ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಲೇಖನ

ಸದ್ದು ಮಾಡುವವನು ಸುದ್ದಿಯಾಗಲಾರ!

ಅದು ಹಾಡಿನ ಚಿತ್ರೀಕರಣ. ಅದಕ್ಕಾಗಿ ಅಲ್ಲಿ ಅದ್ಭುತವಾದ ಸೆಟ್‌ವೊಂದು ತಲೆ ಎತ್ತಿದೆ. ರಂಗುರಂಗಿನ ಆ ಸೆಟ್‌ನಲ್ಲಿ ಎಲ್ಲವೂ ಕಲರ್‌ಫುಲ್...

Rashmi Kasaragodu
Updated On : 13 Mar 2014, 3:38 am

ಅದು ಹಾಡಿನ ಚಿತ್ರೀಕರಣ. ಅದಕ್ಕಾಗಿ ಅಲ್ಲಿ ಅದ್ಭುತವಾದ ಸೆಟ್‌ವೊಂದು ತಲೆ ಎತ್ತಿದೆ. ರಂಗುರಂಗಿನ ಆ ಸೆಟ್‌ನಲ್ಲಿ ಎಲ್ಲವೂ ಕಲರ್‌ಫುಲ್. ಜಗಮಗಿಸುವ ಬೆಳಕು, ಕ್ಯಾಮೆರಾಗಳ ಓಡಾಟ, ನಟ- ನಟಿಯರ ಬೆಡಗು, ನಿರ್ದೇಶಕನ ಅಬ್ಬರ, ಸೆಟ್ ಬಾಯ್‌ಗಳ ಗಲಾಟೆ, ಲೈಟ್ ಬಾಯ್‌ಗಳ ಬೆವರು, ಕ್ಯಾಮೆರಾ ಕ್ರೇನ್‌ನ ಜೋಕಾಲಿ, ಕಣ್ಣು ಕುಕ್ಕುವ ವಸ್ತ್ರಗಳಲ್ಲಿ ಜ್ಯೂನಿಯರ್ ನಟಿಯರು ಎಲ್ಲ ಸಿದ್ಧವಾಗಿದೆ. ನಾಯಕ, ನಾಯಕಿ ಎಂಟ್ರಿಯಾಗಿ ಸ್ಟೆಪ್ಸ್‌ಗೆ ರೆಡಿಯಾಗುತ್ತಿದ್ದಂತೆಯೇ ಅಲ್ಲೊಂದು ಸದ್ದು ಮನೆ ಮಾಡುತ್ತದೆ. ರಾಗವಾಗಿ, ಕಿವಿಗೆ ಇಂಪಾಗಿ ಆ ಶಬ್ಧ ಅಲ್ಲಿ ತನ್ನ ಇರುವಿಕೆಯನ್ನು ತೋರಿಸುತ್ತಲೇ ಹೋಗುತ್ತದೆ.
 ಹೀಗೆ ಸಂಭ್ರಮದಲ್ಲಿ ನಲಿಯುತ್ತಿರುವ ಆ ಸೆಟ್‌ನಲ್ಲಿ ಒಬ್ಬ ಲೈಟ್ ಬಾಯ್‌ನಿಂದ ಹಿಡಿದು ಸೆಟ್ ಬಾಯ್ ತನಕ ಎಲ್ಲರೂ ಕಣ್ಣಿಗೆ ರಾಚುತ್ತಾರೆ. ಕ್ಯಾಮೆರಾಗಳು ಕೂಡ ಅವರ ಮೇಲೆ ಫೋಕಸ್ ಮಾಡುತ್ತವೆ. ಕೊನೆಗೂ ಕೇಳಿಸಿದ 'ಸೌಂಡು' ಕೂಡ ಎಲ್ಲರ ಗಮನ ಸೆಳೆಯುತ್ತದೆ. ಆದರೆ, ಅದೇ ಸೌಂಡ್ ಅನ್ನು ಅಗತ್ಯವಿದ್ದಾಗ ಆನ್ ಮಾಡುತ್ತಾ, ಬೇಡ ಎಂದಾಗ ಅಫ್ ಮಾಡುತ್ತಾ ಸೆಟ್‌ನ ಮೂಲೆಯಲ್ಲಿ ಕೂತಿರುವ ಆ ವ್ಯಕ್ತಿ ಮಾತ್ರ ಯಾರ ಕಣ್ಣಿಗೂ ಕಾಣಲ್ಲ. ಇಡೀ ಸೆಟ್‌ಗೆ ತನ್ನ ಸೌಂಡ್ ರೆಕಾರ್ಡ್‌ನಿಂದ ಶಬ್ಧದ ಜೀವ ತುಂಬುತ್ತಾ 'ಮರೆ'ಯಾಗಿರುವ ಆತನೇ ಸೌಂಡ್ ರೆಕಾರ್ಡಿಸ್ಟ್. ತೆರೆ ಮೇಲಿನ ತಾರೆಗಳನ್ನು ನೋಡಿ ಸಂಭ್ರಮಿಸುವ ಬಹಳಷ್ಟು ಮಂದಿಗೆ ಸಿನಿಮಾ ಸೆಟ್‌ನ ಕತ್ತಲಲ್ಲಿ ಸೌಂಡ್ ರೆಕಾರ್ಡಿಸ್ಟ್ ಒಬ್ಬರಿರುತ್ತಾರೆಂದು ತಿಳಿಯದು. ಹಾಗೆ ಯಾರ ಗಮನಕ್ಕೂ ಬಾರದ ನೂರಾರು ಮಂದಿ ಸೌಂಡ್ ರೆಕಾರ್ಡಿಸ್ಟ್‌ಗಳು ಕನ್ನಡ ಚಿತ್ರರಂಗದಲ್ಲಿದ್ದಾರೆ. ಅಂಥವರ ಪೈಕಿ ಆನಂದ್ ಪ್ರಮುಖರು. ಶೂಟಿಂಗ್ ಸೆಟ್‌ಗೆ ಹೋದಾಗ ಕಂಡವರು ಇವರು. ಅಲ್ಲಿದ್ದ ಎಲ್ಲ ಲೈಟ್‌ಗಳು ಸೆಟ್ ಮೇಲೆ ಕೇಂದ್ರೀಕೃತವಾಗಿದ್ದವು. ಕನಿಷ್ಠ ಸೆಟ್ ಬೆಳಕಿನ ಸ್ಪರ್ಶಕ್ಕೂ ಅವಕಾಶವಿರದೆ ಕತ್ತಲಲ್ಲಿ ಕೂತು ನಿರ್ದೇಶಕ 'ರೆಡಿ,  ಸೌಂಡು' ಎಂದಾಗ ರೆಕಾರ್ಡ್ ಮೇಲೆ ಬೆರಳು ಒತ್ತುತ್ತ, 'ಓಕೆ, ಸ್ಟಾಪ್‌' ಎಂದಾಗ ಸುಮ್ಮನೆ ಕೂತಿದ್ದ ಆನಂದ್ ಅವರ ಜೊತೆಗೆ ಮಾತಿಗಿಳಿದಾಗ...
 ಆನಂದ್ ಅವರ ಮೂಲ ಆಂಧ್ರದ ಕಡಪ ಜಿಲ್ಲೆಯ ರಾಜಪೇಟ ಬಳಿಯ ಪುಟ್ಟ ಹಳ್ಳಿ. ಚಿಕ್ಕಂದಿನಲ್ಲೇ ರಾಜ್ಯಕ್ಕೆ ವಲಸೆ ಬಂದವರು. ಅದು ಕೂಡ ಸಿನಿಮಾಗಾಗಿ. ಚಿತ್ರರಂಗಕ್ಕೆ ಬಂದು 40 ವರ್ಷ ಆಗಿದೆ. ವಯಸ್ಸು 69 ದಾಟಿದೆ. ಬೆಳೆದು ನಿಂತ ಮಗಳು ಹಾಗೂ ಪತ್ನಿ ಜೊತೆ ಬೆಂಗಳೂರಿನ ಕುರಬರಹಳ್ಳಿಯ ಬಸ್ ನಿಲ್ದಾಣದ ಹತ್ತಿರ ಬಾಡಿಗೆ ಮನೆಯಲ್ಲಿ ವಾಸುತ್ತಿದ್ದಾರೆ. ತಮಿಳುನಾಡಿನ ಎಂಜಿಆರ್, ಶಿವಾಜಿ ಗಣೇಶನ್, ರಜನಿಕಾಂತ್‌ರಿಂದ ಹಿಡಿದು ತೆಲುಗಿನ ಎನ್.ಟಿ.ರಾಮರಾವ್, ಅಕ್ಕಿನೇನಿ ನಾಗೇಶ್ವರ್ ರಾವ್, ಚಿರಂಜೀವಿ, ಕನ್ನಡದ ಡಾ.ರಾಜ್‌ಕುಮಾರ್, ಕಲ್ಯಾಣ್ ಕುಮಾರ್, ಉದಯ್‌ಕುಮಾರ್, ವಿಷ್ಣುವರ್ಧನ್ ಮುಂತಾದ ಘಟಾನುಘಟಿ ಸ್ಟಾರ್ ನಟರಿಂದ ಆರಂಭಿಸಿ ಈ ತಲೆಮಾರಿನ ನಟರವರೆಗೂ ಅದೇ ಸೌಂಡ್ ಜೊತೆಗೆ ಬದುಕು ಸಾಗಿಸುತ್ತಿರುವ ಆನಂದ್‌ರ ಮಾತುಗಳನ್ನು ಕೇಳಿ...
 ನಾನು ಚಿತ್ರರಂಗಕ್ಕೆ ಬಂದಿದ್ದು 1970ರಲ್ಲಿ. ತೆಲುಗಿನ 'ಮಾನವಡು ದಾನವಡು' ಎನ್ನುವ ಚಿತ್ರಕ್ಕೆ ಮೊದಲು ಕೆಲಸ ಮಾಡಿದ್ದು. ಮುಂದೆ ಕಲಿಯುಗ, ಬಂಧನ, ನಿಷ್ಕರ್ಷ, ಹಬ್ಬ, ನಮ್ಮೂರ ಮಂದಾರ ಹೂವೇ, ಕ್ಷಣ ಕ್ಷಣ ಹತ್ತಾರು ಚಿತ್ರಗಳಿಗೆ ಸೌಂಡಿಂಗ್ ಮಾಡಿದ್ದೇನೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ ಒಟ್ಟು 200ಕ್ಕೂ ಹೆಚ್ಚು ಚಿತ್ರಗಳಿಗೆ ಸೌಂಡ್ ರೆಕಾರ್ಡಿಸ್ಟ್ ಆಗಿ ದುಡಿದಿದ್ದೇನೆ. ಪಿಯುಸಿ ಫೇಲ್ ಆದ ಮೇಲೆ ಅನಿವಾರ್ಯವಾಗಿ  ಬೇರೆ ಉದ್ಯೋಗವಿಲ್ಲದೆ ಪರಿಚಯಸ್ಥರ ಮೂಲಕ ಇಲ್ಲಿಗೆ ಬಂದೆ. ಆದರೆ, ಭವಿಷ್ಯವಿಲ್ಲದ ಈ ಕೆಲಸವನ್ನು ಯಾಕೆ ಆಯ್ಕೆ ಮಾಡಿಕೊಂಡೆ ಅಂತ ಈಗ ಬೇಸರವಾಗುತ್ತಿದೆ. ನಮ್ಮ ನೋವು ಯಾರಿಗೂ ಕಾಣಲ್ಲ ಸರ್. ಗೌರವ, ಪ್ರತಿಷ್ಠೆ, ಮುಜುಗರ ಬಿಟ್ಟು ಒಂದ್ ಮಾತು ಹೇಳ್ಲಾ ಸರ್. ಒಂದೊತ್ತಿನ ಊಟಕ್ಕೂ ಇಲ್ಲದಂತೆ ಪರದಾಡಿದ ದಿನಗಳಿವೆ. ಈಗಲೂ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಮನೆಯಲ್ಲಿರುವ ಹೆಣ್ಣು ಮಗಳು ಕೆಲಸ ಹುಡುಕುತ್ತಿದ್ದಾಳೆ. ಅಪ್ಪ ಅನಿಸಿಕೊಂಡವನು ಬದುಕಿದ್ದಾಗಲೇ ಹೆಣ್ಣು ಕೂಸು ದುಡಿಯಬೇಕಾದ ಸ್ಥಿತಿ ನಮ್ಮದು. ಒಂದು ದಿನಕ್ಕೆ ಕೇವಲ 5 ರುಪಾಯಿನಿಂದ ಆರಂಭವಾದ ನನ್ನ ದಿನದ ಸಂಪಾದನೆ ಈಗ 500ಕ್ಕೆ ಬಂದಿದೆ. ಇದರಲ್ಲಿ ಏಜೆಂಟ್‌ಗಳ ಕಮಿಷನ್ ಹೋದರೆ ನಮಗೆ ಸಿಗುವುದು ನಾಲ್ಕು ಕಾಸು. ಬಿಟ್ಟು ಹೋಗೋಣ ಅಂದ್ರೆ ಬೇರೆ ಕೆಲ್ಸಾ ಗೊತ್ತಿಲ್ಲ. ಹೋದ್ರು ಈ ವಯಸ್ನಲ್ಲಿ ಯಾರ್ ಕೆಲ್ಸಾ ಕೊಡ್ತಾರೆ ಹೇಳಿ? ಚಿತ್ರರಂಗದ ಎಲ್ಲ ವಿಭಾಗಗಳಿಗೆ ಗೌರವ, ಪ್ರಶಸ್ತಿ, ಸನ್ಮಾನ ಅಂತ ಇದೆ. ಆದ್ರೆ ನಮ್ಗೆ ಯಾಕ್ ಇಲ್ಲ ಅಂತ ಪ್ರಶ್ನೆ ಮಾಡಿದರೆ ನಗುವವರ ಸಂಖ್ಯೆಯೇ ಹೆಚ್ಚು. ಯಾಕೆಂದರೆ ನಾವ್ ಯಾರು ಅಂತ ಯಾರಿಗೂ ಗೊತ್ತಿಲ್ಲ ನೋಡಿ! 300ರಿಂದ 400 ಜನ ಇದೇ ಕೆಲಸ ನಂಬಿಕೊಂಡು ಚಿತ್ರರಂಗದಲ್ಲಿದ್ದಾರೆ. ಅವರೆಲ್ಲರ ಬದುಕು ನನ್ನ ಪಾಡಿಗಿಂತ  ಭಿನ್ನವಾಗಿಲ್ಲ.
 ಗಾರೆ ಕೆಲ್ಸಾನೋ, ರಸ್ತೆ ರಿಪೇರಿ ಮಾಡುವುದನ್ನೋ ಕಲಿತಿದ್ದರೆ ನಿಜಕ್ಕೂ ಹೇಗೋ ನೆಮ್ದಿಯಾಗಿರ್ತಿದ್ವಿ. ಗಾರೆ ಕೆಲ್ಸಾ ಮಾಡೋನಿಗೆ ಸಂಜೆಯಾದ್ ಕೂಡ್ಲೆ ಎಷ್ಟು ಕೂಲಿ ಬರುತ್ತೆ ಅಂತ ಗೊತ್ತು. ನಾಳೆ ಕೆಲ್ಸಾ ಇರುತ್ತದೋ ಇಲ್ಲವೋ ಅನ್ನೋ ಗ್ಯಾರಂಟಿ ಕೂಡ ಇದೆ. ಆದ್ರೆ ನಮ್ ಕತೆ ಹಾಗಲ್ಲ. ಹಾಡುಗಳ ಚಿತ್ರೀಕರಣ ಇದ್ದರೆ ಮಾತ್ರ ನಮ್ಗೆ ಕೆಲ್ಸ. ಮತ್ತೊಂದು ಕಡೆ ತಂತ್ರಜ್ಞಾನ ಬೆಳೆಯುತ್ತಿದೆ. ರೆಡ್ ಕ್ಯಾಮೆರಾ ಅಂತ ಬಂದಿದೆ. ಫಿಲ್ಮ್ ರೋಲ್ ಇಲ್ಲದೆ ಶೂಟ್ ಮಾಡುವ ಸೌಲಭ್ಯ ಇದೆ. ಈಗ ಯಾರೂ ಲೈವ್ ರೆಕಾರ್ಡ್ ಮಾಡುತ್ತಿಲ್ಲ. ಆಗ ಎಲ್ಲವೂ ಲೈವ್ ರೆಕಾರ್ಡ್. ಕ್ವಾಲಿಟಿ ಇತ್ತು. ಕೆಲ್ಸಾ ಮಾಡೋಕೆ ಖುಷಿ ಇತ್ತು. ಈಗ ಹಾಡಿನ ಚಿತ್ರೀಕರಣದಲ್ಲಿ ಮಾತ್ರ ಕೆಲ್ಸಾ ಸಿಗುತ್ತದೆ. ತಾಂತ್ರಿಕ ಬೆಳವಣಿಗೆ ಮುಂದುವರೆದಷ್ಟು ಎರಡು ಹೊತ್ತಿನ ಊಟ ಹಾಕುವ ಕೆಲಸ ಕೂಡ ಕಳೆದುಕೊಳ್ಳುವ ಭೀತಿ ಆವರಿಸಿಕೊಳ್ಳುತ್ತಿದೆ.
 ದೊಡ್ಡ ದೊಡ್ಡ ಸ್ಟಾರ್‌ಗಳ ಚಿತ್ರಗಳಿಗೆ ದುಡಿದಿದ್ದೇನೆ. ಆದ್ರೆ ಏನ್ ಪ್ರಯೋಜ್ನಾ? ನಾವು ಮಾತ್ರ ಇಲ್ಲೇ ಇದ್ದೇವೆ... ಎನ್ನುತ್ತ ರೆಕಾರ್ಡ್ ಬಾಕ್ಸ್‌ನತ್ತ ಹೊರಟರು ಆನಂದ್. ಅಷ್ಟರಲ್ಲಿ  ನಿರ್ದೇಶಕರು ಆ್ಯಕ್ಷನ್ ಎಂದಿದ್ದರು. ರೆಕಾರ್ಡ್ ಬಟನ್ ಒತ್ತುತ್ತ ಕೂತರು. ಇವರ ಹೆಸರಿನಲ್ಲಿರುವ ಆನಂದ, ನಿಜ ಜೀವನದಲ್ಲಿ ಇಲ್ಲ. ಕನಿಷ್ಠ ಸೆಟ್ ಬೆಳಕಿಗೂ ಕಾಣದ ಇಂಥವರ ಬದುಕು ಯಾವ ತೆರೆ ಮೇಲೆ ತಾನೆ ಕಾಣಲು ಸಾಧ್ಯ? ಚಿತ್ರರಂಗದಲ್ಲಿ ಇಂಥವರ ಬದುಕು ತೆರೆ ಮೇಲೆ ಬರಬೇಕಾದರೆ ಇಲ್ಲಿ ಪವಾಡವೇನಾದ್ರು ಆಗಬೇಕು ಅಷ್ಟೇ.

- ಆರ್.ಕೇಶವಮೂರ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement