ಸಿನಿಮಾ ಸುದ್ದಿ

'ಪಿಕೆ' ವಿರುದ್ಧ ಪ್ರತಿಭಟನೆ, ಚಿತ್ರಮಂದಿರ ಧ್ವಂಸ

Guruprasad Narayana

ಅಹಮದಾಬಾದ್/ಭೋಪಾಲ್/ಮುಂಬೈ: ಅಮೀರ್ ಖಾನ್ ಅಭಿನಯದ ಸೂಪರ್ ಹಿಟ್ ಸಿನೆಮಾ 'ಪಿಕೆ' ಹಿಂದೂ ದೇವರುಗಳು ಮತ್ತು ಧರ್ಮಗುರುಗಳನ್ನು ಹಾಸ್ಯ ಮಾಡಿದೆ ಎಂದು ಆರೋಪಿಸಿ, ಭಜರಂಗ ದಳದ ಸದಸ್ಯರು ಕಬ್ಬಿಣದ ಸಲಾಕೆಗಳು, ಕೋಲುಗಳನ್ನು ಹಿಡಿದು ಚಿತ್ರಮಂದಿರಗಳ ಮೇಲೆ ದಾಳಿ ನಡೆಸಿದ ಘಟನೆ ಅಹಮದಾಬಾದ್, ಮುಂಬೈ ಮತ್ತು ಭೋಪಾಲ್ ನಗರಗಳಲ್ಲಿ ವರದಿಯಾಗಿದೆ.

'ಪಿಕೆ' ಚಿತ್ರವನ್ನು ಪ್ರದರ್ಶಿಸದಂತೆ ನಾವು ನೀಡಿದ್ದ ಸೂಚನೆಯನ್ನು ಧಿಕ್ಕರಿಸಿದ್ದಾರೆ ಎಂದು ಆಪಾದಿಸಿ ಈ ಹಿಂದೂ ಸಂಘಟನೆಗಳ ಸದಸ್ಯರು ಅಹಮದಾಬಾದಿನ ಸಿಟಿ ಗೋಲ್ಡ್ ಮಲ್ಟಿಪ್ಲೆಕ್ಸ್ ಮತ್ತು ಆಶ್ರಮ ರಸ್ತೆಯ ಶಿವ ಚಿತ್ರಮಂದಿರಗಳ ಮೇಲೆ ದಾಳಿ ನಡೆಸಿ ಕಿಟಕಿ ಗಾಜುಗಳನ್ನು ಧ್ವಂಸ ಮಾಡಿದ್ದಾರೆ.

ಸ್ಥಳಕ್ಕೆ ಪೊಲೀಸರು ಧಾವಿಸುವ ವೇಳೆಗೆ ದಾಳಿಕೋರರು ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ.

"ಸುಮಾರು ಬೆಳಗ್ಗೆ ೧೦ ಘಂಟೆಗೆ ನಡೆದ ಈ ಘಟನೆಯ ಹಿಂದಿನ ವ್ಯಕ್ತಿಗಳನ್ನು ಇನ್ನೂ ಗುರುತಿಸಬೇಕಿದೆ. ಚಿತ್ರಮಂದಿರದ ಕಿಟಕಿ ಗಾಜುಗಳನ್ನು ಈ ಪುಂಡರು ಒಡೆದುಹಾಕಿದ್ದಾರೆ ಎಂದು ತಿಳಿದು ಬಂದಿದೆ. ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ನಾವು ಸಂಗ್ರಹಿಸುತ್ತಿದ್ದೇವೆ. ಚಿತ್ರಮಂದಿರದ ಮಾಲೀಕರು ದೂರು ಕೊಡಲಿದ್ದಾರೆ" ಎಂದು ಪೋಲೀಸ್ ಉಪ ಆಯುಕ್ತ ವೀರೇಂದ್ರ ಸಿಂಗ್ ಯಾದವ್ ತಿಳಿಸಿದ್ದಾರೆ.

ಪೊಲೀಸರು ಇದು ಭಜರಂಗ ದಳದ ಕೃತ್ಯ ಎಂದು ತಿಳಿಸದಿದ್ದರೂ, ಈ ಬಲಪಂಥೀಯ ಸಂಸ್ಥೆ ದಾಳಿಯ ಹೊಣೆ ಹೊತ್ತು, ಚಿತ್ರಮಂದಿರಗಳು ಪ್ರದರ್ಶನವನ್ನು ರದ್ದುಪಡಿಸದೆ ಹೋದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ದಾಳಿಗಳನ್ನು ನಡೆಸುವುದಾಗಿ ಎಚ್ಚರಿಸಿದೆ.

SCROLL FOR NEXT