ಮಂಗಳೂರು: ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಠಿಸಿದ ಎಸ್.ಎಸ್. ರಾಜಮೌಳಿ ನಿರ್ದೇಶನದ 'ಬಾಹುಬಲಿ' ಈಗ ಯಕ್ಷಗಾನ ರೂಪದಲ್ಲಿ ಬರಲು ಸಜ್ಜಾಗಿದ್ದಾನೆ.
ಮಂಗಳೂರು ಮೂಲದ ಪ್ರಸಂಗಕರ್ತ ದೇವದಾಸ್ ಎಂಬುವರು ಅಕ್ಟೋಬರ್ ಮೊದಲ ವಾರದಲ್ಲಿ ಬೆಂಗಳೂರಿನ ಕಲಾಕ್ಷೇತ್ರದಲ್ಲಿ 'ಬಾಹುಬಲಿ'ಯನ್ನು ರಂಗಸ್ಥಳಕ್ಕೆ ತರಲಿದ್ದಾರೆ.
'ಬಾಹುಬಲಿ' ಚಿತ್ರದ ಕಾಲ್ಪನಿಕ ಕಥೆಯನ್ನು ರಂಗಸ್ಥಳದ ಮೇಲೆ ತರಲು ದೇವದಾಸ್ ಸಿದ್ಧತೆ ನಡೆಸುತ್ತಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ಈಗಾಗಲೇ 58 ಯಕ್ಷಗಾನ ಪ್ರಸಂಗಗಳನ್ನು ಬರೆದಿರುವ ದೇವದಾಸ್ 59ನೇ ಪ್ರಸಂಗವಾಗಿ 'ಬಾಹುಬಲಿ'ಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಬಾಹುಬಲಿ ಚಿತ್ರದಲ್ಲಿರುವಂತೆ ಯಕ್ಷಗಾನದಲ್ಲಿ ದೃಶ್ಯ ವೈಭವಕ್ಕೆ ಆಸ್ಪದವಿಲ್ಲ. ಇಲ್ಲಿ ಕಥಾ ವೈಭವವೇ ಮುಖ್ಯವಾಗಿರುತ್ತದೆ. ಬಾಹುಬಲಿ ಚಿತ್ರ ಅರ್ಧ ಮಾತ್ರ ಇದೆ. ಯಕ್ಷಗಾನದಲ್ಲಿ ಅದನ್ನು ತಮ್ಮದೇ ಕಾಲ್ಪನಿಕ ಕಥೆಯ ಮುಖಾಂತರ ಪೂರ್ತಿಗೊಳಿಸಿದ್ದಾರೆ. ಚಿತ್ರದಲ್ಲಿ ಹಾಸ್ಯ ಪಾತ್ರಗಳು ಇಲ್ಲ. ಆದರೆ ಯಕ್ಷಗಾನಕ್ಕೆ ಅಳವಡಿಸಿಕೊಳ್ಳುವಾಗ ಹಾಸ್ಯವನ್ನು ಸೇರಿಸಿಕೊಳ್ಳಲಾಗಿದೆ ಎನ್ನುತ್ತಾರೆ ದೇವದಾಸ್.