ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಲೇಖನ

ಮತ್ತೊಂದು ಮುಂಗಾರು ಮಳೆ?

Vishwanath S
Updated On : 12 Jun 2014, 3:35 am

ಯೋಗರಾಜ್ ಭಟ್ಟರೇ ಕೊಟ್ಟ ಕಥೆಯ ಎಳೆಯೊಂದು  'ಪ್ರೀತಿ ಗೀತಿ ಇತ್ಯಾದಿ'  ಎಂಬ ಹೆಸರಿನ ಚಿತ್ರವಾಗಿದೆ. ಈ ಟೈಟಲ್ ಕೊಟ್ಟದ್ದೂ ಕೂಡ ಭಟ್ಟರೇ!
ಭಟ್ಟರು ಈ ಹಿಂದೆ ಬರೆದ ಹಾಡುಗಳ ಹಲವು ಸಾಲುಗಳು ಭವಿಷ್ಯವಾಣಿಯೋ ಎಂಬಂತೆ ಮುಂದೊಂದು ದಿನ ಸತ್ಯವಾಗಿದ್ದವು.  ಹಾಗಾಗಿ ಭಟ್ಟರ ಕೆಲವು ಊಹೆಗಳನ್ನು, ಭವಿಷ್ಯವನ್ನು ನಂಬೋದು ತಪ್ಪೇನೂ ಅನಿಸುವುದಿಲ್ಲ. ತಮ್ಮ ಶಿಷ್ಯ ವೀರೇಂದ್ರ ಅಲಿಯಾಸ್ ವೈರಸ್ ವೀರೂ ಚೊಚ್ಚಲ ಬಾರಿಗೆ ನಿರ್ದೇಶಿಸಿ, ತಮ್ಮದೇ ಇನ್ನೊಬ್ಬ ಶಿಷ್ಯ ಪವನ್ ಒಡೆಯರ್ ಮೊದಲ ಬಾರಿಗೆ ನಾಯಕನಟನಾಗಿ ಅಭಿನಯಿಸಿರುವ ಈ ಚಿತ್ರದ ಪ್ರಥಮ ಪ್ರತಿ ನೋಡಿದ ನಂತರ ಭಟ್ಟರು ಈ ಚಿತ್ರ ಮತ್ತೊಂದು 'ಮುಂಗಾರು ಮಳೆ'ಆದೀತಾ? ಎಂಬಂಥ ಮಾತುಗಳನ್ನು ಆಪ್ತವಲಯದಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಭಟ್ಟರ ಪ್ರಕಾರ ಮುಂಗಾರುಮಳೆ ಚಿತ್ರವೇನೂ ಅದ್ಭುತ ಚಿತ್ರವಲ್ಲ. ಆದರೆ ಆ ಅವಧಿಯಲ್ಲಿ ಚಿತ್ರರಂಗಕ್ಕೆ ಬೇಕಿದ್ದ ಒಂದು ಅಗತ್ಯದ ತಿರುವು ಆ ಚಿತ್ರ ನೀಡಿತ್ತು. ಅವರು ಹೇಳುವಂತೆ ಪ್ರತಿ ಏಳುಎಂಟು ವರ್ಷಗಳಿಗೊಮ್ಮೆ ಈ ಸ್ಥಿತ್ಯಂತರ ಸಂಭವಿಸುತ್ತಾ ಇರುತ್ತದೆ. ಸುಮಾರು ಎಂಬತ್ತರ ದಶಕದಿಂದಲೂ ಈ ಟ್ರೆಂಡ್ ನಡಕೊಂಡೇ ಬಂದಿದೆ. ಬಹುಶಃ 'ಪ್ರೀತಿ ಗೀತಿ ಇತ್ಯಾದಿ' ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೊಂದು ಹೊಸ ಹುಮ್ಮಸ್ಸು ಸಿಗಬಹುದು ಎಂಬುದು ಭಟ್ಟರ ಅಂದಾಜು. 'ಪ್ರೀತಿ ಗೀತಿ ....'  ಚಿತ್ರ ಕೂಡ ಒಂದು ಮಾಮೂಲಿ ಪ್ರೇಮಕಥೆ ಇರುವ ಚಿತ್ರವೇ ಆಗಿದ್ದರೂ ಪ್ರೇಕ್ಷಕರ ಪಾಲಿಗೆ ಅದು ವಿಶೇಷವಾಗಿ ಕಾಣುವ ಸಾಧ್ಯತೆಗಳು ದಟ್ಟವಾಗಿವೆ ಎಂಬುದು ಅವರ ನಿರೀಕ್ಷೆ. ಭಟ್ಟರ ಈ ಭವಿಷ್ಯ ಸತ್ಯವಾದಲ್ಲಿ ಕನ್ನಡ ಇಂಡಸ್ಟ್ರಿಗೊಂದು ಹೊಸ ಟಾನಿಕ್ ದೊರಕಿದಂತೆಯೂ ಆಗುತ್ತದೆ. ಅವರ ಭವಿಷ್ಯಕ್ಕಾಗಿ ಕ್ಯೂ ನಿಲ್ಲುವವರ ಸಂಖ್ಯೆಯೂ ಹೆಚ್ಚಾಗುತ್ತದೆ. ಮೂರು ವಾರದ ನಂತರ ಪವಾಡ ಸೃಷ್ಟಿಸಿದ್ದ ಮುಂಗಾರುಮಳೆಯಂತೆ ಪ್ರೀತಿ ಗೀತಿ ಇತ್ಯಾದಿ ಕೂಡ ಸ್ಟೆಡಿ ಓಪನಿಂಗ್ ತೆಗೆದುಕೊಂಡು ಪಿಕಪ್ ಆಗುತ್ತೋ ಅಥವಾ ಆರಂಭದಿಂದಲೇ ಅಬ್ಬರಿಸುತ್ತೋ ಎಂಬುದನ್ನು ಚಿತ್ರದ ಕ್ವಾಲಿಟಿ ಹಾಗೂ ಪ್ರೇಕ್ಷಕರ ಪ್ರತಿಕ್ರಿಯೆಗಳು  ನಿರ್ಧರಿಸಲಿವೆ.

