ಬೆಂಗಳೂರು: ನಟ ಕಮಲ್ ಹಾಸನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಉತ್ತಮ ವಿಲನ್ ಚಿತ್ರ ಶುಕ್ರವಾರ ದೇಶಾದ್ಯಂತ ತೆರೆಕಾಣಬೇಕಿತ್ತು. ಆದರೆ ನಿರ್ಮಾಪಕ ಮತ್ತು ವಿತರಕರ ನಡುವಿನ ಗೊಂದಲದಿಂದಾಗಿ ಮೊದಲ ದಿನದ ಎಲ್ಲ ಪ್ರದರ್ಶನಗಳು ರದ್ದಾಗಿವೆ.
ಪ್ರತಿಭಾನ್ವಿತ ನಟ ಮತ್ತು ನಿರ್ದೇಶಕ ರಮೇಶ್ ಅರವಿಂದ್ ನಿರ್ದೇಶನದ ಉತ್ತಮ ವಿಲನ್ ಚಿತ್ರ ಇಂದು ದೇಶಾದ್ಯಂತ ತೆರೆಕಾಣ ಬೇಕಿತ್ತು. ಆದರೆ ಚಿತ್ರ ನಿರ್ಮಾಪಕರು ಮತ್ತು ವಿತರಕರ ನಡುವಿನ ಆರ್ಥಿಕ ಸಮಸ್ಯೆಯಿಂದಾಗಿ ಮೊದಲ ದಿನದ ಶೋ ರದ್ದುಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಮೂಲಗಳು ತಿಳಿಸಿರುವಂತೆ ನಿರ್ಮಾಪಕರು ಮತ್ತು ವಿತರಕರ ನಡುವೆ ಭುಗಿಲೆದ್ದಿರುವ ಈ ವಿವಾದ ಬಗೆಹರಿದಲ್ಲಿ ಮಾತ್ರ ಉತ್ತಮ ವಿಲನ್ ಬಿಡುಗಡೆ ನಿರಾತಂಕವಾಗಿ ಆಗಲಿದೆ. ಇಲ್ಲದಿದ್ದಲ್ಲಿ ಉತ್ತಮ ವಿಲನ್ ಬಿಡುಗಡೆಗೆ ಅಡ್ಡಿಯುಂಟಾಗಲಿದೆ ಎಂದು ಹೇಳಲಾಗುತ್ತಿದೆ.
ಶುಕ್ರವಾರ ರಿಲೀಸ್ ಗೆ ಸಿದ್ಧವಾಗಿದ್ದ ಕಮಲ್ ಹಾಸನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಉತ್ತಮ ವಿಲನ್ ಚಿತ್ರ ವೀಕ್ಷಣೆಗಾಗಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಸಾವಿರಾರು ಅಭಿಮಾನಿಗಳು ಟಿಕೆಟ್ ಬುಕ್ ಮಾಡಿದ್ದರು. ಆದರೆ ಇಂದು ಚಿತ್ರ ಪ್ರದರ್ಶನ ನಡೆಯದ ಹಿನ್ನಲೆಯಲ್ಲಿ ಚಿತ್ರಮಂದಿರದ ಬಳಿ ನೆರೆದಿರುವ ಸಾವಿರಾರು ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಚೆನ್ನೈ, ಹೈದರಾಬಾದ್ ಸೇರಿದಂತೆ ಬೆಂಗಳೂರಿನ ಊರ್ವಶಿ ಥಿಯೇಟರ್ ನಲ್ಲಿ ಅಭಿಮಾನಿಗಳು ನಿರ್ಮಾಪಕ ಮತ್ತು ವಿತರಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಮೊದಲ ದಿನದ ಶೋ ರದ್ದಾಗಿರುವುದರಿಂದ ಮಾಲೀಕರು ಟಿಕೆಟ್ ಹಣವನ್ನು ವಾಪಸ್ ನೀಡಲು ಮುಂದಾಗಿದ್ದಾರೆ. ಬೆಂಗಳೂರಿನ ಊರ್ವಶಿ ಥಿಯೇಟರ್ ಸೇರಿದಂತೆ ನಗರದ ಹಲವು ಚಿತ್ರಮಂದಿರಗಳಲ್ಲಿ ಉತ್ತಮ ವಿಲನ್ ಚಿತ್ರ ವೀಕ್ಷಣೆಗಾಗಿ ಟಿಕೆಟ್ ಕಾಯ್ದಿರಿಸಿದ್ದರು. ಆದರೆ ಶೋ ರದ್ದಾದ ಹಿನ್ನಲೆಯಲ್ಲಿ ಅವರು ವಾಪಸಾಗಿದ್ದಾರೆ.