ಪ್ರೈಮ್‌ಟೈಮ್ ರಾತ್ರಿ ಒಂಬತ್ತು ಗಂಟೆಗೆ ಪ್ರಸಾರವಾಗುತ್ತಿದ್ದ ಚಿಟ್ಟೆಹೆಜ್ಜೆಯ ಸ್ಥಾನಕ್ಕೆ ಇದೀಗ ಯಶೋದೆ ಹೆಜ್ಜೆ ಇಟ್ಟಿದ್ದಾಳೆ. ಮುಕ್ತ ಮುಕ್ತ, ಮಾಡು ಸಿಕ್ಕದಲ್ಲ, ಮುಂಜಾವು, ಚಿತ್ರಲೇಖ, ಚರಣದಾಸಿ ಹೀಗೆ ಹಲವು ಧಾರಾವಾಹಿಗಳ ಸಂಚಿಕೆ ನಿರ್ದೇಶಕರಾಗಿ, ಸ್ವತಂತ್ರ ನಿರ್ದೇಶಕರಾಗಿ ಹೆಸರು ಮಾಡಿರುವ ವಿನೋದ್ ಧೊಂಡಾಳೆ, ತಾಯಿ ಮಗಳ ಸೂಕ್ಷ್ಮಸಂಬಂಧಗಳನ್ನು ಅನಾವರಣಗೊಳಿಸುವ ಕಥೆಯೊಂದನ್ನು ಹೆಣೆದು ತಂದಿದ್ದಾರೆ. ಈಟಿವಿ ಕನ್ನಡದ ಈ ನೂತನ ಧಾರಾವಾಹಿಯಲ್ಲಿ ಯಶೋದೆಯಾಗಿ ನೀತಾ ಅಶೋಕ್ ನಟಿಸುತ್ತಿದ್ದರೆ, ತಾಯಿ ಶಾರದೆಯ ಪಾತ್ರದಲ್ಲಿ ಸ್ಪಂದನಾ ಕಾಣಿಸಿಕೊಂಡಿದ್ದಾರೆ. ಮಗಳೇ ತಾಯಿಗೆ ತಾಯಿಯಾಗಿ ಸಲಹುವ ಅಪರೂಪದ ಕತೆ ಇದಾಗಿದ್ದು, ತುಂಬಾ ಸೆನ್ಸಿಬಲ್ ದೃಶ್ಯಗಳಿಂದಲೇ ಕಣ್ಣೀರು ತುಂಬಿಸುವ ಭಾವುಕರನ್ನಾಗಿಸುವ ಶಕ್ತಿ ಈ ಧಾರಾವಾಹಿಯಲ್ಲಿದೆ ಎಂಬುದು ಧಾರಾವಾಹಿ ವಿಭಾಗದ ಮುಖ್ಯಸ್ಥರ ಹಾಗೂ ನಿರ್ದೇಶಕ ವಿನೋದ್‌ರ ಏಕಾಭಿಪ್ರಾಯ. ಸಿದ್ಧಿಪ್ರಿಯ ಕ್ರಿಯೇಶನ್‌ರವರ ಯಶೋದೆಯಲ್ಲಿ ಹೊಸಬರ ಹಾಗೂ ಅನುಭವಿಗಳ ಸಮತೋಲಿತ ತಾರಾಗಣವಿದ್ದು, ಇದೀಗ ಒಂದು ವಾರ ಪೂರೈಸಿರುವ ಯಶೋದೆಯ, ಮಹಿಳಾ ವೀಕ್ಷಕರಲ್ಲಿ ಕುತೂಹಲ ಮತ್ತು ನಿರೀಕ್ಷೆ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ತನ್ನ ಗುಣಮಟ್ಟವನ್ನು ಹೇಗೆ ಕಾಯ್ದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.