ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್, ಸ್ಯಾಂಡಲ್ವುಡ್ ಕಿಂಗ್... ಹೀಗೆ ಹತ್ತಾರು ಬಿರುದುಗಳನ್ನು ಹೊತ್ತಿರುವ ನಟ ಶಿವರಾಜ್ಕುಮಾರ್ ಅವರ ಲಾಂಗು, ಮಚ್ಚುಗಳಿಗೆ ಯಾವ ರೀತಿಯಲ್ಲೂ ಬೆಲೆ ಕಡಿಮೆಯಾಗಿಲ್ಲ. 'ಜೋಗಿ' ಚಿತ್ರದ ನಂತರ 'ಭಜರಂಗಿ' ಹೊರತುಪಡಿಸಿದರೆ ಯಾವ ಚಿತ್ರವೂ ದೊಡ್ಡ ಮಟ್ಟದಲ್ಲಿ ಗೆದ್ದಿಲ್ಲ. ಆದರೂ ಶಿವರಾಜ್ಕುಮಾರ್ ಎನ್ನುವ ಹೆಸರು ಗಾಂಧಿನಗರಕ್ಕೆ ತೀರಾ ಅನಿವಾರ್ಯವಾಗಿದೆ. ಅದನ್ನು ಅವರ ಮುಂದಿರುವ ಚಿತ್ರಗಳೇ ತೋರಿಸುತ್ತವೆ.
ದರ್ಶನ್, ಸುದೀಪ್, ಪುನೀತ್ ರಾಜ್ಕುಮಾರ್, ಉಪೇಂದ್ರ, ವಿಜಯ್, ಪ್ರೇಮ್, ಅಜಯ್ ರಾವ್ ಮುಂತಾದ 'ಯಂಗ್' ಸ್ಟಾರ್ಗಳ ಕೈಯಲ್ಲಿ ಎರಡ್ಮೂರು ಚಿತ್ರಗಳು ಮಾತ್ರ ಇವೆ. ಆದರೆ, ಐವತ್ತು ದಾಟಿರುವ ಶಿವರಾಜ್ಕುಮಾರ್ ಚಿತ್ರಗಳು ಸೋಲಲಿ, ಗೆಲ್ಲಲಿ; ಅವರು ಸದಾ ಬ್ಯುಸಿ. ನಿರೀಕ್ಷಿಸಿದಷ್ಟು ಗೆಲುವು ಕಾಣದಿದ್ದರೆ, ಫಿಪ್ಟಿ ದಾಟಿದ ಮೇಲೂ ಗಾಂಧಿನಗರದಲ್ಲಿ ಸೇಫ್ಟಿಯಾಗಿರುವುದು ತುಂಬಾ ಕಷ್ಟ. ಆದರೆ, ಶಿವಣ್ಣ ವಿಚಾರದಲ್ಲಿ ಇದು ಪೂರ್ತಿ ಉಲ್ಟಾ.
ಈಗಲೂ ಈ ಐವತ್ತರ ಬಾಡಿ ಮುಂದೆ ಎಂಟು ಚಿತ್ರಗಳು ಸರದಿಯಂತೆ ಕಾದು ಕೂತಿವೆ. ಈ ಪೈಕಿ ಏಳು ಚಿತ್ರಗಳು ಆಗಲೇ ಅಧಿಕೃತವಾಗಿ ಘೋಷಣೆಯಾಗಿವೆ. ಸದ್ಯ ಚಿ. ಗುರುದತ್ ನಿರ್ದೇಶನದ 'ಆರ್ಯನ್' ಚಿತ್ರೀಕರಣದಲ್ಲಿರುವ ಶಿವರಾಜ್ಕುಮಾರ್ ಇದರ ನಂತರ ಸುನಿ ನಿರ್ದೇಶನದ 'ಮನಮೋಹಕ' ಚಿತ್ರಕ್ಕೆ ತಯಾರಾಗಲಿದ್ದಾರೆ. ಈ ಚಿತ್ರ ಮುಗಿದಾಕ್ಷಣ ಆರ್. ಚಂದ್ರು ನಿರ್ದೇಶನದ 'ಬಾದ್ಷಾ'. ಈ ಎರಡೂ ಚಿತ್ರಗಳು ಮುಗಿದ ಮೇಲೆ ಬಹುಶಃ ಸೆಂಟಿಮೆಂಟ್ ನಿರ್ದೇಶಕ ಓಂ ಸಾಯಿ ಪ್ರಕಾಶ್ರ ಅಂಗಳಕ್ಕೆ ಶಿವರಾಜ್ಕುಮಾರ್ ಕಾಲಿಡಲಿದ್ದಾರೆ. ಇಲ್ಲಿ ಮತ್ತೆ 'ಅಣ್ಣ ತಂಗಿ' ಒಂದಾಗಿ 'ಬಂಗಾರದ ವಂಶ' ಕಟ್ಟಲಿದ್ದಾರೆ. ಅರ್ಥಾತ್ ರಾಧಿಕಾ ಮತ್ತು ಶಿವರಾಜ್ಕುಮಾರ್ 'ಬಂಗಾರದ ವಂಶ' ಚಿತ್ರದಲ್ಲಿ ಮತ್ತೆ ಒಂದಾಗುತ್ತಿದ್ದಾರೆ. ಈ ಚಿತ್ರಗಳ ನಂತರ ಸರದಿಯಂತೆ ನರೇಂದ್ರ ಬಾಬು ನಿರ್ದೇಶನದ 'ಸಂತ ಕಬೀರ', ಮಂಜು ಸ್ವರಾಜ್ ನಿರ್ದೇಶನದ 'ಶ್ರೀಕಂಠ', ಹೊಸ ನಿರ್ದೇಶಕರೊಬ್ಬರಿಂದ ಮೂಡಿ ಬರುತ್ತಿರುವ 'ಬೆಳ್ಳಿ' ಹಾಗೂ 'ಭಜರಂಗಿ' ಹರ್ಷ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ಶಿವರಾಜ್ಕುಮಾರ್ ನಾಯಕನಾಗಲಿದ್ದಾರೆ.
ಶಿವಣ್ಣ ಕಾಲ್ಶೀಟ್ ಈ ಪಾಟಿ ಬ್ಯುಸಿಯಾಗಲು ಕಾರಣ 'ಭಜರಂಗಿ' ಚಿತ್ರದ ಗೆಲುವಿನ ಎಫೆಕ್ಟಾ? ಗೊತ್ತಿಲ್ಲ. ಆದರೆ, ಹರ್ಷ ನಿರ್ದೇಶನದ 'ಭಜರಂಗಿ' ಚಿತ್ರ ಶತದಿನೋತ್ಸವ ಸಮೀಪಿಸುತ್ತಿದೆ. ಇದರ ಜೊತೆಗೆ ಎಂಟು ಚಿತ್ರಗಳು ಶಿವಣ್ಣರ ಕೈಯಲ್ಲಿವೆ. ಬಾಕ್ಸ್ ಆಫೀಸ್ ದೃಷ್ಟಿಯಿಂದ, ಟಿವಿ ರೈಟ್ಸ್ನಲ್ಲಿ ಬೇರೆ ನಟರು ನಂ.1 ಪಟ್ಟದಲ್ಲಿ ಕೂತಿರಬಹುದು. ಆದರೆ, ಈಗಲೂ ಈ ಐವತ್ತರ ಗಂಡುಗಲಿ ಶಿವರಾಜ್ಕುಮಾರ್ ಅವರೇ 'ಸ್ಯಾಂಡಲ್ವುಡ್ ಕಿಂಗ್' ಎನ್ನುವುದಂತೂ ಸತ್ಯ.
-ಆರ್.ಕೇಶವಮೂರ್ತಿ