ಬೆಂಗಳೂರು: ತಮ್ಮ ಇತ್ತೀಚಿನ ಸಿನೆಮಾ ಕೃಷ್ಣಲೀಲಾದ ಯಶಸ್ಸಿನಿಂದ ಉತ್ತೇಜಿತರಾಗಿರುವ ಶಶಾಂಕ್ ಮುಂಗಾರು ಮಳೆಯ ಮ್ಯಾಜಿಕ್ ಅನ್ನು ಅದರ ಎರಡನೇ ಭಾಗ ನಿರ್ದೇಶಿಸುವುದರೊಂದಿಗೆ ಮರುಕಳಿಸಲು ಸಿದ್ಧರಾಗುತ್ತಿದ್ದಾರೆ. ಸದ್ಯಕ್ಕೆ ಮುಂಗಾರು ಮಳೆ-೨ ಗೆ ಗಣೇಶ್ ಅವರ ನಟನೆಯನ್ನು ಮಾತ್ರ ಅಂತಿಮಗೊಳಿಸಿದ್ದಾರೆ ಉಳಿದ ಪಾತ್ರವರ್ಗ, ತಂತ್ರಜ್ಞರು, ಸಂಗೀತ ನಿರ್ದೇಶಕ ಮತ್ತು ಸಿನೆಮ್ಯಾಟೋಗ್ರಾಫರ್ ಇವರುಗಳ ಶೋಧ ಚಾಲನೆಯಲ್ಲಿದೆ. "ಇನ್ನು ಮುಂಗಾರು ಮಳೆ ಬೀಳಲು ಸಮಯವಿದೆ. ಸ್ಕ್ರೀನ್ ಪ್ಲೇ ಅಂತಿಮಗೊಳಿಸುವುದಕ್ಕೆ ಇನ್ನು ಒಂದು ತಿಂಗಳು ಬೇಕಾಗಿದೆ. ನಂತರವಷ್ಟೇ ಮುಂದಿನ ಹೆಜ್ಜೆ ಎನ್ನುತ್ತಾರೆ" ನಿರ್ದೇಶಕ ಶಶಾಂಕ್.
"ಮುಂಗಾರು ಮಳೆ -೨ ನಿರ್ದೇಶಿಸುವುದು ಎಂದು ನಿರ್ಧರಿಸಿದ ಮೇಲೆ ಅದರ ಮೊದಲ ಭಾಗದತ್ತ ಮುಖ ಮಾಡಲೇಬೇಕು. ಅದನ್ನು ಉಪೇಕ್ಷಿಸಲು ಸಾಧ್ಯವಿಲ್ಲ. ಮೊದಲ ಭಾಗದಷ್ಟೇ ಜನರ ನಿರೀಕ್ಷೆ ಇರುತ್ತದೆ. ಕಥೆಯ ಭಾಗ ಮುಗಿದಿದೆ. ಮೊದಲ ಭಾಗದ ಕೆಲವು ಸಂಗತಿಗಳನು ತೆಗೆದುಕೊಂಡು ಈ ಭಾಗಕ್ಕೆ ಜೋಡಿಸಬೇಕಿದೆ. ನಾಯಕಿಯ ಬಗ್ಗೆ ಒಬ್ಬರು ತಲೆಯಲ್ಲಿದ್ದಾರೆ ಆದರೆ ಇನ್ನೂ ಅಂತಿಮವಾಗಿಲ್ಲ, ಹೊಸಬರಾದರೂ ಸರಿ, ಸಿನೆಮೋದ್ಯಮದಲ್ಲಿ ಆಗಲೇ ತಳವೂರಿದವರಾದರು ಸೈ" ಎನ್ನುತ್ತಾರೆ ಶಶಾಂಕ್.