ಸುಮನಾ ಕಿತ್ತೂರು ನಿರ್ದೇಶನದ ಕಿರಗೂರಿನ ಗಯ್ಯಾಳಿಗಳು' ಚಿತ್ರಕ್ಕೆ ಒಬ್ಬೊಬ್ಬರೇ ಕಲಾವಿದರು ಸೇರ್ಪಡೆಯಾಗುತ್ತಿದ್ದಾರೆ.
ಅತ್ಯುತ್ತಮ ಅಥವಾ ಪ್ರಬುದ್ಧ ಕಲಾವಿದರು ಎನಿಸಿಕೊಂಡವರು ಕಿರಗೂರಿನ'ತ್ತ ಮುಖ ಮಾಡಿದ್ದು, ಆ ಮೂಲಕ ನಿರ್ದೇಶಕಿ ಸುಮನಾ ಕಿತ್ತೂರು ಅವರ ಚಿತ್ರ ಆರಂಭದಲ್ಲೇ ಸದ್ದು ಮಾಡುತ್ತಿದೆ. ಈಗಾಗಲೇ ಈ ಚಿತ್ರಕ್ಕೆ ನಟ ಯೋಗೀಶ್, ನಟಿ ಶ್ವೇತಾ ಶ್ರೀವಾತ್ಸವ್ ಮುಂತಾದ ಕಲಾವಿದರು ಆಯ್ಕೆಯಾಗಿದ್ದು, ಈಗಷ್ಟೆ ನಟಿ ಮಾನಸ ಜೋಷಿ ಮುಖ್ಯ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ.
ಬಹುಪರಾಕ್' ಚಿತ್ರದಲ್ಲಿ ತಮ್ಮ ನಟನೆಯ ಖದರ್ ತೋರಿಸಿರುವ ಮಾನಸ, ಕಥಕ್ ನೃತ್ಯ ಕಲಾವಿದೆ ಕೂಡ. ಯಾವುದೇ ರೀತಿಯ ಪಾತ್ರಕ್ಕೂ ಹೊಂದಿಕೊಳ್ಳುವ ಈಕೆಯ ನಟನೆಯ ಮೂಲ ಇರುವುದು ರಂಗಭೂಮಿಯಲ್ಲಿ. ಹಲವಾರು ನಾಟಕಗಳಲ್ಲಿ ಅಭಿನಯಿಸಿರುವ ಮಾನಸ ಜೋಷಿ ಈಗ ಸುಮನಾ ಕಿತ್ತೂರು ನಿರ್ದೇಶನದ ಕಿರಗೂರಿನ ಗಯ್ಯಾಳಿಗಳು' ಚಿತ್ರಕ್ಕೆ ಸೇರ್ಪಡೆಯಾಗಿದ್ದಾರೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕಾದಂಬರಿ ಆಧರಿಸಿದ ಅದೇ ಹೆಸರಿನ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದಾರೆ. ಅಗ್ನಿ ಶ್ರೀಧರ್ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದು, ಇಡೀ ಚಿತ್ರವನ್ನು ಸಂಪೂರ್ಣವಾಗಿ ಹಳ್ಳಿ ಹಿನ್ನೆಲೆಯಲ್ಲೇ ಚಿತ್ರೀಕರಿಸುವುದಕ್ಕೆ ಸುಮನ ನಿರ್ಧರಿಸಿದ್ದಾರೆ.