ಚೊಚ್ಚಲ ಚಿತ್ರದ ಬಿಡುಗಡೆಯ ಖುಷಿ ಹಾಗೂ ಬ್ಯುಸಿಯಲ್ಲಿರುವ  ನಾಯಕಿ ಸಂಗೀತಾ ಭಟ್ ಜೊತೆ ಅರ್ಜೆಂಟ್ ಅರ್ಜೆಂಟ್ ಮಾತುಕತೆ :

ಮೊದಲ ಚಿತ್ರ ಬಿಡುಗಡೆ ಆಗ್ತಿದೆ. ಏನ್ ಅನಿಸ್ತಾ ಇದೆ?
ನಾನು ನಾಲ್ಕು ದಿನಗಳಿಂದ ನಿದ್ದೆ ಮಾಡೋಕಾಗಿಲ್ಲ. ನರ್ವಸ್ಸೋ.. ಖುಷಿಯೋ ಏನೂ ಅರ್ಥ ಆಗ್ತಿಲ್ಲ. ಅದು ಹೇಳಿಕೊಳ್ಳೋಕೆ ಆಗದ ಫೀಲಿಂಗ್.

ಈ ಚಿತ್ರ  ಗೆಲ್ಲುತ್ತೆ ಅನಿಸ್ತಾ ಇದೆಯಾ? ಚಿತ್ರದಲ್ಲಿ  ಗೆಲ್ಲೋ ಅಂಥಾದ್ದೇನಿದೆ?

ಎಮೋಷನಲ್ ದೃಶ್ಯಗಳು ಮತ್ತು ಹಾಡುಗಳು ಚಿತ್ರದ ಹೈಲೈಟ್ಸ್. ಅದಕ್ಕೆ ಪೂರಕವಾಗಿ ಅಭಿನಯ ಬಂದಿದೆ. ಬಹುಶಃ ಇವು ಚಿತ್ರವನ್ನು ಗೆಲ್ಲಿಸಬಹುದು.

