

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯ ನೂತನ ಅಧ್ಯಕ್ಷರ ಆಯ್ಕೆ ಕಸರತ್ತು ಮುಂದುವರಿದಿದ್ದು, ಸುಮಾರು 100 ಟೆಸ್ಟ್ ಪಂದ್ಯಗಳನ್ನಾಡಿರುವ ಭಾರತದ ಕೆಲ ಸ್ಟಾರ್ ಕ್ರಿಕೆಟಿಗರೇ ಈ ಹುದ್ದೆಯ ಆಫರ್ ಅನ್ನು ತಿರಸ್ಕರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಅಜಿತ್ ಅಗರ್ಕರ್ ಅವರ ಬಿಸಿಸಿಐ ಮುಖ್ಯ ಆಯ್ಕೆಗಾರರ ಅವಧಿ ಈ ತಿಂಗಳ ಆರಂಭದಲ್ಲಿ ಅಂತ್ಯಗೊಂಡ ಬಳಿಕ, ಅವರ ಉತ್ತರಾಧಿಕಾರಿಯ ಹುಡುಕಾಟ ಆರಂಭವಾಗಿದೆ. ಈ ನಡುವೆ ಪಶ್ಚಿಮ ವಲಯದ ಆಯ್ಕೆಗಾರ ಹುದ್ದೆಗೆ ಅರ್ಜಿ ಸಲ್ಲಿಸುವ ಗಡುವು ಬುಧವಾರ ಮುಕ್ತಾಯಗೊಂಡಿದೆ.
ವರದಿಗಳ ಪ್ರಕಾರ, ಪಾರ್ಥಿವ್ ಪಟೇಲ್ ಈ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ. ಈ ನಡುವೆ, ಕಿರಿಯರ ಪುರುಷರ ಆಯ್ಕೆ ಸಮಿತಿಯ ಅಧ್ಯಕ್ಷರಾಗಬಹುದು ಎಂದು ನಿರೀಕ್ಷಿಸಲಾಗಿದ್ದ ರಮೇಶ್ ಪವಾರ್, ಹಿರಿಯರ ಆಯ್ಕೆ ಸಮಿತಿಯ ಹುದ್ದೆಯ ರೇಸ್ಗೆ ಪ್ರವೇಶಿಸುವ ಸಾಧ್ಯತೆಯಿದೆ.
ವರದಿಯ ಪ್ರಕಾರ, ಭಾರತ ಕ್ರಿಕೆಟ್ನಲ್ಲಿ ವಿವಿಎಸ್ ಲಕ್ಷ್ಮಣ್ ಅವರ ಪ್ರಭಾವ ಹೆಚ್ಚುತ್ತಿರುವುದು ಪಾರ್ಥಿವ್ ಪಟೇಲ್ ಅರ್ಜಿ ಸಲ್ಲಿಸದಿರುವುದಕ್ಕೆ ಒಂದು ಕಾರಣವಾಗಿರಬಹುದು. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಇತ್ತೀಚೆಗೆ, ಸೆಂಟರ್ ಆಫ್ ಎಕ್ಸಲೆನ್ಸ್ ಮುಖ್ಯಸ್ಥರಾಗಿರುವ ಲಕ್ಷ್ಮಣ್ ಎಲ್ಲ ಆಯ್ಕೆ ಸಮಿತಿ ಸಭೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದರು.
ಪಾರ್ಥಿವ್ ಪಟೇಲ್ ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ, ಪ್ರಜ್ಞಾನ್ ಓಜಾ ಹಂಗಾಮಿ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಮುಂದುವರಿಯಬಹುದು ಎಂಬ ವರದಿಗಳೂ ಪ್ರಕಟವಾಗಿವೆ.
ಬಜೆಟ್ ಹೆಚ್ಚಿಸಿದ ಬಿಸಿಸಿಐ
ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಘಟಾನುಘಟಿ ಮಾಜಿ ಕ್ರಿಕೆಟಿಗರನ್ನು ನೇಮಿಸಲು ಬಿಸಿಸಿಐ ಬಯಸಿದ್ದು, ಸಂಭಾವನೆ ನೀತಿಯಲ್ಲೂ ಈಗ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧವಾಗಿದೆ ಎಂದು ವರದಿ ತಿಳಿಸಿದೆ.
ಆರ್.ಪಿ. ಸಿಂಗ್ ಮತ್ತು ಪ್ರಗ್ಯಾನ್ ಓಜಾ ಆಯ್ಕೆ ಸಮಿತಿಗೆ ಸೇರಿದ ಬಳಿಕ, ಸಮಿತಿಯ ವೆಚ್ಚದ ಬಜೆಟ್ ಅನ್ನು ಬಿಸಿಸಿಐ 3 ಕೋಟಿ ರೂವನ್ನು ಹೆಚ್ಚಿಸಿ 17.45 ಕೋಟಿ ರೂಗೆ ಏರಿಸಿತ್ತು. ಇದೀಗ ಸಮಿತಿಯ ವೆಚ್ಚದ ಬಜೆಟ್ ಅನ್ನು 2025-26ರ 17.45 ಕೋಟಿಯಿಂದ 2026-27ಕ್ಕೆ 19.35 ಕೋಟಿ ರೂಗೆ ಹೆಚ್ಚಿಸಿದೆ ಎಂದು ವರದಿ ತಿಳಿಸಿದೆ.