ಬಿಟ್ಟು..... ಆತ ಹಣ ಸಂಪಾದನೆ ಮಾಡಲಿಲ್ಲ. ಸ್ವಂತ ಮನೆ ಮಾಡಲಾಗಲಿಲ್ಲ. ಆದರೆ ಹಲವಾರು ಚಿತ್ರಗಳಿಗೆ ತಮ್ಮ ಛಾಯಾಗ್ರಹಣದ  ಅಪರೂಪದ ಸ್ಪರ್ಶ ನೀಡಿ, ಚಿತ್ರರಂಗಕ್ಕೆ ಅಪರೂಪದ ಅತಿಥಿಯಾಗಿ ಬಂದವರು ನೆನಪಾಗಿ ಹೋದರು.

- ವಿ. ಮನೋಹರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement