ಆಗಷ್ಟೆ ಜೋರಾಗಿ ಮಳೆ ಬಂದು ನಿಂತಿತ್ತು. ಹೊರಗೆ ತೇವಗೊಂಡ ಭೂಮಿಯ ಸುವಾಸನೆ. ಒಳಗಿನ ಎಸಿ ಹವಾದಲ್ಲಿ ಅದನ್ನು ಅಸ್ವಾದಿಸಲು ಆಗಲಿಲ್ಲ. ಆದರೆ, ಆ ಮಳೆಯಷ್ಟೇ ತಂಪಿನ ಮಾತುಗಳು ಅಲ್ಲಿದ್ದವರದ್ದು. ಮಳೆಯ ತಂಪು, ಎಸಿ ಹವಾ ನಡುವೆಯೂ 'ಒಗ್ಗರಣೆ' ಮಾತುಗಳಿಂದ ಯಾರ ಕಿವಿಯೂ ತಪ್ಪಿಸಿಕೊಂಡಂತೆ ಕಾಣಲಿಲ್ಲ. ಅಷ್ಟು ರುಚಿಕರವಾಗಿತ್ತು, ಅವರ ಮಾತು. ಅದು 'ಒಗ್ಗರಣೆ' ಚಿತ್ರದ ಗೆಲುವಿನ ಸಂಭ್ರಮ. ಅಲ್ಲಿ ನಟ, ನಿರ್ಮಾಪಕ, ನಿರ್ದೇಶಕರೂ ಆಗಿರುವ ಪ್ರಕಾಶ್ ರಾಜ್ ಜೊತೆ ಚಿತ್ರತಂಡ ಸೇರಿಕೊಂಡಿತ್ತು. ಬಿ. ಸುರೇಶ್, ಚಿತ್ರದ ವಿತರಕ ದಿನಕರ್ ತೂಗದೀಪ, ನೃತ್ಯ ನಿರ್ದೇಶಕಿ ಪೋನಿ ವರ್ಮ, ಛಾಯಾಗ್ರಾಹಕಿ ಪ್ರೀತಾ, ಸಾಹಿತಿ ಜಯಂತ್ ಕಾಯ್ಕಿಣಿ, ನಟ ಅಚ್ಯುತ್ ಕುಮಾರ್, ನಟಿ ಸಂಯುಕ್ತ ಬೆಳವಾಡಿ, ಮಂಡ್ಯ ರಮೇಶ್, ಸಂಕಲನಕಾರ ಜೋನಿ ಹರ್ಷ, ಸಹಾಯಕರಾದ ಸಂಚಾರಿ ವಿಜಯ್, ಅರವಿಂದ್ ಕುಪ್ಲಿಕರ್ ಹೀಗೆ ಎಲ್ಲರು ಇದ್ದರು.
ಮಂಡ್ಯ ರಮೇಶ್‌ರ ಕಚಗುಳಿ ಮಾತಿನ ನಿರೂಪಣೆ ನಡುವೆ ಒಬ್ಬೊಬ್ಬರಾಗಿ ಬಂದು ಚಿತ್ರದ ಗೆಲುವಿನ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದರು. ಇಂಥ ಯಶಸ್ಸಿಗೆ ಕಾರಣವಾಗಿದ್ದ ಪ್ರಕಾಶ್ ರಾಜ್ ಮಾತ್ರ 'ನಾನು ನೆಪ ಮಾತ್ರ' ಎನ್ನುವಂತೆ ಮೂಲೆಯಲ್ಲಿ ನಿಂತಿದ್ದರು. ಮಾತಿನ ನಡುವೆ ಆಗಾಗ ಟಾಂಗ್ ಕೊಟ್ಟು ಎಲ್ಲರನ್ನು ನಗಿಸುತ್ತಿದ್ದರು. ಅವರ ಈ ನಗೆ ಚಟಾಕಿಗಳು 'ಒಗ್ಗರಣೆ'ಯಷ್ಟೆ ಸೊಗಸಾಗಿತ್ತು. ಎಲ್ಲರ ಮಾತಿನ ನಂತರ ಪ್ರಕಾಶ್ ರಾಜ್‌ರ ಕೈಗೆ ಮೈಕು ಶಿಪ್ಟ್ ಆಯಿತು. 'ಈಗ ಕೃತಜ್ಞತೆ ಹೇಳುವ ಸಮಯ. ನನ್ನ ಚಿತ್ರವನ್ನು ಪ್ರೀತಿಸಿದ ಪ್ರತಿಯೊಬ್ಬರನ್ನೂ ನೆನಪಿಸಿಕೊಳ್ಳುತ್ತೇನೆ. ಅದರಲ್ಲೂ ಒಂದು ಅತ್ಯುತ್ತಮ ಚಿತ್ರವನ್ನು ಮಾಧ್ಯಮಗಳು ಕೊಂಡಾಡಿದ ರೀತಿಗೆ ನಾನು ಋುಣಿ. ಈ ಗೆಲುವು ನನ್ನ ಚಿತ್ರತಂಡಕ್ಕೆ ಮತ್ತು ಪ್ರೇಕ್ಷಕರಿಗೆ ಸಲ್ಲಬೇಕು. ನಿಮ್ಮ ಅಪ್ಪುಗೆಯಿಂದ ನಾನು ಖುಷಿಯಾಗಿದ್ದೇನೆ. ಕನ್ನಡದಲ್ಲೇ ಒಂದು ಸ್ವಮೇಕ್ ಚಿತ್ರ ಮಾಡಲಿದ್ದೇನೆ. ಇದು ನನ್ನ ಮುಂದಿನ ಚಿತ್ರವಾಗಲಿದೆ' ಎನ್ನುವಲ್ಲಿಗೆ ಪ್ರಕಾಶ್ ರಾಜ್ ಮಾತು ಮುಕ್ತಾಯವಾಯಿತು. ಕನ್ನಡ ಚಿತ್ರರಂಗದ ಮಟ್ಟಿಗೆ ಇಂಥ ಸಂಭ್ರಮಗಳು ತುಂಬಾ ಅಗತ್ಯವಿದೆ ಅನಿಸಿದ್ದು 'ಒಗ್ಗರಣೆ' ಚಿತ್ರದ ಈ ಸಂಭ್ರಮದ ಮಾತಿನ ಲಹರಿ ಮುಗಿದ ಮೇಲೆ.
