ಎರಡು ಲಕ್ಷ ಜನ ಕಂಡಂತೆ
'ನಾನೊಂದು ಸಿನಿಮಾ ಮಾಡ್ತಾ ಇದೀನಿ, ಅದರ ಹೆಸರು 'ಳಿದವರು ಕಂಡಂತೆ' ಎಂದು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹೇಳಿದಾಗ, 'ಏನಂದ್ರಿ, ಏನ್ ಅದು? ಸಿನಿಮಾ ಟೈಟಲ್ಲಾ?' ಎಂದು ಕೇಳಿದವರೇ ಹೆಚ್ಚು. ಆದರೆ ಈಗ ಎಲ್ಲರ ಬಾಯಲ್ಲೂ ಉಳಿದವರು ಕಂಡಂತೆ. ಯೂಟ್ಯೂಬ್ನಲ್ಲಿರುವ ಚಿತ್ರದ ಟ್ರೈಲರ್ಗೆ ಈಗ ಒಂದೂವರೆ ತಿಂಗಳು ಆಯಸ್ಸು. ಅದು ಕಂಡಿರುವ ಹಿಟ್ಸ್ಗಳ ಸಂಖ್ಯೆ ಎರಡು ಲಕ್ಷಕ್ಕೂ ಹೆಚ್ಚು.
ಹಾಗಾಗಿ, ಶೂಟ್ ಮಾಡ್ಬೇಕಾ ಎಂಬ ಕ್ಯಾಚಿ ಲೈನ್ ಹೊಂದಿದ ಉಳಿದವರು ಕಂಡಂತೆ ಈಗ ಲಾಖೋ ಮೇ ಏಕ್ ಎನಿಸುವಷ್ಟು ಫೇಮಸ್. ಲೈಕ್ ಮಾಡ್ಬೇಕಾ, ಬೇಡ್ವಾ ಎಂಬ ಮುಲಾಜಿಗೆ ಬೀಳದೆ, ಅದನ್ನು ಅಪ್ಪಿಕೊಂಡಿದ್ದಾರೆ ಆನ್ಲೈನ್ ಸಿನಿಮಾ ಪ್ರೇಮಿಗಳು. ಕೇವಲ ಸಂಭಾಷಣೆ ಅಷ್ಟೇ ಅಲ್ಲದೆ, ಟ್ರೈಲರ್ನ ವಿಶ್ಯುವಲ್ಸ್ ಕೂಡ ನೋಡುಗರನ್ನು ಸೆಳೆದಿದೆ. ಹಾಗಾಗಿ, ಕನ್ನಡ ಚಿತ್ರರಂಗಕ್ಕೆ ಹೊಸದು ಎನ್ನುವಂಥ ಹೊಸ ಧಾಟಿಯಲ್ಲಿರುವ ಉಳಿದವರು ಕಂಡಂತೆ ಟ್ರೈಲರ್ ಈಗ ಎರಡು ಲಕ್ಷ ದಾಟಿ ಮುನ್ನಡೆದಿದೆ. ಈಗಾಗಲೇ ಎರಡು ಚಿಲ್ಲರೆ ಲಕ್ಷ ಜನ ಆನ್ಲೈನ್ಲ್ಲಿ ಉಳಿದವರನ್ನು ಮೀಟ್ ಮಾಡಿದ್ದಾರೆ. ಈ ಎರಡೂ ಲಕ್ಷ ಜನ ಚಿತ್ರಮಂದಿರದ ಮುಂದೆಯೂ ಲೈನ್ನಲ್ಲಿ ನಿಂತು, ತಲಾ 100 ರುಪಾಯಿ ಕೊಟ್ಟು ಸಿನಿಮಾ ನೋಡಿದರೂ ಸಾಕು, ನಿರ್ಮಾಪಕ ಹೆಚ್ಚು ಕಡಿಮೆ ಸೇಫ್ ಆಗುವಷ್ಟು ಹಣ ಬರೋದು ಗ್ಯಾರಂಟಿ.
ಚಿತ್ರದ ಟ್ರೈಲರ್ನ ಈ ಮಟ್ಟದ ಯಶಸ್ಸಿನ ಬಗ್ಗೆ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಸುನಿ ಸಂತಸ ವ್ಯಕ್ತಪಡಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿರುವ ಡಮ್ಮಿ ಯೂಟ್ಯೂಬ್ ಹಿಟ್ಸ್ಗಳನ್ನು ತೋರಿಸುವವರ ನಡುವೆ ನಮ್ಮ ಚಿತ್ರದ 2 ಲಕ್ಷ ಹಿಟ್ಗಳು ಕಡಿಮೆ ಎನಿಸಬಹುದು. ಆದರೆ ಇದೆಲ್ಲವೂ ನಿಜವಾದ ಸಿನಿಪ್ರೇಮಿಗಳಿಂದ ಆದ ಹಿಟ್ಸ್ ಎಂಬುದು ನಮಗಂತೂ ಗೊತ್ತು. ಇದಲ್ಲದೆ, ಆನ್ಲೈನ್ನಲ್ಲ್ಲಿ ಕೇವಲ ಲೈಕ್ಗಳಷ್ಟೇ ಅಲ್ಲ ಸಾವಿರಾರು ನೋಡುಗರ ಕಾಮೆಂಟ್ಗಳೂ ಇವೆ. ಸಿಂಪಲ್ಲಾಗೊಂದ್ ಲವ್ಸ್ಟೋರಿಗೆ ಇಷ್ಟು ಕಾಮೆಂಟ್ಸ್ ಬಂದಿದ್ದು ಅದು 7 ಲಕ್ಷ ಹಿಟ್ಸ್ ದಾಟಿದ ನಂತರ. ಆದರೆ ಉಳಿದವರು ಕಂಡಂತೆ ಅದನ್ನು 2 ಲಕ್ಷ ಹಿಟ್ಸ್ಗಳಲ್ಲೇ ದಾಟಿದೆ. ಇನ್ನು ತಮಿಳು ನಟ ಸೂರ್ಯ ಈಗಾಗಲೇ ಉಳಿದವರು ಕಂಡಂತೆ ಚಿತ್ರ ನೋಡುವ ಆಸೆ ವ್ಯಕ್ತಪಡಿಸಿದ್ದಾರೆ. ಹಲವು ನಿರ್ಮಾಪಕರು ಉಳಿದವರು ಕಂಡಂತೆ ಚಿತ್ರದ ವ್ಯವಹಾರದ ಬಗ್ಗೆಯೂ ಆಸಕ್ತಿ ತೋರಿಸಿದ್ದಾರೆ, ಮಾತುಕತೆ ನಡೆಯುತ್ತಿದೆ ಎಂದು ಸಿಂಪಲ್ಲಾಗಿ ಹೇಳುತ್ತಾರೆ ಸುನಿ.
ಅಂದಹಾಗೆ, ರಕ್ಷಿತ್ ಶೆಟ್ಟಿ ನಟನೆ, ನಿರ್ದೇಶನದ, ಸುನಿ, ಅಭಿ, ಹೇಮಂತ್ ನಿರ್ಮಾಣದ ಉಳಿದವರು ಕಂಡಂತೆ ಚಿತ್ರದ ಪ್ರಥಮ ಪ್ರತಿ ಇನ್ನೇನು ರೆಡಿಯಾಗಲಿದ್ದು, ಫೆಬ್ರವರಿ 28ಕ್ಕೆ ರಾಜ್ಯಾದ್ಯಂತ ತೆರೆಕಾಣಲಿದೆ.
ಹ್ಯಾರಿ