ಚಿತ್ರ ಗೆದ್ದಲ್ಲಿ ನಿಮಗೇನು ಲಾಭವಿದೆ? ನಾಯಕಿ ಪಾತ್ರ ಗುರುತಿಸಿಕೊಳ್ಳೋಷ್ಟು ಶಕ್ತವಾಗಿದೆಯಾ? ಈ ಚಿತ್ರದ ಮೂಲಕ ನಿಮಗೆ ನಾಯಕಿಪ್ರಧಾನ ಚಿತ್ರಗಳು ಸಿಗುವ ಛಾನ್ಸ್ ಇದೆಯಾ?
ನಾನು ಇದರಲ್ಲಿ ಗ್ಲಾಮರ್ ಗೊಂಬೆ ಅಲ್ಲ. ಅಭಿನಯಕ್ಕೆ ತುಂಬಾ ಸ್ಕೋಪ್ ಇರೋ ಪಾತ್ರ ಇದು. ಹಾಗಾಗಿ ಈ ಚಿತ್ರದ ಅಭಿನಯದ ಬಗ್ಗೆ ಒಳ್ಳೆ ಮಾತುಗಳನ್ನು ಕೇಳಿ ಬಿಡುಗಡೆಗೆ ಮೊದಲೇ ನನಗೆ ಹಲವಾರು ಅವಕಾಶಗಳು ದೊರಕಿವೆ. ಸೊ.. ರಿಲೀಸ್ ನಂತರ ಇನ್ನಷ್ಟು ಅವಕಾಶಗಳು ಬರೋದು  ಖಂಡಿತ.

ಕಿರುತೆರೆಯಿಂದ ಬಂದವರು ನೀವು.  ಈ ಚಿತ್ರದ ಸೋಲುಗೆಲುವು ನೋಡಿಕೊಂಡು ಮತ್ತೆ ಕಿರುತೆರೆ ಕಡೆಗೆ ವಾಲುವ ಯೋಜನೆ ಇದೆಯಾ?
ಖಂಡಿತಾ ಇಲ್ಲ. ಕಿರುತೆರೆ ಬಗ್ಗೆ ಅಪಾರ ಗೌರವವಿದೆ. ಅದು ನನಗೆ ಮೊದಲ ಬಾರಿಗೆ ಜನರೆದುರು ಪರಿಚಯಿಸಿದ್ದು. ಆದರೆ ಸದ್ಯಕ್ಕೆ ನಾಯಕಿಯಾಗುವ ಮಹದಾಸೆ ಇಟ್ಟುಕೊಂಡು ಶ್ರಮ ಪಡ್ತಾ ಇದ್ದೀನಿ. ಹಾಗಾಗಿ ಸದ್ಯಕ್ಕೆ ಕಿರುತೆರೆಗೊಂದು ದೀರ್ಘವಿರಾಮ.  ಹೀರೋಯಿನ್‌ಗಳ ಆಯಸ್ಸು ಹೇಗಿದ್ರೂ ಒಂದು ದಶಕಕ್ಕಿಂತ ಕಮ್ಮಿ. ಹಾಗಾಗಿ ಅಷ್ಟುವರ್ಷ ನನ್ನ ಅದೃಷ್ಟ ಪರೀಕ್ಷೆ ಇಲ್ಲೇ ನಡೆಸಿ ನಂತರ ಮತ್ತೆ ತವರುಮನೆ ಎಂಬಂತೆ ಕಿರುತೆರೆಗೆ ಹೋಗೋದ್ ಇದ್ದೇ ಇದೆ.

ಮುಂದಿನ ಚಿತ್ರಗಳು?
ಮಾಮೂ ಟೀ ಅಂಗಡಿ ಮತ್ತು ಕಿಸ್ಮತ್ ತಯಾರಾಗಿದೆ. 'ಖುಷ್ ಖುಷೀಲಿ' ಚಿತ್ರೀಕರಣ ನಡೀತಿದೆ. ಇನ್ನೊಂದೆರಡು ಚಿತ್ರಗಳು ಮಾತುಕತೆ ಹಂತದಲ್ಲಿವೆ.

