ಚಿತ್ರರಂಗಕ್ಕೆ ಕಾಲಿಡುವ ಅನೇಕ ನಟರು ನೀನಾಸಂ, ನಟರಂಗ ಹೀಗೆ ಹಲವು ರಂಗಭೂಮಿಯ ಹಿನ್ನೆಲೆಯಿಂದ ಬಂದಿದ್ದೇವೆ ಎಂದು ಹೇಳುವುದನ್ನು ಕೇಳಿದ್ದೇವೆ. ಆದರೆ ನಾಯಕಿಯರ ಲೆಕ್ಕದಲ್ಲಿ ರಂಗಭೂಮಿಯ ಹಿನ್ನೆಲೆ ಇರುವವರು ವಿರಳ. ತನ್ನದು ಬಬ್ಲೀ ಕ್ಯಾರೆಕ್ಟರ್, ಈಸಿ ಗೋಯಿಂಗ್, ಔಟ್ ಗೋಯಿಂಗ್, ಜೋವಿಯಲ್ ಎಂಬ ಪದಗಳಷ್ಟೇ ನಮ್ಮ ಹೆಚ್ಚಿನ ನಾಯಕಿಯರನ್ನು ಕರೆಯಲು ಇರುವ ವಿಶೇಷಣಗಳು. ಆದರೆ ಅದಕ್ಕೆ ಅಪವಾದ ಎಂಬಂತೆ ಇಲ್ಲೊಬ್ಬ ಹುಡುಗಿ ರಂಗಭೂಮಿಯ ಹಿನ್ನೆಲೆ ಹೊತ್ತು ಕನ್ನಡದ ಕಮರ್ಷಿಯಲ್ ಚಿತ್ರರಂಗದ ಕದ ತಟ್ಟುತ್ತಿದ್ದಾಳೆ. ಈಕೆಯ ಹೆಸರು ಮಾನಸ ಜೋಷಿ.
ಒಮ್ಮೆ ನೋಡಿದರೆ ನಮ್ಮದೇ ಕನ್ನಡದ ಮೇಘನಾ ಗಾಂವ್‌ಕರ್, ಇನ್ನೊಮ್ಮೆ ನೋಡಿದರೆ ಬಾಲಿವುಡ್‌ನ ಸೋನಾಕ್ಷಿ ಸಿನ್ಹಾ, ಗಂಭೀರವಾದ ಲುಕ್ ಕೊಟ್ಟರೆ ಹಳೆಯ ಕಾಲದ ನಟಿ ಮಾಧವಿ ಅವರನ್ನು ನೆನಪಿಸುವ ಮಾನಸಾ ಗ್ಲಾಮರ್ ಮತ್ತು ಗ್ರಾಮರ್‌ನ ಪಕ್ಕಾ ಬ್ಲೆಂಡ್ ಇದೆ ಎನಿಸುವಂಥ ಹುಡುಗಿ.
ಕಥಕ್ ಮತ್ತು ಭರತನಾಟ್ಯಂನಲ್ಲಿ ಹೆಸರು ಮಾಡಿರುವ ಮಾನಸ ಫ್ಯಾಷನ್ ಕೊರಿಯೋಗ್ರಾಫರ್ ಎಂ.ಎಸ್. ಶ್ರೀಧರ್ ಅವರ ಬಳಿ ಮಾಡೆಲಿಂಗ್ ಟ್ರೈನಿಂಗ್ ಕೂಡ ಪಡೆದಿದ್ದಾರೆ. ಅನೇಕ ಸೋಲೋ ಪ್ರೋಗ್ರಾಮ್‌ಗಳನ್ನು ಕೊಟ್ಟಿರುವ ಮಾನಸ ಜರ್ನಲಿಸಂನಲ್ಲಿ ಮಾಸ್ಟರ್ಸ್ ಪದವಿಯನ್ನೂ ಪಡೆದಿದ್ದಾರೆ.
ಈ ಎಲ್ಲ ಹಿನ್ನೆಲೆಯೊಂದಿಗೆ ಮಿಸ್ ಈಟಿವಿ ಪ್ರಶಸ್ತಿ ಪಡೆದ ಮಾನಸ ಈಗ ಚಿತ್ರರಂಗದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಅವರ ಅಭಿನಯದ ಮೊದಲ ಕಮರ್ಷಿಯಲ್ ಚಿತ್ರ ಸಿಂಪಲ್ ಸುನಿ ನಿರ್ದೇಶನದ 'ಬಹುಪರಾಕ್'. ಹಾಗಂತ ಚಿತ್ರರಂಗ ಮಾನಸಗೆ ಇದೇ ಮೊದಲಲ್ಲ. ಈ ಮುಂಚೆ ಪ್ರಶಸ್ತಿ ವಿಜೇತ ಚಿತ್ರ 'ಸರಸಮ್ಮನ ಸಮಾಧಿ' ಮತ್ತು ಅದೇ ಕೆಟಗರಿಯ ಇನ್ನೊಂದು ಚಿತ್ರ 'ಹಝ್'ನಲ್ಲಿ ಅಭಿನಯಿಸಿದ ಅನುಭವ ಅವರಿಗಿದೆ. ಈಗ 'ಬಹುಪರಾಕ್' ಚಿತ್ರದಲ್ಲಿ ಮಾನಸ, ಉತ್ತರ ಕರ್ನಾಟಕದ ಕುಟುಂಬವೊಂದರ 'ಬಹೂ' ಆಗಿ ಕಾಣಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ನಾಯಕಿಯರು ತಮ್ಮ ಮೊದಲ ಚಿತ್ರದಲ್ಲಿ ಯಂಗ್ ಅಂಡ್ ಎಮರ್ಜಿಟಿಕ್ ಪಾತ್ರಗಳನ್ನು ಮಾಡುವುದು ವಾಡಿಕೆ. ಆದರೆ ಮಾನಸ ಈ ಚಿತ್ರದಲ್ಲಿ ಮೈ ತುಂಬಾ ಅಷ್ಟೇ ಅಲ್ಲ, ತಲೆತುಂಬಾ ಸೀರೆಯುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನನಗೆ ಮೊದಲ ಚಿತ್ರದಲ್ಲಿ ಗ್ಲಾಮರಸ್ ಪಾತ್ರವೇ ಬೇಕು ಎಂಬ ಅಪೇಕ್ಷೆ ಇರಲಿಲ್ಲ. ಸುನಿ ಅವರು ಕೊಟ್ಟ ಈ ಪಾತ್ರದಲ್ಲಿ ಒಬ್ಬ ನಟಿಯಾಗಿ ನನ್ನನ್ನು ಗುರುತಿಸಿಕೊಳ್ಳಬಹುದಾದ ಎಲ್ಲ ಅವಕಾಶಗಳಿವೆ. ಇಂಥ ಅವಕಾಶ ಸಿಕ್ಕಿದ್ದಕ್ಕೆ ನನಗೆ ಖುಷಿ ಇದೆ ಎನ್ನುತ್ತಾರೆ ಮಾನಸ.
ಕೇವಲ ರಂಗಭೂಮಿಯ ಹಿನ್ನೆಲೆ, ಅಚ್ಚ ಕನ್ನಡ ಮಾತನಾಡುವ ಸಾಮರ್ಥ್ಯ ಅಷ್ಟೇ ಅಲ್ಲದೆ ಅನುಪಮ್ ಖೇರ್ ಇನ್ಸ್‌ಟಿಟ್ಯೂಟ್‌ನಲ್ಲಿ ಅಭಿನಯ ತರಬೇತಿಯನ್ನೂ ಪಡೆದಿರುವ ಮಾನಸಾ ಮುಂದೆ ಗ್ಲಾಮರಸ್ ನಾಯಕಿಯ ಪಾತ್ರಗಳನ್ನು ಎದುರು ನೋಡುತ್ತಿದ್ದಾರಂತೆ.
-ಹರಿ