ಮಳ್ಳಿ ಮಳ್ಳಿ ಸೀಡೀಲ್ ಎಷ್ಟ್ ಸಾಂಗು....
'ಮಳ್ಳಿ ಮಳ್ಳಿ ಸೀಡೀಲ್ ಎಷ್ಟ್ ಸಾಂಗು ಅಂದ್ರೆ ಮೂರು ಮತ್ತೊಂದು ಅಂದ್ಳಂತೆ'.
ಅದು ಮಳ್ಳಿ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ. ಬಿಡುಗಡೆಯಾದ ಸೀಡಿ ಕೈ ಸೇರುತ್ತಿದ್ದಂತೆಯೇ ಹೊಸದೊಂದು ಗಾದೆ ಕೂಡ ಬಿಡುಗಡೆಯಾಯ್ತು.
'ಮಳ್ಳಿ ಮಳ್ಳಿ ಸೀಡೀಲ್ ಎಷ್ಟ್ ಸಾಂಗು ಅಂದ್ರೆ ಮೂರು ಮತ್ತೊಂದು ಅಂದ್ಳಂತೆ'.
ಹೌದು ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಬಾಬ್ಬಿ ಸಂಗೀತ ನೀಡಿರುವ ಹಾಡುಗಳಿಗೆ ನಾಗೇಂದ್ರ ಪ್ರಸಾದ್ ಒಂದು ಹಾಡು ಬರೆದಿದ್ದರೆ, ಹೃದಯಶಿವ ಮತ್ತು ಸಿಂಪಲ್‌ಸುನಿ ತಲಾ ಒಂದೊಂದು ಗೀತೆ ಬರೆದಿದ್ದಾರೆ.
'ಆಶೀರ್ವಾದ' ಮಾಡಿ ಅನುಭವ ಪಡೆದಿರುವ ನಿರ್ದೇಶಕ ವಿಷ್ಣುಪ್ರಿಯನ್ ಹೇಳುವಂತೆ ಚಿತ್ರದ ಒನ್ ಲೈನ್ ಸ್ಟೋರಿ, ಟ್ಯಾಗ್ ಲೈನ್‌ನಲ್ಲೇ ಇದೆಯಂತೆ. ಎಲ್ಲ ರೀತಿಯ ಸಹಾಯ ಮಾಡಿ ಬೆಳೆಸುವ ನಾಯಕನ ಭಾವನೆಗಳ ಜೊತೆ ಜೂಟಾಟ ಆಡುವ ನಾಯಕಿಯ ಕತೆ ಹೊಂದಿರುವ ಚಿತ್ರ ಮಳ್ಳಿಯ ಟ್ಯಾಗ್‌ಲೈನ್ ಹೀಗಿದೆ: 'ಮಳ್ಳಿ -ಪ್ರೀತಿಗೆ ಇಟ್ಳು ಕೊಳ್ಳಿ'. ಆದರೆ ಇದು ಆಡಿಯೋ ಬಿಡುಗಡೆ ಸಮಾರಂಭವಾದ್ದರಿಂದ, ಎಲ್ಲರೂ 'ಸೀಡಿ ಕೊಳ್ಳಿ' ಎಂದು ಹಾಡುಗಳ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು.
ಮೆಲೋಡಿ ಹಾಗೂ ಪ್ಯಾಥೊಗಳಿಂದ ಹೊರಳಿ ಮಾಸ್ ಸಾಂಗ್ ಬರೆಯುವ ಪ್ರಯತ್ನ ಮಾಡಿರುವ ಸಾಹಿತಿ ಹೃದಯಶಿವ, ಚಿತ್ರಕ್ಕೊಂದು ವಿಶೇಷ ಗೀತೆ ಬರೆದಿದ್ದು ಹಾಡಿನಲ್ಲಿ ರಾಜ್‌ಕುಮಾರ್‌ರಿಂದ ಶುರುವಿಟ್ಟು ನವನಟ ಶ್ರೀಕಿ ತನಕ ಎಲ್ಲ ನಾಯಕರ ಹೆಸರುಗಳನ್ನೂ ಬಳಸಲಾಗಿದೆಯಂತೆ. ಎಲ್ಲ ಹೆಸರನ್ನೂ ಬಳಸಿ ಟ್ಯೂನ್‌ನ ಮೀಟರಿಗೆ ಕೂರಿಸಲು ಎದುರಿಸಿದ ಸವಾಲಿನ ಬಗ್ಗೆ ಹೇಳಿ ಹೃದಯಶಿವ ಖುಷಿ ಪಟ್ಟರು.
'ಹುಡುಗೀರಂದ್ರೆ ಡೇಂಜರಪ್ಪೊ' ಹಾಡಿನ ಹೊಸ ವರ್ಷನ್ ಎಂಬಂತಿರುವ 'ನಾರಿ ಅಂದ್ರೆ ನರಕ ಕಣೋ' ಹಾಡನ್ನು ನಾಗೇಂದ್ರ ಪ್ರಸಾದ್ ಬರೆದಿದ್ದು ನಿರ್ದೇಶಕರಿಗೆ ಈ ಹಾಡು ಫಸ್ಟ್ ಫೇವರಿಟ್ ಅಂತೆ. ಈ ಕುಡುಕರ ಗೀತೆಗೆ ದನಿ ನೀಡಿರುವುದು ರಾಜೇಶ್‌ಕೃಷ್ಣನ್.
ಸಿಂಪಲ್ ಸುನಿ ಸಿಂಪಲ್ಲಾದ ಒಂದು ಹಾಡು ಬರೆದಿದ್ದು ಅದು ಸಿಂಪ್ಲಿ ಸುಪರ್ಬ್ ಎನ್ನುವಂತಿದೆ ಎಂದು ವಿಷ್ಣುಪ್ರಿಯನ್ ಹೊಗಳಿದರೆ, ಸುನಿ ಎಂದಿನಂತೆ ಸಂಕೋಚದಲ್ಲೇ ಒಂದೆರಡು ಪಂಚ್ ಡೈಲಾಗ್ ಹೊಡೆದು, ಕಾರ್ಪೊರೆಟ್ ಆಫೀಸ್‌ನಂತೆ ಕಾಣುವ ಲಹರಿ ಆಡಿಯೋ ಕಂಪನಿಯ ಬಗ್ಗೆ ಮೆಚ್ಚುಗೆ ಸೂಚಿಸಿದರು. ಅಂದಹಾಗೆ ಆಡಿಯೋ ಬಿಡುಗಡೆಯಾಗಿದ್ದು ಲಹರಿ ಆಡಿಯೋದಿಂದ ಹಾಗೂ ಲಹರಿ ಆಡಿಯೋ ಕಛೇರಿಯಲ್ಲಿ.
ಚಿತ್ರದ ನಾಯಕ ಸುಜಿತ್ ಹಾಗೂ ನಾಯಕಿ ದಿಶಾ ಪೂವಯ್ಯ ಕೂಡ ಚಿತ್ರದ ಬಗ್ಗೆ ಭರವಸೆಯ ಮಾತುಗಳನ್ನಾಡಿದರು.
-ನವೀನ್