‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಈ ಇಡೀ ಪ್ರಕರಣವು ಸದ್ಯ ಸುಪ್ರೀಂ ಕೋರ್ಟ್‌ನ ನ್ಯಾಯಾಂಗದ ಪರಿಶೀಲನೆಯಲ್ಲಿ (Sub-judice) ಇರುವುದರಿಂದ ಆಡಳಿತಾತ್ಮಕವಾಗಿ ಭೇಟಿ ಮಾಡಲು ಸಾಧ್ಯವಿಲ್ಲ ಎಂದು ಸಿಜೆಐ ಸ್ಪಷ್ಟಪಡಿಸಿದ್ದಾರೆ.
CJI Surya Kant
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್
Updated on: 

ನವದೆಹಲಿ: ದೇಶದಲ್ಲಿ ತೀವ್ರ ರಾಜಕೀಯ ಸಂಚಲನ ಮೂಡಿಸಿರುವ 'ವೋಟ್ ಚೋರಿ' (ಮತ ಕಳ್ಳತನ) ಮತ್ತು ಚುನಾವಣಾ ಅಕ್ರಮಗಳ ಆರೋಪಗಳಿಗೆ ಸಂಬಂಧಿಸಿದಂತೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ ಮನವಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರು ನಿರಾಕರಿಸಿದ್ದಾರೆ.

ಈ ಇಡೀ ಪ್ರಕರಣವು ಸದ್ಯ ಸುಪ್ರೀಂ ಕೋರ್ಟ್‌ನ ನ್ಯಾಯಾಂಗದ ಪರಿಶೀಲನೆಯಲ್ಲಿ (Sub-judice) ಇರುವುದರಿಂದ ಆಡಳಿತಾತ್ಮಕವಾಗಿ ಭೇಟಿ ಮಾಡಲು ಸಾಧ್ಯವಿಲ್ಲ ಎಂದು ಸಿಜೆಐ ಸ್ಪಷ್ಟಪಡಿಸಿದ್ದಾರೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ಸಂಜೆ 4ರಿಂದ 5 ಗಂಟೆಯ ನಡುವೆ ಸಿಜೆಐ ಅವರನ್ನು ಭೇಟಿ ಮಾಡಲು ಸಮಯ ಕೋರಿದ್ದರು.

ಚುನಾವಣಾ ಅಕ್ರಮಗಳು ನಡೆದಿವೆ ಎಂಬ ಆರೋಪದ ಕುರಿತು ಮನವಿ ಸಲ್ಲಿಸುವುದು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸುವುದು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವುದು ಮತ್ತು ಮತಪತ್ರಗಳ ಬಳಕೆಯನ್ನು ಮರುಸ್ಥಾಪಿಸುವುದು ಅವರ ಬೇಡಿಕೆಗಳಾಗಿದ್ದವು.

ಭಾನುವಾರ ಇಮೇಲ್ ಮೂಲಕ ಕಾಂಗ್ರೆಸ್ ನಾಯಕರಿಗೆ ಪ್ರತಿಕ್ರಿಯಿಸಿರುವ ಸಿಜೆಐ, ಈ ವಿಷಯ ನ್ಯಾಯಾಲಯದ ವಿಚಾರಣೆಯಲ್ಲಿರುವುದರಿಂದ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ.

ಸ್ವತಃ ಸಿಜೆಐ ಸೂರ್ಯಕಾಂತ್ ಅವರೇ ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಪೀಠದ ನೇತೃತ್ವ ವಹಿಸಿರುವುದನ್ನೂ ಉಲ್ಲೇಖಿಸಲಾಗಿದೆ. ಆಡಳಿತಾತ್ಮಕ ಹಂತದಲ್ಲಿ ಈ ವಿಚಾರವಾಗಿ ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ ಎಂದು ಸಿಜೆಐ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ನಾಯಕರು ನ್ಯಾಯಾಂಗ ವಿಭಾಗದಲ್ಲಿ ಅರ್ಜಿ ಸಲ್ಲಿಸಬಹುದು. ಆ ಅರ್ಜಿಯನ್ನು ಮಂಗಳವಾರ ವಿಚಾರಣೆಗೆ ಪರಿಗಣಿಸಬಹುದು ಎಂದು ಮೂಲಗಳು ತಿಳಿಸಿವೆ.

ನಾಗರಿಕರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾದರೆ ಸುಪ್ರೀಂ ಕೋರ್ಟ್ ದಿನದ 24 ಗಂಟೆಯೂ, ವಾರದ ಏಳು ದಿನಗಳೂ ಅವರಿಗಾಗಿ ತೆರೆದಿರುತ್ತದೆ. ಆದರೆ, ಆಡಳಿತಾತ್ಮಕ ಹಂತದಲ್ಲಿ ಕಾರ್ಯಾಂಗದ ಕಾರ್ಯವೈಖರಿಯಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದೂ ತಿಳಿಸಿದ್ದಾರೆ.

CJI Surya Kant
ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ವಿರೋಧ ಪಕ್ಷಗಳು ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೆಹಲಿಯಲ್ಲಿ ಸುಪ್ರೀಂ ಕೋರ್ಟ್‌ವರೆಗೆ ಮೆರವಣಿಗೆ ನಡೆಸಲು ಯೋಜಿಸಿರುವುದಕ್ಕೆ ಒಂದು ದಿನ ಮುನ್ನ ಈ ಬೆಳವಣಿಗೆ ನಡೆದಿದೆ.

ಕಾಂಗ್ರೆಸ್ ಈ ಪ್ರತಿಭಟನೆಗೆ ‘ಚಲೋ ದೆಹಲಿ–ಪ್ರಜಾಪ್ರಭುತ್ವಕ್ಕಾಗಿ ಮೆರವಣಿಗೆ’ ಎಂದು ಹೆಸರಿಟ್ಟಿದೆ. ಸೋಮವಾರ ಮಧ್ಯಾಹ್ನ 1.30ಕ್ಕೆ ಕನ್ನಾಟ್ ಪ್ಲೇಸ್–ಬರಾಖಂಬಾ ರಸ್ತೆ ಜಂಕ್ಷನ್‌ನಲ್ಲಿ ಸೇರಲು ಪ್ರತಿಭಟನಾಕಾರರಿಗೆ ಕರೆ ನೀಡಿದೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಪಕ್ಷ, ಲಿಂಗ, ಜಾತಿ, ಸಮುದಾಯ ಮತ್ತು ರಾಜ್ಯಗಳ ಭೇದವಿಲ್ಲದೆ ದೇಶದ ಜನರು ಈ ಮೆರವಣಿಗೆಯಲ್ಲಿ ಒಂದಾಗಲಿದ್ದಾರೆ ಎಂದು ಹೇಳಿದ್ದಾರೆ.

ಶನಿವಾರದ ಪ್ರತಿಭಟನೆಯನ್ನು ಉಲ್ಲೇಖಿಸಿದ ಅವರು, “ನಿನ್ನೆ ದೇಶದ ಯುವಜನರು ಶಾಂತಿಯುತವಾಗಿ ಪ್ರತಿಭಟಿಸಲು ದೆಹಲಿಯಲ್ಲಿ ಬೀದಿಗಿಳಿದಿದ್ದರು. ಅವರ ಹೃದಯದಲ್ಲಿ ಪ್ರೀತಿ ಇತ್ತೇ ಹೊರತು ದ್ವೇಷವಾಗಲಿ, ಕೋಪವಾಗಲಿ ಇರಲಿಲ್ಲ. ಆದರೆ, ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರು ಅವರ ಮೇಲೆ ಹಲ್ಲೆ ನಡೆಸಿದರು. ನಾವು ಬಯಸುವ ಭಾರತ ಇದಲ್ಲ” ಎಂದು ಆರೋಪಿಸಿದ್ದಾರೆ.

ಪ್ರಜಾಪ್ರಭುತ್ವ ಮತ್ತು ಸಂವಿಧಾನದಲ್ಲಿ ನಂಬಿಕೆಯಿರುವ ವಿರೋಧ ಪಕ್ಷಗಳು, ಯುವಜನರು, ನಾಗರಿಕ ಸಮಾಜದ ಸಂಘಟನೆಗಳು ಹಾಗೂ ಎಲ್ಲರೂ ಸೋಮವಾರದ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.

ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಮಾತನಾಡಿದ್ದ ಖರ್ಗೆ, ‘ವೋಟ್ ಚೋರಿ’ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ತಾವು ಮತ್ತು ರಾಹುಲ್ ಗಾಂಧಿ ಸಿಜೆಐ ಅವರಿಗೆ ಪತ್ರ ಬರೆದಿದ್ದೇವೆ. ತಮ್ಮ ಅಹವಾಲುಗಳನ್ನು “ಕೈಮುಗಿದು” ಸಲ್ಲಿಸುವುದಾಗಿ ಹೇಳಿದ್ದರು.

ಗೃಹ ಸಚಿವರು ಮತ್ತು ಪ್ರಧಾನಮಂತ್ರಿಗಳು ದೇಶದಲ್ಲಿ ಗೊಂದಲದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಎಲ್ಲೆಡೆ ಅಘೋಷಿತ ತುರ್ತು ಪರಿಸ್ಥಿತಿ ಹೇರಲಾಗಿದೆ. ಶನಿವಾರದ ಪ್ರತಿಭಟನೆ ವೇಳೆ ಭಾರೀ ಪೊಲೀಸ್ ಬಂದೋಬಸ್ತ್ ಮತ್ತು ಪ್ರತಿಭಟನಾಕಾರರ ಬಂಧನಗಳು ಯುವಜನರ ಹೋರಾಟದ ಬಗ್ಗೆ ಸರ್ಕಾರಕ್ಕಿರುವ ಆತಂಕವನ್ನು ತೋರಿಸುತ್ತವೆ ಎಂದೂ ದೂರಿದ್ದರು.

ಈ ನಡುವೆ ಸಂವಿಧಾನ ಮತ್ತು ಮತದಾನದ ಹಕ್ಕುಗಳನ್ನು ರಕ್ಷಿಸಲು ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಕಾಂಗ್ರೆಸ್ ಹೇಳಿದೆ.

ಇದೇ ವೇಳೆ, ದೆಹಲಿ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಕೆಲವು ಮೆಟ್ರೋ ನಿಲ್ದಾಣಗಳನ್ನು ಮುಚ್ಚಿದ್ದಾರೆ. ಇಂಟರ್‌ನೆಟ್ ನಿರ್ಬಂಧಗಳನ್ನೂ ವಿಧಿಸಲಾಗಿದ್ದು, ಈ ಕ್ರಮಗಳಿಗೆ ಟೀಕೆ ವ್ಯಕ್ತವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com