ನಟ ವಿಜಯ್ ಅಭಿನಯದ 'ಆರ್‌ಎಕ್ಸ್ ಸೂರಿ' ಚಿತ್ರದ ಕಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಗುಸುಗುಸುಗೆ ಕಾರಣ ಚಿತ್ರದ ಕಥೆ ರಿಯಲ್ ಡಾನ್ ಒಬ್ಬನ ಜೀವನ ಆಧರಿಸಿದೆ ಎಂಬುದು.
ಹೌದು, ಶ್ರೀ ಜೈ ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಕಥೆ ಪೆರಿಟಾಲ ರವಿ ಅವರ ಕಥೆ ಎನ್ನಲಾಗುತ್ತಿದೆ. ಅಲ್ಲದೆ ಚಿತ್ರದಲ್ಲಿ ವಿಜಯ್ ನಿರ್ವಹಿಸುವ ಪಾತ್ರ ಪೆರಿಟಾಲ ರವಿ ಅವರ ನಿಜ ಜೀವನದ ಪಾತ್ರ ಎಂಬುದು ಗಾಂಧಿನಗರದ ಗುಸುಗುಸು. ಸುರೇಶ್ ನಿರ್ಮಾಣ ಮಾಡುತ್ತಿರುವ ಈ ಚಿತ್ರದ ಕಥೆ ಪೆರಿಟಾಲ ರವಿ ಅವರದ್ದೇ ಎಂಬುದು ಅನುಮಾನ ಮೂಡುತ್ತಿರುವುದು ಯಾಕೆ? ಈಗಾಗಲೇ ಚಿತ್ರದ ಟ್ರೈಲರ್ ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ. ಇದನ್ನು ನೋಡಿದವರು ಮತ್ತು ವಿಜಯ್ ಪಾತ್ರ ನೋಡಿದಾಗ ಪೆರಿಟಾಲ ರವಿ ಅವರನ್ನು ಹೋಲುತ್ತಗೆ ಎಂಬುದು ಚರ್ಚೆಯ ವಸ್ತು.
ರವಿಶಂಕರ್, ಮಂಜು ಮುಂತಾದವರು ಅಭಿನಯಿಸಿರುವ ಈ ಚಿತ್ರದಲ್ಲಿ ವಿಜಯ್ ಮಚ್ಚು ಹಿಡಿದು ಗಲ್ಲಿ ಗಲ್ಲಿ ಓಡುವ, ತನ್ನ ವಿರೋಧಿಗಳನ್ನು ಅಟ್ಟಾಡಿಸಿಕೊಂಡು ನಡು ಬೀದಿಯಲ್ಲೇ ಕೊಲ್ಲುವ ದೃಶ್ಯಗಳನ್ನು ಒಳಗೊಂಡ ದೃಶ್ಯಗಳ ಒಂದು ಹಂತದಲ್ಲಿ ಪೆರಿಟಾಲ ರವಿ 'ರಕ್ತ ಚರಿತ್ರೆ'ಯನ್ನು ನೆನಪಿಸುತ್ತದೆ.
ಈ ಬಗ್ಗೆ ನಿರ್ಮಾಪಕ ಸುರೇಶ್ ಹೇಳುವುದೇನು?
ಇದೊಂದು ನೈಜ ಪ್ರೇಮ ಕಥೆ ಎನ್ನುವುದು ಸತ್ಯ. ಇಲ್ಲಿ ಪ್ರೀತಿಸುವ ನಾಯಕ ಒಬ್ಬ ಭೂಗತ ರೌಡಿ ಎನ್ನುವುದೂ ಕೂಡ ನಿಜ. ಆದರೆ ಅದು ಪೆರಿಟಾಲ ರವೀನಾ, ಮತ್ತೊಬ್ಬರನಾ ಎಂಬುದು ಸಿನಿಮಾ ಪೂರ್ತಿ ನೋಡಿ ತಿಳಿದುಕೊಳ್ಳುವುದು ಒಳ್ಳೆಯದು' ಎಂಬುದು ನಿರ್ಮಾಪಕ ಸುರೇಶ್ ಅವರ ಉತ್ತರ.
ಆದರೆ ಮುಖಕ್ಕೆ ಬಣ್ಣ ಮೆತ್ತಿಕೊಂಡು ಲಾಂಗು ಹಿಡಿದು ನಿಂತಿರುವ ಸ್ಟಿಲ್‌ಗಳನ್ನು ನೋಡಿದಾಗ ಆಂಧ್ರದ ರಕ್ತಸಿಕ್ತ ಇತಿಹಾಸಕ್ಕೆ ಸನಿಹವಾಗಿದೆ ಎನಿಸುತ್ತದೆ. ಈ ಕಾರಣಕ್ಕೆ ರಾಮ್‌ಗೋಪಾಲ್ ವರ್ಮಾ ಚಿತ್ರಗಳ ಆಚೆಗೆ ಪೆರಿಟಾಲ ರವಿ ಮತ್ತೆ ತೆರೆ ಮೇಲೆ ಬರುತ್ತಿದ್ದಾನೆ ಎನ್ನುವುದು ಸದ್ಯದ ಸುದ್ದಿ. ಹೊಸ ಹುಡುಗಿ ಆಕಾಂಕ್ಷಾ ಚಿತ್ರದ ನಾಯಕಿಯಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ಎಚ್.ಸಿ.ವೇಣು ಛಾಯಾಗ್ರಾಹಣ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಆರ್‌ಎಕ್ಸ್ ಸೂರಿ ಚಿತ್ರಕ್ಕೆ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ತೆರೆಗೆ ಬರುವ ಸಾಧ್ಯತೆಗಳಿವೆ.