

ಬೆಂಗಳೂರು: ಕಾನೂನು ಪದವೀಧರರು ನ್ಯಾಯವನ್ನು ಎತ್ತಿಹಿಡಿಯಬೇಕು, ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸಬೇಕು ಹಾಗೂ ಸಂವಿಧಾನದ ಮೌಲ್ಯಗಳಿಗೆ ಸದಾ ಬದ್ಧರಾಗಿರಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಕರೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ನಡೆದ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (ಎನ್ಎಲ್ಎಸ್ಐಯು) 34ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, 'ಕಾನೂನು ವೃತ್ತಿಗೆ ಧೈರ್ಯ, ಪ್ರಾಮಾಣಿಕತೆ ಮತ್ತು ಸಾಮಾನ್ಯವಾಗಿ ಯಾರೂ ಗಮನಿಸದ ಧ್ವನಿಗಳನ್ನು ಆಲಿಸುವ ವಿನಯ ಅಗತ್ಯ' ಎಂದು ಹೇಳಿದರು.
“ನಿಮಗೆ ಅಭಿನಂದನೆಗಳನ್ನು ಸಲ್ಲಿಸುವುದರ ಜತೆಗೆ ಅಪಾರ ನಿರೀಕ್ಷೆಗಳನ್ನೂ ಇಟ್ಟುಕೊಂಡಿದ್ದೇನೆ. ಕಾನೂನು ಶಿಕ್ಷಣವು ಅಪರಾಧ ಅಥವಾ ಸಾಂವಿಧಾನಿಕ ಕಾನೂನಿನ ತತ್ವಗಳನ್ನು ಕಲಿಯುವುದಕ್ಕೆ ಮಾತ್ರ ಸೀಮಿತವಾಗಬಾರದು. ನಮ್ಮ ದೃಷ್ಟಿಕೋನಕ್ಕಿಂತ ಭಿನ್ನವಾಗಿ ಜಗತ್ತನ್ನು ನೋಡುವ ಜನರನ್ನು ಅರ್ಥಮಾಡಿಕೊಳ್ಳುವ ಅನುಭವವೂ ಅದರ ಭಾಗವಾಗಬೇಕು” ಎಂದು ಸಿಜೆಐ ಸೂರ್ಯಕಾಂತ್ ಪದವೀಧರರನ್ನು ಉದ್ದೇಶಿಸಿ ನುಡಿದರು.
‘ಕಾನೂನು ವೃತ್ತಿ ದುರ್ಬಲ ಮನಸ್ಸಿನವರಿಗಲ್ಲ’
ಕಾನೂನು ವೃತ್ತಿಯಲ್ಲಿ ಯಶಸ್ವಿಯಾಗಲು ಕಾನೂನು ವಿಧಿಗಳು ಮತ್ತು ನ್ಯಾಯಾಲಯದ ಹಿಂದಿನ ತೀರ್ಪುಗಳ ಜ್ಞಾನವೊಂದೇ ಸಾಕಾಗುವುದಿಲ್ಲ. ನ್ಯಾಯದ ಪರವಾಗಿ ನಿಲ್ಲುವ ಧೈರ್ಯ ಹಾಗೂ ಕಡೆಗಣಿಸಲ್ಪಟ್ಟವರ ಸಮಸ್ಯೆಗಳನ್ನು ಆಲಿಸುವ ವಿನಯವೂ ಅಗತ್ಯ ಎಂದು ಸಿಜೆಐ ಹೇಳಿದರು.
“ಕಾನೂನು ವೃತ್ತಿ ದುರ್ಬಲ ಮನಸ್ಸಿನವರಿಗಲ್ಲ. ಕಾನೂನು ವಿಧಿಗಳು ಮತ್ತು ಹಿಂದಿನ ತೀರ್ಪುಗಳ ಮೇಲೆ ಹಿಡಿತ ಸಾಧಿಸುವುದಷ್ಟೇ ಅಲ್ಲದೆ, ನ್ಯಾಯಯುತವಾದುದನ್ನು ಸಮರ್ಥಿಸುವ ಧೈರ್ಯ ಹಾಗೂ ಸಾಮಾನ್ಯವಾಗಿ ಕೇಳಿಸದ ಧ್ವನಿಗಳನ್ನು ಆಲಿಸುವ ವಿನಯವೂ ಬೇಕು. ವೃತ್ತಿಜೀವನದಲ್ಲಿ ಅನುಕೂಲಕ್ಕಾಗಿ ತಮ್ಮ ತತ್ವಗಳನ್ನು ಬಿಟ್ಟುಕೊಡಬಾರದು ಹಾಗೂ ಸುಲಭದ ಹಾದಿಗಳನ್ನು ಆಯ್ಕೆ ಮಾಡಿಕೊಳ್ಳಬಾರದು ಎಂದು ಪದವೀಧರರಿಗೆ ಸಿಜೆಐ ಎಚ್ಚರಿಕೆ ನೀಡಿದರು.
ಅಲ್ಲದೆ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ಮೌಲ್ಯಗಳು ಅವರ ವೃತ್ತಿಜೀವನದುದ್ದಕ್ಕೂ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.
ಸಮಾಜದ ಬಗ್ಗೆ ವಿಶಾಲ ಜವಾಬ್ದಾರಿ ಇರಲಿ
ಕಾನೂನು ವೃತ್ತಿಯ ಮೂಲಕ ಅನ್ಯಾಯವನ್ನು ಸರಿಪಡಿಸುವುದು, ವ್ಯಕ್ತಿಯ ಸ್ವಾತಂತ್ರ್ಯವನ್ನು ರಕ್ಷಿಸುವುದು ಮತ್ತು ಸಂವಿಧಾನವನ್ನು ಎತ್ತಿಹಿಡಿಯುವುದು ಸಾಧ್ಯ. ಇಂತಹ ಸೇವೆ ವಕೀಲರಿಗೆ ಆಳವಾದ ತೃಪ್ತಿಯನ್ನು ನೀಡಬಲ್ಲದು ಎಂದು ಸೂರ್ಯಕಾಂತ್ ಹೇಳಿದರು.
ಪದವೀಧರರು ತಮ್ಮ ಜವಾಬ್ದಾರಿಯನ್ನು ಕೇವಲ ವಕೀಲರಾಗಿ ಕಾರ್ಯನಿರ್ವಹಿಸುವುದಕ್ಕೆ ಸೀಮಿತಗೊಳಿಸಬಾರದು. ಸಮಾಜಕ್ಕೆ ಕೊಡುಗೆ ನೀಡುವ ವಿಶಾಲ ಹೊಣೆಗಾರಿಕೆಯನ್ನೂ ಗುರುತಿಸಬೇಕು. ನೀವು ಜಗತ್ತಿಗೆ ಕಾಲಿಡುವಾಗ, ದೇಶವು ನಿಮ್ಮನ್ನು ಕೇವಲ ಕಾನೂನು ವೃತ್ತಿಪರರಾಗಿ ಮಾತ್ರವಲ್ಲ, ಭರವಸೆಯ ದೂತರಾಗಿಯೂ ನೋಡುತ್ತಿದೆ ಎಂಬುದನ್ನು ಅರಿತುಕೊಳ್ಳಿ” ಎಂದು ಸಿಜೆಐ ಸೂರ್ಯಕಾಂತ್ ಹೇಳಿದರು.