ಫ್ಯಾಮಿನಿ ಪ್ಯಾಕ್
ಚಿತ್ರದ ನಾಯಕನಿಗೆ ಇದು 108ನೇ ಸಿನಿಮಾ. ನಿರ್ದೇಶಕನಿಗೆ 5ನೇ ಚಿತ್ರ. ಇಬ್ಬರ ಸಂಖ್ಯೆಯೂ ಮಹತ್ತರ ತಿರುವಿನಲ್ಲಿವೆ. ಸಹಜವಾಗಿ ಇವರ ಕಾಂಬಿನೇಷನ್ ಚಿತ್ರದ ಬಗ್ಗೆ ನಿರೀಕ್ಷೆಗಳು ಒಂಚೂರು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ಅಲ್ಲದೆ, ಇದೇ ಜೋಡಿ ಈ ಹಿಂದಿನ ಚಿತ್ರದಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡು ಮಾಡಿರುವುದು ಕೂಡ ಈ ನಿರೀಕ್ಷೆ ದುಪ್ಪಟ್ಟಾಗಲು ಕಾರಣವಾಗುತ್ತಿದೆ. ಹಾಗೆ ಬಹು ನಿರೀಕ್ಷೆಯೊಂದಿಗೆ ಸೆಟ್ಟೇರಿರುವ ಚಿತ್ರ, 'ವಜ್ರಕಾಯ'. ನಾಯಕನಾಗಿ ಸೆಂಚುರಿಸ್ಟಾರ್ ಶಿವರಾಜ್ಕುಮಾರ್, ನಿರ್ದೇಶಕನಾಗಿ ಹರ್ಷ, ನಿರ್ಮಾಪಕರಾಗಿ ಸಿ.ಆರ್. ಮನೋಹರ್ 'ವಜ್ರಕಾಯ'ದ ಬೆನ್ನಿಗೆ ನಿಂತಿದ್ದಾರೆ. 'ಭಜರಂಗಿ' ನಂತರ ಹರ್ಷ ಮತ್ತು ಶಿವಣ್ಣ ಕಾಂಬಿನೇಷನ್ ಮತ್ತೊಮ್ಮೆ ಈ ಚಿತ್ರದ ಮೂಲಕ ಒಂದಾಗಿದೆ.
ಇತ್ತೀಚೆಗೆ ಚಿತ್ರದ ಮುಹೂರ್ತ ನಡೆಯಿತು. ಎಂದಿನಂತೆ ಮೊದಲ ದೃಶ್ಯಕ್ಕೆ ನಟ ಪುನೀತ್ರಾಜ್ ಕುಮಾರ್ ಕ್ಲಾಪ್ ಮಾಡಿದರು. ನಟ ಶಿವರಾಜ್ಕುಮಾರ್ ಅವರ ಮನೆಯಲ್ಲೇ ನಡೆದ ಈ ಚಿತ್ರ ಸಮಾರಂಭಕ್ಕೆ ನಟರಾದ ಧ್ರುವ ಸರ್ಜಾ, ಪ್ರೇಮ್ ಮತ್ತಿತರರು ಆಗಮಿಸಿದ್ದರು. 'ಈ ಚಿತ್ರವನ್ನು ಖಂಡಿತಾ ಕುಟುಂಬ ಸಮೇತರಾಗಿ ಬಂದು ನೋಡುತ್ತೀರೆಂಬ ನಂಬಿಕೆ ನನಗಿದೆ. ಅದೇ ನಂಬಿಕೆಯಲ್ಲಿ ಈ ಚಿತ್ರವನ್ನು ಆರಂಭಿಸಿದ್ದೇನೆ. ನನ್ನ ಹಿಂದಿನ ಚಿತ್ರದಂತೆ ಈ ಚಿತ್ರ ಫ್ಯಾಮಿಲಿ ಪ್ರೇಕ್ಷಕರನ್ನು ದೂರ ಮಾಡಲ್ಲ' ಎಂದರು ಹರ್ಷ. 'ಕಥೆ ಹೇಳಿದಾಗಲೇ ಇದು ಫ್ಯಾಮಿಲಿ ಮ್ಯಾನ್ ಕಥೆ ಅನಿಸಿತು. ಹರ್ಷ ಹೇಳಿದಂತೆ ಇದು ಕೌಟುಂಬಿಕ ಚಿತ್ರವಾಗುವುದರಲ್ಲಿ ಎರಡು ಮಾತಿಲ್ಲ' ಎಂದು ನಿರ್ದೇಶಕರ ಮಾತನ್ನು ಅನುಮೋದಿಸಿದರು ಶಿವರಾಜ್ಕುಮಾರ್. 'ಭಜರಂಗಿ' ಚಿತ್ರಕ್ಕೆ ಫ್ಯಾಮಿಲಿ ಪ್ರೇಕ್ಷಕರು ಬರಲಿಲ್ಲ. ಮುಖ್ಯವಾಗಿ ಮಕ್ಕಳು ಚಿತ್ರ ನೋಡಲಿಲ್ಲ. ಇದಕ್ಕೆ ಕಾರಣ 'ಎ' ಪ್ರಮಾಣ ಪತ್ರವಾಗಿತ್ತು. ಹೀಗಾಗಿ ಅಲ್ಲಿ ಕಳೆದುಕೊಂಡ ಪ್ರೇಕ್ಷಕ ವರ್ಗವನ್ನು 'ವಜ್ರಕಾಯ'ದಲ್ಲಿ ಪಡೆಯುವ ಭರವಸೆಯಲ್ಲಿದ್ದಾರೆ ಚಿತ್ರತಂಡ.
'ಒಬ್ಬ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ಹೇಗಿರಬೇಕು ಎಂಬುದನ್ನು ಇಲ್ಲಿ ತೋರಿಸಲಾಗಿದೆ. ಈ ಚಿತ್ರದ ಮೂಲಕ ಶಿವಣ್ಣ ಕುಟುಂಬಗಳಿಗೆ ಮಾದರಿಯಾಗುತ್ತಾರೆ. ಎಲ್ಲ ವರ್ಗದ ಪ್ರೇಕ್ಷಕರು ಕೂತು ನೋಡುವಂಥ ಕಥೆ ಮಾಡಿದ್ದೇನೆ. ಸಮಾಜಕ್ಕೆ ಮಾದರಿ ವ್ಯಕ್ತಿಯಾಗುವಂತೆ ನಾಯಕನ ಪಾತ್ರವನ್ನು ಇಲ್ಲಿ ಕಟ್ಟಿಕೊಟ್ಟಿದ್ದೇನೆ' ಎನ್ನುತ್ತಾರೆ ಹರ್ಷ. 'ನಾನು ಮತ್ತು ಹರ್ಷ 'ಭಜರಂಗಿ' ನಂತರ ಮತ್ತೊಂದು ಸಿನಿಮಾ ಮಾಡುವ ಯೋಚನೆಯಲ್ಲಿದ್ದಾಗ ಹೊಳೆದ ಕಥೆ ಇದು. 3 ಗಂಟೆ ಕಥೆ ನಿರೂಪಿಸಿದ ಹರ್ಷ, ಒಬ್ಬ ಫ್ಯಾಮಿಲಿ ಮ್ಯಾನ್ ಹೇಗಿರಬೇಕು ಎಂಬುದು ಕಥೆಯ ಒಂದು ಸಾಲು. ನನ್ನ ಪ್ರಕಾರ ಈ ಚಿತ್ರ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ' ಎಂದರು ಶಿವರಾಜ್ ಕುಮಾರ್. ವಿಶೇಷ ಅಂದರೆ ನಾಲ್ಕು ಮಂದಿ ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ನಾಲ್ಕು ಮಂದಿಯ ಡೈಲಾಗ್ಗಳಲ್ಲಿ ಆಯ್ದ ಸಂಭಾಷಣೆಗಳನ್ನು ಬಳಸಿಕೊಳ್ಳುವ ಯೋಚನೆ ಚಿತ್ರತಂಡದ್ದು.
ನಿರ್ಮಾಪಕ ಸಿ.ಆರ್. ಮನೋಹರ್ ಈ ಹಿಂದಿಯೇ ಶಿವರಾಜ್ಕುಮಾರ್ ಜೊತೆ ಚಿತ್ರ ಮಾಡಬೇಕಿತ್ತು. ಸಮಯ ಸಿಗದೆ ಈಗ ಕಾಲ ಕೂಡಿಬಂದಿದೆಯಂತೆ. ನಿರ್ದೇಶಕ ಹರ್ಷ ನಿರ್ಮಾಪಕರ ಸಂಬಂಧಿ. ತಾಯಿ ಪಾತ್ರದಲ್ಲಿ ಪದ್ಮಜಾ ರಾವ್, ತಂದೆಯಾಗಿ ಅವಿನಾಶ್ ನಟಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಸ್ವಾಮಿ ಛಾಯಾಗ್ರಹಣ ಚಿತ್ರಕ್ಕಿದೆ. ಸದ್ಯಕ್ಕೆ ಶಿವರಾಜ್ಕುಮಾರ್ಗೆ ನಾಯಕಿ ಸಿಕ್ಕಿಲ್ಲ. ಈಗಾಗಲೇ 'ವಜ್ರಕಾಯ'ಕ್ಕೆ ಚಿತ್ರೀಕರಣ ಆರಂಭಗೊಂಡಿದ್ದು, ಎರಡನೇ ಹಂತದ ಚಿತ್ರೀಕರಣಕ್ಕೆ ನಾಯಕಿ ಸಿಗಬಹುದು. 'ಭಜರಂಗಿ'ಯ ವಿಲನ್ ಮಧು ಗುರುಸ್ವಾಮಿ ಮತ್ತೆ ಇಲ್ಲಿ ಖಳನಾಯಕನಾಗಿ ಅಬ್ಬರಿಸಲಿದ್ದಾರೆ.
- ಕೇಶವ