ಕೊಪ್ಪಳ: ಡಾ.ರಾಜಕುಮಾರ್ ಅಪಹರಣವಾದಾಗ ಕೋಟಿ ಕೋಟಿ ದೇವರಿಗೆ ಪೂಜೆ ಮಾಡಿದರೂ ಪ್ರಯೋಜನವಾಗಲಿಲ್ಲ. ರಾಜ್ಯ ಸರ್ಕಾರ ನಕ್ಕೀರನ್ ಗೋಪಾಲ್ ಮೂಲಕ ದುಡ್ಡು ಕೊಟ್ಟಾಗಲೇ ಅವರ ಬಿಡುಗಡೆಯಾಗಿದ್ದು! `ಮೂರೂ ಬಿಟ್ಟವರು ಊರಿಗೆ ದೊಡ್ಡವರು' ಸಿನಿಮಾ ಇಂಥ ವಿವಾದಿತ ಹೇಳಿಕೆಯ ಮೂಲಕ ದೊಡ್ಡದೊಂದು ಸದ್ದು ಮಾಡಲು ಸಜ್ಜಾಗಿದೆ. ಮಂಗಳವಾರ ಚಿತ್ರದ ಟ್ರೈಲರ್‍ನ್ನು ಚಿತ್ರದ ನಿರ್ದೇಶಕ, ನಟ ಬಸವರಾಜ ಕೊಪ್ಪಳ ಹಾಗೂ ಕಲಾವಿದರೇ ಬಿಡುಗಡೆ ಮಾಡಿದರು. ಮೂರು ನಿಮಿಷದ ಚಿತ್ರ ತುಣುಕುಗಳಲ್ಲಿ ನಕ್ಕಿರನ್ ಅಧ್ಯಾಯವೂ ಒಂದು. ದೇವರ ಅಸ್ತಿತ್ವ ಪ್ರಶ್ನೆ ಮಾಡಲಾಗಿದ್ದು, ಗುಡಿಗಳಿಗೆ ಏಕೆ ಬೀಗ ಹಾಕಲಾಗುತ್ತದೆ? ದೇವರು ತನ್ನನ್ನು ತಾನು ಕಾಪಾಡಿಕೊಳ್ಳದಷ್ಟೂ ಅಶಕ್ತನೇ? ಭಾರತವನ್ನು 350 ವರ್ಷವಾಳಿದ ವಿದೇಶಿಯರನ್ನು ಹೊಡೆದೊಡಿಸುವಾಗ ಮಕ್ಕೋಟಿ ದೇವತೆಗಳು ಎಲ್ಲಿದ್ದರು ಎಂಬ ಪ್ರಶ್ನೆಗಳನ್ನೂ ಎತ್ತಲಾಗಿದೆ. ವಾಸ್ತು ತಜ್ಞರು ಹಾಗೂ ಜ್ಯೋತಿಷಿಗಳ ಬಣ್ಣ ಬಯಲು ಮಾಡಲಾಗಿದೆ.
ಬಸವಣ್ಣನ ಕುರಿತಾಗಿರುವ ಚಿತ್ರ ಇದಾಗಿರುವುದರಿಂದ ಬಸವ ಜಯಂತಿಯಂದೇ ಟ್ರೈಲರ್ ಬಿಡುಗಡೆ ಮಾಡಿದ್ದೇವೆ, ಅಂತರ್ಜಾಲಕ್ಕೂ ಅಪ್‍ಲೋಡ್ ಮಾಡುತ್ತಿದ್ದೇವೆ. ವೀಕ್ಷಕರ
ಪ್ರತಿಕ್ರಿಯೆಯನ್ನಾಧರಿಸಿ ಬಿಡುಗಡೆ ದಿನಾಂಕ ನಿಗದಿ ಮಾಡಲಾಗುವುದು. ಪ್ರಚಾರಕ್ಕಾಗಿ ವಿವಾದ ಎಬ್ಬಿಸುತ್ತಿಲ್ಲ. ಅಂಥ ಕೀಳು ಅಭಿರುಚಿಯೂ ನಮಗಿಲ್ಲ . 12ನೆ ಶತಮಾನದಲ್ಲಿ
ಬಸವಣ್ಣ ಹಾಗೂ ಇತರರು ಮಾಡಿರುವ ಕ್ರಾಂತಿಯನ್ನು ನೆನಪಿಸಿಕೊಂಡು, ಈಗಿನ ಕಾಲಕ್ಕೆ ತಕ್ಕಂತೆ ಹೇಳಿದ್ದೇವಷ್ಟೇ. ಸತ್ಯ ಹೇಳಿದ್ದರಿಂದ ವಿವಾದವಾದರೆ ನಾವೇನೂ ಮಾಡಲಾಗದು ಎಂದು ನಿರ್ದೇಶಕ ಬಸವರಾಜ ಕೊಪ್ಪಳ ಹೇಳಿದರು. ಚಿತ್ರದ ಸ್ವಾಮೀಜಿ ಪಾತ್ರಧಾರಿ ವಿಶ್ವನಾಥ ಬೆಲ್ಲದ, ಮಂಜುನಾಥ ಆರೆಂಟುನೂರು ಹಾಗೂ ಸಹ ನಿರ್ದೇಶಕ ದೇವರಾಜ ಮಡ್ಡಿ ಇದ್ದರು.