ಅವರಿವರ ಮಾತು
ಬಿ.ಸುರೇಶ್: 'ಸಾಲ್ಟ್ ಆಂಡ್ ಪೆಪ್ಪರ್' ಚಿತ್ರವನ್ನು ನಿರ್ದೇಶಿಸಿಸಲು ಹೊರಟಾಗ, 'ಯಾಕೆ ಇವನು ಈ ಚಿತ್ರ ಮಾಡಬೇಕು' ಅನಿಸಿದ್ದು ನಿಜ. ನಾನು ಆಗಲೇ ಆ ಚಿತ್ರ ನೋಡಿದ್ದೆ. ಒಳ್ಳೆಯ ಚಿತ್ರವನ್ನು ಮತ್ತೆ ನಿರ್ದೇಶಿಸುವುದರ ಬಗ್ಗೆ ನನಗೆ ಪ್ರಶ್ನೆ ಇತ್ತು. ಆದರೆ, ಈತ ಮೈಸೂರಿನಲ್ಲಿ ಕೂತು ಚಿತ್ರಕಥೆ ಮಾಡಿ ಅದನ್ನ ನನಗೆ ಹೇಳಿದಾಗ ತುಂಬಾ ಖುಷಿಯಾದೆ. ನಿರ್ದೇಶಕನಾಗಿ ಪ್ರಕಾಶ್ ತುಂಬಾ ಬೆಳೆದಿದ್ದಾನೆ ಅಂದುಕೊಂಡೆ. ನನ್ನ ನಿರೀಕ್ಷೆ ಈಗ ನಿಜವಾಗಿದೆ.
ಅಚ್ಯುತ್ ಕುಮಾರ್: ಚಿತ್ರಮಂದಿರಗಳಿಂದ ದೂರ ಇದ್ದ ಒಂದು ವರ್ಗದ ಪ್ರೇಕ್ಷಕರನ್ನು ಈ ಚಿತ್ರ ಮತ್ತೆ ಕರೆದುಕೊಂಡು ಬಂದಿದೆ. ನಾನೇ ಚಿತ್ರಮಂದಿರದಲ್ಲಿ ಅಂಥ ಪ್ರೇಕ್ಷಕರನ್ನು ನೋಡಿ ಖುಷಿಯಾದೆ. ಇಂಥ ಚಿತ್ರಗಳು ಮತ್ತಷ್ಟು ಹೆಚ್ಚಾಗಲಿ. ಈ ಚಿತ್ರ ನೂರು ದಿನ ದಾಟಲಿ.
ಸಂಯುಕ್ತ ಬೆಳವಾಡಿ: ತುಂಬಾ ವರ್ಷಗಳ ನಂತರ ನಾವು ಕುಟುಂಬ ಸಮೇತರಾಗಿ ನೋಡಿದ ಚಿತ್ರ 'ಒಗ್ಗರಣೆ'. ನಮ್ಮ ಕುಟುಂಬವನ್ನೂ ಚಿತ್ರಮಂದಿರಕ್ಕೆ ಕರೆತಂದದ್ದು ಪ್ರಕಾಶ್ ರಾಜ್ ಅವರ ಚಿತ್ರದ ಸಾಧನೆ.
ದಿನಕರ್ ತೂಗದೀಪ: ಪ್ರಕಾಶ್ ಅವರೇ ಕರೆದು 'ಒಗ್ಗರಣೆ' ಚಿತ್ರವನ್ನು ವಿತರಣೆ ಮಾಡುವಂತೆ ಕೇಳಿದಾಗ ಯೋಚನೆ ಆಯಿತು. ಯಾಕೆಂದರೆ 'ಒಗ್ಗರಣೆ'ಯಂಥ ಚಿತ್ರವನ್ನು ಎಲ್ಲೆಲ್ಲಿ ಹಾಕಬೇಕು ಅಂತ ಗೊತ್ತಾಗಲಿಲ್ಲ. ಆದರೆ, ಎಲ್ಲಿ ಪ್ರದರ್ಶಿಸಬೇಕು ಅಂತ ಅವರೇ ನಿರ್ಧರಿಸಿದ್ದರಿಂದ ನಮ್ಮ ಕೆಲಸ ಸುಲಭವಾಯಿತು. ನಿರೀಕ್ಷೆಗೂ ಮೀರಿ ಗದ್ದಿದ್ದೇವೆ.
ಮಂಡ್ಯ ರಮೇಶ್: ಪಾತ್ರ ಚಿಕ್ಕದಾದರೂ ಅದಕ್ಕೆ ಬಂದ ಮೆಚ್ಚುಗೆಗಳು ದೊಡ್ಡದಾಗಿದ್ದವು. ಒಂದು ಪುಟ್ಟ ಪಾತ್ರ ಈ ಮಟ್ಟಿಗೆ ಪ್ರಭಾವಿಸುತ್ತದೆ ಅಂದರೆ ಅದಕ್ಕೆ ಪ್ರಕಾಶ್ ಕಾರಣ. ಈ ಚಿತ್ರದ ಗೆಲುವು ಇಡೀ ತಂಡಕ್ಕೆ ಸೇರಿದ್ದು.
ಪೋನಿ ವರ್ಮ: ನನ್ನ ಮೇಲೆ ನಂಬಿಕೆ ಇಟ್ಟು ಚಿತ್ರದಲ್ಲಿ ಕೆಲಸ ಮಾಡಲು ಅವಕಾಶ ಕೊಟ್ಟ ಪ್ರಕಾಶ್ ಅವರಿಗೆ ಧನ್ಯವಾದಗಳು. ನಮ್ಮೆಲ್ಲ ಶ್ರಮದಿಂದ ಚಿತ್ರ ಇಂದು ಗೆದ್ದಿದೆ.
ಪ್ರೀತಾ: ಚಿತ್ರಕ್ಕೆ ಛಾಯಾಗ್ರಹಣ ಮಾಡಿ ಅಂತ ಹೇಳುವ ಜೊತೆ ಸ್ವಾತಂತ್ರ್ಯ ಕೊಟ್ಟರು. ಹೀಗಾಗಿ ಪ್ರತಿ ದೃಶ್ಯಕ್ಕೂ ನನ್ನ ಕ್ಯಾಮೆರಾ ಕಲ್ಪನೆ ಜೊತೆಯಾಯಿತು. ನನ್ನ ಕೆಲಸ ಚೆನ್ನಾಗಿದೆ ಅಂದರೆ ಅದರ ಕ್ರೆಡಿಟ್ಟು ಪ್ರಕಾಶ್ ರಾಜ್ ಅವರಿಗೆ ಸಲ್ಲಬೇಕು.
ಜೋನಿ ಹರ್ಷ: 'ಒಗ್ಗರಣೆ'ಯಂಥ ಚಿತ್ರಗಳಿಗೆ ಸಂಕಲನ ಮಾಡುವುದು ಒಂಚೂರು ಸವಾಲಿನ ಕೆಲಸ. ಅದನ್ನು ನಾನು ಈ ಚಿತ್ರದ ಮೂಲಕ ಸಾಧಿಸಿದ್ದೇನೆ ಅನ್ನುವುದಕ್ಕಿಂತ ಸಾಧಿಸುವಂತೆ ಮಾಡಿದ್ದು ಈ ಚಿತ್ರ.
ಸಂಚಾರಿ ವಿಜಯ್: ನಮ್ಮಂಥ ಯುವ ಸಿನಿಮಾ ಕನಸುಗಾರರಿಗೆ ಒಂದು ಪ್ಲಾಟ್ ಫಾರಂ ಕೊಟ್ಟು ನಮ್ಮಿಂದಲೂ ಕೆಲಸ ಮಾಡಿಸಿ ಆ ಮೂಲಕ ಕೆಲಸ ಹೇಳಿಕೊಟ್ಟಿದ್ದು ಪ್ರಕಾಶ್ ಸರ್ ಅವರ ದೊಡ್ಡತನ.
ಅರವಿಂದ್ ಕುಪ್ಲಿಕರ್: ಅಸಿಸ್ಟೆಂಟ್ ಆಗಿ ಈ ಚಿತ್ರದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಭಯದಿಂದಲೇ ಪ್ರಕಾಶ್ ರಾಜ್ ಸರ್ ಬಳಿ ಹೋದ ನಮಗೆ ನಿರಾಸೆಯಾಗಲಿಲ್ಲ. ಎಲ್ಲರ ಶ್ರಮ 'ಒಗ್ಗರಣೆ' ಚಿತ್ರದಲ್ಲಿ ಕಾಣಿಸಿಕೊಂಡಿದೆ.
-ಆರ್. ಕೇಶವಮೂರ್ತಿ