ಸಿನಿಮಾ ಲೇಖನ

ಸತ್ಯ ಯಾವುದು?

ಚಿತ್ರರಂಗದಲ್ಲಿ ಮುಹೂರ್ತ ಸಮಾರಂಭಕ್ಕೆ ಬಹಳ ಪ್ರಾಮುಖ್ಯತೆ ಇದೆ. ಚಿತ್ರದ ಬಿಡುಗಡೆಗೆ ಹಾಗೂ ಇನ್ನಿತರ ಸಂಭ್ರಮಗಳಿಗೆ ಕೊಡುವಷ್ಟೇ ಅಥವಾ ಅದಕ್ಕಿಂತ ಹೆಚ್ಚು ಮಹತ್ವವನ್ನು ಮುಹೂರ್ತಕ್ಕೆ ನೀಡಲಾಗುತ್ತದೆ. ಮುಹೂರ್ತದ ಹೊತ್ತಲ್ಲೇ ಚಿತ್ರದ ಶೀರ್ಷಿಕೆ ಅಧಿಕೃತವಾಗಿ ಘೋಷಣೆಯಾಗುವುದು ಕೂಡ ವಾಡಿಕೆ. ಎಲ್ಲೋ ಕೆಲವು ಚಿತ್ರಗಳು ಮಾತ್ರ ಸೂಕ್ತ ಹೆಸರು ಸಿಗದ ಕಾರಣಕ್ಕೋ, ತಾವು ಅಂದ್ಕೊಂಡಿರೋ ಟೈಟಲ್ ಬೇರೆಯವರ ಸುಪರ್ದಿಯಲ್ಲಿ ಇರೋದಕ್ಕೋ ಪ್ರೊಡಕ್ಷನ್ ನಂಬರ್ ಮಾತ್ರ ನಮೂದಿಸಿ ಚಿತ್ರೀಕರಣಕ್ಕೆ ಮುಂದಾಗುತ್ತವೆ. ಕೆಲವೊಮ್ಮೆ ತಾತ್ಕಾಲಿಕ ಟೈಟಲಿಟ್ಟು ಶುರು ಮಾಡಿ ಮುಹೂರ್ತದ ಸಮಯಕ್ಕೆ ಒಂದು ಭರ್ಜರಿ ಟೈಟಲ್ ಹುಡುಕಿ ಅದನ್ನು ಅಧಿಕೃತಗೊಳಿಸುವುದೂ ಉಂಟು. ಮುಹೂರ್ತದ ಹೊತ್ತಲ್ಲಿ ಪ್ರಕಟಪಡಿಸಿದ ಟೈಟಲ್ ಬಿಡುಗಡೆ ಸಮಯಕ್ಕೆ ಬದಲಾಗಿರೋ ಉದಾಹರಣೆಗಳೂ ಕೂಡ ಉಂಟು. ಈ ಕೆಟಗರಿಗೆ ಹೊಸದೊಂದು ಚಿತ್ರ ಸೇರ್ಪಡೆಯಾಗಿದೆ. ಸೇರ್ಪಡೆ ಆಗಿರೋದು ವಿಶೇಷವಲ್ಲ ಯಾಕಂದ್ರೆ ಈ ಥರದ ವಿಷಯಗಳು ಚಿತ್ರರಂಗದಲ್ಲಿ ಮಾಮೂಲು. ಆದರೆ ಶೀರ್ಷಿಕೆಯ ಬದಲಾವಣೆ ಹಿಂದೆ ವಿವಾದಕ್ಕೆ ಈಡು ಮಾಡಬಹುದಾದ ಘಟನೆಯೊಂದು ಥಳುಕು ಹಾಕಿಕೊಂಡಿರುವುದು ಮಾತ್ರ ಬೇಸರದ ಸಂಗತಿ.
ಅದು ಕ್ಯಾಪಿಟಲ್ ಹೋಟೆಲ್‌ನಲ್ಲಿ ಅದ್ದೂರಿಯಾಗಿ ನಡೆದ ರಾಜ್‌ಬಹದ್ದೂರ್ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ. ಚಿತ್ರದ ನಾಯಕ ನವನಟ ಪುನೀತ್ ಹಾಗೂ ನಾಯಕಿ ಶ್ರೀ ಶ್ರುತಿ.

ಇಡೀ ತಂಡ ಅಕ್ಟೋಬರ್ ತಿಂಗಳಲ್ಲಿ ಸರಳವಾಗಿ ಮುಹೂರ್ತ ಮಾಡಿಕೊಂಡ 'ಅಳ್ತಿ' ಎಂಬ ಚಿತ್ರದ ಪೋಸ್ಟರ್ ಗಮನಿಸಿದರೆ, ಅದರಲ್ಲಿ  ನಿರ್ಮಾಪಕ ದಿಲ್ ಸತ್ಯ, ನಿರ್ದೇಶಕ ಆಲ್‌ವಿನ್ ಅವರ ಹೆಸರುಗಳು ಹಾಗೂ  ಶ್ರೀಶ್ರುತಿ-ರಂಜಿತ್‌ಕುಮಾರ್ ಎಂಬ ಹೊಸ ಮುಖಗಳ ಚಿತ್ರಗಳು ಕಾಣಿಸುತ್ತವೆ. ಹಾಗಾದರೆ ಆ ಚಿತ್ರದ ಕಥೆ ಏನಾಯ್ತು? ಆ ಚಿತ್ರಕ್ಕೂ ಈ ಚಿತ್ರಕ್ಕೂ ಏನಾದರೂ ಸಂಬಂಧ ಇದೆಯಾ? ಹೌದಾದರೆ, ಹೀರೋ ಬದಲಾದದ್ದು ಏಕೆ? ಚಿತ್ರದ ಟೈಟಲ್ ಬದಲಾದದ್ದು ಏಕೆ? ಇತ್ಯಾದಿ ಪ್ರಶ್ನೆಗಳು ಮೂಡಿ ಚಿತ್ರದ ಮಾಜೀ ನಾಯಕ ರಂಜಿತ್ ಹಾಗೂ ನಿರ್ಮಾಪಕ ದಿಲ್‌ಸತ್ಯ ಅವರನ್ನು ಸಂಪರ್ಕಿಸಿದಾಗ ಒಂದಷ್ಟು ವಿರೋಧಾಭಾಸ ಹಾಗೂ ವಿವಾದಾತ್ಮಕ ಹೇಳಿಕೆಗಳು ಬರುತ್ತವೆ.
ಕಿರುತೆರೆಯಲ್ಲಿ ನಟನೆಯ ಅನುಭವ ಪಡೆದು ಮೊದಲ ಬಾರಿಗೆ ನಾಯಕನಾಗುವ ಅವಕಾಶ ಪಡೆದಿದ್ದ ರಂಜಿತ್ ತನ್ನ ಅಳಲು ತೋಡಿಕೊಳ್ಳೋದು ಹೀಗೆ:
"ಬೇರೊಂದು ಮೂಲದಿಂದ ನನಗೆ ನಾಯಕನ ಪಾತ್ರಕ್ಕೆ ಕರೆ ಬಂತು. ಚಿತ್ರದ ಕಥೆ ಹೇಳಿರಲಿಲ್ಲ. ಆದರೆ ನಿರ್ದೇಶಕ ಆಲ್‌ವಿನ್, ಕುವೆಂಪು ಅವರ ಬರಹದ ಒಂದು ಸಾಲಿನಿಂದ ಪ್ರೇರಿತನಾಗಿ ಲವ್ ಸ್ಟೋರಿ ಮಾಡಿದ್ದೇನೆ. ನೀವೇ ನಾಯಕ ಅಂದರು.  ಆ ನಂತರ ಚಿತ್ರಕ್ಕೆ ಒಂದಷ್ಟು ಹಣ ಹೂಡಬೇಕೆಂದು ಒತ್ತಾಯ ಮಾಡತೊಡಗಿದರು. ನಾನು ಖಡಾಖಂಡಿತವಾಗಿ ಸಾಧ್ಯವಿಲ್ಲ ಅಂದಮೇಲೂ, ನೀವು ಹೊಸಬರು. ಅವಕಾಶ ಕೊಟ್ಟಿದೀವಿ, ನಮಗೂ ನಿಮ್ಮಿಂದ ರಿಸ್ಕ್ ಇದೆ. ಮೂರು ಲಕ್ಷವಾದರೂ ಕೊಡಿ ಅಂದ್ರು. ಸಾಧ್ಯವೇ ಇಲ್ಲ ಕಾಸು ಕೊಟ್ಟು ನಟಿಸುವ ಅಗತ್ಯ ನನಗಿಲ್ಲ ಅಂದಾಗ,  ಮುಹೂರ್ತದ ಖರ್ಚು ನೋಡಿಕೊಳ್ಳಿ. ಮುಹೂರ್ತ ಮುಗಿದ ಮೇಲೆ ನೋಡೋಣ ಅಂದ್ರು. ಮುಹೂರ್ತಕ್ಕೆಂದು ಮೂವತ್ತೈದು ಸಾವಿರ ನಿರ್ದೇಶಕರ ಕೈಗೆ ಕೊಟ್ಟೆ. ಮುಹೂರ್ತವೇನೋ ಆಯಿತು. ನಂತರ ಮತ್ತೆ ಮೂರು ಲಕ್ಷ ಬೇಕು..ಇಲ್ಲಾಂದ್ರೆ ಶೂಟಿಂಗ್ ಶುರು ಮಾಡೋಕಾಗಲ್ಲ ಅನ್ನತೊಡಗಿದರು. ನಾನು ಹಣ ಕೊಡುವುದು ಸಾಧ್ಯವೇ ಇಲ್ಲ ಅಂದಾಗ, ಸದ್ಯಕ್ಕೆ ಪ್ರಾಜೆಕ್ಟ್ ಕೈ ಬಿಡ್ತಿದೀನಿ ಅಂದರು. ಸರಿ ನಿಮ್ಮಿಷ್ಟ. ನನ್ನ ದುಡ್ಡು ನನಗೆ ವಾಪಸ್ ಕೊಡಿ ಅಂತ ಕೇಳಿದೆ. ದುಡ್ಡು ಕೊಡುವ ಬದಲು ನಿನ್ನಿಂದಲೇ ಈ ಪ್ರಾಜೆಕ್ಟ್ ನಿಂತು ಹೋಯ್ತು. ಬೇರೆ ಸಿನಿಮಾ ಮಾಡ್ತಿದ್ದೇವೆ. ಬೇರೆ ಹೀರೋ ಸೆಲೆಕ್ಟ್ ಮಾಡಿದ್ದೇವೆ. ಆ ಹೀರೋ ದುಡ್ಡು ಹಾಕ್ತಿದಾನೆ ಅಂದರು. ಏನಾದರೂ ಮಾಡಿಕೊಳ್ಳಿ. ದುಡ್ಡು ಕೊಡಿ ಅಂತ ಕೇಳಿದ್ರೆ, ನೀನು ಏನೇ ಕೇಳೋದಾದ್ರೂ ನಿರ್ಮಾಪಕ ದಿಲ್‌ಸತ್ಯ ಅವರನ್ನ ಕೇಳು ಅಂದ್ರು. ದಿಲ್‌ಸತ್ಯ ಅವರಿಗೆ ಕೇಳಿದ್ರೆ ನೀ ಕೊಟ್ಟಿದ್ದು ನಿರ್ದೇಶಕರ ಕೈಗೆ. ಅವರುಂಟು ನೀನುಂಟು ಅಂದುಬಿಟ್ಟರು. ಸಣ್ಣ ವಿಲನ್ ರೋಲ್ ಇದೆ ಮಾಡೋದಾದ್ರೆ ಮಾಡು ಅಥವಾ ಸೆಕೆಂಡ್ ಹೀರೋ ಆಗೋದಾದ್ರೆ ಆಗು ಅಂತ ಆಫರ್ ಕೊಟ್ರು. ಹೀರೋ ಆಗಿ ಸೆಲೆಕ್ಟ್ ಆದವನು ದುಡ್ಡು ಹಾಕಿಲ್ಲ ಅನ್ನೋ ಕಾರಣಕ್ಕೆ ಅಥವಾ ನಾ ಕೊಟ್ಟ ಮೂವತ್ತೈದು ಸಾವಿರಕ್ಕೆ ಬದಲಾಗಿ ಚಿಕ್ಕ ಪಾತ್ರ ಹೇಗೆ ಒಪ್ಪಿಕೊಳ್ಳಲಿ? ಆಗೋದಿಲ್ಲ ಅಂದೆ. ನನಗೂ ದಿಲ್‌ಸತ್ಯ ಅವರಿಗೂ ಪರಿಚಯ ಇರೋ ಒಬ್ಬ ಹಿರಿಯರ ಮೂಲಕ ಮಾತಾಡಿಸಿ ದುಡ್ಡು ವಾಪಾಸ್ ಪಡೆಯೋಕೂ ಪ್ರಯತ್ನ ಪಟ್ಟೆ. ಅದಕ್ಕೆ ರೌಡಿಗಳ ಮೂಲಕ ಹೆದರಿಸಿದೀನಿ ಅನ್ನೋ ಬಣ್ಣ ಕಟ್ಟಿ, ನನಗೆ ಫೋನ್‌ಗೂ ಸಿಗದಂತೆ ಪೂರ್ತಿಯಾಗಿ ಡಿಸ್‌ಕನೆಕ್ಟ್ ಆಗಿಬಿಟ್ಟರು. ಈಗ ಆಡಿಯೋ ರಿಲೀಸ್ ಆದಾಗಲೇ ಗೊತ್ತಾಗಿದ್ದು ಇಷ್ಟೊಂದು ಬೆಳವಣಿಗೆ ಆಗಿದೆ ಅಂತ. ಅವರ ಚಿತ್ರದಲ್ಲಿ ನಾ ಹೀರೋ ಆಗದ ಬಗ್ಗೆ ನನಗೆ ಯಾವುದೇ ಬೇಸರ ಇಲ್ಲ. ಅವರ ಚಿತ್ರಕ್ಕೆ ಒಳ್ಳೆದಾಗಲಿ. ನನ್ನ ಹಣ ನನಗೆ ವಾಪಸ್ ಮಾಡಲಿ ಅಷ್ಟೇ."
ದಿಲ್‌ಸತ್ಯ  ವರ್ಷನ್
'ಅಳ್ತಿ' ಅನ್ನೋ ಸಬ್ಜೆಕ್ಟ್ ಇಟ್ಕೊಂಡು  ಆಲ್‌ವಿನ್ ಅವಾರ್ಡ್‌ಗೋಸ್ಕರ ಲೋ ಬಜೆಟ್ ಚಿತ್ರ  ಪ್ಲಾನ್ ಮಾಡಿದ್ರು. ಆದರೆ ನಾನು ನಿರ್ಮಾಪಕನಾಗಿ ಜವಾಬ್ದಾರಿ ವಹಿಸಿಕೊಂಡಾಗ, ಅದನ್ನು ಪೂರ್ತಿಯಾಗಿ ಕಮರ್ಷಿಯಲ್ ಆ್ಯಕ್ಷನ್ ಲವ್‌ಸ್ಟೋರಿಯಾಗಿ ಬದಲಾಯಿಸಲು ನಿರ್ಧರಿಸಿದೆವು. ಚಿತ್ರದ ಹೆಸರನ್ನೂ ಬದಲಿಸಿದೆವು. ಸ್ಕ್ರಿಪ್ಟ್ ತಯಾರಾದ ಮೇಲೆ ಅದಕ್ಕೆ ಸ್ಟಂಟ್ ಮತ್ತು ಆ್ಯಕ್ಷನ್‌ಗಳಲ್ಲಿ ಪರಿಣಿತಿ ಹೊಂದಿದವರು ಬೇಕೆನಿಸಿ ಥ್ರಿಲ್ಲರ್ ಮಂಜು ಅವರ ಸಂಬಂಧಿ ಹುಡುಗ ಪುನೀತ್‌ನನ್ನು ಆಯ್ಕೆ ಮಾಡಿದೆವು . ರಂಜಿತ್ ಮತ್ತು ಆಲ್‌ವಿನ್ ನಡುವೆ ದುಡ್ಡಿನ ವ್ಯವಹಾರ ನಡೆದ ಬಗ್ಗೆ ನನಗೆ ಮಾಹಿತಿ ಇಲ್ಲ . ರಂಜಿತ್‌ಗೂ ಇದನ್ನೇ ಹೇಳಿದ್ದೇನೆ. ಇಷ್ಟಾದ ಮೇಲೂ ರಂಜಿತ್‌ಗೆ ಈ ಚಿತ್ರದಲ್ಲಿ ಬೇರೆ ಪಾತ್ರಕ್ಕೆ ಆಫರ್‌ಕೊಟ್ಟೆ. ಅವರೇ ಒಪ್ಪಲಿಲ್ಲ. ದುಡ್ಡಿಗಾಗಿ ಯಾರಿಂದಲೋ ಬೆದರಿಕೆ ಕರೆ ಮಾಡಿಸಿದರು. ಬೇಸರವಾಗಿ ಆ ನಂತರ ನಾನು ಅವರಿಂದ ಸಂಪರ್ಕ ಕಡಿದುಕೊಂಡೆ. ನನಗಾಗಲೀ ನನ್ನ ಚಿತ್ರಕ್ಕಾಗಲೀ ವಿವಾದ ಹಾಗೂ ನೆಗಟಿವ್ ಪಬ್ಲಿಸಿಟಿ ಅಗತ್ಯ ಖಂಡಿತ ಬೇಡ. ಅವೆಲ್ಲ ಚಿತ್ರವನ್ನ ಗೆಲ್ಲಿಸೋಲ್ಲ.  ಕಷ್ಟಪಟ್ಟು ಒಳ್ಳೆ ಚಿತ್ರ ಮಾಡಿದ್ದೇನೆ. ಚಿತ್ರ ತನ್ನ ಶಕ್ತಿಯ ಮೇಲೆ ಗೆಲ್ಲುತ್ತೆ ಅನ್ನೋ ವಿಶ್ವಾಸ ಇದೆ. ನಿರ್ದೇಶಕರೊಂದಿಗೆ ಮಾತಾಡಿ ರಂಜಿತ್ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲಿ. ನಾನು ಈ ವಿವಾದದಿಂದ ಹೊರಗುಳಿಯಬಯಸುತ್ತೇನೆ.    
ರಂಜಿತ್ ಹೇಳಿರುವ ವಿಷಯಗಳಲ್ಲಿ ಸತ್ಯಾಂಶ ಇರಬಹುದೆಂದು ಅನಿಸುವುದಕ್ಕೆ ಅಳ್ತಿ ಚಿತ್ರದ ಪೋಸ್ಟರ್ ಹಾಗೂ ಅದರಲ್ಲಿ ಕಾಣುವ ದಿಲ್‌ಸತ್ಯ, ಆಲ್‌ವಿನ್ ಹಾಗೂ ಇತರೆ ತಾಂತ್ರಿಕ ವರ್ಗದ ಹೆಸರುಗಳು ಬಲ ನೀಡುತ್ತವೆ. ರಾಜ್‌ಬಹದ್ದೂರ್ ಚಿತ್ರದಲ್ಲಿರುವ ಹಳೆಗನ್ನಡದ ಶೈಲಿಯ ಒಂದು ಹಾಡಿನಲ್ಲಿ 'ಅಳ್ತಿ' ಎಂಬ ಪದದ ಉಲ್ಲೇಖ ಕೂಡ ಇದ್ದು, ಇದು ಹೆಸರು ಮತ್ತು ನಾಯಕನನ್ನು ಮಾತ್ರ ಬದಲಿಸಿಕೊಂಡು ಬರುತ್ತಿರುವ ಚಿತ್ರ ಎಂಬುದಕ್ಕೆ ಪುಷ್ಟಿ ನೀಡುತ್ತದೆ. ಇತ್ತ ದಿಲ್ ಸತ್ಯ ಹೇಳುವಂತೆ ಮೊದಲು ಮಾಡಿಕೊಂಡ ಕಥೆಗೆ ರಂಜಿತ್ ಸೂಕ್ತವಾಗಿದ್ದು ನಂತರ ಕಥೆ ಬದಲಾದಾಗ ರಂಜಿತ್ ಅದಕ್ಕೆ ಸೂಟ್ ಆಗಲಿಕ್ಕಿಲ್ಲ ಅನಿಸಿದ್ದರೂ ಅದು ತಪ್ಪೆನಿಸುವುದಿಲ್ಲ. ಆದರೆ  ದುಡ್ಡು ಪಡೆದು ನಾಯಕನ ಪಾತ್ರ ನೀಡುವ ಪದ್ಧತಿಯಾಗಲೀ ದುಡ್ಡು ಕೊಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಪ್ರತಿಭಾವಂತರು ಅವಕಾಶ ವಂಚಿತರಾಗುವುದಾಗಲೀ ಚಿತ್ರರಂಗದ ಹಿತಾಸಕ್ತಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ. ಅದು ಕಲಾವಿದರಾಗುವ ಕನಸಿಟ್ಟುಕೊಂಡು ಬರುವವವರ ಆತ್ಮವಿಶ್ವಾಸಕ್ಕೆ ದೊಡ್ಡ ಏಟು ಕೊಡುತ್ತದೆ ಕೂಡ. ಈ ವಿಷಯ ದೊಡ್ಡ ವಿವಾದವಾಗಿ ಬೆಳೆಯುವ ಮೊದಲು ನಿರ್ಮಾಪಕ- ನಿರ್ದೇಶಕರು ಎಚ್ಚೆತ್ತುಕೊಂಡು ಇತ್ಯರ್ಥಗೊಳಿಸಿಕೊಳ್ಳುವುದು ಚಿತ್ರೋದ್ಯಮದ ವೃತ್ತಿಪರತೆಯ ದೃಷ್ಟಿಯಿಂದ ಒಳಿತು.

ನವೀನ್ ಸಾಗರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪೆನ್ ಡ್ರೈವ್ ಸಲ್ಲಿಕೆ; ನ್ಯಾಯಾಂಗ ತನಿಖೆಗೆ ಆಗ್ರಹ!

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

ಬೆಂಗಳೂರಿನಲ್ಲಿ SIR ಪ್ರತಿಭಟನೆ ವೇಳೆ ಪೊಲೀಸ್ ಕ್ರಮ: ಮರು ಪರಿಶೀಲನೆಗೆ ಪ್ರಿಯಾಂಕ್ ಖರ್ಗೆ ಆದೇಶ!

ಪುಣೆ ಟೆಕ್ಕಿ ಆತ್ಮಹತ್ಯೆ: ಡೆತ್‌ನೋಟ್‌ ಪತ್ತೆ; ಸಂಬಳ, ತವರು ಮನೆಯ ಫ್ಲಾಟ್ ವರ್ಗಾಯಿಸುವಂತೆ ಅತ್ತೆ-ಮಾವ ಒತ್ತಡ!