ಈ ವೀರೇಂದ್ರ .. ಸೆಹ್ವಾಗ್ ಫ್ಯಾನ್

ಅಂತೂ ಅಂದುಕೊಂಡ ಸಮಯಕ್ಕೆ  ಚಿತ್ರ ಬಿಡುಗಡೆ ಆಗ್ತಿದೆ? ನಿಮ್ಮ ನಿರೀಕ್ಷೆಗಳೇನು ?
ನಾನು ತಟಸ್ಥನಾಗಿದ್ದೇನೆ. ಆದರೆ ಸಿನಿಮಾ ನೋಡಿದ ಇಂಡಸ್ಟ್ರಿ  ಮಂದಿಯೆಲ್ಲ ನನ್ನ ಬೆನ್ನ ಹಿಂದೆ ಚಿತ್ರವನ್ನು ಹೊಗಳುತ್ತಿದ್ದಾರೆ. ಅದನ್ನು ನಂಬಬಹುದಾದ್ದರಿಂದ ಚಿತ್ರ ಹಿಟ್ ಆಗಲಿದೆ ಅನಿಸುತ್ತಿದೆ.

ಭಟ್ಟರ ಭವಿಷ್ಯ ಕೂಡ ಅದೇ ಅಂತೆ !?
ಹೌದು.  ಇದು ಇನ್ನೊಂದು ಮುಂಗಾರು ಮಳೆ ಆಗಬಹುದು ಎಂಬ ಮಾತಾಡಿ ದಿಗಿಲು ಹುಟ್ಟಿಸಿದ್ದಾರೆ. ಅವರ ಆ ಮಾತೇ ನನಗೆ ಈಗ ವಿಚಿತ್ರ ಆತ್ಮವಿಶ್ವಾಸ ಕೊಟ್ಟು ಬಿಟ್ಟಿದೆ.

ಚಿತ್ರದ ಶಕ್ತಿಗಳೇನು ?
ಪ್ರೀತಿ ಗೀತಿ ಇತ್ಯಾದಿ ಎಂಬ ಶೀರ್ಷಿಕೆಯಲ್ಲಿ 'ಇತ್ಯಾದಿ' ಅಂದ್ರೆ ಎಮೋಷನ್ಸ್ ಅಂತ ವ್ಯಾಖ್ಯಾನಿಸಿಕೊಳ್ಳಬಹುದು ಎಂಬಷ್ಟರ ಮಟ್ಟಿಗೆ ಎಮೋಶನ್ಸ್ ವರ್ಕೌಟ್ ಆಗಿದೆ. ಅದೇ ಚಿತ್ರದ ದೊಡ್ಡ ಶಕ್ತಿ.

ಚಿತ್ರದ ಹಾಡುಗಳು ಕೂಡ ಸುದ್ದಿ ಮಾಡಿದೆಯಲ್ಲ?
ವೀರ್ ಸಮರ್ಥ್‌ರ ಸಂಗೀತದಲ್ಲಿ ಎಲ್ಲ ಹಾಡುಗಳೂ ಹಿಟ್ ಆಗಿವೆ. ಆ ಲೆಕ್ಕದಲ್ಲಿ ಮ್ಯೂಸಿಕ್ ಕೂಡ ಚಿತ್ರದ ಯಶಸ್ಸಿನಲ್ಲಿ ಸಿಂಹಪಾಲು ಪಡೆಯಬಹುದು. ತಿರ್ಬೋಕಿ ಟಕಟಕ ಹಾಡು ಪಡ್ಡೆಗಳಲ್ಲಿ ಫೇಮಸ್ ಆಗಿದೆ. ಮೆಲೋಡಿ ಬಯಸುವವರಿಗೆ 'ಏನೆಲ್ಲಾ ಆಗುವುದು...'  ಎಂಬ ಹಾಡು ಫೇವರಿಟ್ ಕಾಲರ್ ಟ್ಯೂನ್ ಸಾಂಗ್ ಆಗಿಬಿಟ್ಟಿದೆ.


-ನವೀನ್ ಸಾಗರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement