ವಯಸ್ಸು 50 ದಾಟಿದೆ. ಕೈಯಲ್ಲಿ 15 ಚಿತ್ರಗಳಿವೆ. ಬಹುಶಃ ತೆಲುಗು, ತಮಿಳು, ಹಿಂದಿ ಈ ಮೂರು ಭಾಷೆಗಳಲ್ಲೂ 50ರ ಸ್ಟಾರ್ ನಟನ ಕೈಯಲ್ಲಿ ಇಷ್ಟು ಪ್ರಮಾಣದ ಚಿತ್ರಗಳಿರುವುದು ಅನುಮಾನ. ಆದರೆ, ಐವತ್ತರ ನಂತರವೂ ಅವಕಾಶಗಳ ಸಮುದ್ರದಲ್ಲಿ ಈಜುತ್ತಿರುವ ಕನ್ನಡದ ತಾರೆ ಶಿವರಾಜ್‌ಕುಮಾರ್. ಬಾಕ್ಸ್ ಆಫೀಸ್ ಹಿಟ್, ನಂ.1 ಸ್ಟಾರ್ ಅಂತ ಯಾರು ಏನೇ ಅಂದುಕೊಂಡರೂ ಆ ಯಾವ ನಂಬರ್‌ಗಳೂ ಇಲ್ಲದಿದ್ದರೂ ನಟ ಶಿವರಾಜ್‌ಕುಮಾರ್ ಬಹುಬೇಡಿಕೆಯ ಹೀರೋ ಅನಿಸಿಕೊಂಡಿರುವುದು ಮಾತ್ರ ನಿಜ. 'ಟಿವಿ ಸ್ಟಾರ್'ಗಳು ಸೇರಿದಂತೆ ಈಗಿನ ಕನ್ನಡದ 'ಸ್ಟಾರ್'ಗಳ ಕೈಯಲ್ಲಿ ಎಷ್ಟು ಚಿತ್ರಗಳಿವೆಯೋ ಗೊತ್ತಿಲ್ಲ. ಆದರೆ, ಶಿವರಾಜ್‌ಕುಮಾರ್ ಅವರ ಮುಂದಿನ ಚಿತ್ರಗಳ ಪಟ್ಟಿ ನೋಡಿದರೆ, ಅವಕಾಶಗಳ ವಿಚಾರದಲ್ಲಿ 'ಶಿವ' ಸಾಗರ.
ನಟ ಶಿವರಾಜ್‌ಕುಮಾರ್ ಅವರ ಕೆರಿಯರ್ ಗ್ರಾಫ್ ನೋಡಿದಾಗ ಸೋಲು, ಗೆಲವು ಈ ಎರಡನ್ನೂ ಕಂಡಿದ್ದಾರೆ. ಒಮೊಮ್ಮೆ ಸೋಲಿನ ದಿಂಬಿಗೆ ಹೆಚ್ಚಾಗಿಯೇ ತಲೆ ಕೊಟ್ಟರೂ ಶಿವರಾಜ್‌ಕುಮಾರ್ ಅವರ ಬೇಡಿಕೆಯಂತೂ ಕುಸಿದಿಲ್ಲ. ಇತ್ತೀಚೆಗೆ ಅವರ ಜನ್ಮದಿನದ ಸಂಭ್ರಮ ನಡೆಯಿತು. ಸಿನಿಮಾ ಜಾಹೀರಾತುಗಳ ಪುಟಗಳನ್ನು ನೋಡಿದಾಗ 'ಶಿವ'ನ ಸಮುದ್ರ ಎಷ್ಟು ವಿಶಾಲ ಮತ್ತು ಆಳ ಎಂಬುದು ತಿಳಿಯುತ್ತದೆ.
ಬಿಡುಗಡೆಗೆ ಸಿದ್ಧವಾಗಿರುವುದು 1 ಚಿತ್ರ, ಹೆಸರು ಅಂತಿಮಗೊಂಡಿರುವುದು 7 ಚಿತ್ರಗಳು, ಇನ್ನೂ ಹೆಸರಿಡಿದ ಚಿತ್ರಗಳ ಸಂಖ್ಯೆ 7. ಒಟ್ಟು 15. ಶಿವರಾಜ್‌ಕುಮಾರ್ ಅವರದ್ದು 'ಬೆಳ್ಳಿ'ತೆರೆಯ 'ಮನಮೋಹಕ' ಪಯಣ ಎಂಬುದು ಇದಕ್ಕೆ ಅಲ್ಲವೇ? ಸೋಲು- ಗೆಲವು ಏನೇ ಇರಲಿ, ತನ್ನ 'ಖದರ್' ತೋರಿಸುತ್ತಲೇ ಸಾಗಿರುವ ಶಿವರಾಜ್‌ಕುಮಾರ್, ಇಮೇಜ್‌ಗೆ ಅಂಟಿಕೊಂಡವರಲ್ಲ. ಹೀಗಾಗಿಯೇ ಸ್ಟಾರ್ ನಟ ಎನಿಸಿಕೊಂಡಾಗಲೂ 'ಗಂಡನ ಮನೆ', 'ಅಣ್ಣ ತಂಗಿ', 'ದೇವರು ಕೊಟ್ಟ ತಂಗಿ', 'ಭಾಗ್ಯದ ಬಳೆಗಾರ' ಹೀಗೆ ಸಾಫ್ಟ್ ಆಂಡ್ ಸೆಂಟಿಮೆಂಟ್ ಚಿತ್ರ- ಕಥೆಗಳನ್ನು ಅಪ್ಪಿಕೊಂಡಿದ್ದಾರೆ. 'ನನ್ನ ಕಮರ್ಷಿಯಲ್ ಇಮೇಜ್‌ಗೆ ಈ ಕಥೆ ಸೆಟ್ ಆಗಲ್ಲ' ಎಂದು ಸ್ವಾತಂತ್ರ್ಯ ಯೋಧನ ಕಥೆಯನ್ನು ತಿರಸ್ಕರಿಸಿದ 'ಬಿಗ್'ಸ್ಟಾರ್ ಮುಂದೆ ಶಿವರಾಜ್‌ಕುಮಾರ್, ಹೊಸ ನಿರ್ದೇಶಕರ ಪಾಲಿಗೆ 'ವಜ್ರಕಾಯ'ನಾಗಿರುವುದು ಈ ಕಾರಣಕ್ಕೆ.
ಈಗ ಶಿವರಾಜ್‌ಕುಮಾರ್ ಅವರ ಕೈಯಲ್ಲಿರುವ ಒಟ್ಟು 15 ಚಿತ್ರಗಳ ಪೈಕಿ ಡಿ.ರಾಜೇಂದ್ರ ಬಾಬು ಅವರ 'ಆರ್ಯನ್' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಹರ್ಷ ನಿರ್ದೇಶನದ 'ವಜ್ರಕಾಯ' ಚಿತ್ರೀಕರಣದಲ್ಲಿದೆ. 'ಬೆಳ್ಳಿ' ಚಿತ್ರಕ್ಕೆ ಮುಹೂರ್ತ ನಡೆದಿದೆ. ಉಳಿದಂತೆ ನಾಗೇಂದ್ರ ಮಾಗಡಿ ನಿರ್ದೇಶನದ 'ಧರ್ಮರಕ್ಷಕ', ಸಿಂಪಲ್ ಸುನಿಯ 'ಮನಮೋಹಕ', ಆರ್. ಚಂದ್ರು ನಿರ್ದೇಶನದ 'ಬಾದ್‌ಷಾ', ಪಿ.ವಾಸು ನಿರ್ದೇಶನದ 'ಶಿವಲಿಂಗ', ಕೆ.ಎ.ಸುರೇಶ್ ನಿರ್ಮಾಣದ 'ಖದರ್' ಚಿತ್ರಗಳು ಶೀರ್ಷಿಕೆ ಘೋಷಿಸಿಕೊಂಡಿವೆ. ಇನ್ನು ಮಂಜು ಸ್ವರಾಜ್, ವಚನ್ ಶೆಟ್ಟಿ, ಇಂದ್ರಬಾಬು ನಿರ್ದೇಶನದ ಹಾಗೂ ಕೆ. ಪ್ರಭಾಕರ್, ಎಸ್‌ಎಸ್‌ಎಸ್ ಸುರೇಶ್, ವಿತರಕ ಪ್ರಸಾದ್ ನಿರ್ಮಾಣದ ಚಿತ್ರಗಳು 'ಪ್ರೋಡಕ್ಷನ್ ನಂ.' ಹೆಸರಿನಲ್ಲಿ ಸರದಿಯಲ್ಲಿ ನಿಂತಿವೆ. ಇವುಗಳಲ್ಲಿ ಯಾವುದು ಮೊದಲು ಸೆಟ್‌ಗೆ ಹೋಗಲಿದೆ ಎಂದು ನೋಡಬೇಕಿದೆ. ಇದರ ನಡುವೆ ಮತ್ತೆ ನಿರ್ದೇಶಕ ಓಂ ಸಾಯಿಪ್ರಕಾಶ್, ನಟಿ ರಾಧಿಕಾ ಕುಮಾರಸ್ವಾಮಿ ಹಾಗೂ ಶಿವರಾಜ್‌ಕುಮಾರ್ ಜೋಡಿ ತೆರೆ ಮೇಲೆ ಬರಲಿದೆ.
ಐವತ್ತರ ನಂತರ ಪ್ರಾಯ ಮರುಕಳಿಸುತ್ತದೆ, ಸೆಂಚುರಿ ಬಾರಿಸಿದ ಬ್ಯಾಟ್ಸ್ ಮ್ಯಾನ್ ಮತ್ತಷ್ಟು ಚುರುಕಾಗುತ್ತಾನೆ ಎನ್ನುವುದು ಶಿವರಾಜ್‌ಕುಮಾರ್ ಜೀವನದಲ್ಲಿ ನಿಜವಾಗಿದೆ ಎಂಬುದಕ್ಕೆ ಅವರ ಮುಂದಿರುವ ಚಿತ್ರಗಳ ಪಟ್ಟಿ ಮಾತ್ರ ಕಾರಣವಲ್ಲ. ಅವಕಾಶಗಳ ಜೊತೆಗೆ ಇಮೇಜ್‌ನ ಆಚೆಗೂ ಒಗ್ಗಿಕೊಳ್ಳುವ ಗುಣವೂ ಇಲ್ಲಿ ಮುಖ್ಯವಾಗಿದೆ. ಟಿವಿ ಟಿಆರ್‌ಪಿ ನಟ, ಬಾಕ್ಸ್ ಆಫೀಸ್ ಸುಲ್ತಾನ್, ನಂ.1 ಸ್ಟಾರ್... ಹೀಗೆ ಯಾವ ಚರ್ಚೆಗಳೂ ಶಿವರಾಜ್‌ಕುಮಾರ್ ಸುತ್ತ ನಡೆಯದಿದ್ದರೂ 'ನಿನ್ನ ನಾಮಕೆ ಸಾಟಿ ಬೇರಿಲ್ಲ' ಎನ್ನುವಂತೆ ಬೇಡಿಕೆ ಉಳಿಸಿಕೊಂಡಿದ್ದಾರೆ. ಹೀಗಾಗಿ ಅವರ ಅಭಿಮಾನಿಗಳು ಅಂಕಿ- ಸಂಖ್ಯೆಗಳ ಆಚೆಗೂ ಪ್ರೀತಿಸುತ್ತಿದ್ದಾರೆ.
-ಆರ್. ಕೇಶವಮೂರ್ತಿ